ಜೀವನದ ಪ್ರತಿ ಹಂತದಲ್ಲೂ ಸ್ನೇಹಿತರು ಬೇಕೇಬೇಕು. ಬಾಲ್ಯದಲ್ಲಿ ನಮ್ಮೊಂದಿಗೆ ಶಾಲೆಗೆ ಬರುತ್ತಿದ್ದ ಸ್ನೇಹಿತರೇ ಇರಬಹುದು ಅಥವಾ ಉದ್ಯೋಗ ನಿಮಿತ್ತ ಪರಿಚಯವಾದ ನೆರೆಮನೆಯ ವ್ಯಕ್ತಿಯೇ ಆಗಿರಬಹುದು. ಹದಿವಯಸ್ಸಿನಲ್ಲಿ ಅಥವಾ ಯೌವನಾವಸ್ಥೆಯಲ್ಲಿ ಪರಿಚಯಾದ ವ್ಯಕ್ತಿ ಇರಬಹುದು. ಆದರೆ ಒಬ್ಬ ಹುಡುಗ ಅಥವಾ ಹುಡುಗಿ ವೈವಾಹಿಕ ಬಂಧನದಲ್ಲಿ ಬಂಧಿಸಲ್ಪಟ್ಟರೆ ಸ್ನೇಹದ ಮಾನದಂಡವೇ ಬದಲಾಗುತ್ತದೆ.
ಹೆಚ್ಚಿನ ಪ್ರಕರಣಗಳಲ್ಲಿ ಹುಡುಗಿಯರಿಗೆ ಮದುವೆಯ ಬಳಿಕ ತಮ್ಮ ಗೆಳತಿಯರೊಂದಿಗಿನ ಸಂಪರ್ಕ ತಪ್ಪಿ ಹೋಗುತ್ತದೆ. ತಮ್ಮ ಗಂಡನ ಸ್ನೇಹಿತರ ಪತ್ನಿಯರ ಜೊತೆಗೆ ಸ್ನೇಹದ ನಂಟು ಬೆಳೆಯುತ್ತದೆ. ಕೆಲವು ಹುಡುಗಿಯರು ಅಪವಾದವೆಂಬಂತೆ ಮದುವೆಯಾದ ಬಳಿಕ ಗೆಳತಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಮದುವೆಯಾದ ಬಳಿಕ ಆಗಾಗ ಪರಸ್ಪರರ ಮನೆಗೆ ಹೋಗಿ ಭೇಟಿ ಮಾಡುವುದು ನಡೆದೇ ಇರುತ್ತದೆ. ನಿಮ್ಮ ಗೆಳತಿಯ ಗಂಡನ ಜೊತೆ ನಿಮ್ಮ ಪತಿಯ ಸ್ನೇಹ ಆಗುತ್ತದೆ.
ಆರಂಭದಲ್ಲಿ ಇಬ್ಬರೂ ಗೆಳತಿಯರಿಗೆ ತಮ್ಮ ಪತಿಯಂದಿರ ಸ್ನೇಹ ಬಹಳ ಖುಷಿ ಕೊಡುತ್ತದೆ. ಈ ಸ್ನೇಹ ಬಹಳ ಕಾಲ ಉಳಿಯುವಂಥದ್ದು ಎಂದು ಇಬ್ಬರು ಸ್ನೇಹಿತೆಯರೂ ಭಾವಿಸುತ್ತಾರೆ. ಆರಂಭದಲ್ಲಿ ಬಹಳ ಖುಷಿ ನೀಡುವ ಸ್ನೇಹ ಆಮೇಲೆ ಹೇಗೆ ಅವರಿಗೆ ಮುಳುವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ನನ್ನವನಾಗಿ ಉಳಿಯಲಿಲ್ಲ ನನ್ನ ಗಂಡ : ಗೆಳತಿಯ ಗಂಡನ ಜೊತೆ ನಿಮ್ಮ ಗಂಡನ ಸ್ನೇಹ ಯಾವಾಗಲಾದರೊಮ್ಮೆ ಜೊತೆ ಜೊತೆಗೆ ಕುಳಿತು ಟೀ/ಕಾಫಿ ಸೇವನೆ, ಊಟ ಮಾಡುವುದು, ವರ್ಷಕ್ಕೆ ಒಮ್ಮೆ ಅಥವಾ ಎರಡು ಸಲ ಔಟಿಂಗ್ ಹೋದರೆ ಏನೂ ತೊಂದರೆ ಇಲ್ಲ. ಆದರೆ ಈ ಸ್ನೇಹ 24/7 ಆಗಿಬಿಟ್ಟರೆ ಅಂದರೆ ನಿಮ್ಮ ಪತಿ ನಿಮ್ಮ ಕಣ್ಣು ತಪ್ಪಿಸಿ ನಿಮ್ಮ ಗೆಳತಿಯ ಪತಿಯ ಜೊತೆಯೇ ಹೆಚ್ಚು ಸಂಪರ್ಕದಲ್ಲಿ ಇರತೊಡಗಿದರೆ ನನ್ನ ಪತಿ ನನ್ನವನಾಗಿ ಉಳಿಯುತ್ತಿಲ್ಲ ಎಂದು ನೀವು ದೂರಬೇಕಾಗಿ ಬರಬಹುದು.
ಬೆಳಗ್ಗೆ ವಾಟ್ಸ್ ಆ್ಯಪ್‌ನಲ್ಲಿ ಗುಡ್ ಮಾರ್ನಿಂಗ್‌ನಿಂದ ಹಿಡಿದು ದಿನವಿಡೀ ಪರಸ್ಪರರು ಕಳಿಸುವ ಜೋಕ್ಸ್ ಶೇರ್ ಮಾಡುವುದು, ಆಫೀಸ್‌ನಿಂದ ಜೊತೆ ಜೊತೆಗೇ ವಾಪಸ್ ಬರುವುದು, ನಂತರ ಇಬ್ಬರೂ ಸೇರಿ ಸುತ್ತಾಡಲು ಹೋಗುವುದು, ತಿಂಡಿ ತಿನ್ನುವುದು ಹೀಗೆಲ್ಲ ಮಾಡಿದರೆ ನೀವು ತಲೆ ಚಚ್ಚಿಕೊಳ್ಳುವುದು, ಆ ದಿನವನ್ನು ಹಳಿಯುವುದನ್ನು ಬಿಟ್ಟು ಮತ್ತೇನೂ ಮಾಡಲು ಆಗದು. ನಾನು ಯಾಕಾದರೂ ಪತಿಗೆ ಇವರ ಪರಿಚಯ ಮಾಡಿಸಿದೆ ಎಂದು ಕಣ್ಣೀರು ಹಾಕಬೇಕಾಗುತ್ತದೆ.
ಗೆಳತಿಯ ಪತಿ ಸವತಿಯಂತೆ : ಮೊದಲ ಉದಾಹರಣೆ, ನೀವು ಗಂಡನ ಜೊತೆ ಸಂಜೆ ರೊಮ್ಯಾಂಟಿಕ್ ಸಿನಿಮಾ ನೋಡುವ ಯೋಜನೆ ಹಾಕಿಕೊಂಡಿರುವಿರಿ. ಆದರೆ ಗಂಡ ಗೆಳತಿಯ ಗಂಡನ ಜೊತೆ ಹಾರರ್‌ಸಿನಿಮಾ ನೋಡಲು ಹೋದ.
ಎರಡನೇ ಉದಾರಣೆ : ನಿಮ್ಮ ಮದುವೆಯ ವಾರ್ಷಿಕೋತ್ಸವದ ದಿನ. ನೀವು ಗಂಡನಿಂದ ಸರ್‌ಪ್ರೈಸ್ ಗಿಫ್ಟ್ ಹಾಗೂ ಕ್ಯಾಂಡಲ್ ಡಿನ್ನರ್‌ನ ಅಪೇಕ್ಷೆ ಮಾಡಿರುವಿರಿ. ಆದರೆ ಗಂಡ ಬಂದಿದ್ದೇ ಲೇಟು, ಅದರ ಮೇಲಾಗಿ ಗಂಡ ತಂದಿರುವ ಗಿಫ್ಟ್ ಗೆಳತಿಗೆ ಇಷ್ಟವಾಗುವಂಥದು. ಜೊತೆಗೆ ಗೆಳತಿಯ ಗಂಡ ಕೂಡ ಬಂದಿದ್ದಾನೆ. ಅದೆಲ್ಲ ನೋಡಿ ನಿಮಗೆ ಸವತಿ ಬಂದಂತೆ ಅನಿಸುತ್ತದೆ.