ಯಾಮಿ ಗೌತಮ್
ನಟಿ
ಆರತಿ ಸಕ್ಸೇನಾ
ತನ್ನ ಅತ್ಯಮೋಘ ಅಭಿನಯದಿಂದ ವೀಕ್ಷಕರ ಮನಗೆದ್ದ ಯಾಮಿ, ಕೇವಲ ಒಬ್ಬ ಯಶಸ್ವೀ ನಟಿ ಮಾತ್ರವಲ್ಲ, ಮಹಿಳಾ ಹಕ್ಕುಗಳಿಗಾಗಿ ಸದಾ ಹೋರಾಡುವ ಛಲಗಾತಿ! ಇತ್ತೀಚೆಗೆ ಆಕೆ ಗೃಹಶೋಭಾ ಜೊತೆ ಹಂಚಿಕೊಂಡ ಮಾತುಕಥೆಯ ಸಾರಾಂಶ......
ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ 1988ರ ನವೆಂಬರ್ 28ರಂದು ಹುಟ್ಟಿದ ಯಾಮಿ ಗೌತಮ್, ಇಂದು ಬಾಲಿವುಡ್ ಇಂಡಸ್ಟ್ರಿಯ ಒಬ್ಬ ಸುಪ್ರಸಿದ್ಧ ನಟಿ. ಪಂಜಾಬಿ ಚಿತ್ರಗಳ ನಿರ್ದೇಶಕ ಮುಕೇಶ್ ಗೌತಮ್ ರ ಮಗಳು ಯಾಮಿನಿ, ತನ್ನ ಅಭಿನಯದ ಆರಂಭವನ್ನು ಮಾಡೆಲಿಂಗ್ ನಿಂದ ಶುರು ಹಚ್ಚಿಕೊಂಡಳು. ಈಕೆಯ ಮೊಟ್ಟ ಮೊದಲ ಜಾಹೀರಾತು ಅಂದ್ರೆ ಫೇರ್& ಲವ್ಲಿ ಕ್ರೀಮಿನದ್ದು. ಇದಾದ ನಂತರ ಯಾಮಿ ಹಲವು ಉತ್ಪನ್ನಗಳಿಗಾಗಿ ಮಾಡೆಲ್ ಆದಳು. ಶವರ್ ವೆಟ್, ಕಾರ್ನೆಟೋ ಇತ್ಯಾದಿ ಹಲವು ಬ್ರಾಂಡ್ ಗಳಲ್ಲಿ ಈಕೆ ಎಂಡೋರ್ಸ್ ಮಾಡಿದ್ದಾಳೆ.
ತನ್ನ ಆರಂಭದ ದಿನಗಳಲ್ಲಿ ಮಾಡೆಲಿಂಗ್ ನಂತರ ಯಾಮಿ ಕಿರುತೆರೆಯಲ್ಲಿ ಕಾಣಿಸಿದ್ದುಂಟು. `ಚಾಂದ್ ಕೇ ಪಾರ್ ಚೋ' ಈಕೆಯ ಧಾರಾವಾಹಿ. ಇದಾದ ನಂತರ ಈಕೆ ನಟಿಸಿದ ಮತ್ತೊಂದು ಧಾರಾವಾಹಿ `ಪ್ಯಾರ್ ನಾ ಹೋಗಾ ಕಮ್.' ಅಸಲಿಗೆ ಈಕೆ ನಟನೆಗಿಂತ ಹೆಚ್ಚಾಗಿ ತಾನೊಬ್ಬ ಆಫೀಸರ್ ಆಗಬೇಕೆಂಬ ಕನಸು ಕಾಣುತ್ತಿದ್ದಳು. ಅದು ಈಡೇರದಾಗ, ವಕೀಲೆಯಾಗಲು LLB ಕಲಿಯತೊಡಗಿದಳು. ಆದರೆ ಅದೂ ಸಹ ಅಪೂರ್ಣವಾಯಿತು. ಅಷ್ಟರಲ್ಲಿ ಕಿರು ತೆರೆಯಿಂದ ಆಫರ್ಸ್ ಬರತೊಡಗಿತು.
ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಯಾಮಿನಿ ಕನ್ನಡದ `ಉಲ್ಲಾಸ ಉತ್ಸಾಹ' ಚಿತ್ರದಲ್ಲಿ (ಗಣೇಶ್ ಜೊತೆ) ನಟಿಸಿದ್ದುಂಟು. ಇದು ತೆಲುಗಿನ `ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದ ರೀಮೇಕ್. ನಂತರ ಈಕೆ ಎಂದೂ ಕನ್ನಡ ಚಿತ್ರಗಳತ್ತ ತಿರುಗಲೇ ಇಲ್ಲ, ಬಾಲಿವುಡ್ ನಲ್ಲಿ ಪ್ರವೇಶ ಪಡೆದ ನಂತರ, ತನ್ನ ಮೊದಲ ಚಿತ್ರ ಕನ್ನಡದ್ದು ಎಂದು ಹೇಳಿದಳೂ ಅಲ್ಲ. (ಬಾಲಿವುಡ್ ಪ್ರವೇಶಿಸುವ ನಟಿಯರು ಹೀಗೆ ಮಾಡುವುದು ಮಾಮೂಲೇ ಆಗಿದೆ). ಆ ನಂತರ ಈಕೆ ಕೆಲವು ತೆಲುಗಿನ ಚಿತ್ರಗಳಲ್ಲಿ ನಟಿಸಿದಳು. ಅವುಗಳಲ್ಲಿ ಕೊರಿಯರ್ ಬಾಯ್ ಕಲ್ಯಾಣ್, ಯುದ್ಧಂ, ಗೌರವಂ ಮುಂತಾದ ಚಿತ್ರಗಳು ಪ್ರಮುಖ. 2012ರಲ್ಲಿ ಈಕೆ ಆಯುಷ್ಮಾನ್ ಖುರಾನಾ ಜೊತೆ, ಜಾನ್ ಅಬ್ರಹಾಂ ನಿರ್ಮಿಸಿದ `ವಿಕ್ಕಿ ಡೋನರ್' ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದಳು. `ವಿಕ್ಕಿ ಡೋನರ್' ಸೂಪರ್ ಹಿಟ್ ಎನಿಸಿತು! ಇದರ ನಂತರ ಈಕೆ ಹೃತಿಕ್ ರೋಶನ್ ಜೊತೆ `ಕಾಬಿಲ್' ಚಿತ್ರದಲ್ಲಿ ಕಾಣಿಸಿಕೊಂಡಳು. ಆ ಚಿತ್ರ ಸಹ ಈಕೆಗೆ ಉತ್ತಮ ಹೆಸರು ತಂದುಕೊಟ್ಟಿತು.
ಈಕೆಯ ಕೌಟುಂಬಿಕ ವಾತಾವರಣ ಅಂದ್ರೆ, ತಂದೆ ಪಂಜಾಬಿ ಚಿತ್ರಗಳ ನಿರ್ದೇಶಕರು. ತಂಗಿ ಸುರೀಲಿ ಗೌತಮ್ ಸಹ `ಪವರ್ ಕಟ್' ಎಂಬ ಪಂಜಾಬಿ ಚಿತ್ರದಲ್ಲಿ ನಟಿಸಿದ್ದಾಳೆ. ಈಕೆಯ ತಮ್ಮ ಓಜಸ್ ಗೌತಮ್. ತಾಯಿ ಅಪ್ಪಟ ಗೃಹಿಣಿ, ಗಂಡ ಮನೆ ಮಕ್ಕಳು ಆಕೆಯ ಸರ್ವಸ್ವ. ಮುಂದೆ ಯಾಮಿ ಮದುವೆಯಾಗಿ ತಾಯಿಯಾದ ಮೇಲೂ, ತನ್ನ ಸಿನಿ ಕೆರಿಯರ್ ಮುಂದುವರಿಸಿದಾಗ, ತಾಯಿಯ ಬಳಿಯೇ ಮಗನನ್ನು ಬಿಟ್ಟು, ಮತ್ತೆ ಮುಂಬೈಗೆ ಹೊರಟಳು.





