ಜಾಗೀರ್ದಾರ್*
ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ 57ನೇ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI) – 2026ರ ಭಾರತೀಯ ಪನೋರಮಾ ವಿಭಾಗಕ್ಕೆ ಅನುಪಮ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಪಿಲಿ ಚನ್ನೆ’ ಆಯ್ಕೆಯಾಗಿದೆ. ಈ ಮೂಲಕ ತುಳು ಭಾಷೆ, ಸಂಸ್ಕೃತಿ ಹಾಗೂ ತುಳು ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ.
ನಿರ್ಮಾಪಕಿ ಹಾಗೂ ನಿರ್ದೇಶಕಿ ಅನುಪಮ ಶರಧಿ ಅವರ ನಿರ್ದೇಶನದ ಎರಡನೇ ಚಿತ್ರವಿದು. ಈ ಹಿಂದೆ ‘ನಡುಬೆಟ್ಟು ಅಪ್ಪಣ್ಣ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದ ಅವರು, ಇದೀಗ ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ತುಳು ಭಾಷೆಯ ‘ಪಿಲಿ ಚನ್ನೆ’ ಚಿತ್ರವನ್ನು ರೂಪಿಸಿದ್ದಾರೆ. ವಿಶೇಷವೆಂದರೆ, ಚಿತ್ರದ ನಿರ್ಮಾಪಕಿ, ಕಥೆಗಾರ್ತಿ, ಚಿತ್ರಕಥೆಗಾರ್ತಿ, ಸಂಭಾಷಣೆಗಾರ್ತಿ, ನಿರ್ದೇಶಕಿ, ಗಾಯಕಿ, ವಸ್ತ್ರ ವಿನ್ಯಾಸಕಿ ಹಾಗೂ ನಟಿಯಾಗಿ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಸ್ವತಃ ನಿರ್ವಹಿಸಿದ್ದಾರೆ. ಒಬ್ಬ ಮಹಿಳೆಯ ಬಹುಮುಖ ಪ್ರತಿಭೆ, ಪರಿಶ್ರಮ ಮತ್ತು ಸೃಜನಶೀಲತೆಗೆ ಈ ಚಿತ್ರ ಸಾಕ್ಷಿಯಾಗಿದೆ.

ಕಾಡಿನ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರ ಭವಿಷ್ಯ ಸಿನಿಮಾ ಬ್ಯಾನರ್ನಲ್ಲಿ ನಿರ್ಮಾಣವಾಗಿದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅನುಪಮಾ ಶರಧಿ ಅವರೇ ರಚಿಸಿದ್ದಾರೆ. ಅಲ್ಲದೆ, ಹಾಡುಗಳಿಗೆ ತಮ್ಮ ಕಂಠದಾನ ನೀಡುವುದರ ಜೊತೆಗೆ ವಸ್ತ್ರ ವಿನ್ಯಾಸ ಮತ್ತು ಅಭಿನಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಚಿತ್ರಕ್ಕೆ ಪಿ.ವಿ.ಆರ್. ಸ್ವಾಮಿ ಅವರ ಛಾಯಾಗ್ರಹಣ, ಅತಿಶಯ್ ಜೈನ್ ಅವರ ಸಂಗೀತ ನಿರ್ದೇಶನ, ಹಾಗೂ ಸಂಜೀವ್ ರೆಡ್ಡಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಪಳನಿ ಡಿ ಸೇನಾಪತಿ ರವರು 5.1 ಮಾಡಿರುತ್ತಾರೆ. ಭವಾನಿ ಶಂಕರ್ ಆಡ್ತಲೆ ಸಾಹಿತ್ಯ ರಚಿಸಿದ್ದಾರೆ.
ಶಿಲ್ಪಾ ನಾಗರಾಜ್, ನವೀನ್ ಡಿ. ಪಡೀಲ್, ಅನುಪಮ ಶರಧಿ, ವಿಜಯ ಹರಿ ರೈ, ರಾಧಾಕೃಷ್ಣ ಕುಂಬ್ಳೆ, ಗಂಗಾಧರ ನೆಲ್ಲಿಕೋಡ್, ಶಿಲ್ಪ ಸನತ್ ಹಾಗೂ ರವಿ ಪೆರ್ಲಂಪಾಡಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಒಂದೆಡೆ ಚಿತ್ರದ ನಿರ್ಮಾಣದಿಂದ ಹಿಡಿದು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಗಾಯನ, ವಸ್ತ್ರ ವಿನ್ಯಾಸ ಹಾಗೂ ಅಭಿನಯದವರೆಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಅನುಪಮ ಶರಧಿ ಅವರ ಸಾಧನೆ ಗಮನಾರ್ಹವಾದರೆ, ಮತ್ತೊಂದೆಡೆ ಅವರ ಎರಡನೇ ನಿರ್ದೇಶನದ ಚಿತ್ರವೇ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವುದು ವಿಶೇಷ ಹೆಮ್ಮೆಯ ಸಂಗತಿಯಾಗಿದೆ.
‘ಪಿಲಿ ಚನ್ನೆ’ ಚಿತ್ರದ ಆಯ್ಕೆಯು ತುಳು ಚಿತ್ರರಂಗದ ಪ್ರತಿಭೆ, ಭಾಷೆ ಮತ್ತು ಸಂಸ್ಕೃತಿಗೆ ರಾಷ್ಟ್ರಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ.





