ಸಿನಿಮಾಗಳಲ್ಲಿ ನಟನೆಯ ವಿಷಯವಿರಲಿ ಅಥವಾ ಧಾರ್ಮಿಕ ಕಂದಾಚಾರವೇ ಇರಲಿ, ಸಾರಾ ಸದಾ FBನ ಟ್ರೋಲಿಗರ ನಿಶಾನೆಗೆ ಗುರಿಯಾಗುತ್ತಾಳೆ. ಸಾರಾ ಈ ಕುರಿತು ಏನು ಹೇಳ ಬಯಸುತ್ತಾಳೆ.....?
1995ರಲ್ಲಿ ಪಟೌಡಿ ಪರಿವಾರದಲ್ಲಿ ಹುಟ್ಟಿದ ಸಾರಾ ಅಲಿ ಖಾನ್, ಹಿರಿಯ ಸ್ಟಾರ್ಸ್ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ರ ಮಗಳು. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ, ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಈಕೆ, 2018ರಲ್ಲಿ ಬಾಲಿವುಡ್ ಗೆ ಕಾಲಿರಿಸಿ, ನಾಯಕ ಸುಶಾಂತ್ ಸಿಂಗ್ ನ ರೊಮ್ಯಾಂಟಿಕ್ `ಕೇದಾರ್ ನಾಥ್' ಚಿತ್ರದಲ್ಲಿ ಮಿಂಚಿದಳು. ಇದಾದ ನಂತರ ಇವಳು ಆ್ಯಕ್ಷನ್ ಕಾಮಿಡಿ `ಸಿಂಬಾ' ಚಿತ್ರದಲ್ಲಿ ನಟಿಸಿದಳು. ಅಂತಾರಾಷ್ಟ್ರೀಯ ಪತ್ರಿಕೆ `ಪೇಬರ್ಸ್ ಇಂಡಿಯಾ'ದಲ್ಲಿ ಪ್ರಕಟಗೊಂಡಂತೆ 2019ರ 100 ಸೆಲೆಬ್ರಿಟೀಸ್ ಗಳ ಪಟ್ಟಿಯಲ್ಲಿ ಸಾರಾಳ ಹೆಸರೂ ಇತ್ತು. ಇದಾದ ನಂತರ ಈಕೆ ಆನಂದರಾಯರ `ಅತರಂಗೀ ರೇ'ನಲ್ಲಿ ಕಾಣಿಸಿಕೊಂಡಳು. ಇತ್ತೀಚೆಗೆ ಬಿಡುಗಡೆಯಾದ ಈಕೆಯ `ಝರಾ ಹಟ್ ಕೇ ಝರಾ ಬಚ್ ಕೇ' ಭಾರಿ ಸುದ್ದಿ ಮಾಡುತ್ತಿದೆ, ಇಲ್ಲಿ ಇವಳ ಹೀರೋ, ಕತ್ರೀನಾ ಕೈಫ್ ಳ ಪತಿ ವಿಕ್ಕಿ ಕೌಶ್.
ನಟನೆಯ ಕೆರಿಯರ್ ರ ತನ್ನ ಮೊದಲ `ಕೇದಾರ್ ನಾಥ್' ಚಿತ್ರದಲ್ಲಿ ಸಾರಾ, ಅಪ್ಪಟ ಸಂಪ್ರದಾಯಸ್ಥ ಹಿಂದೂ ಮನೆತನದ ಹುಡುಗಿಯಾಗಿ ನಟಿಸಿದ್ದಳು. ಮುಂದೆ ಅವಳು ಒಬ್ಬ ಮುಸ್ಲಿಂ ಕೂಲಿಕಾರ ತರುಣನನ್ನು ಪ್ರೇಮಿಸುವ ಕಥೆಯದು. ಇದರಲ್ಲಿ ಇವಳ ಸಹನಟ ಸುಶಾಂತ್ ಸಿಂಗ್, ಇವಳ ಹಿಂದಿ ಉಚ್ಚಾರಣೆಯ ಸುಧಾರಣೆಯ ಜವಾಬ್ದಾರಿ ವಹಿಸಿದ್ದ.
ಈ ಚಿತ್ರದ ಜೊತೆ ಜೊತೆಯಲ್ಲೇ ಸಾರಾ ರೋಹಿತ್ ಶೆಟ್ಟಿಯವರ, ರಣವೀರ್ ಸಿಂಗ್ ನಾಯಕನಾಗಿದ್ದ `ಸಿಂಬಾ' ಆ್ಯಕ್ಷನ್ ಚಿತ್ರದಲ್ಲಿ ನಟಿಸಿ ಸೈ ಎನಿಸಿದ್ದಳು. ಆಗಾಗ `ಕೇದಾರ್ ನಾಥ್' ಚಿತ್ರದಿಂದ ಬ್ರೇಕ್ ಪಡೆದು `ಸಿಂಬಾ' ಚಿತ್ರದ ಶೂಟಿಂಗ್ ಗೆ ಹಾಜರಾಗುತ್ತಿದ್ದಳು. ಈ ಕಾರಣದಿಂದ ಮೊದಲ ಚಿತ್ರಗಳಲ್ಲೇ ಇವಳು ವಿವಾದ ಎದುರಿಸಬೇಕಾಯಿತು. ಆದರೆ ಇವಳ ಪುಣ್ಯ, ಎರಡೂ ಚಿತ್ರ ಗೆದ್ದು, ಇವಳ ಗ್ಲಾಮರ್ ಹೊಗಳಿಕೆಗೆ ಪಾತ್ರವಾಯಿತು. ಇವಳ ಪ್ರತಿಭೆಗೆ ಮನ್ನಣೆ ದೊರಕುವಂತಾಯಿತು.
ಇದಾದ ನಂತರ ಇವಳು ಮತ್ತೊಂದು ರೊಮ್ಯಾಂಟಿಕ್ `ಲವ್ ಆಜ್ ಕಲ್' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸಿದಳು. ಈ ಚಿತ್ರದ ದೆಸೆಯಿಂದಾಗಿ ಇವಳು ಕಾರ್ತಿಕ್ ಜೊತೆ ಡೇಟಿಂಗ್ ನಡೆಸುತ್ತಿದ್ದಾಳೆ ಎಂದೆಲ್ಲ ವದಂತಿ ಹರಡಿತು. ಆದರೆ ಇವರಿಬ್ಬರೂ ಇದನ್ನು ಹೌದು ಎಂದು ಒಪ್ಪಿಕೊಳ್ಳಲಿಲ್ಲ. ಏನೋ ಆಗಿ ಅದು ಬ್ರೇಕ್ ಅಪ್ ಆಯ್ತಂತೆ ಎಂಬ ಅಂತೆ ಕಂತೆ ಸುದ್ದಿಗಳೂ ಹರಡಿದವು. ಈ ಚಿತ್ರದಲ್ಲಿ ಇವಳ ಪಾತ್ರ ತುಸು ಕಾಂಪ್ಲಿಕೇಟೆಡ್ ಆಗಿತ್ತು ಎಂದೇ ಹೇಳಬೇಕು. ಇದರಲ್ಲಿ ಇವಳು ಸೋತಿದ್ದಳೆಂದೇ ವಿಮರ್ಶಕರು ಕಟುವಾಗಿ ಟೀಕಿಸಿದ್ದರು. 2020ರಲ್ಲಿ ಇವಳು ವರುಣ್ ಧವನ್ ಜೊತೆ `ಕೂಲಿ ನಂ.1' ಹಾಸ್ಯ ಪ್ರಧಾನ ಚಿತ್ರದಲ್ಲಿ ನಟಿಸಿ, ಹಳೆಯ ಆಪಾದನೆಗಳಿಂದ ಪಾರಾದಳು.