ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ `ಅಮೆರಿಕಾ ಅಮೆರಿಕಾ-2′ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ಮಿಂಚಿದ್ದಾರೆ. ಈ ಬಹುಮುಖ ಪ್ರತಿಭಾವಂತ ನಟಿ ತನ್ನ ಕುರಿತು ಏನು ಹೇಳಿದ್ದಾರೆ ಎಂದು ವಿವರವಾಗಿ ತಿಳಿಯೋಣವೇ…..?

ದಶಕಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಸೀಕ್ವೆಲ್ ‌ಆಗಿ, ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸ ಚಿತ್ರ `ಅಮೆರಿಕಾ ಅಮೆರಿಕಾ-2′ ಇತ್ತೀಚೆಗೆ ಘೋಷಣೆ ಆಗಿದೆ. ಈ ಚಿತ್ರದ ಪ್ರಮುಖ ನಾಯಕಿಯಾಗಿ ಪ್ರತಿಭಾವಂತ ನಟಿ ಶಾನ್ವಿ ಶ್ರೀವಾಸ್ತವ್ ಅಭಿನಯಿಸಿದ್ದಾರೆ. ಈ ವರ್ಷವೇ ಚಿತ್ರ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಚಿತ್ರ ಜೀವನದ ಒಂದು ಸಣ್ಣ ಪರಿಚಯ ಮಾಡಿಕೊಳ್ಳೋಣ.

ಶಾನ್ವಿ ಶ್ರೀವಾಸ್ತವ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ರೂಪದರ್ಶಿ. ಕೇರಳ ಮೂಲದ ಇವರು ವಾರಾಣಸಿಯಲ್ಲಿ ಜನಿಸಿದರು. ಮೂಲ ಹೆಸರು ಶಾನ್ವಿ ನಾಯರ್‌. ಬಾಲ್ಯದ ಶಿಕ್ಷಣವನ್ನು ಉತ್ತರಪ್ರದೇಶದ ಆಜಮಘಡದಲ್ಲಿ ಮುಗಿಸಿದ ಇವರು, ನಂತರ ಮುಂಬೈನ ಠಾಕೂರ್‌ ಕಾಲೇಜಿನಿಂದ ಬಿ.ಕಾಂ ಪದವಿ ಪಡೆದರು.

ShanviSrivastava-1

2012ರಲ್ಲಿ ಪದವಿ ಪಡೆಯುವಾಗ ತೆಲುಗಿನ `ಲವ್ಲಿ’ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರದ ನಟನೆಗಾಗಿ ಮೆಚ್ಚುಗೆ ಪಡೆದ ಶಾನ್ವಿ ನಂತರ `ಅಡ್ಡಾ, ರೌಡಿ’ ಚಿತ್ರಗಳಲ್ಲಿ ನಟಿಸಿದರು. ಕನ್ನಡದಲ್ಲಿ 2014ರಲ್ಲಿ ತೆರೆದಕಂಡ `ಚಂದ್ರಲೇಖಾ’ ಚಿತ್ರದಿಂದ ಪಾದಾರ್ಪಣೆ ಮಾಡಿದ ಶಾನ್ವಿ ನಂತರ `ಮಾಸ್ಟರ್‌ ಪೀಸ್‌, ಭಲೇ ಜೋಡಿ, ಸುಂದರಾಂಗ ಜಾಣ, ಸಾಹೇಬ, ತಾರಕ್‌, ಮಫ್ತಿ, ಅವನೇ ಶ್ರೀಮನ್ನಾರಾಯಣ, ಗೀತಾ, ಕಸ್ತೂರಿ ಮಹಲ್, ಬ್ಯಾಂಗ್‌’ ಮುಂತಾದವು ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದರು.

ShanviSrivastava-12

ಶಾನ್ವಿ ನಟಿಸಿದ್ದ `ಮಾಸ್ಟರ್‌ ಪೀಸ್‌’ ಮತ್ತು `ತಾರಕ್‌’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸೈಮಾ ಬೆಸ್ಟ್ ನಟಿ ಪ್ರಶಸ್ತಿ ಕೂಡ ಗಳಿಸಿದ್ದರು. ಇದರೊಂದಿಗೆ 2024ರ ಚಿತ್ತಾರ ಸ್ಟಾರ್‌ ಐಕಾನ್‌ ಫೀಮೇಲ್ ‌ಆಗಿ ಆಯ್ಕೆ ಆಗಿದ್ದರು.

ಪ್ರಸ್ತುತ ಚಿತ್ರ

ಪ್ರಸ್ತುತ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಸಿನಿಮಾದಲ್ಲಿ ನಿರೂಪ್‌ ಭಂಡಾರಿ, ಪೃಥ್ವಿ ಅಂಬರ್‌ ಜೊತೆ `ಅಮೆರಿಕಾ ಅಮೆರಿಕಾ-2′ ಚಿತ್ರದಲ್ಲಿ ಶಾನ್ವಿ ನಟಿಸಿದ್ದಾರೆ. `ತ್ರಿಶೂಲಂ’ ಎಂಬ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. `ಉಗ್ರಂ’ ಮರಾಠಿ ರೀಮೇಕ್‌ ನಲ್ಲಿ ಕೂಡ ಶಾನ್ವಿ ಬಣ್ಣ ಹಚ್ಚಿದ್ದಾರೆ. ವಾರಾಣಸಿಯವರಾದ ಶ್ವಾನಿ, ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ‌ಆಗಿರುವ ಈ ಬೆಡಗಿ ಹೆಚ್ಚಾಗಿ ತಮ್ಮ ಫೋಟೋ ಶೂಟ್ ಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ತಮ್ಮ ಟ್ರಾವೆಲ್‌, ಅಡ್ವೆಂಚರಸ್‌ ಜರ್ನಿಗಳ ಫೋಟೋಗಳನ್ನು ಕೂಡ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

ShanviSrivastava-12

ಕನ್ನಡ ಕಲಿಯಲು ಖುಷಿ

ಕನ್ನಡ ಕಲಿತ ರೀತಿ ಬಗ್ಗೆ ಹೇಳಿದ ನಟಿ, ಸೆಟ್‌ ನಲ್ಲಿ ಸಿಬ್ಬಂದಿ ಮತ್ತು ಜನರೊಂದಿಗೆ ಮಾತನಾಡುತ್ತಾ ಕಲಿತೆ, ಆದರೂ ತಪ್ಪುಗಳನ್ನು ಮಾಡುತ್ತೇನೆ. ಕನ್ನಡ ಕಲಿಯಲು ಖುಷಿಯಾಗುತ್ತದೆ ಎನ್ನುತ್ತಾರೆ.

ಕಾಲೇಜ್‌ ಫೀಸ್‌ ಕಟ್ಟುವುದಕ್ಕಾಗಿ

`ಪ್ರತಿಯೊಬ್ಬರ ಜೀವನಕ್ಕೆ ಹಣ ಬಹಳ ಮುಖ್ಯ. ನಮಗೆ ಆರೋಗ್ಯ ಕೈ ಕೊಟ್ಟರೆ ಚಿಕಿತ್ಸೆಗೆ ಹಣ ಬೇಕೇಬೇಕು. ಎಲ್ಲರೂ ಹಣಕ್ಕಾಗಿಯೇ ಕೆಲಸ ಮಾಡುತ್ತೇವೆ. ಆದರೆ ಹಣವನ್ನು ಹೇಗೆ ಬಳಸಬೇಕು ಎನ್ನುವುದು ಮುಖ್ಯ. ನನ್ನ ಮೊದಲ ಸಂಭಾವನೆ 3 ಲಕ್ಷ ರೂ. ಪದವಿ ಕಾಲೇಜಿನಲ್ಲಿ ನನ್ನ ಫೀಸ್‌ ನಾನೇ ಕಟ್ಟಬೇಕೆಂದು ನಟಿಸಲು ಆರಂಭಿಸಿದೆ. `ಕಾಲೇಜ್‌ ಫೀಸ್‌ ಗಾಗಿ ಮನೆಯಲ್ಲಿ ಕೇಳುವುದು ಬೇಡ ಎಂದುಕೊಂಡೆ. ನಾನು ಚಿತ್ರರಂಗಕ್ಕೆ ಬರುವ ಮುನ್ನ ಒಂದು ಕೋಚಿಂಗ್‌ ಸೆಂಟರ್‌ ನಲ್ಲಿ 3 ತಿಂಗಳು ಪಾಠ ಮಾಡಿದ್ದೆ. ತಿಂಗಳಿಗೆ 3,500 ರೂ. ಸಂಬಳ ಪಡೆದಿದ್ದೆ. ಅದೂ ಕೂಡ ನನ್ನ ವಿದ್ಯಾಭ್ಯಾಸಕ್ಕಾಗಿ.

`ವರ್ಷಕ್ಕೆ 14 ಸಾವಿರ ರೂ. ಫೀಸ್‌ ಇತ್ತು. ಒಂದು ಚಿತ್ರಕ್ಕೆ 3 ಲಕ್ಷ ಎಂದಾಗ ಇಡೀ ಕಾಲೇಜಿನವರ ಫೀಸ್‌ ಕಟ್ಟಬಹುದಲ್ಲ ಎಂದು ನಟಿಸಿದೆ. ಈಗ 30 ಲಕ್ಷ ರೂ. ಸಂಭಾವನೆ ಸಿಕ್ಕುತ್ತಿದೆ. ಕನ್ನಡದಲ್ಲೂ ಚಿತ್ರಕ್ಕೆ 30 ಲಕ್ಷ ರೂ. ಸಂಭಾವನೆ. ಮಾರ್ಕೆಟ್‌ ಗೆ ತಕ್ಕಂತೆ ಬದಲಾಗುತ್ತದೆ,’ ಎಂದು ಅವರು ನಗುತ್ತಾ ಉತ್ತರಿಸಿದರು.

ShanviSrivastava-13

ವಿಭಿನ್ನ ಪಾತ್ರಗಳಲ್ಲಿ ಅಭಿನಯ

`ಒಂದೇ ಇಮೇಜಿಗೆ ಅಂಟಿಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವೆ. ನಟರಾದವರು ಯಾವ ರೀತಿಯ ಪಾತ್ರದಲ್ಲಾದರೂ ನಟಿಸುವಂತಿರಬೇಕು. ನಿರ್ದೇಶಕರು ನಟರನ್ನು ಪಾತ್ರಕ್ಕೆ ತಕ್ಕಂತೆ ಮೌಲ್ಡ್ ‌ಮಾಡಬಹುದು. ಹೀಗಿದ್ದಾಗ ನಟರು ಯಾವುದೇ ರೀತಿಯ ಪಾತ್ರದಲ್ಲಿ ನಟಿಸಲು ಸಾಧ್ಯವಿದೆ. ನಿರ್ದೇಶಕರಿಗೆ ಯಾರು, ಯಾವ ಪಾತ್ರಕ್ಕೆ ಸೂಕ್ತ ಅನ್ನೋದು ಗೊತ್ತಿರುತ್ತದೆ. ಲಾಕ್‌ ಡೌನ್‌ ಆದಾಗಿನಿಂದ ಎಲ್ಲರೂ ವರ್ಲ್ಡ್ ಸಿನಿಮಾ ನೋಡುತ್ತಿದ್ದಾರೆ. `ಹಾಗಾಗಿ ಯಾರು ಬೇಕಾದ್ರೂ ಯಾವ ರೀತಿಯ ಪಾತ್ರ ಕೂಡ ಮಾಡಬಹುದು ಎನ್ನುವುದನ್ನು ಎಕ್ಸ್ ಪೆರಿಮೆಂಟ್‌ ಸಿನಿಮಾಗಳ ಮೂಲಕ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕನ್ನಡದಲ್ಲೂ ಇಂಥ ಪ್ರಯೋಗಗಳನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿದೆ,’ ಎಂದು ಶಾನ್ವಿ ಹೇಳುತ್ತಾರೆ.

ಎಲ್ಲ ಬದಲಿಸಿದ ಸಾಂಕ್ರಾಮಿಕ ರೋಗ

ಸಾಂಕ್ರಾಮಿಕ ರೋಗ ಚಿತ್ರರಂಗದ ಬಗ್ಗೆ ಎಲ್ಲವನ್ನೂ ಬದಲಾಯಿಸಿದೆ ಎಂದು ಶಾನ್ವಿ ಅಭಿಪ್ರಾಯಪಟ್ಟಿದ್ದಾರೆ. `ವೀಕ್ಷಕರ  ಇಷ್ಟಗಳು ಕೂಡ ಬದಲಾಗಿವೆ. ಅವರು ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳನ್ನು ಹೊಂದಿರು OTT ಯೊಂದಿಗೆ ವಿವಿಧ ರೀತಿಯ ಕಥೆಗಳನ್ನು ಅನ್ವೇಷಿಸುತ್ತಿದ್ದಾರೆ. ಮನರಂಜನಾ ಉದ್ಯಮ ಮತ್ತೆ ಟ್ರ್ಯಾಕ್‌ ಗೆ ಬಂದಾಗ, ಎಲ್ಲರೂ ಪ್ರಾಯೋಗಿಕ ಹಂತದಲ್ಲಿರುತ್ತಾರೆ. ವಾಣಿಜ್ಯ ಚಲನಚಿತ್ರಗಳು ಅವುಗಳ ಮೌಲ್ಯವನ್ನು ಹೊಂದಿದ್ದರೂ, ಪ್ರಯೋಗಾತ್ಮಕ ಚಿತ್ರಗಳಿಗೆ ಅವಕಾಶವಿರುತ್ತದೆ,’ ಎಂದು ಶಾನ್ವಿ ಹೇಳುತ್ತಾರೆ.

ShanviSrivastava-17

ಶಾನ್ವಿ ಬ್ಯೂಟಿ ಸೀಕ್ರೆಟ್‌

ಆಗಾಗ ಅಡುಗೆ ಮಾಡೋದು ಖುಷಿ ಎನ್ನುವ ಶಾನ್ವಿ ಹೆಚ್ಚು ನೀರು ಕುಡಿಯುತ್ತೇನೆ, ಹಣ್ಣು ತಿನ್ನುತ್ತೇನೆ, 8 ಗಂಟೆ ನಿದ್ದೆ ಮಾಡುತ್ತೇನೆ, ಎಣ್ಣೆ, ಮಸಾಲೆ ಪದಾರ್ಥವಿರುವ ಆಹಾರ ಕಡಿಮೆ ತಿನ್ನುತ್ತೇನೆ ಎಂದು ತಮ್ಮ ಚರ್ಮದ ಕಾಂತಿ ಸೀಕ್ರೆಟ್‌ ಬಿಚ್ಚಿಟ್ಟರು. ಪ್ರತಿದಿನ ಬೆಳಗ್ಗೆ ಸೇಬು, ಬೀಟ್‌ ರೂಟ್‌, ಕ್ಯಾರೆಟ್‌, ಪಾಲಕ್‌ ಸೊಪ್ಪು ಜೊತೆಗೆ ಸಣ್ಣ ತುಂಡು ಶುಂಠಿ ಸೇರಿಸಿ, ಅದನ್ನು ಮಿಕ್ಸಿಗೆ ಹಾಕಿ ಜೂಸ್‌ ಮಾಡಿ ಕುಡಿಯುತ್ತೇನೆ. ಅದರ ವೇಸ್ಟ್ ಎಸೆಯುವುದಿಲ್ಲ, ಅಂದರೆ ಸ್ಟ್ರೈನ್‌ ಮಾಡದೆ ಕುಡಿಯುತ್ತೇನೆ. ಅದುವೇ ನನ್ನ ಸ್ಕಿನ್‌ ಕೇರ್‌ ಸೀಕ್ರೆಟ್‌ ಎಂದಿದ್ದಾರೆ ನಟಿ.

ಆಲ್ ಓಕೆ `ನಿನ್ನ ಬಿಟ್ರೆ‘

ಆಲ್ ಓಕೆ ಅಲೋಕ್‌ ಶಾನ್ವಿ ಶ್ರೀವಾಸ್ತವ್ ಜೊತೆಯಾಗಿ `ನಿನ್ನ ಬಿಟ್ರೆ’ ಎನ್ನುವ ಮ್ಯೂಸಿಕ್‌ ವಿಡಿಯೋ ತಂದಿದ್ದಾರೆ. ವಿಡಿಯೋದಲ್ಲಿ ಶಾನ್ವಿ ಅಷ್ಟೇ ಸುಂದರವಾಗಿಯೂ ಕಾಣಿಸುತ್ತಿದ್ದಾರೆ. ಶಾನ್ವಿ ಶ್ರೀವಾಸ್ತವ್ ಹಾಗೂ ಆಲ್ ಓಕೆ ಅಲೋಕ್‌ ಫಸ್ಟ್ ಟೈಮ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಒಂದು ಸೂಪರ್‌ ಫೀಲ್ ಕೊಡುವ ಈ ಸ್ವತಂತ್ರ ಮ್ಯೂಸಿಕ್‌ ವಿಡಿಯೋ ಇತ್ತೀಚೆಗಷ್ಟೇ ಆಲ್ ಓಕೆ ಅಲೋಕ್ ಯೂಟ್ಯೂಬ್‌ ಚಾನೆಲ್ ‌ನಲ್ಲಿ ಬಿಡುಗಡೆ ಆಗಿದೆ.

ShanviSrivastava-18

29 ವರ್ಷಗಳ ನಂತರ…..

ಕಳೆದ 29 ವರ್ಷಗಳ ಹಿಂದೆ ತೆರೆಕಂಡು ಸೂಪರ್‌ ಹಿಟ್‌ ಆಗಿದ್ದ `ಅಮೆರಿಕಾ ಅಮೆರಿಕಾ’ ಚಿತ್ರದ ಸೀಕ್ವೆಲ್ ‌ಈಗ ಬರುತ್ತಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌`ಅಮೆರಿಕಾ ಅಮೆರಿಕಾ-2′ ಸಿನಿಮಾ ಘೋಷಿಸಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಹಾಗೂ ಧಾರಾಳ ನಿರೀಕ್ಷೆ ಮೂಡಿಸಿದೆ. ಇದೊಂದು ಸ್ತ್ರೀಪ್ರಧಾನ ಚಿತ್ರ ಎನ್ನಬಹುದು.

ShanviSrivastava-23

ಶಾನ್ವಿಯ ಅದ್ಭುತ ಅಭಿನಯ

ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ರ ಅದ್ಭುತ ಅಭಿನಯ ನೋಡಬಹುದು. `ನನ್ನ ಹದಿಮೂರು ವರ್ಷಗಳ ಸಿನಿ ಪಯಣದಲ್ಲೇ ಇಂತಹ ಪಾತ್ರ ಮಾಡಿಲ್ಲ. ಅಂತಹ ಅದ್ಭುತ ಪಾತ್ರವನ್ನು ನೀಡಿರುವ ನಿರ್ದೇಶಕರಿಗೆ ಧನ್ಯವಾದ! ಸಹಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಸಹ ಬಹಳ ಚೆನ್ನಾಗಿದೆ,’ ಎಂದು ನಟಿ ಶಾನ್ವಿ ಹೇಳುತ್ತಾರೆ.

ಚಿತ್ರದ ಶೂಟಿಂಗ್‌ ಈಗಾಗಲೇ ಮುಕ್ತಾಯಗೊಂಡಿದ್ದು, ಇದನ್ನು ಅಮೆರಿಕಾದಲ್ಲಿಯೇ ಶೂಟಿಂಗ್‌ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಿರೂಪ್‌ ಭಂಡಾರಿ ನಾಯಕರಾಗಿ ಅಭಿನಯಿಸಿದ್ದಾರೆ.

ShanviSrivastava-20

ಸಹ ಕಲಾವಿದರು `ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಸಹನಾ ವಿಜಯಕುಮಾರ್‌ ರ ಕಾದಂಬರಿ ಆಧಾರಿತವಾಗಿದೆ. ನಾಲ್ಕು ಸುಮಧುರ ಹಾಡುಗಳಿದ್ದು, ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತ ನಕುಲ್ ‌ಅಭಯಂಕರ್‌ ಅವರದು. ಎಸ್.ಕೆ. ರಾವ್ ಛಾಯಾಗ್ರಹಣದಲ್ಲಿ ಅಮೆರಿಕಾದ ಸೌಂದರ್ಯ ನೋಡುವುದೇ ಒಂದು ಸೊಗಸು. ಸಂಕಲನಕಾರ ಕ್ರೇಜಿ ಮೈಂಡ್ಸ್ ಸಹ ಅಲ್ಲಿನ ಸೌಂದರ್ಯವನ್ನು ಡ್ರೋನ್‌ ನಲ್ಲಿ ಸೆರೆಹಿಡಿದಿದ್ದಾರೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಮೂಲಕವೇ ಈ ಚಿತ್ರ ನಿರ್ಮಾಣವಾಗಿದೆ. ಬಹುನಿರೀಕ್ಷಿತ ಚಿತ್ರ ಆದಷ್ಟು ಬೇಗ ತೆರೆಗೆ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

– ರಾಘವೇಂದ್ರ ಅಡಿಗ ಎಚ್ಚೆನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ