– ರಾಘವೇಂದ್ರ ಅಡಿಗ ಎಚ್ಚೆನ್.
ನಟ ಯಶ್ ಅವರ ತಾಯಿ ಪುಷ್ಪ ಅವರಿಗೆ ಸಂಬಂಧಿಸಿದಂತೆ ಸುದ್ದಿಯಾಗಿದ್ದ ಸೈಟ್ ವಿವಾದ ಪ್ರಕರಣದಲ್ಲಿ ಇದೀಗ ನ್ಯಾಯಾಲಯದಿಂದ ಹಿನ್ನಡೆ ಎದುರಾಗಿದೆ. ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯವು ಪುಷ್ಪ ಹಾಗೂ ನಟರಾಜ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿಲ್ಲ.
ಹಾಸನದ ವಿದ್ಯಾನಗರದಲ್ಲಿರುವ ಸರ್ವೆ ನಂಬರ್ 90ರ 125×45 ಅಡಿ ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆ ಕಾಂಪೌಂಡ್ ಅನ್ನು ದೇವರಾಜ್ ಎಂಬುವರು ಜೆಸಿಬಿ ಮೂಲಕ ಒಡೆದು ಹಾಕಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆ ಪುಷ್ಪ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಕೀಲರ ಮೂಲಕ ನ್ಯಾಯಾಲಯದಲ್ಲಿಯೂ ದಾವೆ ಹೂಡಿದ್ದರು.
ನ್ಯಾಯಾಲಯದಲ್ಲಿ ಪುಷ್ಪ ಅವರು, ಈ ಹಿಂದೆ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಹಾಗೂ ದೇವರಾಜ್‌ಗೆ ನೋಟಿಸ್ ನೀಡುವ ಮೊದಲು ಪ್ರತಿಬಂಧಕಾಜ್ಞೆ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಗಳನ್ನು ತಿರಸ್ಕರಿಸಿದೆ.
ದೇವರಾಜ್ ಅವರ ವಾದದ ಪ್ರಕಾರ, ಈ ಸೈಟ್ ಮೈಸೂರಿನ ಲಕ್ಷ್ಮಮ್ಮ ಎಂಬುವರಿಂದ ಜಿಪಿಎ ಮೂಲಕ ತಮಗೆ ದೊರೆತಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಪುಷ್ಪ ಕಡೆಯವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಜನವರಿ 31ಕ್ಕೆ ನ್ಯಾಯಾಲಯ ಮುಂದೂಡಿದೆ





