ಗುಬ್ಬಿವಾಣಿ ಟ್ರಸ್ಟ್, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಹಯೋಗದಲ್ಲಿ ಮಹಿಳಾ ನಿರ್ದೇಶಕಿಯರ ಆಯ್ದ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಭಾನುವಾರ ಸುಚಿತ್ರಾದಲ್ಲಿ ಭಾನುವಾರ ಭರ್ಜರಿ ಯಶಸ್ಸು ಕಂಡಿತು.
ಈ ವರ್ಷದ ಆರಂಭದಲ್ಲಿ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ದೊರೆತ ಅಗಾಧ ಪ್ರತಿಕ್ರಿಯೆಯ ನಂತರ, ಇದು ಮೂರನೇ ಪ್ರದರ್ಶನವಾಗಿದ್ದು,ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಧ್ವನಿಗೆ ಪ್ರೇಕ್ಷಕರನ್ನು ಒಟ್ಟುಗೂಡಿಸಿತ್ತು.
ಈ ಆಕರ್ಷಕ ಕಿರುಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಆಯ್ಧ ಚಿತ್ರಗಳಾಗಿದ್ದು, ವಿವಿಧ ಸಮಕಾಲೀನ ವಿಷಯಗಳ ಕುರಿತು ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ನಿರೂಪಿಸಿದವು.
ಸುಚಿತ್ರದ ಸಂಸ್ಥಾಪಕ ಎಚ್.ಎನ್. ನರಹರಿ ರಾವ್ ಅವರು ಈ ಸಂದರ್ಭ ಮಾತನಾಡಿ, ಯುದ್ಧ ಅಥವಾ ದ್ವೇಷದಿಂದ ಯಾರೂ ಶಾಂತಿಯನ್ನು ಸ್ಥಾಪಿಸಲಾಗದು. ಕೆಲವು ಚಿಕ್ಕಪುಟ್ಟ ಕಿರುಚಿತ್ರಗಳು ಸಹ ಎಷ್ಟು ಮನದಾಳಕ್ಕೆ ಇಳಿದುಬಿಡುತ್ತವೆ ಎಂದರೆ, ಪ್ರತಿಯೊಬ್ಬರನ್ನೂ ಚಿಂತನೆಗೆ ಹಚ್ಚಿಬಿಡುತ್ತವೆ ಎಂದರು.
ಈ ಸಂದರ್ಭ ನಾರ್ಮನ್ ಮೆಕ್‌ಲಾರೆನ್ ಅವರ ಅಮರ (ಕ್ಲಾಸಿಕ್) ಕಿರುಚಿತ್ರ ನೈಬರ್ಸ್ (1952) ಪ್ರದರ್ಶಿಸಲಾಯಿತು. ಗುಬ್ಬಿವಾಣಿ ಟ್ರಸ್ಟ್‌ನ ಮಹಿಳಾ ಸಬಲೀಕರಣ ವಿಭಾಗ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ ಕಾರ್ಯಕ್ರಮ ಉದ್ಘಾಟಿಸಿ, ಕಿರು ಚಿತ್ರೋತ್ಸವದ ಆಶಯ ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು.
ಅವಳ ಹೆಜ್ಜೆ ಮಹಿಳೆಯ ಹೆಜ್ಜೆಯ ಗುರುತು. ಆಟದ ಮೈದಾನದಿಂದ ಹಿಡಿದು ಕೋರ್ಟ್ ರೂಮ್ ತನಕ, ಪಾರ್ಲಿಮೆಂಟ್ ತನಕ, ಭಾಹ್ಯಾಕಾಶದಲ್ಲಿ ಚಂದ್ರನಮೇಲೆ ಎಲ್ಲಾ ಕಡೆ ಅವಳ ಹೆಜ್ಜೆ ಗುರುತು ಇರಬೇಕು. ಎಲ್ಲಾ ಕಡೆ ಆಕೆ ಕಾಣಿಸಬೇಕು. ಈಗ ಇಟ್ಟಿರುವ ಹೆಜ್ಜೆ ಗುರುತುಗಳನ್ನು ಉಳಿಸಿಕೊಂಡು, ಇಲ್ಲದೆ ಇರುವ ಕಡೆ ಆಕೆ ಹೆಜ್ಜೆ ಗುರುತುಗಳನ್ನು ಮೂಡಿಸಬೇಕು ಎಂಬ ಆಶಯವೇ ಅವಳ ಹೆಜ್ಜೆ ಎಂದರು.
ಮಹಿಳಾ ನಿರ್ದೇಶಿತ ಕಿರುಚಿತ್ರೋತ್ಸವಕ್ಕೆ ಈ ವರ್ಷ ದೊರೆತ ಬೆಂಬಲದಿಂದ ನಮಗೆ ಅಗಾಧ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದ ಸ್ಪರ್ಧೆಗೆ ಸಲ್ಲಿಕೆಗಳು ಇದೇ ನವೆಂಬರ್ 1 ರಂದು ತೆರೆದಿರುತ್ತವೆ ಎಂದು ಹೇಳಿದರು.
ರಾಜ್ಯೋತ್ಸವ ವಿಶೇಷ ಕಾರ್ಯಕ್ರಮವಾಗಿ, ನವೆಂಬರ್ 30 ರೊಳಗೆ ಸಲ್ಲಿಸಿದ ಸಲ್ಲಿಕೆಗಳಿಗೆ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಹೆಚ್ಚಿನ ವಿವರಗಳು ನಮ್ಮ ವೆಬ್‌ಸೈಟ್: www.gubbivanitrust.ngo ನಲ್ಲಿ ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದರು.
ಪ್ರದರ್ಶಿತ ಕಿರುಚಿತ್ರಗಳು:
ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್ ಲೈನ್’* (2025), ಮಾನಸ ಯು ಶರ್ಮ ನಿರ್ದೇಶನದ ‘ಸೊಲೋ ಟ್ರಾವೆಲ್ಲರ್’ (2023), ತೃಪ್ತಿ ಕುಲಕರ್ಣಿ ನಿರ್ದೇಶನದ ‘ಹೌ ಆರ್ ಯು?’ (2023), ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), ಚಂದನಾ ನಾಗ್ ನಿರ್ದೇಶನದ ‘ಉಭಯ’ (2024), ಕ್ಷಮಾ ಅಂಬೆಕಲ್ಲು ನಿರ್ದೇಶನದ ‘ಪುಷ್ಪ’ (2024), ಕವಿತಾ ಬಿ ನಾಯಕ್ ನಿರ್ದೇಶನದ ‘ಗ್ಲೀ’ (2023), ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್ ವಾಕ್’ (2025)
ಈ ಸಂದರ್ಭ ಪುರವಂಕರ ಸಭಾಂಗಣದಲ್ಲಿ ಕಿಕ್ಕಿರಿದಿದ್ದ ಪ್ರೇಕ್ಷಕರು ಹಾಗೂ ಸಿನಿಮಾ ನಿರ್ದೇಶಕಿರೊಂದಿಗೆ ಪ್ರಶ್ನೋತ್ತರವೂ ನಡೆಯಿತು. ಒಂದು ಕಿರು ಚಿತ್ರ ತೆಗೆಯಲು ಬೇಕಾಗುವ ಬಜೆಟ್, ಎದುರಾಗುವ ಸವಾಲುಗಳು, ಎಐನಿಂದ ಮುಂದೆ ಯಾವ ರೀತಿಯ ಸವಾಲುಗಳನ್ನು ಎದುರಾಗಬಹುದು? ಚಿತ್ರಗಳು ಬಂದಿದ್ದು, ಅನುಭವದಿಂದಲಾ? ಅಥವಾ ಕಲ್ಪನೆಗಳಾ? ಗಂಡಿನ ಪಾತ್ರವನ್ನು ಬರೆಯಲು ಸಾಧ್ಯವಾದ ಬಗೆ ಸೇರಿದಂತೆ ನಮ್ಮನ್ನು ಒಂದು ಲಿಂಗವಾಗಿ ಪರಿಗಣಿಸದೆ, ಒಬ್ಬ ಮನುಷ್ಯರಂತೆ ಮಾತ್ರ ನೋಡಬೇಕು ಎಂಬ ಕುರಿತ ಚರ್ಚೆಯೂ ನಡೆದವು. ಒಟ್ಟಾರೆ ಪ್ರೇಕ್ಷಕರು ಹಾಗೂ ನಿರ್ದೇಶಕಿಯರು ಉತ್ಸಾಹಭರಿತ ಹಾಗೂ ಚಿಂತನಶೀಲ ಸಂವಾದ ನಡೆಸಿದರು.