ಹೊಸ ಚಪ್ಪಲಿ ಕೊಳ್ಳುವಾಗ ಮುಖ್ಯವಾಗಿ ಈ ಸಲಹೆಗಳನ್ನು ಮರೆಯದೆ ನೆನಪಿಟ್ಟುಕೊಳ್ಳಿ......
ರೇಖಾ ತನಗಾಗಿ 6 ಸಾವಿರ ರೂ.ಗಳ ವಾಕಿಂಗ್ ಶೂಸ್ ನ್ನು ಬಲು ಇಷ್ಟಪಟ್ಟು ಖರೀದಿಸಿದಳು. ಮನೆಗೆ ಬಂದು ಸಾಕ್ಸ್ ಜೊತೆ ಅದನ್ನು ಧರಿಸಲು ನೋಡಿದಾಗ, ಅದು ಬಲು ಟೈಟ್ ಎನಿಸಿತು. ಹೊಸತು ಎಂದು ಕಷ್ಟಪಡುತ್ತಲೇ ವಾಕಿಂಗ್ ಹೊರಟೇಬಿಟ್ಟಳು. ಮನೆಗೆ ಬರುವಷ್ಟರಲ್ಲಿ ಸಾಕು ಸಾಕಾಯಿತು. ಒಮ್ಮೆ ಬಳಸಿದ್ದರಿಂದ ಅದನ್ನು ವಾಪಸ್ಸು ಕೊಡುವಂತೆ ಇರಲಿಲ್ಲ.
ಆಫೀಸಿಗೆ ಧರಿಸಲೆಂದು ಲಲಿತಾ ಹೊಸ ಚಪ್ಪಲಿ ಕೊಳ್ಳಲು ಹೊರಟಳು. ಹಲವು ಅಂಗಡಿ ತಡಕಾಡಿದ ಮೇಲೆ ಬಲು ಕಷ್ಟದಿಂದ, ಒಂದು ಶೋರೂಮಿನಲ್ಲಿ ಬೇಕಾದ್ದನ್ನು ಆರಿಸಿದಳು. ಅಲ್ಲಿ ಹಾಕಿಕೊಂಡೂ ನೋಡಿದ್ದಳು. ಆದರೆ ಅದನ್ನು ಧರಿಸಿ ಆಫೀಸಿಗೆ ಬಂದಾಗ, ಯಾಕೋ ಹೊಸ ಚಪ್ಪಲಿ ಬಲು ಅನ್ ಕಂಫರ್ಟೆಬಲ್ ಅನಿಸಿತು. ಏಕೆಂದರೆ ಚಪ್ಪಲಿ ಅವಳ ಪಾದಕ್ಕಿಂತ ತುಸು ಲೂಸು ಆಗಿತ್ತು.
ಹೀಗೆ ಚಪ್ಪಲಿ, ಶೂಸ್ ಪ್ರತಿ ವ್ಯಕ್ತಿಯ ಅತಿ ಅಗತ್ಯ ವಸ್ತುವಾಗಿದೆ. ಹಿಂದೆಲ್ಲ ಮಾರುಕಟ್ಟೆಯಲ್ಲಿ ಇವು ಬಲು ಕಡಿಮೆ ಬ್ರಾಂಡ್ ನಲ್ಲಿ ಸಿಗುತ್ತಿದ್ದವು. ಜನ ಹೆಚ್ಚು ತಲೆಕೆಡಿಸಿಕೊಳ್ಳದೆ 1-2 ಜೋಡಿ ಖರೀದಿಸಿ ಸುಮ್ಮನಾಗುತ್ತಿದ್ದರು. ಆದರೆ ಇವತ್ತಿನ ಕಾಲಕ್ಕೆ ಜನ ರಾಶಿ ರಾಶಿ ಬ್ರಾಂಡ್ಸ್ ನ್ನು ಆನ್ ಲೈನ್/ಆಫ್ ಲೈನ್ ನೋಡಿ ಖರೀದಿಸುತ್ತಿದ್ದಾರೆ. ವಾಕಿಂಗ್, ರನ್ನಿಂಗ್, ಪಾರ್ಟಿವೇರ್, ಅಫಿಶಿಯಲ್.... ಎಂದೆಲ್ಲ ನಾನಾ ವೆರೈಟಿ ಖರೀದಿಸುತ್ತಾರೆ.
ಇದು ಸಂದರ್ಭ ಅವಶ್ಯಕತೆಗೆ ತಕ್ಕಂತೆ, ಕುಶನಿಂಗ್ಸೋಲ್ ರಚನೆಯನ್ನು ಅನುಸರಿಸುತ್ತದೆ. ಪಾದಕ್ಕೆ ಸೂಕ್ತವಾಗಿ ಹೊಂದುವ, ಹಿತಕರ ಎನಿಸುವ ಫುಟ್ ವೇರ್ ಅತ್ಯಗತ್ಯ. ಇಲ್ಲದಿದ್ದರೆ ಪಾದಗಳಲ್ಲಿ ನೋವು, ಊತ, ಒಡೆತ ಇತ್ಯಾದಿ ಏನೋ ಒಂದು ಬಾಧೆ ಕಾಡುತ್ತದೆ. ಇತ್ತೀಚೆಗೆ ಇವುಗಳ ಬೆಲೆ ಸಹ ಸಾವಿರಾರು ರೂ. ಆಗಿದೆ. ಹೀಗಾಗಿ ನೀವು ಬಲು ಎಚ್ಚರಿಕೆಯಿಂದ ಇವನ್ನು ನೋಡಿ ಆರಿಸದಿದ್ದರೆ, ನಿಮ್ಮ ಸಾವಿರಾರು ರೂ. ಹಾಳಾಗುತ್ತದೆ. ಆದ್ದರಿಂದ ಹೊಸ ಫುಟ್ ವೇರ್ ಖರೀದಿಸುವಾಗ ಏನೆಲ್ಲ ಎಚ್ಚರಿಕೆ ವಹಿಸಬೇಕೆಂದು ವಿವರವಾಗಿ ಗಮನಿಸೋಣ :
ಎಲ್ಲಕ್ಕೂ ಮುಖ್ಯ ಸೂಕ್ತ ಅಳತೆ : ಇತ್ತೀಚಿನ ಸಂಶೋಧನೆಗಳ ಪ್ರಕಾರ, ಮಾನವ ದೊಡ್ಡವನಾದ ಮೇಲೆ, ಪಾದಗಳ ಅಳತೆಯಲ್ಲಿ ಮಾಮೂಲಿ ಅಂತರ ಇದ್ದೇ ಇರುತ್ತದೆ. ಹೀಗಾಗಿ ಶೂ/ಚಪ್ಪಲಿ ಖರೀದಿಸುವ ಮೊದಲು, ಅಳತೆ ಬಹಳ ಮುಖ್ಯ. ಈ ಅಳತೆಗಾಗಿ ನಿಮ್ಮ ಹಳೆಯ ಶೂ/ಚಪ್ಪಲಿ ಸೈಜ್ ಗುರುತಿಡಿ. ಆಗ ಅಂಗಡಿಯವನಿಗೆ ಅದೇ ನಂಬರಿನ ಅಳತೆಯದ್ದೇ ಬೇಕು ಎಂದು ಹೇಳಬಹುದು. ಇತ್ತೀಚೆಗೆ ಎಲ್ಲಾ ಚಪ್ಪಲಿ ಅಂಗಡಿಗಳಲ್ಲೂ, ಈ ಅಳತೆಗೆ ಒಂದು ಸ್ಕೇಲ್ ಇದ್ದೇ ಇರುತ್ತದೆ. ಒಮ್ಮೊಮ್ಮೆ ಇದರಲ್ಲೂ ವ್ಯತ್ಯಾಸ ಆಗಬಹುದು, ಹೀಗಾಗಿ ಈಗ ನೀವು ಬಳಸುತ್ತಿರುವ ಫುಟ್ ವೇರ್ ನ ನಂಬರ್ ನೆನಪಿಡುವುದೇ ಸರಿ.
ಪಾದಗಳ ಅಗಲದ ಕಡೆಗೂ ಗಮನವಿಡಿ : ಕೆಲವರ ಪಾದ ಗಿಡ್ಡವಾದರೂ, ಅಗಲ ಆಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಚಪ್ಪಲಿ ಆರಿಸಿದರೆ, ಕಾಲುಬೆರಳುಗಳಿಗೆ ಬಹಳ ನೋವಾಗುತ್ತದೆ, ಏನೋ ಒತ್ತಡ ಹೇರಿದಂತಿರುತ್ತದೆ. ಪಾದ ತುಸು ತೆಳು ಆಗಿದ್ದರೆ, ಅಗಲದ ಚಪ್ಪಲಿ ಧರಿಸಿದರೆ, ಪಾದಕ್ಕೆ ಬೇಕಾದ ಸಪೋರ್ಟ್ ಸಿಗುವುದಿಲ್ಲ. ಹಿಮ್ಮಡಿ, ಬೆರಳು ಸಂದಿನಲ್ಲಿ ಒಡೆತ ಕಾಣಬಹುದು. ಹೀಗಾಗಿ ನಿಮ್ಮ ಪಾದ ಅಗಲವಾಗಿದ್ದರೆ, ಮುಂದಿನ ಸಲದಿಂದ, ಮುಂಭಾಗ ಬಲು ಚೂಪಾಗಿರುವಂಥ ಶೂ/ಚಪ್ಪಲಿ ಕೊಳ್ಳುವ ಬದಲು ಅಗಲ ಮೂತಿ ಇರುವಂಥದ್ದನ್ನೇ ಕೊಳ್ಳಿರಿ.





