- ರಾಘವೇಂದ್ರ ಅಡಿಗ ಎಚ್ಚೆನ್.
ಟಾಲಿವುಡ್‌ನ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆಯ ಸಂಭ್ರಮ ಈಗ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಈ 'ವಿರೋಶ್' (Virosh) ವಿವಾಹ ಮಹೋತ್ಸವಕ್ಕೆ ಈಗ ಸಾಕ್ಷಾತ್ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಶುಭ ಹಾರೈಸಿದ್ದಾರೆ! ಹೌದು, ಫೆಬ್ರವರಿ 26 ರಂದು ನಡೆಯಲಿರುವ ಈ ಅದ್ದೂರಿ ಮದುವೆಗೆ ಪ್ರಧಾನಿ ಮೋದಿ ಅವರು ಪತ್ರದ ಮೂಲಕ ತಮ್ಮ ವಿಶೇಷ ಸಂದೇಶ ಕಳುಹಿಸಿದ್ದಾರೆ.
ಮೋದಿ ಪತ್ರದಲ್ಲಿ ಏನಿದೆ?
ವಿಜಯ್ ದೇವರಕೊಂಡ ಅವರ ಪೋಷಕರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಹೀಗೆ ಬರೆದಿದ್ದಾರೆ: "ಫೆಬ್ರವರಿ 26, 2026 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸಂತೋಷವಾಗಿದೆ. ಈ ಅತ್ಯಂತ ಹರ್ಷದಾಯಕ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು."
,
ಕೇವಲ ಔಪಚಾರಿಕವಾಗಿ ಅಭಿನಂದಿಸುವುದಷ್ಟೇ ಅಲ್ಲದೆ, ಈ ಜೋಡಿಯ ಜೀವನದ ಬಗ್ಗೆ ಮೋದಿ ಅವರು ಆಡಿರುವ ಮಾತುಗಳು ಈಗ ಅಭಿಮಾನಿಗಳ ಮನ ಗೆದ್ದಿವೆ. ಸಿನಿಮೀಯ ಶೈಲಿಯಲ್ಲಿಯೇ ವಿವರಿಸಿರುವ ಪ್ರಧಾನಿ, "ವಿಜಯ್ ಅಥವಾ ರಶ್ಮಿಕಾ ಇಬ್ಬರಿಗೂ ಸಿನಿಮಾದ ಸ್ಕ್ರಿಪ್ಟ್‌ಗಳು ಹೊಸದೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ಕೂಡಿದ ಈ 'ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯ' (Divinely scripted chapter), ಅವರಿಬ್ಬರೂ ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಹೆಚ್ಚು ಪ್ರಕಾಶಮಾನವಾಗಿರಲಿದೆ" ಎಂದು ಬಣ್ಣಿಸಿದ್ದಾರೆ.





