ಆಟೋ ಮಧ್ಯಮ ವರ್ಗದ ಜನ ಸಾಮಾನ್ಯರೂ ಸುಲಭವಾಗಿ ಸಂಚಾರಿಸುವ ವಾಹನ. ಇನ್ನು ಬಹುತೇಕ ಆಟೋ ಚಾಲಕರಿಗೆ ಆಟೋ ಚಾಲನೆಯ ಆದಾಯವೇ ಅವರ ಜೀವನಾಧಾರ. ಅವರವರ ಭಾವನೆ, ಸಿಟ್ಟು ನೆಡವು ಮತ್ತವರ ಅನುಭವಗಳನ್ನು ಭಗ್ನಪ್ರೇಮಿಗಳ ರೂಪದಲ್ಲಿ ಆಟೋ ಹಿಂದೆ ನಾನಾ ರೂಪದಲ್ಲಿ ಬರೆಸಿರುವುದನ್ನು ಕಾಣುತ್ತೇವೆ. ಈ ರೀತಿಯಾಗಿ ವಿಭಿನ್ನ ಬರಹಗಳಿದ್ದರೂ ಅವುಗಳ ಎಲ್ಲದರ ಮಧ್ಯೆ ಕಾಣಬಹುದಾದ ಸಮಾನವಾದ ಒಂದು ಅಂಶವೆಂದರೆ ಶಂಕರ್ ನಾಗ್ ಭಾವಚಿತ್ರ. ಅರೇ ಆಟೋ ರಾಜ ಶಂಕರ್ ನಾಗ್ ಚಿತ್ರವನ್ನು ತಮ್ಮ ಆಟೋದ ಮೇಲೆ ಹಾಕಿರುವ ಆ ಅಭಿಮಾನಿ ಯಾರೆಂದು ನೋಡಲು ಹೋದರೇ ಆತ ಇನ್ನೂ ಚಿಗುರು ಮೀಸೆಯ ಹುಡುಗನೋ ಇಲ್ಲವೇ 20-30ರ ನಡು ವಯಸ್ಸಿನವರಾಗಿರುತ್ತಾರೆ ಮತ್ತು ಆವರುಗಳು ಶಂಕರ್ ನಾಗ್ ಅವರನ್ನು ನೇರವಾಗಿ ನೋಡೇ ಇರುವುದಿಲ್ಲ. ಏಕೆಂದರೆ ಅವರುಗಳು ಹುಟ್ಟುವ ಮುಂಚೆಯೇ ಶಂಕರ್ ನಾಗ್ 30 ಸೆಪ್ಟೆಂಬರ್ 1990 ಕ್ಕೇ ನಮ್ಮನ್ನಗಲಿರುತ್ತಾರೆ. ಸುಮಾರು ವರ್ಷಗಳ ಹಿಂದೆಯೇ ನಮ್ಮನ್ನಗಲಿದರೂ ಇಂದಿಗೂ ಕೂಡ ಜನಮಾನಸದಲ್ಲಿ ಶಾಶ್ವತವಾಗಿ ಮನ ಮಾಡಿರುವ ಶಂಕರ್ ನಾಗ್ ಕೇವಲ ರೀಲ್ ಹೀರೋ ಅಲ್ಲದೇ ರಿಯಲ್ ಹೀರೋನೇ ಸರಿ.

ರಾಜಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಸಂಪತ್ಕುಮಾರ್ (ವಿಷ್ಣುವರ್ಧನ್), ಅಂಬರೀಷ್ ಮುಂತಾದ ಕನ್ನಡ ಚಲನಚಿತ್ರ ರಂಗದ ದಂತಕಥೆಗಳ ಮಧ್ಯೆಯೂ ಕನ್ನಡ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಶಂಕರ ನಾಗ್ ಕೇವಲ ನಟನಾಗಿಯಲ್ಲದೇ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ವಿಮರ್ಶಕನಾಗಿ, ತಂತ್ರಜ್ಞನಾಗಿ, ಎಲ್ಲದಕ್ಕಿಂತ ಮಿಗಿಲಾಗಿ ಅತ್ಯುತ್ತಮ ಕನ್ನಡಿಗನಾಗಿ ಕನ್ನಡ ಚಲನಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕರ್ನಾಟಕದಲ್ಲೇ ಉಳಿಯುವಂತಾಗಲು ಶ್ರಮಿಸಿದ ಶಕ್ತಿ ಆ ವ್ಯಕ್ತಿ. ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಚಿತ್ರರಂಗವಲ್ಲದೇ, ಕನ್ನಡ ಮತ್ತು ಮರಾಠಿ ರಂಗಭೂಮಿ, ಕರ್ನಾಟಕ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ವಿಪರೀತವಾಗಿ ತೊಡಗಿಸಿಕೊಂಡಿದ್ದ ಅಜಾತ ಶತ್ರು ಶಂಕರ್ ನಾಗ್ ಬದುಕಿದ್ದು ಕೇವಲ 35 ವರ್ಷಗಳಾದರೂ ಅವರ ಸಾಧನೆ ಇನ್ನು ಮೂವತ್ತು ತಲೆಮಾರಿಗೂ ಉಳಿಯುವಷ್ಟಿದೆ.
1954 ರಲ್ಲಿ ಹೊನ್ನಾವರ ಹತ್ತಿರದ ಮಲ್ಲಾಪುರದ ಕೊಂಕಣೀ ಸಾರಸ್ವತರ ಮನೆಯಲ್ಲಿ ಮೂರನೇ ಮಗನಾಗಿ ಹುಟ್ಟಿದ ಶಂಕರ್ ನಾಗರಕಟ್ಟೆ , ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಮತ್ತು ಅಪರೂಪದ ನಟ ಅನಂತ್ ನಾಗರ ಕಟ್ಟೆಯವರ ಕಿರಿಯ ಸಹೋದರರೂ ಹೌದು. ಬಾಲ್ಯದ ಶಿಕ್ಷಣವೆಲ್ಲಾ ಉತ್ತರ ಕರ್ನಾಟಕದಲ್ಲಿಯಾಗಿ ಕಾಲೇಜಿಗೆ ಬರುವಷ್ಟರಲ್ಲಿ ಅಣ್ಣ ಅನಂತ್ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕೆಲಸದ ನಿಮಿತ್ತ ಹೋಗಿ ಅಲ್ಲಾಗಲೇ ರಂಗಭೂಮಿಯಲ್ಲಿ ಸಕ್ರೀಯರಾಗಿರುತ್ತಾರೆ. ತಮ್ಮ ಹೆಸರಿನ ಜೊತೆಗೆ ನಾಗರ ಕಟ್ಟೆ ಎಂಬ ತಮ್ಮ ಊರಿನ ಹೆಸರನ್ನು ನಾಗ್ ಎಂದು ಚುಟುಕುಗೊಳಿಸಿ ಅನಂತ್ ನಾಗ್ ಮತ್ತು ಶಂಕರ್ ನಾಗ್ಎಂಬ ಆಕರ್ಷಣೀಯ ಹೆಸರನ್ನು ಇಟ್ಟುಕೊಂಡು ಮುಂದೆ ನಾಗ್ ಸಹೋದರರು ಎಂದು ಖ್ಯಾತಿವಂತರಾಗುತ್ತಾರೆ. ಶಂಕರ್ ತಮ್ಮ ಕಾಲೇಜು ವಿದ್ಯಾಭ್ಯಾಸ ಮುಗಿದ ಕೂಡಲೇ ಅಣ್ಣನನ್ನು ಅನುಸರಿಸಿ ಮುಂಬೈಗೆ ವಲಸೆ ಹೋಗಿ ಬೆಳಗಿನ ಹೊತ್ತಿನಲ್ಲಿ ಬ್ಯಾಂಕ್‌ನಲ್ಲಿ ಗುಮಾಸ್ತರಾಗಿ ಉದ್ಯೋಗ ಮಾಡುತ್ತಲೇ ಸಂಜೆ ಹೊತ್ತು ರಂಗಭೂಮಿ ನಾಟಕದಲ್ಲಿ ಸಕ್ರಿಯರಾಗತೊಡಗುತ್ತಾರೆ. ಆರಂಭದಲ್ಲಿ ರಂಗಸಜ್ಜಿಕೆ, ಬೆಳಕು ಮತ್ತು ದೀಪಗಳ ಸಜ್ಜಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಕ್ರಮೇಣವಾಗಿ ನಟನೆಯಲ್ಲೂ ತಮ್ಮ ಛಾಪನ್ನು ತೋರಿಸತೊಡಗುತ್ತಾರೆ. ಈ ಹೊತ್ತಿಗೆ ಅನಂತ್ ನಾಗ್ ತಮ್ಮ ಪರಿಚಯಸ್ಥರ ಮೂಲಕ ಕೆಲವು ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿ ಪ್ರವರ್ಧಮಾನಕ್ಕೆ ಬರುತ್ತಿರುತ್ತಾರೆ.





