- ರಾಘವೇಂದ್ರ ಅಡಿಗ ಎಚ್ಚೆನ್.
"ನಾನು ಹೀರೋ ಆಗಲು ಸರೋಜಾ ದೇವಿ ಅಮ್ಮ ಕಾರಣ. ನಾನು ಅಭಿನಯಿಸಿ, ನಿರ್ದೇಶಿಸಿದ ಎ ಸಿನಿಮಾ ಅಂದು ಸೆನ್ಸಾರ್ ಆಗುವ ಸಂದರ್ಭದಲ್ಲಿ ಕಮಿಟಿ ಸದಸ್ಯರಲ್ಲಿ ಸರೋಜಾ ದೇವಿ ಅಮ್ಮನೂ ಒಬ್ಬರಾಗಿದ್ದರು. ಆ ಸಂದರ್ಭ ಕೆಲ ಸದಸ್ಯರು ಚಿತ್ರದ ಕೆಲ ಸೀನ್ಗಳನ್ನು ತೆಗೆಯಬೇಕಾಗುತ್ತದೆ ಎಂದಾಗ ಸರೋಜಾ ಅಮ್ಮ ನನಗೆ ತುಂಬಾನೇ ಸಪೋರ್ಟ್ ಮಾಡಿದ್ದರು. ಎ ಸಿನಿಮಾ ಮೆಚ್ಚಿ ಹೊಗಳಿದ ಮೊದಲಿಗರಲ್ಲಿ ಸರೋಜಮ್ಮ ಕೂಡಾ ಒಬ್ಬರು. ಅಂದು ಎ ಸಿನಿಮಾಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇಂದು ನಾನು ಹೀರೋ ಆಗಿರಲು ಅವಕಾಶವೇ ಇರುತ್ತಿರಲಿಲ್ಲ" ಎಂದು ನಟಿ ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.
"ಸರ್ಕಾರ ಡಾ.ರಾಜ್ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಹೆಸರಲ್ಲಿ ಕೊಡ ಮಾಡುತ್ತಿರುವ ಪ್ರಶಸ್ತಿಯನ್ನು ಬಿ.ಸರೋಜಾ ದೇವಿ ಅವರ ಹೆಸರಲ್ಲಿಯೂ ನೀಡಬೇಕು" ಎಂದು ಅವರು ಒತ್ತಾಯಿಸಿದರು.
ಭಾರತೀಯ ಚಿತ್ರರಂಗದಲ್ಲೇ ಅಗ್ರಸ್ಥಾನದ ಸ್ಟಾರ್ ನಟಿಯಾಗಿ ವಿಜೃಂಭಿಸಿದ ಬಿ.ಸರೋಜಾ ದೇವಿಯವರ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆ ಆಗಮಿಸಿದ ಉಪೇಂದ್ರ ಈ ಮೇಲಿನ ಮಾತನ್ನು ಆಡಿದ್ದಾರೆ.
ಕನ್ನಡ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೇ ಅಗ್ರಸ್ಥಾನದ ಸ್ಟಾರ್ ನಟಿಯಾಗಿ ವಿಜೃಂಭಿಸಿದ ಬಿ.ಸರೋಜಾ ದೇವಿ ಜುಲೈ 14ರ ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿ.ಅಶ್ವಥ್ ನಾರಾಯಣ್, ನಟ ಉಪೇಂದ್ರ, ಹಿರಿಯ ನಟಿ ಹೇಮಾ ಚೌಧರಿ, ಜಯಮಾಲ, ಶೃತಿ, ಮಾಳವಿಕಾ ಅವಿನಾಶ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಸರೋಜಾ ದೇವಿಯರು ಚಿತ್ರರಂಗದ ಸಾಕಷ್ಟು ನಟ-ನಟಿಯರಿಗೆ ಅಚ್ಚುಮೆಚ್ಚಿನ ನಾಯಕಿಯಾಗಿದ್ದರು. ಇಂದು ರಾಕ್ಲೈನ್ ವೆಂಕಟೇಶ್, ರವಿಶಂಕರ್ ಸೇರಿದಂತೆ ಹಲವು ನಟ ನಟಿಯರು, ಬಂಧು ಮಿತ್ರರು ಭಾಗಿಯಾಗಿ ಅಗಲಿದ ಶ್ರೇಷ್ಠ ತಾರೆಯನ್ನು ಸ್ಮರಿಸಿದರು.