' ಭಲೇ ಹುಚ್ಚ ಅಭಿಮಾನಿಯ ಕಥೆ,
ಕನ್ನಡದ ಹಾಡಿಗೆ ಎಸ್.ಮಹೇಂದರ್ ಚಾಲನೆ
ಬಾಲಾಜಿ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಹೆಚ್.ಕೆ. ಶಿವಪ್ರಕಾಶ್ ಅವರು ನಿರ್ಮಿಸಿರುವ, ' *ಭಲೇ ಹುಚ್ಚ* ' ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಸೋಮವಾರ ಸಂಜೆ ನಡೆಯಿತು.
ಈ ಹಿಂದೆ ಕಾಲ್ಗೆಜ್ಜೆ ಎಂಬ ಚಿತ್ರ ನಿರ್ದೇಶಿಸಿದ್ದ ಎಸ್. ಬಂಗಾರು, ಬಹಳ ದಿನಗಳ ಗ್ಯಾಪ್ ನಂತರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
' ಡಾ.ರಾಜ್ ಅಭಿಮಾನಿ' ಎಂಬ ಅಡಿಬರಹ ಈ ಚಿತ್ರಕ್ಕಿದ್ದು, ಅಣ್ಣಾವ್ರ ಅಭಿಮಾನಿಯೊಬ್ಬನ ಕಥೆಯನ್ನ ನಿರ್ದೇಶಕರು ಈ ಚಿತ್ರದ
ಮೂಲಕ ಹೇಳಹೊರಟಿದ್ದಾರೆ.

ಆರ್ಮುಗಂ ರವಿಶಂಕರ್, ಭವ್ಯ, ತಬಲ ನಾಣಿ, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡನ್ನು ಹಿರಿಯ ನಿರ್ದೇಶಕ ಎಸ್. ಮಹೇಂದರ್ ಅವರು ಬಿಡುಗಡೆಗೊಳಿಸಿ ಮಾತನಾಡುತ್ತ ಕನ್ನಡದ ಮೇಲಿನ ಅಭಿಮಾನದ ಹಾಡು ಚೆನ್ನಾಗಿ ಬಂದಿದೆ. ಭಲೇ ಹುಚ್ಚ ಹೆಸರೇ ಸರ್ವಕಾಲಿಕ. ಬಂಗಾರು ನನ್ನ ಶಿಶ್ಯ, ತುಂಬಾ ವರ್ಷ ಕಾದು ಮತ್ತೊಂದು ಚಿತ್ರ ಮಾಡಿದ್ದಾರೆ. ನಿರ್ದೇಶಕನಿಗೆ ತಾಳ್ಮೆ ಬಹಳ ಮುಖ್ಯ. ಅದು ಬಂಗಾರು ಅವರಿಗಿದೆ, ಈ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಹೆಚ್.ಕೆ. ಶಿವಪ್ರಕಾಶ್ ಮಾತನಾಡಿ "ಡಾ. ರಾಜ್ಕುಮಾರ್ ಅಂದ್ರೆ ಕೇವಲ ನಟರಲ್ಲ, ಕನ್ನಡಿಗರ ಭಾವನೆ. ಅವರ ಅಭಿಮಾನಿಯೊಬ್ಬನ ಕಥೆಯನ್ನು ನಾವು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಪ್ರತಿಯೊಬ್ಬ ರಾಜ್ ಕುಮಾರ್ ಅಭಿಮಾನಿಗೂ ಇದು ತನ್ನದೇ ಕಥೆ ಅನಿಸುತ್ತದೆ. ಒಳ್ಳೆಯ ಕಥೆ, ಒಳ್ಳೆಯ ಹಾಡುಗಳಿಗಾಗಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಪ್ರೇಕ್ಷಕರು ನಮ್ಮ ಚಿತ್ರವನ್ನು ಅಭಿಮಾನದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ" ಎಂದು ಹೇಳಿದರು.

ಚಿತ್ರದ ನಿರ್ದೇಶಕ ಎಸ್. ಬಂಗಾರು ಮಾತನಾಡುತ್ತ. " ಭಲೇ ಹುಚ್ಚ ಡಾ.ರಾಜ್ ಅಭಿಮಾನಿ, ಸದಭಿರುಚಿಯ ಚಿತ್ರ ಮಾಡಬೇಕೆಂದು ಕಾಯುತ್ತಿದ್ದೆ. ನಿರ್ಮಾಪಕ ಶಿವಪ್ರಕಾಶ್ ಅವರು ನಿನ್ನ ಜತೆ ಇರುತ್ತೇನೆ ಎಂದರು. ಕಾಮಿಡಿ ಜೊತೆಗೆ ಭಾವನಾತ್ಮಕ ಕಥೆ ಈ ಚಿತ್ರದಲ್ಲಿದೆ. ಅಣ್ಣಾವ್ರನ್ನು ದೇವರಂತೆ ಪೂಜಿಸುವ ಅಭಿಮಾನಿಯ ಪಾತ್ರದ ಸುತ್ತ ನಮ್ಮ ಚುತ್ರದ ಕಥೆ ಸಾಗುತ್ತದೆ. ರವಿಶಂಕರ್, ಭವ್ಯ, ತಬಲ ನಾಣಿ, ಅವಿನಾಶ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರಕ್ಕೆ ದೊಡ್ಡ ಶಕ್ತಿ. ಹಾಡುಗಳು ಕೂಡ ಕಥೆಗೆ ತಕ್ಕಂತೆ ಮೂಡಿಬಂದಿವೆ. ಸಧ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡುತ್ತೇವೆ. ನಮ್ಮ ಚಿತ್ರವನ್ನು ಎಲ್ಲರೂ ನೋಡಿ ಹರಸಬೇಕು" ಎಂದು ಮನವಿ ಮಾಡಿದರು.
ನಟ ರವಿಶಂಕರ್ ಮಾತನಾಡಿ "ಡಾ. ರಾಜ್ ಅಭಿಮಾನಿಯ ಪಾತ್ರ ಮಾಡುವುದು ನನಗೆ ಹೆಮ್ಮೆಯ ವಿಷಯ. ನಾವೆಲ್ಲರೂ ಅವರ ಹಾಡುಗಳನ್ನು ಕೇಳಿ, ಸಿನಿಮಾ ನೋಡಿ ಬೆಳೆದವರು. ಈ ಚಿತ್ರದಲ್ಲಿ ಆ ಅಭಿಮಾನವನ್ನು ತುಂಬಾ ಪ್ರೀತಿಯಿಂದ ತೋರಿಸಿದ್ದೇವೆ. ಪ್ರೇಕ್ಷಕರು ಥಿಯೇಟರ್ನಲ್ಲಿ ನೋಡಿದರೆ ಖಂಡಿತ ಖುಷಿ ಪಡುತ್ತಾರೆ" ಎಂದು ಹೇಳಿದರು.





