ನಟಿ, ನಿರ್ದೇಶಕಿ, ರಂಗಭೂಮಿ ಕಲಾವಿದೆಯಾಗಿ ಅಪಾರ ಪ್ರತಿಭಾನ್ವಿತೆ ಎನಿಸಿರುವ ಕನ್ನಡದ ಅಪ್ಪಟ ಪ್ರತಿಭೆ ಸಿಂಧೂ ಶ್ರೀನಿವಾಸಮೂರ್ತಿಯವರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ…..?
ಮಹಿಳಾ ನಿರ್ದೇಶಕಿಯರು ಅಂದ ಕೂಡಲೇ ಅವರು ಮಹಿಳಾ ಪ್ರಧಾನ ಚಿತ್ರಗಳನ್ನೇ ಮಾಡುತ್ತಾರೆ. ಅವರ ಸಿನಿಮಾಗಳು ಕಮರ್ಷಿಯಲ್ ಆಗಿ ಓಡೋದಿಲ್ಲ ಎಂಬ ತಪ್ಪು ಕಲ್ಪನೆ ಬಹಳ ಮಂದಿಗಿದೆ. ಆದರೆ ಈಗ ಕಾಲ ಬದಲಾಗಿದೆ, ಮಹಿಳಾ ನಿರ್ದೇಶಕರು ಸಾಕಷ್ಟು ಸಂಖ್ಯೆಯಲ್ಲಿ ಇಂದು ವಿಭಿನ್ನ ಕಥಾವಸ್ತು ಹೊಂದಿರುವ ಸಿನಿಮಾಗಳನ್ನು ಜನರ ಮುಂದಿಟ್ಟು ಸೈ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿ, OTTಗೆ ಕಾಲಿಟ್ಟು ಎಲ್ಲರ ಗಮನ ಸೆಳೆದ `ಆಚಾರ್‌ಕೋ’ ಚಿತ್ರದ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ ಪ್ರಶಂಸೆ, ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಸಿಂಧೂ ನಟಿ, ಕಥಾ ಲೇಖಕಿ, ನಿರ್ದೇಶಕಿ. ಈ ಮೊದಲು `ಫ್ರೆಂಚ್‌ಬಿರಿಯಾನಿ’ ಚಿತ್ರಕ್ಕೆ ರೈಟರ್ ಆಗಿ ವರ್ಕ್ ಮಾಡಿದ್ದರು, `ಹೋಪ್’ ಫಿಲಂನಲ್ಲೂ ನಟಿಸಿದ್ದರು. ಪುನೀತ್ ರಾಜ್ ಕುಮಾರ್ ರ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವಾಗ `ಆಚಾರ್‌ಕೋ’ ಮಾಡುವಾಗ ಅದರ ಕಥೆಯನ್ನು ಅಪ್ಪುಗೆ ಹೇಳಿದರಂತೆ, ಅಪ್ಪು ತಮ್ಮ ಪತ್ನಿ ಅಶ್ವಿನಿಗೆ ಕಥೆ ಓದಲು ಕೊಟ್ಟಾಗ ಅವರಿಬ್ಬರೂ ನಮ್ಮ ಬ್ಯಾನರ್ ನಲ್ಲೇ ಈ ಸಿನಿಮಾ ಮಾಡಿ ಎಂದು ಪ್ರೋತ್ಸಾಹ ನೀಡಿದರಂತೆ.
ಅಪ್ಪು ಸಹಕಾರ
ನಾನು ಮಹಿಳೆ ಅಂತ ನೋಡದೇ ಅದರಲ್ಲಿದ್ದ ಕಂಟೆಂಟ್ ಮತ್ತು ನಾನು ಈ ಸನಿಮಾ ನಿರ್ದೇಶಿಸಬಲ್ಲೆ ಎಂಬ ನಂಬಿಕೆಯಿಂದ ಕೊಟ್ಟರು ಎಂದು ಸಿಂಧೂ, ಅಪ್ಪುರನ್ನು ನೆನಪಿಸಿಕೊಳ್ಳುತ್ತಾರೆ. ಅಶ್ವಿನಿಯರ ಸಹಕಾರ, ಪ್ರೋತ್ಸಾಹ ಈ ಸಿನಿಮಾ ಬಗ್ಗೆ ಅವರಿಗಿದ್ದ ನಂಬಿಕೆ ನಮ್ಮಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿತು.`ಆಚಾರ್‌ಕೋ’ 60ರ ದಶಕದ ಕಥೆಯನ್ನು ತೆರೆ ಮೇಲೆ ತರುವುದು ಸುಲಭದ ಮಾತಾಗಿರಲಿಲ್ಲ. ನನಗಿದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಸ್ಟಾರ್ ಗಳಿಲ್ಲದೇ ಪಾತ್ರಕ್ಕೆ ತಕ್ಕಂತೆ ಒಪ್ಪುವ ಹಾಗೆ ಕಲಾವಿದರನ್ನು ಆಯ್ಕೆ ಮಾಡಿದ್ದೆ. ಅವರು ನಟರು ಎನ್ನುವುದಕ್ಕಿಂತ ಇವನು ನಮ್ಮ ಮನೆ ಹುಡುಗ, ಅವಳು ನಮ್ಮ ಮನೆ ಹುಡುಗಿಯಂತಿರಬೇಕು ಎಂದು ಹೊಸಬರನ್ನೇ ಸೆಲೆಕ್ಟ್ ಮಾಡಲಾಗಿತ್ತು.
ಹಿರಿಯ ನಟರಾದ ಅಶೋಕ್, ಸುಧಾ ಬೆಳವಾಡಿ ಅವರು ಪಾತ್ರಕ್ಕೆ ಹೆಚ್ಚು ಒಪ್ಪುವುದರ ಜೊತೆಗೆ ಗಂಭೀರತೆ ತುಂಬಿದ್ದರು ಎಂದು ಸಿಂಧೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ರಾಘವೇಂದ್ರ ಚಿತ್ರಾಣಿ ಸಂಸ್ಥೆಯಿಂದ ವರ್ಷದ ಉತ್ತಮ ನಿರ್ದೇಶಕಿ ಎಂದು ಇವರಿಗೆ ಪ್ರಶಸ್ತಿ ನೀಡಲಾಯಿತು.
ಮುಂದಿನ ಯೋಜನೆಗಳು
ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳುತ್ತಾ… ಸದ್ಯಕ್ಕೆ ಒಂದು ಹೊಸ ತಂಡದ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಾ ಇದ್ದೀನಿ. ಅವರು ಅನೌನ್ಸ್ ಮಾಡುವವರೆಗೂ ಏನನ್ನೂ ಹೇಳುವಂತಿಲ್ಲ, ಎಂದು ವಿವರಿಸಿದರು.`ಆಚಾರ್‌ಕೋ’ ನಂತರ ವಾಟ್ ನೆಕ್ಸ್ಟ್ ಎಂದು ಕೇಳಿದಾಗ, “ಒಂದು ಸಿನಿಮಾಗೆ ರೈಟಿಂಗ್ ಬಹಳ ಮುಖ್ಯ. ಹಾಗೆಯೇ ಅದನ್ನು ಸ್ವೀಕರಿಸು ಪ್ರೇಕ್ಷಕರು. ಥಿಯೇಟರ್ ಗೆ ಜನ ಬರಬೇಕು. OOT ಪ್ಲಾಟ್ ಫಾರ್ಮ್ ಕೂಡ ಕನ್ನಡ ಚಿತ್ರಗಳಿಗೆ ಪ್ರಾಧಾನ್ಯತೆ ಕೊಡಬೇಕು,” ಎಂದು ಹೇಳು ಸಿಂಧೂ ನಟಿಯಾಗಿ, ನಿರ್ದೇಶಕಿಯಾಗಿ, ರಂಗಭೂಮಿ ಕಲಾವಿದೆಯಾಗಿ ಒಳ್ಳೆ ಉದ್ಯೋಗ ಸಿಕ್ಕರೂ, ಅದನ್ನು ಬಿಟ್ಟು ಏನಾದರೂ ಸಾಧಿಸಬೇಕೆಂದು ಹೊರಟಿದ್ದಾರೆ. ಇವರ ಪ್ರತಿಭೆಯನ್ನು ನಮ್ಮ ಕನ್ನಡ ಚಿತ್ರರಂಗ ಒಳ್ಳೆಯದಾಗಿ ಬಳಸಿಕೊಳ್ಳಲಿ!
– ಸರಸ್ವತಿ ಜಾಗೀರದಾರ್





