ಪ್ರತೀ ವರ್ಷ ನವೆಂಬರ್ ತಿಂಗಳಿನ 30 ದಿನಗಳ ಕಾಲ ಕನ್ನಡ ನಾಡು, ನುಡಿ, ಲಲಿತ ಕಲೆ, ಸಾಹಿತ್ಯ ಸಂಗೀತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಪರಿಚಯಿಸುವ ಕನ್ನಡ ಕಲಿಗಳು ಎಂಬ ಮಾಲಿಕೆಯನ್ನು ನಮ್ಮ ಏನಂತೀರೀ? ಬ್ಲಾಗಿನಲ್ಲಿ ಕಳೆದ ಐದು ವರ್ಷಗಳಿಂದಲೂ ರೂಢಿಮಾಡಿಕೊಂಡು ಬಂದಿದ್ದು ಮೂರನೇ ವರ್ಷಕ್ಕೂ ಅಂತಹ ಮಹನೀಯ ಕನ್ನಡಿಗರ ಪಟ್ಟಿಯಲ್ಲಿ ಖಂಡಿತವಾಗಿಯೂ ಇವರ ಹೆಸರು ಇರಲೇ ಇಲ್ಲ.
ಆದರೆ ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ ಎನ್ನುವಂತೆ ಅಕಾಲಿಕವಾಗಿ ಅಗಲಿದ ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜಕುಮಾರ್ ಅವರು ಖಂಡಿತವಾಗಿಯೂ ನಮ್ಮ ಕನ್ನಡದ ಕಲಿಗಳಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ.

1975ರ ವೇಳೆಗೆ ಕನ್ನಡದ ವರನಟ ರಾಜಕುಮಾರರು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಂದಿನ ಮದ್ರಾಸ್ ಇಂದಿನ ಚೆನ್ನೈನಲ್ಲಿಯೇ ಬಹುತೇಕ ದಕ್ಷಿಣಭಾರತದ ಚಿತ್ರರಂಗದ ಚಟುವಟಿಕೆಗಳೆಲ್ಲವೂ ನಡೆಯುತ್ತಿದ್ದ ಕಾರಣ, ಅಲ್ಲಿಯೇ ಕೂಡು ಕುಟುಂಬದೊಂದಿಗೆ ಇದ್ದ ರಾಜಕುಮಾರ ಧರ್ಮಪತ್ನಿ ತುಂಬು ಗರ್ಭಿಣಿಯಾಗಿದ್ದ ಶ್ರೀಮತಿ ಪಾರ್ವತಮ್ಮನವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ರಾಜಕುಮಾರರು ಆ ಸಮಯದಲ್ಲಿ ಆ ಸ್ಥಳದಲ್ಲಿ ಇಲ್ಲದಿದ್ದ ಕಾರಣ, ನಿರ್ದೇಶಕ ಭಗವಾನ್ ಮತ್ತವರ ಪತ್ನಿ ಪಾರ್ವತಮ್ಮನವರನ್ನು ಆಸ್ಪತ್ರೆಗೆ ಸೇರಿಸಿದಾಗ, 17 ಮಾರ್ಚ್, 1975ರಲ್ಲಿ ಮುದ್ದಾದ ಗಂಡು ಮಗುವೊಂದಕ್ಕೆ ಜನ್ಮನೀಡುತ್ತಾರೆ. 1965ರಲ್ಲಿ ಬಿಡುಗಡೆಯಾಗಿ ರಾಜಕುಮಾರರಿಗೆ ಅತ್ಯಂತ ಕೀರ್ತಿಯನ್ನು ತಂದಿದ್ದ ಸತ್ಯಹರಿಶ್ಚಂದ್ರ ಸಿನಿಮಾದ ನೆನಪಿಗಾಗಿ ಆ ಪುಟ್ಟ ಕಂದನಿಗೆ ಲೋಹಿತ್ ಎಂದು ನಾಮಕರಣ ಮಾಡುತ್ತಾರೆ.

ಕಣ್ಣು ಮೂಗು ಹೋಲಿಕೆಯಲ್ಲಿ ಅಪ್ಪನ ತದ್ರೂಪಾದರೆ, ಬಣ್ಣದಲ್ಲಿ ಥೇಟ್ ಅಮ್ಮನ ಪ್ರತಿರೂಪವಾದ ಲೋಹಿತನಿಗೆ ಕೇವಲ 6 ತಿಂಗಳಾಗಿರುವಾಗಲೇ ನಿರ್ದೇಶಕ ವಿ. ಸೋಮಶೇಖರ್ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅವರು ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರೆ, 1977ರಲ್ಲಿ ಕೇವಲ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಸನಾದಿ ಅಪ್ಪಣ್ಣ ಚಿತ್ರದಲ್ಲಿ ರಾಜಕುಮಾರ್ ಅವರ ಮಗನಾಗಿ ಮೀನಿಗೆ ಈಜಲು ಹೇಳಿಕೊಡಬೇಕೆ ಎನ್ನುವಂತೆ ಅಧ್ಭುತವಾಗಿ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮುಖಾಂತರ ಸಂಪೂರ್ಣವಾಗಿ ಬಾಲನಟನಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಂತರ ವಸಂತ ಗೀತ (1980), ಭಾಗ್ಯಂತ (1981), ಚಲಿಸುವ ಮೋಡಗಳು (1982), ಚಿತ್ರದಲ್ಲಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂಬ ಹಾಡನ್ನೂ ಹಾಡುವ ಮುಖಾಂತರ ಹಿನ್ನಲೆ ಗಾಯಕನಾಗಿಯೂ ಗುರುತಿಸಿಕೊಳ್ಳುತ್ತಾ






