–  ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಹೇಳಿಕೆ ವಿವಾದಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ಖ್ಯಾತ ಗಾಯಕ ಸೋನು ನಿಗಮ್ ಅವರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರೊಂದಿಗೆ ಮಾತನಾಡಿ ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ ಎಂದು ನಾರಾಯಣಗೌಡ ತಿಳಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸೋನು ನಿಗಮ್ ವಿರುದ್ಧದ ಹೋರಾಟವನ್ನು ಇಲ್ಲಿಗೇ ನಿಲ್ಲಿಸುವುದಾಗಿ ಕರವೇ ಘೋಷಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿರುವ ನಾರಾಯಣಗೌಡ, ಸೋನು ನಿಗಮ್ ಅವರ ಹಾಡುಗಳನ್ನು ಕನ್ನಡಿಗರು ಹಿಂದಿನಿಂದಲೂ ಪ್ರೀತಿಸಿದ್ದಾರೆ. ಆದರೆ, ಹಿಂದೆ ಅವರು ಆಡಿದ್ದ ಒಂದು ಮಾತು ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿತ್ತು. ಅದರಿಂದಲೇ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿತ್ತು ಎಂದು ವಿವರಿಸಿದ್ದಾರೆ.

ಇದೀಗ ಸೋನು ನಿಗಮ್ ಕ್ಷಮೆ ಕೇಳಿರುವುದರಿಂದ ವಿವಾದವನ್ನು ಮುಂದುವರಿಸುವ ಅಗತ್ಯವಿಲ್ಲ ಎಂಬ ನಿಲುವನ್ನು ಕರವೇ ತೆಗೆದುಕೊಂಡಿದೆ. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ ಮತ್ತು ಸಂಸ್ಕಾರ ಎಂದು ನಾರಾಯಣಗೌಡ ಹೇಳಿದ್ದಾರೆ.

ಘಂಟಸಾಲ, ಪಿ.ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್ ಮತ್ತು ಚಿತ್ರಾ ಸೇರಿದಂತೆ ಕನ್ನಡಿಗರಲ್ಲದ ಅನೇಕ ಗಾಯಕರು ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರು ಅವರನ್ನು ಅಪಾರವಾಗಿ ಪ್ರೀತಿಸಿದ್ದಾರೆ. ಸೋನು ನಿಗಮ್ ಕೂಡ ಅಂತಹ ಪ್ರತಿಭಾವಂತ ಗಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.

ಅಷ್ಟಕ್ಕೂ ವಿವಾದ ಶುರುವಾಗಿದ್ದು ಹೇಗೆ?

2025ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬರು ಸೋನು ನಿಗಮ್ ಅವರಿಗೆ ಕನ್ನಡ ಹಾಡು ಹಾಡುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ನೀಡಿದ ಪ್ರತಿಕ್ರಿಯೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕನ್ನಡ ಹಾಡಿನ ಬೇಡಿಕೆಯನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಈ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಇದೀಗ ಅಕ್ಟೋಬರ್ 24ರಂದು ಬೆಂಗಳೂರಿನ ಭಾರತೀಯ ಮಾಲ್‌ನಲ್ಲಿ ನಡೆಯಲಿರುವ ಸೋನು ನಿಗಮ್ ಅವರ ‘ದಿ ರೆವಲ್ಯೂಷನ್ ಇಂಡಿಯಾ ಟೂರ್’ ಸಂಗೀತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಾದ ಮತ್ತೆ ಮುನ್ನೆಲೆಗೆ ಬಂದಿತ್ತು. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕರವೇ, ಅನುಮತಿ ನೀಡಬಾರದು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿತ್ತು.

ಆದರೆ, ಇದೀಗ ಕ್ಷಮೆಯಾಚನೆಯ ಬೆಳವಣಿಗೆಯ ಬೆನ್ನಲ್ಲೇ ಹೋರಾಟವನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಲಾಗಿದೆ. ಸೋನು ನಿಗಮ್ ಅವರು ಮತ್ತಷ್ಟು ಕನ್ನಡ ಹಾಡುಗಳನ್ನು ಹಾಡಲಿ, ಕರ್ನಾಟಕದಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ನಡೆಯಲಿ ಎಂದು ನಾರಾಯಣಗೌಡ ಆಶಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಭಾಷಾಭಿಮಾನಕ್ಕೆ ಸಂಬಂಧಿಸಿದ ಹೇಳಿಕೆಯಿಂದ ಆರಂಭವಾಗಿದ್ದ ವಿವಾದ ಈಗ ಸಂಧಾನದ ಹಂತಕ್ಕೆ ತಲುಪಿದೆ. ಕ್ಷಮೆಯಾಚನೆ ಸ್ವೀಕರಿಸಿರುವ ಕರವೇ ಹೋರಾಟವನ್ನು ನಿಲ್ಲಿಸುವುದಾಗಿ ತಿಳಿಸಿದ್ದು, ಈ ಬೆಳವಣಿಗೆ ಕನ್ನಡಿಗರು ಮತ್ತು ಸೋನು ನಿಗಮ್ ಅಭಿಮಾನಿಗಳ ಗಮನ ಸೆಳೆದಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ