- ರಾಘವೇಂದ್ರ ಅಡಿಗ ಎಚ್ಚೆನ್.
ಯಾವುದೇ ಸಿನಿಮಾ ಕಥೆ ಅತ್ಯಂತ ಕುತೂಹಲಕಾರಿ ಆಗಿದ್ದ ಸಮಯದಲ್ಲಿ ಪ್ರೇಕ್ಷಕರು ಸೀಟಿನ ತುದಿಗೆ ಕುಳಿತು ನೋಡುವಂತಿದೆ, ಸೀಟ್ ಎಡ್ಜ್ ನಲ್ಲಿ ಕೂರಿಸುವ ಸಿನಿಮಾ ಎಂದು ಹೇಳುವುದು ವಾಡಿಕೆ. ಈಗ ‘ಸೀಟ್ ಎಡ್ಜ್’ ಹೀಗೊಂದು ಹೆಸರಿನ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಕಿರುತೆರೆ ಜೊತೆಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಹಾಗೂ ಯುವ ನಟಿ ರವೀಕ್ಷಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆ ಆಗಿದೆ

‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ಕ್ರಿಟಿಕಲ್ ಕೀರ್ತನೆಗಳು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಚೇತನ್ ಶೆಟ್ಟಿ ’ಸೀಟ್ ಎಡ್ಜ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಅವರು ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಡಾರ್ಕ್ ಕಾಮಿಡಿ ಜೊತೆಗೆ ಹಾರರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್ ನಾಯಕರೇ, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ನಟಿಸಿದ್ದಾರೆ.

ಸಿನಿಮಾದಲ್ಲಿ ವ್ಲಾಗರ್ ಹುಡುಗನೊಬ್ಬನ ಕಥೆ ಇದೆ. ಘೋಸ್ಟ್ ಹಂಟಿಂಗ್ ಕುರಿತ ಕಥೆಯನ್ನು ಸಿನಿಮಾ ಆಗಿಸಿದ್ದು ವಿಶೇಷ ಎಂಬಂತೆ ಕನ್ನಡದ ಪ್ರಮುಖ ವ್ಲಾಗರ್ಗಳ ಕೈಯಿಂದಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಲಾಗಿದೆ.
ಎನ್ ಆರ್ ಸಿನಿಮಾ ಪ್ರೊಡಕ್ಷನ್ ಬ್ಯಾನರ್ ನಡಿ ಗಿರಿಧರ ಟಿ ವಸಂತಪುರ ಬಂಡವಾಳ ಹಾಕಿದ್ದು, ಸುಜಾತ ಗಿರಿಧರ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ದೀಪಕ್ ಕುಮಾರ್ ಜೆಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಸಂಕಲನ ‘ಸೀಟ್ ಎಡ್ಜ್’ ಚಿತ್ರಕ್ಕಿದೆ.

ಚಿತ್ರದ ಟ್ರೇಲರ್ ಬಿಡುಗಡೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗವಹಿಸಿ ಚಿತ್ರದ ಕುರಿತು ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿದೆ.
"ಇದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಮೊದಲ ಬಾರಿಗೆ ನಾನು ಯೂಟ್ಯೂಬ್ ವ್ಲಾಗರ್ ಪಾತ್ರ ಮಾಡಿದ್ದೇನೆ. ಯಾರೂ ಹೋಗದ ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು ಘೋಸ್ಟ್ ಟೌನ್ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ" ಎಂದು ಸಿದ್ದು ಮೂಲಿಮನಿ ಹೇಳಿದರು.

"ಘೋಸ್ಟ್ ಹಂಟಿಂಗ್‌ಗೆ ಹೋಗುವ ಯೂಟ್ಯೂಬರ್ ಜೊತೆಗೆ ನಾನು ಸಹ ತೊಂದರೆಗೆ ಸಿಲುಕಿಕೊಳ್ಳುತ್ತೇನೆ. ಎರಡು ಶೇಡ್‌ಗಳಿರುವ ಪಾತ್ರ ನನ್ನದು. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಒಳ್ಳೆಯ ಅನುಭವಗಳನ್ನು ನೀಡಿದೆ. ಹೆಸರಿಗೆ ತಕ್ಕಂತೆ ಇದು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಹ ಸಿನಿಮಾ’ ಇದಾಗಿದೆ" ಎಂದು ನಟಿ ರವೀಕ್ಷಾ ಶೆಟ್ಟಿ ಹೇಳಿದ್ದಾರೆ.

ನಿರ್ದೇಶಕ ಚೇತನ್ ಶೆಟ್ಟಿ ಮಾತನಾಡಿ "ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್ ಪಡೆಯಲು, ಫೇಮಸ್ ಆಗಲು ಜನರು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಆ ಎಳೆಯನ್ನೇ ಇಟ್ಟುಕೊಂಡೆ ಸಿನಿಮಾ ಮಾಡಿದ್ದೇವೆ’ ಎಂದರು. ನಿರ್ಮಾಪಕ ಗಿರಿಧರ ಅವರು ಮಾತನಾಡಿ, "ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟ ಆಗುವಂತಹ, ಮನೆಮಂದಿ ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾ ಮಾಡಿದ್ದೇವೆ" ಎಂದರು.
ನಟರಾದ ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಸಂಗೀತ ನಿರ್ದೇಶಕ ಆಕಾಶ್ ಪರ್ವ, ಛಾಯಾಗ್ರಹಕ ದೀಪಕ್ ಕುಮಾರ್ ಜೆ. ಕೆ ಮೊದಲಾದವರು 'ಸೀಟ್ ಎಡ್ಜ್' ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.





