ಸ್ವೀಟ್‌  ಕೂಲ್ ಚಾಕಲೇಟ್‌ ಫ್ರೂಟ್‌ ಪುಡ್ಡಿಂಗ್‌

ಸಾಮಗ್ರಿ : 1 ಕಪ್‌  ಮಿಶ್ರ  ಹಣ್ಣುಗಳ ಹೋಳು, 1 ಟಿನ್‌ ಫ್ರೂಟ್‌ ಮಾಕ್‌ಟೇಲ್‌, ಅರ್ಧ ಲೀ. ಗಟ್ಟಿ ಹಾಲು, 4-5 ಚಮಚ ವೆನಿಲಾ ಕಸ್ಟರ್ಡ್‌ ಪೌಡರ್‌, 1 ಚಮಚ ಕೋಕೋ ಪೌಡರ್‌, 2 ಚಿಟಕಿ ದಾಲ್ಚಿನ್ನಿ ಪುಡಿ, 1 ಚಿಟಕಿ ಜಾಯಿಕಾಯಿ ಪುಡಿ, ಅರ್ಧರ್ಧ ಕಪ್‌ ಚಾಕಲೇಟ್ ಕೇಕ್‌ ಕ್ರಂಬ್ಸ್, ಕದಡಿದ ಕ್ರೀಂ, ಅಲಂಕರಿಸಲು ಚೆರ್ರಿಹಣ್ಣು, ತುರಿದ ಚಾಕಲೇಟ್‌, 4-5 ಚಮಚ ಸಕ್ಕರೆ.

ವಿಧಾನ : ಹಾಲನ್ನು ಕಾಯಿಸಿ ಮಂದ ಉರಿಯಲ್ಲಿ ಅರ್ಧದಷ್ಟು ಹಿಂಗಿಸಿ. ಉಳಿದ ಭಾಗಕ್ಕೆ ಸಕ್ಕರೆ ಹಾಕಿ ಕುದಿಸಬೇಕು. ಆಮೇಲೆ ಕೋಕೋ ಪೌಡರ್‌, ಕಸ್ಟರ್ಡ್‌ ಪೌಡರ್‌ನ್ನು ತುಸು ಬೆಚ್ಚಗಿನ ಹಾಲಲ್ಲಿ ಕದಡಿಕೊಂಡು ಇದಕ್ಕೆ ಬೆರೆಸಿ, ಮತ್ತಷ್ಟು ಹೊತ್ತು ಕುದಿಸಿರಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಡಿ. ಒಂದು ಸರ್ವಿಂಗ್‌ ಡಿಶ್‌ನಲ್ಲಿ ಚಾಕಲೇಟ್‌ ಕೇಕ್‌ ಕ್ರಂಬ್ಸ್ ನ ಒಂದು ಪದರ ಹರಡಿರಿ, ಇದನ್ನೂ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಡಿ. ಕೋಲ್ಡ್ ಕಸ್ಟರ್ಡ್‌ನ್ನು ಕ್ರೀಂ ಆಗುವವರೆಗೂ ಚೆನ್ನಾಗಿ ಗೊಟಾಯಿಸಿ. ತಾಜಾ ಮಿಶ್ರ ಹಣ್ಣುಗಳ ಹೋಳು, ಫ್ರೂಟ್‌ ಮಾಕ್‌ಟೇಲ್, ಜಾಯಿಕಾಯಿ ಪುಡಿ, ದಾಲ್ಚಿನ್ನಿ ಪೌಡರ್‌ ಹಾಕಿ ಬೆರೆಸಿಕೊಳ್ಳಿ. ಈಗ ಕೇಕ್‌ ಪದರದ ಮೇಲೆ ಅರ್ಧ ಭಾಗ ಹಣ್ಣಿನ ಹೋಳು ಉದುರಿಸಿ. ಇದರ ಮೇಲೆ ಒಂದು ಪದರ ಕಸ್ಟರ್ಡ್‌ ಬರಲಿ. ಹೀಗೆ ಒಂದಾದ ಮೇಲೆ ಒಂದರಂತೆ ಪದರಗಳು ಬರಲಿ. ಇದರ ಮೇಲೆ ತುರಿದ ಚಾಕಲೇಟ್‌ ಉದುರಿಸಿ. ಕೊನೆಯಲ್ಲಿ ಚಿತ್ರದಲ್ಲಿರುವಂತೆ ಫ್ರೆಶ್‌ ವಿಪ್ಡ್ ಕ್ರೀಂ, ಚೆರ್ರಿ ಹಣ್ಣುಗಳಿಂದ ಅಲಂಕರಿಸಿ, ಮತ್ತಷ್ಟು ಹೊತ್ತು ಫ್ರಿಜ್‌ನಲ್ಲಿ ತಣ್ಣಗೆ ಮಾಡಿ ನಂತರ ಸವಿಯಲು ಕೊಡಿ.

ಲೇಯರ್ಡ್‌ ಪುಡ್ಡಿಂಗ್‌

ಸಾಮಗ್ರಿ : 1 ಕಪ್‌ ಚಾಕಲೇಟ್‌ ಕೇಕ್‌ ಕ್ರಂಬ್ಸ್, 2-3 ಚಮಚ ಟೂಟಿಫ್ರೂಟಿ, 1 ಕಪ್‌ ಗಟ್ಟಿ ಹಾಲು, ಅರ್ಧ ಕಪ್‌ ಸಕ್ಕರೆ, 3-4 ಚಮಚ ವೆನಿಲಾ ಕಸ್ಟರ್ಡ್‌ ಪೌಡರ್‌, 2-3 ಚಮಚ ಫ್ರೆಶ್‌ ಕ್ರೀಂ, 2-3 ಚಮಚ ಮ್ಯಾಂಗೋ ಜ್ಯಾಮ್, ಅರ್ಧ ಪ್ಯಾಕೆಟ್‌ ಸ್ಟ್ರಾಬೆರಿ ಜೆಲ್ಲಿ, 1 ಕಪ್‌ ಹೆಚ್ಚಿದ ಚೆರ್ರಿ ಹಣ್ಣು, ಅರ್ಧ ಕಪ್‌ ಚಾಕೋಚಿಪ್ಸ್.

ವಿಧಾನ : ಒಂದು ಬೌಲ್ ನಲ್ಲಿ ಕೇಕ್‌ ಕ್ರಂಬ್ಸ್ ಹರಡಿರಿ. ಈಗ ಅದರ ಮೇಲೆ ಟೂಟಿಫ್ರೂಟಿ ಹರಡಿ, ಫ್ರೀಝರ್‌ನಲ್ಲಿ 5-10 ನಿಮಿಷ ಇರಿಸಿ. ಹಾಲಿನಲ್ಲಿ ಸಕ್ಕರೆ ಕದಡಿಕೊಳ್ಳಿ. ವೆನಿಲಾ ಪೌಡರ್‌ನ್ನು ತುಸು ಬಿಸಿ ನೀರಲ್ಲಿ ಕದಡಿ, ಅದನ್ನು ಈ ಹಾಲಿಗೆ ಬೆರೆಸಿಕೊಂಡು ಮಂದ ಉರಿಯಲ್ಲಿ ಕುದಿಯಲು ಬಿಡಿ. ನಂತರ ಜ್ಯಾಮನ್ನು ತುಸು ಬಿಸಿ ನೀರಲ್ಲಿ ಕದಡಿಕೊಂಡು, ಅದನ್ನು ಈ ಹಾಲಿಗೆ ಬೆರೆಸಿ ಮತ್ತಷ್ಟು ಕುದಿಸಿರಿ. ಆಗಾಗ ಕೈಯಾಡಿಸುತ್ತಿರಿ. ಹೀಗೆ ಜ್ಯಾಮ್ ವಿಲೀನಗೊಂಡ ನಂತರ ಕೆಳಗಿಳಿಸಿ, ಚೆನ್ನಾಗಿ ಆರಲು ಬಿಡಿ, ತಣ್ಣಗೆ ಮಾಡಿ. ಆಮೇಲೆ ಇದಕ್ಕೆ ಕ್ರೀಂ ಬೆರೆಸಿಕೊಳ್ಳಿ. ಇದನ್ನು ಅರ್ಧ ಗಂಟೆ ಕಾಲ ಫ್ರಿಜ್‌ನಲ್ಲಿಡಿ.  ಅದೇ ಸಮಯದಲ್ಲಿ ಬಿಸಿ ನೀರಿನಲ್ಲಿ ಜೆಲ್ಲಿ ಪೌಡರ್‌ ಕುದಿಸಿಕೊಂಡು, ಜೆಲ್ಲಿ ತಯಾರಿಸಿ, ಅದನ್ನು ಫ್ರಿಜ್‌ನಲ್ಲಿರಿಸಿ. ಕೇಕ್‌ ಮೇಲೆ ಒಂದು ಪದರ ಕ್ರೀಂ ಹರಡಿ, ಅರ್ಧ ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ. ಆಮೇಲೆ ಇದಕ್ಕೆ ಒಂದು ಪದರ ಜೆಲ್ಲಿ ಬರುವಂತೆ ಸೇರಿಸಿ, ಮತ್ತೆ 10 ನಿಮಿಷ ಫ್ರಿಜ್‌ನಲ್ಲಿಟ್ಟು ಸೆಟ್‌ ಮಾಡಿ.  ಕೊನೆಯಲ್ಲಿ ಚಿತ್ರದಲ್ಲಿರುವಂತೆ ಚೆರ್ರಿ ಚಾಕಲೇಟ್‌ಗಳಿಂದ ಅಲಂಕರಿಸಿ, ಮತ್ತಷ್ಟು ಹೊತ್ತು ಕೂಲ್‌ ಮಾಡಿ, ಬಿಸಿಲಲ್ಲಿ ಬಂದ ಅತಿಥಿಗಳಿಗೆ ಸವಿಯಲು ಕೊಡಿ.

ಫ್ರೂಟ್‌ ಶಾಟ್‌

ಸಾಮಗ್ರಿ : ಅರ್ಧ ಟಿನ್‌ ಸೀಲ್ಡ್ ಟಿನ್ನಿನ ಮಿಕ್ಸ್ಡ್ ಕಟ್‌ ಫ್ರೂಟ್ಸ್, ಅರ್ಧ ಕಪ್‌ ಮಿಶ್ರ ಹಣ್ಣಿನ ಹೋಳು (ಸೇಬು, ಬಾಳೆಹಣ್ಣು, ದ್ರಾಕ್ಷಿ, ಸಪೋಟ, ಕಿವೀ ಇತ್ಯಾದಿ) 1 ಕಪ್‌ ಫ್ರೆಶ್‌ ಕ್ರೀಂ, 4 ಚಮಚ ಸ್ಟ್ರಾಬೆರಿ ಕ್ರಶ್ಡ್.

ವಿಧಾನ : 2-3 ಗ್ಲಾಸುಗಳಿಗೆ ಕ್ರಶ್ಡ್ ಸ್ಟ್ರಾಬೆರಿ ಹಾಕಿಡಿ. ಇದರ ಮೇಲೆ ಕದಡಿದ ಕ್ರೀಂ ಬರಲಿ. ಅದರ ಮೇಲೆ ಹಣ್ಣಿನ ಹೋಳು, ಮತ್ತೆ ಕ್ರೀಂ…. ಹೀಗೆ ಬರಲಿ. ಇದೀಗ ಫ್ರೂಟ್‌ ಶಾಟ್‌ ಸವಿಯಲು ರೆಡಿ!

ಬನಾನಾ ಸ್ಲಿಟ್‌ ಸಂಡೇ

ಸಾಮಗ್ರಿ : 2-3 ಮಾಗಿದ ಬಾಳೆಹಣ್ಣು, 2 ಸ್ಕೂಪ್‌ ವೆನಿಲಾ ಐಸ್‌ಕ್ರೀಂ, 1-1 ಸ್ಕೂಪ್‌ ಸ್ಟ್ರಾಬೆರಿ ಪಿಸ್ತಾ ಐಸ್‌ ಕ್ರೀಂ, 2-2 ಚಮಚ ಕ್ಯಾರೆಮಲ್ ಸಾಸ್‌, ಫ್ರೂಟಿ ಕ್ರೀಂ ಸಾಸ್‌, ಚಾಕಲೇಟ್‌ ಸಾಸ್‌, ಅಲಂಕರಿಸಲು ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ.

ವಿಧಾನ : ಒಂದು ಬೋಟ್‌ ಡಿಶ್‌ನಲ್ಲಿ ಮೊದಲೇ ಒಂದು ಬಾಳೆಹಣ್ಣನ್ನು ಉದ್ದಕ್ಕೆ ಸ್ಲಿಟ್‌ ಮಾಡಿಡಿ. ನಂತರ ಇದರ ಮೇಲೆ ಕ್ರಮವಾಗಿ 1-1 ಸ್ಕೂಪ್‌ ವೆನಿಲಾ, ಚಾಕಲೇಟ್‌, ಸ್ಟ್ರಾಬೆರಿ ಐಸ್‌ಕ್ರೀಂ ಹಾಕಬೇಕು. ಇದಾದ ಮೇಲೆ ಕ್ರಮವಾಗಿ ಚಾಕಲೇಟ್‌ ಸಾಸ್‌ ಹಾಕಬೇಕು. ಫ್ರೂಟ್‌ ಸಾಸ್‌, ಕ್ಯಾರೆಮಲ್ ಸಾಸ್‌ ಹರಡಿ, ಗೋಡಂಬಿ ಉದುರಿಸಿ ಗ್ಲಾಸುಗಳನ್ನು ಟ್ಯಾಪ್‌ ಮಾಡಿ ಸವಿಯಲು ಕೊಡಿ.

ಮ್ಯಾಂಗೋ ಪ್ಯಾರಡೈಸ್‌ ಪುಡ್ಡಿಂಗ್‌

ಸಾಮಗ್ರಿ : 2 ಕಪ್‌ ಹಾಲು, 2 ಚಮಚ ಸಕ್ಕರೆ, 4 ಚಮಚ ಮ್ಯಾಂಗೋ ಜ್ಯಾಮ್, 4 ಚಮಚ ಕಾರ್ನ್‌ಫ್ಲೋರ್‌, 4 ಚಮಚ ಕ್ರೀಂ, ಅರ್ಧ ಕಪ್‌ ಮ್ಯಾಂಗೋ ಪ್ಯೂರಿ, 1 ಪ್ಯಾಕೆಟ್‌ ಮ್ಯಾಂಗೋ ಜೆಲ್ಲಿ, 1 ಕಪ್‌ ಮಾವಿನ ಹೋಳು.

ವಿಧಾನ : ಹಾಲು ಕಾಯಿಸಿ ಮಂದ ಉರಿಯಲ್ಲಿ ಕುದಿಸಿ, ಅರ್ಧದಷ್ಟು ಹಿಂಗಿಸಿ. ಇದಕ್ಕೆ ಸಕ್ಕರೆ, ಜ್ಯಾಮ್ ಬೆರೆಸಿ. ತುಸು ಬಿಸಿ ನೀರಿಗೆ ಕಾರ್ನ್‌ಫ್ಲೋರ್‌ ಕದಡಿಕೊಂಡು ಹಾಲಿಗೆ ಬೆರೆಸಿ ಗಟ್ಟಿ ಆಗುವಂತೆ ಕುದಿಸಿ. ಕೆಳಗಿಳಿಸಿ ಚೆನ್ನಾಗಿ ಆರಿದ ಮೇಲೆ, ಕ್ರೀಂ ಬೆರೆಸಿ ಕದಡಿಕೊಂಡು ಫ್ರಿಜ್‌ನಲ್ಲಿರಿಸಿ ತಣ್ಣಗೆ ಮಾಡಿ. ರೆಡಿ ಇರುವ ಮ್ಯಾಂಗೋ ಕ್ರೀಮನ್ನು ಒಂದು ಸರ್ವಿಂಗ್‌ ಬೌಲ್ ಗೆ ಹಾಕಿ ಸೆಟ್‌ ಆಗಲು ಫ್ರಿಜ್‌ನಲ್ಲಿಡಿ. ಅರ್ಧ ಪ್ಯಾಕೆಟ್‌ ಮ್ಯಾಂಗೋ ಜೆಲ್ಲಿಯಿಂದ ಬೇಕಾದ ಜೆಲ್ಲಿ ತಯಾರಿಸಿ. ಇದು ತಣ್ಣಗಾದ ಮೇಲೆ, ಹೆಚ್ಚಿದ ಮಾವಿನ ಹೋಳಿನೊಂದಿಗೆ ಫ್ರಿಜ್‌ನಲ್ಲಿರಿಸಿ ಸೆಟ್‌ ಆಗಲು ಬಿಡಿ. ಮ್ಯಾಂಗೋ ಕ್ರೀಂ ಮೇಲೆ ಇದನ್ನು ಹಾಕಿ, ಮತ್ತೊಮ್ಮೆ ಸೆಟ್‌ ಆಗಲು ಫ್ರಿಜ್‌ನಲ್ಲಿರಿಸಿ. ಚೆನ್ನಾಗಿ ಕೂಲ್ ಆದ ಮೇಲೆ ಸವಿಯಲು ಕೊಡಿ.

ಬಟರ್‌ಸ್ಕಾಚ್‌ ಪುಡ್ಡಿಂಗ್‌

ಸಾಮಗ್ರಿ : 2 ಕಪ್‌ ಬಟರ್‌ಸ್ಕಾಚ್‌ ನಟ್ಸ್, 2 ಕಪ್‌ ಗಟ್ಟಿ ಹಾಲು, ಅರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, 4 ಚಮಚ ಚಾಕೋ ಚಿಪ್ಸ್, ಬಿಸ್ಕೆಟ್‌ ಚೂರು, 1 ಕಪ್‌ ವೆನಿಲಾ ಐಸ್‌ ಕ್ರೀಂ, ಅಲಂಕರಿಸಲು ಚೆನ್ನಾಗಿ ಕದಡಿದ ಕ್ರೀಂ, ಬಟರ್‌ಸ್ಕಾಚ್‌ ಐಸ್‌ ಕ್ರೀಂ.

ವಿಧಾನ : ಬಟರ್‌ಸ್ಕಾಚ್‌ ನಟ್ಸ್ ಮತ್ತು ಹಾಲನ್ನು ಒಟ್ಟಿಗೆ ಬೆರೆಸಿ ಕಾಯಿಸಬೇಕು. ಇದು ಮಂದ ಉರಿಯಲ್ಲಿ ಕುದಿಯಲಿ. ವೆನಿಲಾ ಎಸೆನ್ಸ್ ಬೆರೆಸಿ ಸಾಸ್‌ ಸಿದ್ಧಪಡಿಸಿ. ಕೆಳಗಿಳಿಸಿ ಆರಲು ಬಿಡಿ. 2-3 ಗ್ಲಾಸ್‌ ಬಟ್ಟಲಿಗೆ ಮೊದಲು ಬಿಸ್ಕೆಟ್‌ ಪದರ ಹರಡಿ, ಅದರ ಮೇಲೆ ವೆನಿಲಾ ಐಸ್‌ ಕ್ರೀಂ ಬರಲಿ. ಇದರ ಮೇಲೆ ತಣ್ಣಗಿನ ಸಾಸ್‌ ಬರಲಿ. ಇದರ ಮೇಲೆ ಕ್ರೀಂ ಮತ್ತು ಬಟರ್‌ ಸ್ಕಾಚ್‌ನಿಂದ ಅಂಲಕರಿಸಿ ಸವಿಯಲು ಕೊಡಿ.

ಕ್ಯಾರೆಮಲ್ ವೆನಿಲಾ ಡಿಲೈಟ್

ಸಾಮಗ್ರಿ : 1 ಕಪ್‌ ಗಟ್ಟಿ ಹಾಲು, 100 ಗ್ರಾಂ ಸಕ್ಕರೆ, 1 ಚಮಚ ಬೆಣ್ಣೆ, 1 ಕಪ್‌ ವೆನಿಲಾ ಐಸ್‌ ಕ್ರೀಂ, ಅಲಂಕರಿಸಲು ಬಟರ್‌ಸ್ಕಾಚ್‌ ಕ್ರಂಚ್‌.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನ್‌ ಬಿಸಿ ಮಾಡಿ. ಅದಕ್ಕೆ ಸಕ್ಕರೆ ಹಾಕಿ ಕರಗುವಂತೆ ಕೆದಕಿರಿ. ಇದಕ್ಕೆ ಬೆಣ್ಣೆ, ನಂತರ ಹಾಲು ಬೆರೆಸಿ ಮಂದ ಉರಿಯಲ್ಲಿ ಕೆದಕುತ್ತಾ ಸಾಸ್‌ ಸಿದ್ಧಪಡಿಸಿ. ಚಿತ್ರದಲ್ಲಿರುವಂತೆ 2-3 ಪುಡ್ಡಿಂಗ್‌ ಗ್ಲಾಸ್‌ಗಳಿಗೆ ಮೊದಲು ಈ ಸಾಸ್‌ನ್ನು ಸಮನಾಗಿ ಹರಡಿರಿ, ಆಮೇಲೆ ವೆನಿಲಾ ಐಸ್‌ ಕ್ರೀಂ ಬರಲಿ. ಇದರ ಮೇಲೆ ಮತ್ತೊಂದು ಪದರ ಸಾಸ್‌, ಕೊನೆಯಲ್ಲಿ ಬಟರ್‌ಸ್ಕಾಚ್‌ ಕ್ರಂಚ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಪಿಂಕ್‌ ಡಿವೈನ್‌

ಸಾಮಗ್ರಿ : ಅರ್ಧ ಕಪ್‌ ಮಿಕ್ಸ್ಡ್ ಫ್ರೂಟ್‌ ಜ್ಯಾಮ್,  3-4 ಚಮಚ ಕ್ರೀಂ, ಅರ್ಧ ಕಪ್‌ ಐಸ್‌ ವಾಟರ್‌, ಅರ್ಧ ಕಪ್‌ ಸ್ಟ್ರಾಬೆರಿ ಐಸ್‌ ಕ್ರೀಂ, ಅಲಂಕರಿಸಲು ಸ್ಟ್ರಾಬೆರಿ, ಚಿಪ್ಸ್.

ವಿಧಾನ : ಜ್ಯಾಮ್, ಐಸ್‌ ವಾಟರ್‌ ಮತ್ತು ಕ್ರೀಮನ್ನು ಒಟ್ಟಿಗೆ ಕುದಿಸಿ ಸಾಸ್‌ ರೆಡಿ ಮಾಡಿ. ಇದನ್ನು ಕೆಲವು ಪುಡ್ಡಿಂಗ್‌ ಗ್ಲಾಸುಗಳಿಗೆ ಹಾಕಿಡಿ. ಇದರ ಮೇಲೆ ಐಸ್‌ ಕ್ರೀಂ ಬರಲಿ. ಅದರ ಮೇಲೆ ಸಾಸ್‌ ಹಾಕಿಡಿ. ಇದರ ಮೇಲೆ ಸ್ಟ್ರಾಬೆರಿ ಚಿಪ್ಸಿನಿಂದ ಅಲಂಕರಿಸಿ ಸವಿಯಲು ಕೊಡಿ.

ಚಾಕಲೇಟ್‌ ಮೂಸ್‌

ಸಾಮಗ್ರಿ : 1 ಕಪ್‌ ಹಾಲು, 4 ಚಮಚ ಸಕ್ಕರೆ, 2 ತುಂಡು ಕುಕ್ಕಿಂಗ್‌ ಚಾಕಲೇಟ್‌, 4 ಚಮಚ ಕಾರ್ನ್‌ ಸ್ಟಾರ್ಚ್‌, 4 ಚಮಚ ಕ್ರೀಂ, 2 ಚಮಚ ಚಾಕಲೇಟ್‌ ಪೌಡರ್‌, ಅರ್ಧ ಚಮಚ ವೆನಿಲಾ ಎಸೆನ್ಸ್, ಅಲಂಕರಿಸಲು ತುರಿದ ಚಾಕಲೇಟ್‌, ಚೆರ್ರಿ ಹಣ್ಣು, 1 ಚಿಟಕಿ ಉಪ್ಪು.

ವಿಧಾನ : ಕಾರ್ನ್‌ ಸ್ಟಾರ್ಚ್‌, ಸಕ್ಕರೆ, ಚಾಕಲೇಟ್‌ ಪೌಡರ್‌, ಹಾಲು ಬೆರೆಸಿ ಮಂದ ಉರಿಯಲ್ಲಿ ಬಿಸಿ ಮಾಡಿ. ನಂತರ ಇದಕ್ಕೆ ಕುಕ್ಕಿಂಗ್‌ ಚಾಕಲೇಟ್‌ ಬೆರೆಸಿರಿ. ಅದು ಗಟ್ಟಿ ಆಗುವಂತೆ ಕೆದಕುತ್ತಿರಬೇಕು. ನಂತರ ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಇದಕ್ಕೆ ವೆನಿಲಾ ಎಸೆನ್ಸ್, ಕ್ರೀಂ ಬೆರೆಸಿಕೊಳ್ಳಿ. ನಂತರ ಸರ್ವಿಂಗ್‌ ಬೌಲ್ ಗೆ ಬೆರೆಸಿಕೊಂಡು, ಚಿತ್ರದಲ್ಲಿರುವಂತೆ ಚೆರ್ರಿ, ತುರಿದ ಚಾಕಲೇಟ್‌ನಿಂದ ಅಲಂಕರಿಸಿ, ಫ್ರಿಜ್‌ನಲ್ಲಿರಿಸಿ ತಣ್ಣಗೆ ಮಾಡಿ ಸವಿಯಲು ಕೊಡಿ.

ಚಾಕಲೇಟ್‌ ಫಜ್‌ ಪುಡ್ಡಿಂಗ್‌

ಸಾಮಗ್ರಿ : 4 ಚಮಚ ಮೆಲ್ಟೆಡ್‌ ಚಾಕಲೇಟ್‌, 4 ಚಮಚ ಕ್ರೀಂ, ಅರ್ಧ ಕಪ್‌ ಹಾಲು. 3-4 ಹನಿ ವೆನಿಲಾ ಎಸೆನ್ಸ್, ಅಲಂಕರಿಸಲು ಚಾಕೋ ಚಿಪ್ಸ್, ಚಾಕಲೇಟ್‌ ಕೇಕ್‌, ಮೇಲಿನ ಪದರಕ್ಕಾಗಿ ಒಂದಿಷ್ಟು ಕದಡಿದ ಕ್ರೀಂ.

ವಿಧಾನ : ಚಾಕಲೇಟ್‌, ಕ್ರೀಂ, ಹಾಲು, ವೆನಿಲಾ ಎಸೆನ್ಸ್ ಬೆರೆಸಿಕೊಂಡು ಮಂದ ಉರಿಯಲ್ಲಿ ಕುದಿಸಿ ಸಾಸ್‌ ರೆಡಿ ಮಾಡಿ. ಇದನ್ನು ಪುಡ್ಡಿಂಗ್‌ ಗ್ಲಾಸ್‌ಗಳಿಗೆ ತುಂಬಿಸಿ. ಇದರ ಮೇಲೆ ಚಾಕಲೇಟ್‌ ಕೇಕ್‌ನ ಒಂದು ಪದರ ಬರಲಿ, ಅದರ ಮೇಲೆ ಸಾಸ್‌ ಬರಲಿ. ಆಮೇಲೆ ಇದನ್ನು ವಿಪ್ಡ್ ಕ್ರೀಂ, ಚಾಕೋ ಚಿಪ್ಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.

ಹಾಟ್‌ ಚಾಕಲೋಟ್‌ ಫಜ್‌

ಸಾಮಗ್ರಿ : 1 ಕಪ್‌ ಹಾಟ್‌ ಫ್ರೂಟ್‌ ಸಾಸ್‌, 1 ಕಪ್‌ ವೆನಿಲಾ ಐಸ್‌ ಕ್ರೀಂ, 1 ಕಪ್‌ ಚಾಕಲೇಟ್‌ ಐಸ್‌ ಕ್ರೀಂ, 2 ಚಮಚ ರೋಸ್ಟೆಡ್‌ ನಟ್ಸ್.

ವಿಧಾನ : ಒಂದು ದೊಡ್ಡ ಗ್ಲಾಸಿಗೆ ಹಾಟ್‌ ಫಜ್‌ ಸಾಸ್‌ ಹಾಕಿಡಿ. ನಂತರ ಇದಕ್ಕೆ ವೆನಿಲಾ ಐಸ್‌ ಕ್ರೀಂ, ಚಾಕ್‌ಲೇಟ್‌ ಐಸ್‌ ಕ್ರೀಂ ಹಾಕಬೇಕು. ಎಲ್ಲಕ್ಕಿಂತ ಮೇಲೆ ಫಜ್‌ ಸಾಸ್‌ ಬರಲಿ. ಇದರ ಮೇಲೆ ನಟ್ಸ್ ಉದುರಿಸಿ ಸವಿಯಲು ಕೊಡಿ.

ಬನಾನಾ ಶಾಟ್ಸ್

ಸಾಮಗ್ರಿ : 3-4 ಮಾಗಿದ ಬಾಳೆಹಣ್ಣು, 1 ಕಪ್‌ ರೆಡಿ ವೆನಿಲಾ ಕಸ್ಟರ್ಡ್‌, ಅರ್ಧ ಕಪ್‌ ಕದಡಿದ ಕ್ರೀಂ, ಅಲಂಕರಿಸಲು ಬಾಳೆಯ ಚಾಕೋ ಚಿಪ್ಸ್.

ವಿಧಾನ : ಬಾಳೆಹಣ್ಣಿನ ತುಂಡುಗಳನ್ನು ಪುಡ್ಡಿಂಗ್‌ ಗ್ಲಾಸ್‌ಗೆ ಹಾಕಿಡಿ. ಇದರ ಮೇಲೆ ವೆನಿಲಾ ಕಸ್ಟರ್ಡ್‌ ಹಾಕಬೇಕು. ಆಮೇಲೆ ಇದಕ್ಕೆ ಒಂದು ಪದರ ಕದಡಿದ ಕ್ರೀಂ ಬರಲಿ. ಆಮೇಲೆ ಇದರ ಮೇಲೆ ಮತ್ತೆ ಬಾಳೆಹಣ್ಣಿನ ತುಂಡು, ಕದಡಿದ ಕ್ರೀಂ, ಕೊನೆಯಲ್ಲಿ ಬಾಳೆ ಚಾಕೋ ಚಿಪ್ಸ್ ಹಾಕಿ ಸವಿಯಲು ಕೊಡಿ.

Tags:
COMMENT