ಬ್ರಹ್ಮ’ ಈ ಟೈಟಲ್ಲೇ ಸಾಕು… ಚಿತ್ರದಲ್ಲಿರುವ ವಿಶೇಷತೆಯನ್ನು ಹೇಳುವುದಕ್ಕೆ, ರಿಯಲ್ ಸ್ಟಾರ್‌ ಉಪೇಂದ್ರ ಅವರಿಗೆ ಹೇಳಿ ಮಾಡಿಸಿದಂಥ ಟೈಟಲ್. ಅವರಿಗೆ ಸೂಕ್ತವಾದ ಅವರನ್ನೇ ನೀವು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಟೈಟಲ್ ಆಯ್ಕೆ ಮಾಡಿದ್ದು ಎನ್ನುತ್ತಾರೆ ನಿರ್ದೇಶಕ ಚಂದ್ರು. ಇದು ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲೂ ಬಿಡುಗಡೆಯಾಗುತ್ತಿರುವ ಉಪೇಂದ್ರರ ಭಾರೀ ನಿರೀಕ್ಷೆಯ ಚಿತ್ರವಾಗಲಿದೆ.

ಉಪೇಂದ್ರರಿಗೂ `ಬ್ರಹ್ಮ’ ಚಿತ್ರದ ಬಗ್ಗೆ ತುಂಬಾನೆ ಕುತೂಹಲವಿದೆ. ಅವರು ಮೊದಲ ಬಾರಿಗೆ ಚಂದ್ರು ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಅವರೇ ಹೇಳುವಂತೆ, `ಬ್ರಹ್ಮ’ ಇಷ್ಟು ವರ್ಷಗಳ ನನ್ನ ಸಿನಿಮಾ ವೃತ್ತಿಯಲ್ಲಿ ಇದು ಬೇರೆ ತರಹದ ಪಾತ್ರವಿರುವಂಥ ಚಿತ್ರ. ಚಂದ್ರು ಅವರ ಚಿತ್ರವೆಂದರೆ, ಅಲ್ಲಿ ಪಕ್ಕಾ ನೇಟಿವಿಟಿ ಇರುತ್ತೆ, ರಿಯಾಲಿಟಿಗೆ ಹತ್ತಿರವಾಗಿರುತ್ತೆ. ಹೃದಯಕ್ಕೆ ಟಚ್‌ ಮಾಡುವಂಥ ಸೀನ್ಸ್ ಗಳನ್ನು ಇಟ್ಟಿರುತ್ತಾರೆ. ಇದೊಂದು ಕಾಲ್ಪನಿಕ ಕಥೆ, ಪಕ್ಕಾ ಮನರಂಜನೆ. ಉಪ್ಪಿ ಸಾರ್‌ಸ್ಟಾರ್‌ ವ್ಯಾಲ್ಯೂಗೆ ತಕ್ಕಂತೆ ಫೈಟ್‌, ಡ್ಯಾನ್ಸ್, ಕಾಮಿಡಿ ಎಲ್ಲಾ ಇರುತ್ತೆ. ಇದು ಚಂದ್ರು ಅವರ ಆರನೇ ಚಿತ್ರವಾಗಲಿದೆ.

`ಬ್ರಹ್ಮ’ ಚಿತ್ರಕ್ಕಾಗಿ ಉಪೇಂದ್ರ ಮತ್ತು ನಿರ್ದೇಶಕ ಆರ್‌. ಚಂದ್ರು ಒಂದು ವರ್ಷಕ್ಕೂ ಹೆಚ್ಚಿನ ಶ್ರಮ ಪಟ್ಟಿದ್ದಾರೆ.

IMG_8746a

ಉಪೇಂದ್ರ ಹೇಳುವಂತೆ, “ಚಂದ್ರು ಅವರು ಈ ಚಿತ್ರದ ಕಥೆಯ ಎಳೆಯನ್ನು ಹೇಳಿದಾಗಲೇ ನನಗೆ ತುಂಬಾ ಇಷ್ಟವಾಗಿಬಿಡ್ತು. ಚಂದ್ರು ಒಳ್ಳೆ ಚಿತ್ರಗಳನ್ನೇ ನೀಡಿದ್ದಾರೆ. ಅವರ ಜೊತೆಯಲ್ಲಿ ವರ್ಕ್‌ ಮಾಡೋಕೆ ತುಂಬಾ ಇಷ್ಟವಿತ್ತು. `ಬ್ರಹ್ಮ’ ಚಿತ್ರದಲ್ಲಿ ಕಥೆ ವಿಶೇಷವಾಗಿದೆ,” ಎಂದು ಸಿನಿಮಾ ಶುರುವಾದ ಹೊಸದರಲ್ಲೇ ಹೇಳಿದ್ದ ಉಪೇಂದ್ರ ಆ ಚಿತ್ರಕ್ಕಾಗಿ ತಮ್ಮ ಗೆಟಪ್‌ಗಳ ಬಗ್ಗೆ ಮಾಹಿತಿ ಕೊಡುತ್ತಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಾ ಹೋದರು.

ಚಿತ್ರೀಕರಣದ ಮೊದಲ ದಿನವೇ ಎಲ್ಲರೂ ಆಶ್ಚರ್ಯಪಡುವಂತೆ ಬೆಂಗಳೂರಿನ ಅರಮನೆಯ ಆವರಣದಲ್ಲಿ ಐತಿಹಾಸಿಕ ಚಿತ್ರವೇನೊ ಎಂಬಂತೆ ರಾಜ ದರ್ಬಾರು, ಸಾರೋಟು, ಯುದ್ಧ ಇಂತಹ ಸನ್ನಿವೇಶಗಳನ್ನೇ ಚಂದ್ರು ಚಿತ್ರೀಕರಣ ಮಾಡತೊಡಗಿದರು. ಅವರಲ್ಲಿ ಇನ್ನಷ್ಟು ಕುತೂಹಲ ಕೆರಳಿತು. ಉಪೇಂದ್ರರ ಈ ಗೆಟಪ್‌ನ ನಂತರ ಮುಂದೇನು ಎಂದು ನಿರೀಕ್ಷಿಸುತ್ತಿದ್ದವರಿಗೆ ಅಚ್ಚರಿ ಕಾದಿತ್ತು.

`ಬ್ರಹ್ಮ’ ಸಾಕಷ್ಟು ಪ್ರಚಾರಗಳೊಂದಿಗೆ ಬಂದಂಥ ಚಿತ್ರ. ಚಂದ್ರು ಮಾಡಿದ ಪ್ರಚಾರದ ಸ್ಟೈಲಿಗೆ ಉಪೇಂದ್ರ ಖುಷಿ ಆಗಿಬಿಟ್ಟರು. ಉಪೇಂದ್ರ ಸ್ವತಃ ಸಿನಿಮಾ ನಿರ್ದೇಶಕರೂ ಆಗಿದ್ದು, ಸಾಕಷ್ಟು ಗಿಮಿಕ್‌ಗಳ ಮೂಲಕ ಚಿತ್ರವನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಅಂಥವೊಬ್ಬ ರಿಯಲ್ ಸ್ಟಾರ್‌ನ್ನು ಹೇಗೆ ವೈಭವೀಕರಿಸಬೇಕು, ಎನ್ನುವ ಕಲೆ ಚಂದ್ರು ಅವರಿಗೆ ಚೆನ್ನಾಗಿ ಗೊತ್ತಿತ್ತು. ಚಂದ್ರು ಕೆಲಸವನ್ನು ಉಪೇಂದ್ರರೇ ಮೆಚ್ಚಿಕೊಂಡಾಗ ಅದು ಚಂದ್ರುಗೆ ಸಿಕ್ಕಂಥ ರಿವಾರ್ಡ್‌ ಆಗಿತ್ತು…..

ಚಿತ್ರದ ಟ್ರೇಲರನ್ನು ಗ್ರ್ಯಾಂಡ್‌ ಆಗಿ ಬಿಡುಗಡೆ ಮಾಡೋದು ಇತ್ತೀಚಿನ ಹೊಸ ಸ್ಟೈಲು. ಟ್ರೇಲರ್‌ ನೋಡಿದ ಉಪೇಂದ್ರ ಅಚ್ಚರಿಪಟ್ಟರು. ಉಪೇಂದ್ರರ ಹಲವಾರು ವಿಶಿಷ್ಟ ವಿಭಿನ್ನ ರೂಪಗಳನ್ನು ಈ ಟ್ರೇಲರ್‌ ಬಿಚ್ಚಿಟ್ಟಿತ್ತು. ಟ್ರೇಲರನ್ನು ಮೆಚ್ಚಿಕೊಂಡ ಉಪ್ಪಿಗೆ ಮತ್ತೊಂದು ಸರ್‌ಪ್ರೈಸ್‌ ಸಿಕ್ಕಿದ್ದು ಹುಬ್ಬಳ್ಳಿಯಲ್ಲಿದ್ದಂಥ ಆಡಿಯೋ ಬಿಡುಗಡೆ ಸಮಾರಂಭ. ಅಲ್ಲಿ ಉಪ್ಪಿಯನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. `ಬ್ರಹ್ಮ’ನ ನಂತರ `ಬಸವಣ್ಣ’ ರೂಪ ತಾಳಿರುವ ಉಪೇಂದ್ರ, ಈ ಬಾರಿ `ದಂಡುಪಾಳ್ಯ` ಖ್ಯಾತಿ ಶ್ರೀನಿವಾಸ್‌ ರಾಜು ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.

IMG_8900

`ಬ್ರಹ್ಮ’ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದ್ದು, ಮಲೇಷಿಯಾದಲ್ಲಿ ಹದಿನೈದು ದಿನ ಚಿತ್ರೀಕರಣ ಮಾಡಲಾಗಿದೆ. ಮಲೇಷಿಯಾದ ನೋಡಲೇಬೇಕಾದ ಕೆಲವು ಒಳ್ಳೊಳ್ಳೆ ಲೊಕೇಶನ್ಸ್ ಕಂಡುಬಂದಿವೆಯಂತೆ. ಮುಂಬೈನಲ್ಲಿ ಹಾಡೊಂದರ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್‌ ಹಿಟ್‌ ಆಗಿದ್ದು, ಚಂದ್ರು ಅವರ ಹಿಂದಿನ ಎಲ್ಲ ಚಿತ್ರಗಳ ರೆಕಾರ್ಡ್‌ಬ್ರೇಕ್‌ ಮಾಡುತ್ತೆ ಎನ್ನಲಾಗಿದೆ.

ಉಪೇಂದ್ರ ಅವರ ಬಗ್ಗೆ ಚಂದ್ರು ಹೇಳುವುದು ಹೀಗೆ.“ನಾನು ಅವರನ್ನು ನೋಡಿಯೇ ಟೈಟಲ್ ಇಟ್ಟಿದ್ದು, ನಿಜಕ್ಕೂ ಅವರು ಬ್ರಹ್ಮನೇ! ನಾನು ಅವರ ಅಭಿಮಾನಿ. ಕಾಲೇಜಿನಿಂದಲೂ ಅವರ ಚಿತ್ರಗಳನ್ನು ನೋಡುತ್ತ ಬಂದನು. ಅಂತಹವರಿಗೆ ನಾನು ಚಿತ್ರ ಮಾಡಿದ್ದು ನಿಜಕ್ಕೂ ಖುಷಿಪಡುವಂಥದ್ದು. ಉಪೇಂದ್ರರ ಸಿನಿಮಾ ಅಂತ ನಾನು ತುಂಬಾನೆ ತಯಾರಿ ಮಾಡಿಕೊಂಡಿದ್ದೆ. ಅವರ ಎಲ್ಲ ಚಿತ್ರಗಳಿಗಿಂತ ಇದು ವಿಭಿನ್ನವಾಗಿದೆ.

“ಉಪೇಂದ್ರರಿಗೆ ಪ್ರೋತ್ಸಾಹಿಸುವ, ಪ್ರಶಂಸಿಸುವ ಒಳ್ಳೆ ಬುದ್ಧಿ ಇದೆ. ನಾವು ಶೂಟಿಂಗ್‌ ಮಾಡುತ್ತಿದ್ದಾಗ ಕೆಲವೊಮ್ಮೆ ಉಪೇಂದ್ರ ಸಾರ್‌ ಬಂದು ನನ್ನನ್ನು ತಮಿಳಿನ ಖ್ಯಾತ ನಿರ್ದೇಶಕರಿಗೆಲ್ಲ ಹೋಲಿಸಿ ಮಾತನಾಡುತ್ತಿದ್ದರು. ಉಪೇಂದ್ರರಂಥ ನಟ, ನಿರ್ದೇಶಕರಿಂದ ಇಂಥ ಮಾತು ಕೇಳುವಾಗೆಲ್ಲ ಸಂತೋಷವಾಗುತ್ತಿತ್ತು.”

ಉಪೇಂದ್ರರ ಮನೆಯವರೆಲ್ಲ `ಚಾರ್‌ಮಿನಾರ್‌’ ಚಿತ್ರ ನೋಡಿ ಮೆಚ್ಚಿಕೊಂಡಿದ್ರಂತೆ. ಹಾಗಾಗಿ ಅವರೇ ಚಂದ್ರು ಅವರನ್ನು ಕರೆದು ತಮ್ಮ ಕಾಲ್‌ಶೀಟ್‌ ನೀಡಿದ್ದು ಅಂತ ಸ್ವತಃ ಉಪ್ಪಿಯವರೇ ಹೇಳಿದಾಗ ಚಂದ್ರು ಮೂಕರಾಗಿಬಿಟ್ಟಿದ್ದರಂತೆ.

ಚಿತ್ರೀಕರಣಕ್ಕೆ ಮೊದಲೇ ಉಪೇಂದ್ರರಿಗೆ ನೀವು ನಟನಾಗಿ ಮಾತ್ರ ನನಗೆ ಬೇಕು ಎಂದು ಹೇಳಿದ್ದರಂತೆ. ಹಾಗೆಯೇ ಉಪೇಂದ್ರರು ತಮ್ಮನ್ನು ತಾವು ನಟರಾಗಿ ಮಾತ್ರ ತೊಡಗಿಸಿಕೊಂಡು ಸಾಕಷ್ಟು ಸಹಕಾರ ನೀಡಿದರಂತೆ.

ಈ ಚಿತ್ರದ ನಾಯಕಿ ಪ್ರಣೀತಾ ಕೂಡಾ ಇತ್ತೀಚಿನ ಯಶಸ್ವೀ ತಾರೆ. ತಮಿಳಿನಲ್ಲಿ ಅರುಳ್‌ ನಿಧಿ ಜೊತೆ `ಉದಯನ್‌’ ಕಾರ್ತಿ ಜೊತೆ `ಶಕುನಿ’ ಚಿತ್ರಗಳ ನಂತರ ತೆಲುಗಿನಲ್ಲಿ ಸಾಕಷ್ಟು ಬಿಜಿಯಾಗಿದ್ದಾಳೆ. ತೆಲುಗಿನ ಪವನ್‌ ಕಲ್ಯಾಣ್‌ ಜೊತೆ ನಟಿಸಿದ `ಅತ್ತಾರಿಂಟಿಕಿ ದಾರೇದಿ?’ ಚಿತ್ರ ದೊಡ್ಡ ಹಿಟ್‌ ಆಗಿದೆ. ತೆಲುಗಿನಲ್ಲಿ ಬಹು ಬೇಡಿಕೆ ಇರುವಂಥ ತಾರೆ. ಕನ್ನಡದವಳೇ ಆಗಿರುವ ಪ್ರಣೀತಾ `ಪೊರ್ಕಿ’ ಚಿತ್ರದಲ್ಲಿ  ದರ್ಶನ್‌ಗೆ ಜೋಡಿಯಾಗಿ ನಟಿಸುವುದರ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಂಥ ಬೆಡಗಿ. ಕನ್ನಡದಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದು ಮಿಂಚಿದ್ದು ತೆಲುಗಿನಲ್ಲಿ ಮಾತ್ರ. ಎಷ್ಟೇ ಬಿಜಿ ಇದ್ದರೂ ಕನ್ನಡ ಚಿತ್ರವೊಂದ ಕೂಡಲೇ ಡೇಟ್ಸ್ ಹೊಂದಿಸಿಕೊಳ್ಳುವ ಪ್ರಣೀತಾ ಈ ಚಿತ್ರದಲ್ಲಿ ಸಾಕಷ್ಟು ಮಾಡ್‌ ಆಗಿ ಕಾಣುತ್ತಾಳೆ. ಮೂರು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಪ್ರಣೀತಾ ಕೂಡ ತೆಲುಗಿನಲ್ಲಿ ಫೇಮಸ್‌ ಆಗಿರೋದ್ರಿಂದ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ.

ಪ್ರಣೀತಾಳಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ ಈ ಚಿತ್ರದಲ್ಲಿ ಬಹಳ ಡಿಫರೆಂಟಾಗಿ, ಗ್ಲಾಮರಸ್ಸಾಗಿ ಕಾಣುತ್ತಾಳೆ. ಉಪೇಂದ್ರರ ಜೊತೆ ಮೊದಲ ಬಾರಿ ನಟಿಸುತ್ತಿರುವ ಪ್ರಣೀತಾ ಈ ಚಿತ್ರದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾಳೆ. ಉಪೇಂದ್ರ ಪ್ರಣೀತಾ ಜೋಡಿ ಮೂರು ಭಾಷೆಯಲ್ಲೂ ಕಾಣಿಸೋದ್ರಿಂದ ನಿರೀಕ್ಷೆ `ಕೂಡಾ’ ಜಾಸ್ತಿ.

– ಸರಸ್ವತಿ ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ