ಜಾಗೀರ್ದಾರ್*
KRG ಸ್ಟುಡಿಯೋಸ್ ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ ‘ಶೋಧ’ ವೆಬ್ ಸರಣಿ ಇದೇ ತಿಂಗಳ 22ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರಮುಖ ಪಾತ್ರದಲ್ಲಿ ಪವನ್ ಕುಮಾರ್ ನಟಿಸುತ್ತಿದ್ದಾರೆ. ಇದೀಗ ಶೋಧ ವೆಬ್ ಸರಣಿಯ ಮತ್ತೊಂದು ಪ್ರಮುಖ ಪಾತ್ರವನ್ನು ಪರಿಚಯಿಸಲಾಗಿದೆ. ಸಿರಿ ರವಿಕುಮಾರ್ ಶೋಧ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕವಲುದಾರಿ, ಸಕುಟುಂಬ ಸಮೇತ ಹಾಗೂ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಸಿರಿ ರವಿಕುಮಾರ್ ಈಗ ಥ್ರಿಲ್ಲರ್ ಕಥಾಹಂದರದ ‘ಶೋಧ’ ಸರಣಿಯ ಭಾಗವಾಗಿದ್ದಾರೆ. ಆರು ಸಂಚಿಕೆಯುಳ್ಳ ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದಾರೆ.
ಶೋಧ ವೆಬ್ ಸರಣಿ ಬಗ್ಗೆ ಮಾತನಾಡಿರುವ ಸಿರಿ ರವಿಕುಮಾರ್, ರಂಗಭೂಮಿಯಿಂದ ಸಿನಿಮಾದವರೆಗೆ, ಗಾಯನದಿಂದ ನಟನೆವರೆಗೆ, ನನ್ನನ್ನು ನಾನು ಕಲಾವಿದೆಯಾಗಿ ರೂಪಿಸಿಕೊಳ್ಳುತ್ತಾ ಬಂದಿದ್ದೇನೆ. ಶೋಧ ಒಂದು ಅದ್ಭುತ ಕಥೆ. ತೀವ್ರವಾದ, ಆಕರ್ಷಕವಾದ ಕಥೆಯಾಗಿದೆ. ಈ ಥ್ರಿಲ್ಲರ್ ಕಥಾಹಂದರದ ಭಾಗವಾಗಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ.
‘ಅಯ್ಯನ ಮನೆ’ ಸರಣಿ ಬಳಿಕ zee5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮತ್ತೊಂದು ವೆಬ್ ಸರಣಿ ಈ ಶೋಧ. ಆಗಸ್ಟ್ 22ರಂದು ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ಈ ವೆಬ್ ಸರಣಿಗೆ ಸುನಿಲ್ ಮೈಸೂರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.