– ರಾಘವೇಂದ್ರ ಅಡಿಗ ಎಚ್ಚೆನ್.

ನಟನೆಯಲ್ಲೇ ಬ್ಯುಸಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ‘ಯುಐ’ ಸಿನಿಮಾ ಬಳಿಕ ಉಪ್ಪಿ ಯಾವಾಗ ಹೊಸ ಸಿನಿಮಾ ನಿರ್ದೇಶಿಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದೀಗ ಅವರೇ ತಮ್ಮ ಮುಂದಿನ ನಿರ್ದೇಶನದ ಬಗ್ಗೆ ಸುಳಿವು ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಉಪೇಂದ್ರ, ಸದ್ಯ ಹೊಸ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ. ಆದರೆ ಕೈಯಲ್ಲಿರುವ ಎರಡು ಸಿನಿಮಾಗಳ ಚಿತ್ರೀಕರಣ ಮೊದಲು ಪೂರ್ಣಗೊಳ್ಳಬೇಕಿದೆ. ಆ ಕೆಲಸ ಮುಗಿದ ಬಳಿಕ ನಿರ್ದೇಶನದ ಪ್ರಾಜೆಕ್ಟ್ ಆರಂಭವಾಗಲಿದೆ.

ಸಿನಿಮಾ ಅಧಿಕೃತವಾಗಿ ಘೋಷಣೆಯಾದಾಗಲೇ ಕಥೆಯ ಸುಳಿವು ಸಿಗಲಿದೆ ಎಂಬ ಮಾತನ್ನೂ ಉಪ್ಪಿ ಹೇಳಿದ್ದಾರೆ. ಹೀಗಾಗಿ ಅವರ ಮುಂದಿನ ನಿರ್ದೇಶನದ ಕಥೆ ಹೇಗಿರಲಿದೆ ಎಂಬ ಕುತೂಹಲ ಈಗಿನಿಂದಲೇ ಶುರುವಾಗಿದೆ.

ಇನ್ನೊಂದೆಡೆ, ಪುತ್ರ ಆಯುಷ್ ಸಿನಿಮಾ ಪ್ರವೇಶದ ಬಗ್ಗೆಯೂ ಉಪೇಂದ್ರ ಮಾತನಾಡಿದ್ದಾರೆ. ಮಗನ ಮೊದಲ ಸಿನಿಮಾದ ಕಥೆ ಚರ್ಚೆಯಲ್ಲಿ ಅವರು ಭಾಗಿಯಾಗಿದ್ದರು. ವಿಶೇಷವೆಂದರೆ, ಈ ಚಿತ್ರಕ್ಕೆ ಪತ್ನಿ ಪ್ರಿಯಾಂಕಾ ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಅವರು ನಿರ್ದೇಶಕಿಯಾಗಿ ಹೊಸ ಪ್ರಯಾಣ ಆರಂಭಿಸುತ್ತಿದ್ದಾರೆ.

ಸದ್ಯ ಉಪೇಂದ್ರ ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಕೊಡೈಕೆನಾಲ್‌ಗೆ ಚಿತ್ರೀಕರಣಕ್ಕಾಗಿ ತೆರಳಿರುವ ಅವರು, ಈ ಚಿತ್ರದಲ್ಲಿ ಪ್ರಭುದೇವ ಮತ್ತು ಅಥರ್ವ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹುಲಿವೇಷ ಕಲೆಯ ಹಿನ್ನೆಲೆಯ ಕಥೆ ಹೊಂದಿರುವ ಈ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇದರ ಜೊತೆಗೆ ಕನ್ನಡದ ‘ನೆಕ್ಸ್ಟ್ ಲೆವೆಲ್’ ಸಿನಿಮಾದಲ್ಲೂ ಉಪ್ಪಿ ನಟಿಸುತ್ತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದ ಈ ಆ್ಯಕ್ಷನ್ ಡ್ರಾಮಾವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಆರಾಧನಾ ರಾಮ್ ನಾಯಕಿಯಾಗಿದ್ದು, ಮೊದಲ ಬಾರಿಗೆ ನಿರಂಜನ್ ಸುಧೀಂದ್ರ ಜೊತೆ ಉಪೇಂದ್ರ ನಟಿಸುತ್ತಿದ್ದಾರೆ.

ಹೀಗೆ ಒಂದೆಡೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಉಪ್ಪಿ, ಮತ್ತೊಂದೆಡೆ ಹೊಸ ನಿರ್ದೇಶನದ ಸಿದ್ಧತೆಯಲ್ಲಿದ್ದಾರೆ. ಅವರ ಮುಂದಿನ ಸಿನಿಮಾ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ