ಹಿಂದಿನ ಕಾಲದಲ್ಲಿ ಮಹಿಳೆಯರ ಅಲಂಕಾರ, ಉಡುಗೆತೊಡುಗೆಗಳ ಗೆಟಪ್‌ಗೆ ಯಾವುದೇ ಪ್ರತಿಬಂಧ ಇರಲಿಲ್ಲ. ತನ್ನ ಸೌಂದರ್ಯವನ್ನು ಇನ್ನಷ್ಟು ಉತ್ತಮವಾಗಿ ಪ್ರಸ್ತುತಪಡಿಸಲು ಯಥಾಶಕ್ತಿ ಪ್ರಯತ್ನಿಸುತ್ತಾಳೆ. ಆದರೆ ಮುಂದೆ ಕಾಲ ಬದಲಾದಂತೆ ಸಮಾಜ ಅವಳಿಂದ ಎಲ್ಲಾ ಹಕ್ಕನ್ನು ಕಸಿದುಕೊಂಡಿತು. ಅವಳ ಬಯಕೆಗಳೆಲ್ಲ 4 ಗೋಡೆಗಳ ನಡುವೆ ಹುದುಗಿಹೋಯಿತು. ಆದರೆ ಈಗ ಹೊಸ ಯುಗದಲ್ಲಿ ಮತ್ತೆ ಕ್ರಾಂತಿ ಮೂಡಿ, ಇಂದಿನ ಹೆಣ್ಣು ತನ್ನ ಮನ ಬಯಸಿದ ಫ್ಯಾಷನ್‌ಗೆ ತೊಡಗಬಹುದು.

ಹೊಸ ವಿಚಾರಗಳ ಜೊತೆ ಜೊತೆಯಲ್ಲೇ ಸಮಾಜ ಸಹ ತನ್ನ ದೃಷ್ಟಿಕೋನ ಬದಲಿಸಿಕೊಳ್ಳುವಂತೆ ಆಗಿದೆ. ಇಂದಿನ ಫ್ಯಾಷನ್‌ ಪ್ರತಿ ವಯೋಮಾನದ ಹೆಣ್ಣಿಗೂ ಒಂದು ಹೊಸ ಕ್ರಾಂತಿಯನ್ನೇ ತಂದೊಡ್ಡಿದೆ. 12 ಗಜದ ಸೀರೆಯುಟ್ಟು, ಮೈಯೆಲ್ಲ ಬೆವರುತ್ತಿದ್ದರೂ ತಲೆಯ ಮೇಲಿನ ಸೆರಗು ಸರಿಸದೆ ಕಷ್ಟಪಡುತ್ತಿದ್ದ ಕಾಲ ಹೋಯಿತು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನದಿಚ್ಛೆಯಂತೆ ದಿಟ್ಟವಾಗಿ ಸಿಂಗರಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ. ಯಾರೇನು ಭಾವಿಸುತ್ತಾರೆ…. ಎಂಬುದೆಲ್ಲ ಡೋಂಟ್‌ಕೇರ್‌ ಆಗಿದೆ.

ಇಂದು ಆಕರ್ಷಕ ಉಡುಗೆ ಆಕರ್ಷಕ ವ್ಯಕ್ತಿತ್ವ ಹಾಗೂ ಆಕರ್ಷಕ ಯೋಚನಾಧಾಟಿಗೆ ಪರ್ಯಾಯವಾಗಿದೆ.

`ಜೀವನ ನನ್ನದು, ತನುಮನಗಳು ನನ್ನದು…. ಹಾಗಿರುವಾಗ ಬದಲಾಗುತ್ತಿರುವ ಫ್ಯಾಷನ್ನಿಗೆ ತಕ್ಕಂತೆ ಏಕೆ ಧರಿಸಬಾರದು?’ ಎನ್ನುತ್ತಾಳೆ ಆಧುನಿಕ ನಾರಿ. ಇಂದು ಪ್ರತಿಯೊಬ್ಬ ಹೊಸ ವಿಚಾರಧಾರೆಯ ಹೆಣ್ಣಿನ ನಿಲುವು ಇದು. ಧರ್ಮ, ಸಮಾಜ, ಪರಿವಾರ, ಮೌಲ್ವಿಗಳು ಎಷ್ಟೇ ಫತ್ವಾ ಹೊರಡಿಸಲಿ….. ಇಂದಿನ ಹೆಣ್ಣು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂದಿನ ಸ್ಪೀಡ್‌ ಯುಗದಲ್ಲಿ ಯಾರು ತಾನೇ 9 ಗಜದ ಸೀರೆ ಸುತ್ತಿಕೊಂಡು ಹಳೆ ಕಾಲದವರಂತೆ ಇರಲು ಬಯಸುತ್ತಾರೆ? ಹಗುರವಾದ ಉಡುಗೆಗಳನ್ನು ಧರಿಸಿಯೇ ಎಷ್ಟೋ ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸಬಹುದು.

ಇದೀಗ ಉದ್ಯೋಗ ನಿಮಿತ್ತ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಆಕಾಶದೆತ್ತರಕ್ಕೆ ಏರಿರುವಾಗ ತಮಗೆ ಅನುಕೂಲವಾಗುವಂತೆ ಸಿಂಗರಿಸಿಕೊಂಡರೆ ತಪ್ಪೇನು? ಸಂದರ್ಭಕ್ಕೆ ತಕ್ಕಂತೆ ಉಡುಗೆ ಧರಿಸಲು ಅಡ್ಡಿಪಡಿಸುವ ಔಚಿತ್ಯವಂತೂ ಇಲ್ಲವೇ ಇಲ್ಲ. ಜೀನ್ಸ್, ಟಾಪ್‌, ಸ್ಕರ್ಟ್‌, ಸಣ್ಣ ಫ್ರಾಕ್‌, ಶರ್ಟ್‌ ಧರಿಸಿದ ಮಹಿಳೆಯರು ದಿನೇದಿನೇ  ಚಿಕ್ಕ ಪ್ರಾಯದವರಾಗಿ, ಹಿಂದೆ ಅನುಭವಿಸದ ಸ್ವಚ್ಛತೆಯ ಆನಂದ ಹೊಂದುತ್ತಿದ್ದಾರೆ.

ಮನೆ, ಹೊರಗಿನ ಕೆಲಸಗಳ ಎರಡೂ ಜವಾಬ್ದಾರಿ ನಿಭಾಯಿಸುತ್ತಾ ಯಶಸ್ವಿ ಎನಿಸುವುದರಲ್ಲಿ ಮಹಿಳೆ ಧರಿಸುವ ಉಡುಗೆಯೇ ಪ್ರಧಾನ ಪಾತ್ರ ವಹಿಸುತ್ತದೆ. ವಾಹನ ಚಲಾಯಿಸುವುದರಲ್ಲಿ ಅಧಿಪತ್ಯ ವಹಿಸುತ್ತಿರುವ ತರುಣಿಯರು, ಮಧ್ಯವಯಸ್ಕ ಮಹಿಳೆಯರು ಅಥವಾ ಪ್ರೌಢೆಯರು ತಮ್ಮ ಉಡುಗೆಗಳನ್ನು ಆಧುನಿಕತೆಯ ಸ್ಪರ್ಶ ನೀಡದೆ ಧರಿಸುತ್ತಿಲ್ಲ. ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ರೇಷ್ಮೆ ಸೀರೆ, ಮುತ್ತು ನಕ್ಷತ್ರಗಳಿಂದ ಅಲಂಕೃತ ಸೀರೆ, ಲಾಚಾ, ಲಹಂಗಾ ಇತ್ಯಾದಿಗಳ ಜೊತೆ ಭಾರಿ ಒಡವೆ ಧರಿಸುವ ಅವಕಾಶ ಮನಸ್ಸಿಗೆ ಖುಷಿ ನೀಡುತ್ತದೆ. ಆದರೆ ದೈನಂದಿನ ಬದುಕಿನಲ್ಲಿ ಇವನ್ನು ಧರಿಸಿ ಕೆಲಸ ಮಾಡಿಕೊಳ್ಳುವುದು ಖಂಡಿತಾ ಸುಲಭವಲ್ಲ.

ಇಂದು 60 ಮಾತ್ರವಲ್ಲ 70 ದಾಟಿದ ಮಹಿಳೆಯರೂ ಸಹ ವಿದೇಶಗಳಲ್ಲಿ ಮಾತ್ರವಲ್ಲದೆ, ಸ್ವದೇಶದಲ್ಲೂ ಜೀನ್ಸ್, ಪ್ಯಾಂಟ್‌, ಸ್ಕರ್ಟ್, ಟಾಪ್‌ ಮುಂತಾದ ಉಡುಗೆ ಧರಿಸಿ ಓಡಾಡುತ್ತಾರೆ. ಇದು ಬದಲಾವಣೆಯ ದಟ್ಟ ಸಂಕೇತವೆನಿಸಿದೆ. ಪ್ರಾಚೀನ, ಆಧುನಿಕ ಫ್ಯಾಷನ್ನಿನ ಉಡುಗೆಗಳ ಸಮ್ಮಿಲಿತ ಡಿಸೈನ್ಸ್ ನಯನಾಭಿರಾಮ ಮಾತ್ರವಲ್ಲದೆ ಬಜೆಟ್‌ಗೆ ತಕ್ಕಂತೆಯೂ ಇರುತ್ತದೆ. ಒಂದಕ್ಕಿಂತ ಒಂದು ಸೊಗಸೆನಿಸುವ ಡಿಸೈನರ್‌ ಡ್ರೆಸೆಸ್‌ ಫ್ಯಾಷನ್‌ ಪ್ರಪಂಚದಲ್ಲಿ ಮೆರೆಯುತ್ತಿವೆ. ಈ ಡಿಸೈನರ್‌ ಡ್ರೆಸ್‌ಗಳ ಪ್ರಚಾರಕ್ಕಾಗಿ ಫ್ಯಾಷನ್‌ ಪೆರೇಡ್‌ಗಳ ಆಯೋಜನೆಯೂ ನಡೆಯುತ್ತದೆ. ಈಗಂತೂ ಆನ್‌ಲೈನ್‌ನಲ್ಲೂ ಆಧುನಿಕ ಡ್ರೆಸ್‌ಗಳು ಭರದಿಂದ ಮಾರಾಟವಾಗುತ್ತಿವೆ. ಎಲ್ಲರೂ ಇಲ್ಲಿ ಕೊಳ್ಳುವವರೇ!

ಫ್ಯಾಷನ್‌ಕುರಿತು ಅಭಿಪ್ರಾಯ

24 ವರ್ಷದ ಸಾಫ್ಟ್ ವೇರ್‌ ಎಂಜಿನಿಯರ್‌ ದಿವ್ಯಾ ಹೇಳುತ್ತಾಳೆ, ಸಲ್ವಾರ್‌ ಕಮೀಜ್‌ಗಿಂತ ಹೆಚ್ಚಾಗಿ ನನಗೆ ಜೀನ್ಸ್, ಪ್ಯಾಂಟ್‌, ಫುಲ್ ಸ್ಕರ್ಟ್‌, ಟಾಪ್‌, ಶಾರ್ಟ್ಸ್ ಧರಿಸುವುದೇ ಇಷ್ಟ. ಈ ಡ್ರೆಸ್‌ಗಳಲ್ಲಿ ಸ್ಲಿಮ್ ಟ್ರಿಮ್ ಆಗಿ, ಮೋಸ್ಟ್ ಫಿಟ್‌ ಆಗಿ ಕಂಗೊಳಿಸುವುದು ಮಾತ್ರವಲ್ಲದೆ, ಸ್ಮಾರ್ಟ್‌ ಎನಿಸುತ್ತೇವೆ. ಜೊತೆಗೆ ಹಗುರ ಎನಿಸುವುದಲ್ಲದೆ, ಎಲ್ಲಾ ವರ್ಗದವರೊಂದಿಗೆ ಕೆಲಸ ಮಾಡಲಿಕ್ಕೂ ಅನುಕೂಲ.

ಬ್ಯಾಂಕ್‌ ಉದ್ಯೋಗಿ 28ರ ಹರೆಯದ ಪೂಜಾ ಹೇಳುತ್ತಾಳೆ, ಆಧುನಿಕ ಡ್ರೆಸ್‌ ಧರಿಸುವುದೇನೋ ಸರಿ, ಆದರೆ ಎಂದೂ ಶಿಷ್ಚಾಚಾರ ಮೀರಬಾರದು. ಭಾರತದ ಯಾವ ಮಹಾನಗರವೇ ಇರಲಿ, ಇದು ಭಾರತವೇ ಹೊರತು ಅಮೆರಿಕಾ ಅಲ್ಲ ಎಂದು ನೆನಪಿಡಬೇಕು. ಸ್ಥೂಲ ಮಹಿಳೆಯರು ಟೈಟ್‌ ಡ್ರೆಸ್‌, ಶಾರ್ಟ್‌ ಡ್ರೆಸ್‌ಗಳ ಬದಲಿಗೆ ಸಡಿಲ ಡ್ರೆಸೆಸ್‌ ಧರಿಸುವುದು ಲೇಸು.

ಫ್ಯಾಷನ್‌ ಇರಲಿ….. ಆದರೆ ಡೀಸೆಂಟ್‌ ಆಗಿರಲಿ ಎನ್ನುವ ಈಕೆಗೆ ಅನಾರ್ಕಲಿ ಡ್ರೆಸ್‌ ಎಂದರೆ ಅಚ್ಚುಮೆಚ್ಚು.

37 ವರ್ಷದ ಡೆಂಟಿಸ್ಟ್ ಸೃಜನಾ ಹೇಳುತ್ತಾಳೆ, ನನಗೂ ಫ್ಯಾಷನ್‌ಗಿಂತ ಶಿಷ್ಟಾಚಾರವೇ ಮುಖ್ಯ ಎನಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸಗಳ ಫ್ಯಾಷನ್‌ ಬಹಳ ಇಷ್ಟವಂತೆ. ಮನೆ ಮತ್ತು ಹೊರಗೆ ಕೇಪ್ರಿ ಧರಿಸುವುದೇ ಸಲೀಸು ಎನ್ನುತ್ತಾಳೆ.

ಕಾಲೇಜು ಕಿಶೋರಿಯರಾದ ರಶ್ಮಿ, ಸ್ವಪ್ನಾ, ಮೇಘಾ, ನಮಿತಾರ ಅಭಿಪ್ರಾಯದಲ್ಲಿ ಹೊಸ ಫ್ಯಾಷನ್ನಿನ ಡ್ರೆಸ್‌ಗಳು ಸುಂದರ, ಸುದೀರ್ಘ ಬಾಳಿಕೆ ಜೊತೆ ಹೆಚ್ಚು ಆರಾಮ ಎನಿಸುತ್ತದೆ. ಇಂಥ ಡ್ರೆಸ್‌ಮೆಟೀರಿಯಲ್ಸ್ ಎಷ್ಟು ಉತ್ತಮ ಎಂದರೆ ಇದನ್ನು ಹಾಯಾಗಿ ಮನೆಯಲ್ಲೇ ಒಗೆಯಬಹುದು, ಡ್ರೈವಾಶ್‌ಗೆ ಕೊಡಲೇಬೇಕೆಂಬ ಅನಿವಾರ್ಯತೆ ಇಲ್ಲ. ಮೇಂಟೇನೆನ್ಸ್ ಕೂಡ ಅಷ್ಟೇ ಸುಲಭ. ಹೀಗಾಗಿ ಆಕರ್ಷಕ ಡಿಸೈನರ್‌ ಡ್ರೆಸ್‌ಗಳ ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿರುತ್ತಾರೆ.

45 ವರ್ಷದ ಲಲಿತಾ ಭಟ್‌ರ ಅಭಿಪ್ರಾಯದಲ್ಲಿ, ವಿಶೇಷ ಸಮಾರಂಭಗಳಿಗೆ ರೇಷ್ಮೆ ಸೀರೆಗಳೇ ಸರಿ. ಇವರಿಗೆ ಆಧುನಿಕ, ಸಾಂಪ್ರದಾಯಿಕ ಸಲ್ವಾರ್‌ ಸೂಟ್‌ ಧರಿಸುವುದೆಂದರೆ ಇಷ್ಟ.

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಆಂಗ್ಲ ಶಿಕ್ಷಕಿಯಾಗಿರುವ 50ರ ಹರೆಯದ ಸ್ತುತಿ ಪ್ರಸಾದ್‌ರ ಪ್ರಕಾರ ಕಾಟನ್‌ ಸೀರೆ, ಸಲ್ವಾರ್‌ ಸೂಟ್‌ ಯಾರಿಗೆ ತಾನೇ ಇಷ್ಟ ಆಗಲ್ಲ? ಈಕೆ ಒಬ್ಬ ಶಿಕ್ಷಕಿಯಾದ್ದರಿಂದ ಡ್ರೆಸ್‌ ಬಗ್ಗೆ ಹೆಚ್ಚು ಜಾಗರೂಕವಾಗಿ ಇರಲೇಬೇಕು.

60ರ ಗೃಹಿಣಿ ಸುನಂದಾ ಮಕ್ಕಳನ್ನು ಭೇಟಿಯಾಗಲು ಲಂಡನ್‌ಗೆ ಹೋಗುವಾಗೆಲ್ಲ ಸದಾ ಜೀನ್ಸ್, ಟಾಪ್‌, ಶರ್ಟ್‌ ಧರಿಸುತ್ತಾರಂತೆ. ಭಾರತ ಅಥವಾ ವಿದೇಶವಿರಲಿ, ವಿಶೇಷ ಸಮಾರಂಭಗಳಿಗೆ ಸೀರೆಯೇ ಸರಿ ಎನ್ನುತ್ತಾರೆ.

75 ವರ್ಷದ ರೇವತಿ ಬಣ್ಣ ಬಣ್ಣದ ಗೌನ್‌ ಧರಿಸಲು ಬಯಸುತ್ತಾರೆ. ಆಕೆ ಅಮೆರಿಕಾಗೆ ಹೋದಾಗೆಲ್ಲ ಲೆಕ್ಕವಿಲ್ಲದಷ್ಟು ಫ್ಯಾಷನ್‌ ಡ್ರೆಸ್‌ಗಳನ್ನು ಅಲ್ಲಿನ ಮಾಲ್‌ಗಳಲ್ಲಿ ಕೊಳ್ಳುತ್ತಾರೆ.

ನಮ್ಮ ಮನ ಮೆಚ್ಚಿದ ಡ್ರೆಸ್‌ ಧರಿಸಿ ಬದುಕುವ ಶೈಲಿಯೇ ಚೆಂದ. ಆಗ ಪ್ರಫುಲ್ಲಿತಗೊಳ್ಳುವ ಮನಸ್ಸು ಎಂದೂ ಬೇಸರ, ನಿರುತ್ಸಾಹ ತೋರದು.

– ವಿಸ್ಮಿತಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ