–  ರಾಘವೇಂದ್ರ ಅಡಿಗ ಎಚ್ಚೆನ್.

ಜೀ ಕನ್ನಡದ ಜನಪ್ರಿಯ ಅಣ್ಣಯ್ಯಧಾರಾವಾಹಿಯಲ್ಲಿ ಜಿಮ್ ಸೀನಾಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ನಟ ಸುಷ್ಮಿತ್ ಜೈನ್ ಧಾರಾವಾಹಿಗೆ ಗುಡ್‌ಬೈ ಹೇಳಿದ್ದಾರೆ. ಉತ್ತಮ ಟಿಆರ್‌ಪಿ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿರುವ ಧಾರಾವಾಹಿಯಿಂದ ಅವರ ದಿಢೀರ್ ನಿರ್ಗಮನ ಕಿರುತೆರೆ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದು, ಅಭಿಮಾನಿಗಳಲ್ಲಿ ಬೇಸರಕ್ಕೂ ಕಾರಣವಾಗಿದೆ. ಈ ಬಗ್ಗೆ ಸ್ವತಃ ಸುಷ್ಮಿತ್ ಜೈನ್ ವೀಡಿಯೊ ಸಂದೇಶದ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ವೀಡಿಯೊದಲ್ಲಿ ಮಾತನಾಡಿರುವ ಸುಷ್ಮಿತ್ ಜೈನ್, “ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಜಿಮ್ ಸೀನಾ ಮಾತನಾಡುತ್ತಿದ್ದೇನೆ. ಇನ್ನು ಮುಂದೆ ಈ ಪಾತ್ರವನ್ನು ನಾನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಕೆಲವು ಕಾರಣಾಂತರಗಳಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಇಷ್ಟು ದಿನ ನನಗೆ ನೀಡಿದ ಪ್ರೀತಿ, ಬೆಂಬಲವನ್ನು ಮುಂದಿನ ದಿನಗಳಲ್ಲಿ ಈ ಪಾತ್ರವನ್ನು ನಿರ್ವಹಿಸುವ ಹೊಸ ಕಲಾವಿದರಿಗೂ ನೀಡಬೇಕು ಎಂಬುದು ನನ್ನ ಮನವಿ” ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸುಷ್ಮಿತ್ ಜೈನ್ ಧಾರಾವಾಹಿಯಿಂದ ಹೊರಬಂದ ಬೆನ್ನಲ್ಲೇ ‘ಜಿಮ್ ಸೀನಾ’ ಪಾತ್ರಕ್ಕೆ ಹೊಸ ನಟರ ಎಂಟ್ರಿಯಾಗಿದೆ. ಇನ್ನು ಮುಂದೆ ಹೊಸ ಕಲಾವಿದರು ಈ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಆದರೆ ಸುಷ್ಮಿತ್ ಅವರನ್ನು ಈ ಪಾತ್ರದಲ್ಲಿ ನೋಡಲು ಒಲವು ಬೆಳೆಸಿಕೊಂಡಿದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದು, ಅವರು ಧಾರಾವಾಹಿ ಬಿಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವೇಳೆ ಮತ್ತೊಂದು ಕುತೂಹಲವೂ ಜೋರಾಗಿದೆ. ಶೀಘ್ರದಲ್ಲೇ ಆರಂಭವಾಗಲಿರುವ ‘ಕನ್ನಡ ಬಿಗ್ ಬಾಸ್ ಸೀಸನ್ 13’ ಸ್ಪರ್ಧಿಗಳ ಪಟ್ಟಿಯಲ್ಲಿ ಸುಷ್ಮಿತ್ ಜೈನ್ ಹೆಸರು ಕೇಳಿಬರುತ್ತಿದೆ. ಧಾರಾವಾಹಿಯಿಂದ ಅವರ ದಿಢೀರ್ ನಿರ್ಗಮನವೂ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದ್ದು, ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಾ ಎಂಬ ಚರ್ಚೆ ಕಿರುತೆರೆ ವಲಯದಲ್ಲಿ ತೀವ್ರಗೊಂಡಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ