ಶಾನ್ವಿ ಶ್ರೀವಾತ್ಸವ್ ಅಂದಕೂಡಲೇ `ಮಾಸ್ಟರ್‌ ಪೀಸ್‌’ ಚಿತ್ರದ ರಾಂಗ್‌ ರೂಟ್‌ ಬೇಬಿ…. ಹಾಡು ಕಣ್ಣೆದುರು ಬರುತ್ತದೆ. ಕನ್ನಡ ಚಿತ್ರರಂಗದಲ್ಲಿ ಅತಿ ಬೇಗನೇ ತಾರಾ ಪಟ್ಟಕ್ಕೇರಿದ ಈ ತಾರೆ ಇಂದು ಜನಪ್ರಿಯ ನಾಯಕಿ.

ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ದರ್ಶನ್‌ ಅಭಿನಯದ `ತಾರಕ್‌’ ಚಿತ್ರದಲ್ಲಿ ಶಾನ್ವಿ ಎಲ್ಲರ ಗಮನ ಸೆಳೆದಿದ್ದಳು. ಕ್ಲೈಮ್ಯಾಕ್ಸ್ ನಲ್ಲಿ ತನ್ನಲ್ಲಿ ಅಡಗಿದ್ದ ಪ್ರತಿಭೆಯನ್ನು ಹೊರಹಾಕಿದ್ದಷ್ಟೇ ಅಲ್ಲ, ಪ್ರೇಕ್ಷಕರನ್ನು ಅಳಿಸಿದ್ದೂ ಉಂಟು. ಶಾನ್ವಿಗೆ ಈ ಪಾತ್ರ ತುಂಬಾನೆ ಹಿಡಿಸಿತ್ತಂತೆ.

ನೀನು ಸ್ಟಾರ್‌ಗಳ ಜೊತೆ ಮಾತ್ರ ನಟಿಸೋದು ಅಂತ ಎಲ್ಲರೂ ಹೇಳ್ತಾರಲ್ಲ….ಹಾಗೇನಿಲ್ಲ…. ನನಗೆ ಸಿನಿಮಾ ಮತ್ತು ಅದರ ಕಥೆ ಹಾಗೂ ನಾನು ಮಾಡುವ ಪಾತ್ರ ಬಹಳ ಮುಖ್ಯವಾಗುತ್ತದೆ. ಇಂಥಹವರ ಜೊತೆಯಲ್ಲೇ ನಟಿಸಬೇಕೆಂಬ ರೂಲ್ ‌ಏನೂ ಹಾಕಿಕೊಂಡಿಲ್ಲ. ನನಗೂ ಒಂದೇ ರೀತಿಯ ಪಾತ್ರ ಮಾಡಿ ಬೋರ್‌ ಆಗಿರುತ್ತೆ. ವೆರೈಟಿ ಪಾತ್ರ ಮಾಡುವಾಸೆ.

ಹಾಗಾದ್ರೆ ಎಂಥದ್ದು?

ಇತ್ತೀಚೆಗೆ `ರಂಗಸ್ಥಳಂ’ ಚಿತ್ರ ನೋಡಿದಾಗಿನಿಂದ ಆ ಚಿತ್ರ ನನ್ನ ತಲೆಯೊಳಗೆ ಕೂತುಬಿಟ್ಟಿದೆ. ನನಗೆ ಮೊದಲಿನಿಂದಲೂ ಹಳ್ಳಿ ಹುಡುಗಿ ಪಾತ್ರ ಮಾಡುವ ಆಸೆ. ಅಂಥವೊಂದು ಪಾತ್ರದ ನಿರೀಕ್ಷೆಯಲ್ಲಿದ್ದೇನೆ.

ಮತ್ತೆ….. ನಿನ್ನ ಇತ್ತೀಚಿನ ಚಿತ್ರಗಳು?

ಮಫ್ತಿ, ಟಗರು, ಇದೀಗ ರಕ್ಷಿತ್‌ ಶೆಟ್ಟಿ ಜೊತೆ `ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಹೀಗಾಗಿ ನಾನೀಗ ಕನ್ನಡದ ಜನಪ್ರಿಯ ನಾಯಕರೆಲ್ಲರ ಜೊತೆ ಆಲ್ ಮೋಸ್ಟ್ ನಟಿಸಿದಂತಾಗಿದೆ.

ಶಿವಣ್ಣ ಜೊತೆ `ಟಗರು’ ಚಿತ್ರದ ಮಧ್ಯೆ ಮಾತುಕಥೆ ಹೇಗಿತ್ತು?

`ಟಗರು’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶಿವಣ್ಣರ ಮಾತುಗಳನ್ನು ಇಷ್ಟಪಟ್ಟು ಕೇಳುತ್ತಿದ್ದೆ. ನನಗಂತೂ ಡಾ. ರಾಜ್‌ರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ…. ಎಷ್ಟು ಕೇಳಿದರೂ ಸಾಲದು!

ಕನ್ನಡದಲ್ಲಿ ಬಿಝಿಯಾಗಿರುವ ನೀನು ಇಲ್ಲೇ ಮನೆ ಮಾಡುವ ಐಡಿಯಾ ಇದೆಯಾ?

ಸದ್ಯಕ್ಕೆ ಮುಂಬೈನಲ್ಲಿದ್ದೀನಿ. ಶೂಟಿಂಗ್‌ ಇರುವಾಗೆಲ್ಲ ಬೆಂಗಳೂರಿಗೆ ಬರುತ್ತೇನೆ. ಟ್ರಾಫಿಕ್‌ವೊಂದನ್ನು ಬಿಟ್ಟರೆ ಬೆಂಗಳೂರಿನಲ್ಲಿ ನನಗೆ ಎಲ್ಲ ಇಷ್ಟ. ನಾನು ನಾನ್‌ವೆಜ್‌ ಪ್ರಿಯಳಾಗಿರುವುದರಿಂದ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಒಳ್ಳೆ ನಾನ್‌ವೆಜ್‌ ಸಿಗುತ್ತದೋ ಆ ಹೋಟೆಲ್‌ಗಳನ್ನು ಹುಡುಕಿಕೊಂಡು ಹೋಗಿ ತಿನ್ನುತ್ತೇನೆ. ಶೂಟಿಂಗ್‌ ಟೈಂನಲ್ಲಿ ಇಡ್ಲಿ, ಸಾಂಬಾರು, ದೋಸೆ ತಿನ್ನುತ್ತಲೇ ಇರುತ್ತೇನೆ. ಮೈಸೂರು ಕೂಡಾ ನನಗೆ ತುಂಬಾ ಇಷ್ಟ. ಅಲ್ಲಿ ಹನುಮಂತು ಹೋಟೆಲ್ ಬಿರಿಯಾನಿ ನನ್ನ ಫೇವರಿಟ್‌. ಕನ್ನಡವನ್ನು ಎಲ್ಲರಂತೆ ಸ್ಪಷ್ಟವಾಗಿ ಮಾತನಾಡಬೇಕೆಂಬುದೇ ನನ್ನ ಆಸೆ!

– ಸರಸ್ವತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ