– ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್ ಹಾಗೂ ಅಸ್ಸಾಮಿಯ ಖ್ಯಾತ ಗಾಯಕ ಜುಬೀನ್ ಗಾರ್ಗ್ (Singer Zubeen Garg) ಅವರು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ನಿಧನರಾಗಿದ್ದಾರೆ. ಇದೇ 20, 21 ರಂದು ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್ಗಾಗಿ ಸಿಂಗಾಪುರಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.
ಗಾಯಕ ಜುಬೀನ್ ಗಾರ್ಗ್ (52) ಇವರು ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಜುಬೀ ಗಾರ್ಗ್ ಸ್ಕೂಬಾ ಡೈವಿಂಗ್‌ಗೆಂದು ತೆರಳಿದಾಗ ಅಪಘಾತ ಸಂಭವಿಸಿದೆ. ಸ್ಕೂಬಾ ಡೈವಿಂಗ್ ಮಾಡುತ್ತಿರುವಾಗಲೇ ಆಘಾತ ಸಂಭವಿಸಿದ್ದು ತಕ್ಷಣ ಅವರನ್ನ ಸಮುದ್ರದಿಂದ ರಕ್ಷಣೆ ಮಾಡಲಾಗಿತ್ತು. ಬಳಿಕ ಸಿಂಗಾಪುರದ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಉಸಿರಾಟ ಸಮಸ್ಯೆ ಎದುರಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ.
ಜುಬೀನ್ ಗಾರ್ಗ್ ನಿಧನ ಹೊಂದಿದ್ದಾರ ಎಂದು ಅಸ್ಸಾಂನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಿಂಘಾಲ್ ಖಚಿತಪಡಿಸಿದ್ದಾರೆ. ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ. ಜುಬೀನ್ ಗಾರ್ಗ್ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
40 ವಿವಿಧ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳು: ಅಸ್ಸಾಂನ ಹೈಯೆಸ್ಟ್-ಪೈಯ್ಡ್ ಸಿಂಗರ್ ಆಗಿದ್ದ ಜುಬೀನ್ ಗಾರ್ಗ್ ಅವರು 40 ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಬಿಷ್ಣುಪ್ರಿಯಾ ಮಣಿಪುರಿ, ಆದಿ, ಬೊರೊ, ಇಂಗ್ಲಿಷ್, ಗೋಲ್‌ಪರಿಯಾ, ಕನ್ನಡ, ಕರ್ಬಿ, ಖಾಸಿ, ಮಲಯಾಳಂ, ಮರಾಠಿ, ಮಿಸಿಂಗ್, ನೇಪಾಳಿ, ಒಡಿಯಾ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು ಮತ್ತು ತಿವಾ ಸೇರಿ ಬಹುಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.