‘ಬೆಳೆಯೋ ಹುಡುಗರನ್ನ ಕಂಡ್ರೆ ಉರ್ಕೊಳ್ಳೋರೆಷ್ಟು.. ಆದ್ರೂ ನಾವ್ ಬೆಳೀತಾನೇ ಇರ್ಬೇಕಪ್ಪಾ..’ ಎಂದು ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ನಟ ಯಶ್ ಸಿನಿಮಾವೊಂದರಲ್ಲಿ ಡೈಲಾಗ್ ಹೊಡೆದಿದ್ರು. ಆದ್ರೀಗ ಅದು ನಿಜ ಎಂದೆನಿಸುತ್ತಿದೆ. ಯಾಕಂದ್ರೆ, ಕೆಜಿಎಫ್ ಚಿತ್ರಗಳ ಭಾರೀ ಯಶಸ್ಸಿನ ನಂತರ ಬಹುಕೋಟಿ ವೆಚ್ಚದ ಅದ್ಧೂರಿ ಸಿನಿಮಾ ಟಾಕ್ಸಿಕ್ ಶೂಟಿಂಗ್ ಜೋರಾಗಿದೆ.
ಈ ಟಾಕ್ಸಿಕ್ನಲ್ಲಿ ನಟ ಯಶ್ ಅವರ ಜಬರ್ದಸ್ತ್ ಎಂಟ್ರಿ ಹಾಲಿವುಡ್ನ್ನೂ ಮೀರಿಸುವಂತಿದೆ. ಜನವರಿ 8ರಂದು ನಡೆದ ತಮ್ಮ ಜನ್ಮದಿನದಂದು ತಮ್ಮ ಫ್ಯಾನ್ಸ್ಗೆ ಟಾಕ್ಸಿಕ್ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಮಾಡಿ ಬಿಗ್ ಗಿಫ್ಟ್ ಕೊಟ್ಟ ಯಶ್, ಟಾಕ್ಸಿಕ್ ಸಿನಿಮಾ ಕುರಿತ ನಿರೀಕ್ಷೆಗಳನ್ನು ಮತ್ತಷ್ಟು ಜಾಸ್ತಿ ಮಾಡಿದ್ದಾರೆ.
ಅಚ್ಚರಿ ಅಂದ್ರೆ, ಟಾಕ್ಸಿಕ್ ಗ್ಲಿಂಪ್ಸ್ ರಿಲೀಸ್ ಆಗಿ ಕೇವಲ ಒಂದೇ ದಿನದಲ್ಲಿ 50 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಷ್ಟರಮಟ್ಟಿಗೆ ಆ ಗ್ಲಿಂಪ್ಸ್ನ ಬಿಜಿ ಮ್ಯೂಸಿಕ್, ರಾಕಿಭಾಯ್ ಎಂಟ್ರಿ, ಸಿಗಾರ್ ಹಿಡಿಯೋ ಸ್ಟೈಲ್ ಎಲ್ಲವೂ ಸಖತ್ತಾಗೇ ಕಿಕ್ ಕೊಡ್ತಿದೆ. ವಿಶೇಷ ಅಂದ್ರೆ, ಟಾಕ್ಸಿಕ್ ಸಿನಿಮಾನ ನಿರ್ದೇಶನ ಮಾಡ್ತಿರೋದು, ದುಡ್ಡು ಹಾಕ್ತಿರೋದು ಮಲಯಾಳಂ ಮೂಲದವರೇ. ಆದ್ರೆ, ಈ ಗ್ಲಿಂಪ್ಸ್ ಬಗ್ಗೆ ಮಲಯಾಳಂ ಚಿತ್ರರಂಗದ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಅನೇಕರು ನಿರ್ದೇಶಕಿ ಗೀತು ಮೋಹನ್ದಾಸ್ ಅವರನ್ನು ಪ್ರಶ್ನೆ ಮಾಡಿದ್ದು, ಮಹಿಳೆಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮಲಯಾಳಂ ನಿರ್ದೇಶಕ ನಿತಿನ್ ಕೂಡ ಗೀತು ಮೋಹನ್ದಾಸ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿದ ಬಳಿಕ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರನ್ನು ಅನೇಕರು ಬೆಂಬಲಿಸಿದ್ದಾರೆ. ನಿತಿನ್ ಅವರು ಗೀತು ವಿರುದ್ಧ ಧ್ವನಿ ಎತ್ತಲು ಒಂದು ಕಾರಣ ಇದೆ ಎನ್ನಲಾಗಿದೆ.
ಗ್ಲಿಂಪ್ಸ್ನಲ್ಲಿ ಏನಿದೆ ಗೊತ್ತಾ..? : ಅಸಲಿಗೆ ಟಾಕ್ಸಿಕ್ ಗ್ಲಿಂಪ್ಸ್ನಲ್ಲಿ ಜಗಮಗಿಸೋ ಲೈಟ್ಸ್, ನಶೆಯಲ್ಲಿ ತೇಲಾಡ್ತಿರೋ ಫಾರಿನ್ ಬೆಡಗಿಯರ ನಡುವೆ ಬಾಯಲ್ಲಿ ಸಿಗಾರ್, ತಲೆ ಮೇಲೆ ಹ್ಯಾಟ್ ಹಾಕಿಕೊಂಡ ಯಶ್, ಕ್ಲಬ್ಗೆ ಮಾಸ್ ಆಗಿ ಎಂಟ್ರಿ ಕೊಡ್ತಾರೆ. ಬಳಿಕ ಕ್ಲಬ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆಯ ಕಾಲನ್ನು ಎಳೆಯುತ್ತಾರೆ. ನಂತರ ಆಕೆ ಮೇಲೆ ಎಣ್ಣೆ ಸುರಿಯುತ್ತಾರೆ. ಆಕೆ ಅದನ್ನು ಎಂಜಾಯ್ ಮಾಡುತ್ತಾಳೆ. ಈ ರೀತಿಯಲ್ಲಿರುವ ದೃಶ್ಯವನ್ನು ಕಾಂಡೋಮ್ ಜಾಹೀರಾತು ರೀತಿಯಲ್ಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟೀಕಿಸುತ್ತಿದ್ದಾರೆ.
ಈ ಟೀಕೆಗೆ ಹಳೇ ಸಿಟ್ಟು ಕಾರಣ : ಅಚ್ಚರಿ ಅಂದ್ರೆ, ಇಲ್ಲಿ ಗೀತು ಮೋಹನ್ದಾಸ್ ಅವರ ಈ ಟಾಕ್ಸಿಕ್ ಸಿನಿಮಾದ ಗ್ಲಿಂಪ್ಸ್ನ್ನು ನಿತಿನ್ ಪ್ರಶ್ನಿಸುತ್ತಿರುವುದಕ್ಕೆ ಇದರ ಹಿಂದೆ ಮತ್ತೊಂದು ಕಾರಣವೂ ಇದೆ. 2016ರಲ್ಲಿ ‘ಕಸಾಬ’ ಹೆಸರಿನ ಸಿನಿಮಾ ಬಂದಿತ್ತು. ಇದನ್ನು ನಿರ್ದೇಶನ ಮಾಡಿದ್ದು ನಿತಿನ್ ಅವರೇ. ಈ ಚಿತ್ರದಲ್ಲಿ ಬರುವ ಒಂದು ದೃಶ್ಯ ಸಾಕಷ್ಟು ವಿರೋಧ ಎದುರಿಸಿತ್ತು. ಪೊಲೀಸ್ ಅಧಿಕಾರಿ (ಮಮ್ಮೂಟಿ) ಮಹಿಳಾ ಪೊಲೀಸ್ ಅಧಿಕಾರಿ ಬಳಿ ಹೋಗಿ ಅವರ ಬೆಲ್ಟ್ ತೆಗೆದು, ‘ನಾನು ನಿಮ್ಮ ಋತುಚಕ್ರವನ್ನು ನಿಲ್ಲಿಸಬಹುದು’ ಎಂದು ಹೇಳುವ ದೃಶ್ಯವಿತ್ತು. ಈ ದೃಶ್ಯವನ್ನು ಗೀತು ಮೋಹನ್ದಾಸ್ ಕೂಡ ವಿರೋಧಿಸಿದ್ದರು. ಈಗ ಅವರೇ ಮಹಿಳೆಯರನ್ನು ಕೆಟ್ಟದಾಗಿ ತೋರಿಸಿದ್ದು ಎಷ್ಟು ಸರಿ ಎಂಬುದು ನಿತಿನ್ ಅಭಿಪ್ರಾಯ.