Sj*
ರಾಜಲಕ್ಷ್ಮೀ ಎಂಟರ್ ಟೈನ್ಮೆಂಟ್ ಸಂಸ್ಥೆಯಡಿ ಶ್ರೀಮತಿ ಪ್ರತಿಭಾ ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ, ಬರೆದು ನಿರ್ದೇಶನ ಮಾಡಿರುವ ‘ಸಂಭವಾಮಿ ಯುಗೇ ಯುಗೇ’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರಸ್ತುತ ಯೂಟ್ಯೂಬ್ ನಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯ ಜನರು ವೀಕ್ಷಿಸುತ್ತಿದ್ದಾರೆ.

ಇದೊಂದು ಗ್ರಾಮೀಣ ಸೊಗಡಿನ ಕಮರ್ಷಿಯಲ್ ಥ್ರಿಲ್ಲರ್ ಚಿತ್ರವಾಗಿದ್ದು, ಮಂಡ್ಯ, ಚೆನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈ ಹಿಂದೆ ‘1975’ ಎಂಬ ಚಿತ್ರದಲ್ಲಿ ನಟಿಸಿದ್ದ ರಣವೀರ್ ಶೆಟ್ಟಿ (ಜಯ್ ಶೆಟ್ಟಿ), ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬಿಜಾಪುರ ಮೂಲದ ನಿಶಾ ರಜಪೂತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಎಂಬ ವಿಷಯಗಳು ‘ಸಂಭವಾಮಿ ಯುಗೇ ಯುಗೇ’ ಚಿತ್ರದ ಕಥಾವಸ್ತು. ‘ಯುವಕರು ಹಳ್ಳಿಯಲ್ಲೇ ನೆಲಸಬೇಕು ಮತ್ತು ಹಾಗೆ ನೆಲೆಸಬೇಕು ಎಂದರೆ ಹಳ್ಳಿಯಲ್ಲಿ ಒಂದಿಷ್ಟು ಕೆಲಸ ಆಗಬೇಕು ಎಂದು ನಾಯಕ ಮುಂದಾಗುತ್ತಾನೆ. ಈ ನಿಟ್ಟಿನಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ. ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳು ಈ ಚಿತ್ರದಲ್ಲಿದೆ’ ಎಂದು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದಾರೆ.

‘ಸಂಭವಾಮಿ ಯುಗೇಯಗೇ’ ಚಿತ್ರದಲ್ಲಿ ರಣವೀರ್ ಶೆಟ್ಟಿ (ಜಯ್ ಶೆಟ್ಟಿ) ಮತ್ತು ನಿಶಾ ರಜಪೂತ್ ಜೊತೆಗೆ ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರ ಗೌಡ, ಅಭಯ್ ಪುನೀತ್, ಬಲ ರಾಜವಾಡಿ, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪೂರಣ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ಪ್ರಾಂಕ್ರಿನ್ ರಾಖಿ ಅವರ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ನರಸಿಂಹ ಅವರ ಸಾಹಸ ನಿರ್ದೇಶನ, ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.





