ರಾಘವೇಂದ್ರ ಅಡಿಗ ಎಚ್ಚೆನ್.

ದೈವಕ್ಕೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವ ನಟ ರಣವೀರ್ ಸಿಂಗ್ ಅವರಿಗೆ ಇಂದು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಂದಿನ ಆದೇಶದವರೆಗೆ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ಸೂಚನೆ ನೀಡಿದೆ. ಆದರೆ ಇದೇ ವೇಳೆ ನ್ಯಾಯಾಲಯ ರಣವೀರ್ ಸಿಂಗ್ ಅವರನ್ನು ಕಠಿಣವಾಗಿ ತರಾಟೆಗೆ ತೆಗೆದುಕೊಂಡಿದೆ.

ರಣವೀರ್ ಸಿಂಗ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಾಲಯ, “ಯಾರೇ ಆಗಿರಲಿ, ಜನರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಸಲ್ಲದು. ಸೂಪರ್ ಸ್ಟಾರ್ ಆಗಿರುವವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇದನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ” ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿತು.

ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದ ವೇಳೆ ‘ಕಾಂತಾರ’ ಚಿತ್ರದ ಕುರಿತು ಮಾತನಾಡುವ ಸಂದರ್ಭದಲ್ಲಿ ರಣವೀರ್ ಸಿಂಗ್ ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಟ Rishab Shetty ಅವರ ಅಭಿನಯವನ್ನು ಹೊಗಳುವ ಭರದಲ್ಲಿ ದೈವವನ್ನು “ಮಹಿಳಾ ದೆವ್ವ” ಎಂದು ಉಲ್ಲೇಖಿಸಿದ್ದ ಆರೋಪದ ಹಿನ್ನೆಲೆಯಲ್ಲಿ, ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅರ್ಜಿಯ ವಿಚಾರಣೆ ವೇಳೆ ರಣವೀರ್ ಸಿಂಗ್ ಪರ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ರಿಷಬ್ ಶೆಟ್ಟಿ ಅವರ ಅಭಿನಯದ ಕುರಿತು ಪ್ರಶಂಸೆಯ ಉದ್ದೇಶದಿಂದಲೇ ಹೇಳಿಕೆ ನೀಡಲಾಗಿದೆ ಎಂದು ತಿಳಿಸಿದರು. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ, ಹೇಳಿಕೆ ಕುರಿತಂತೆ ಕ್ಷಮೆಯನ್ನೂ ಕೋರಲಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೋರ್ಟ್‌ಗೆ ಭರವಸೆ ನೀಡಿದರು.

ಇದೇ ವೇಳೆ ದೂರುದಾರರ ಪರ ವಕೀಲರು, “ರಣವೀರ್ ಸಿಂಗ್ ಅವರ ಪತ್ನಿ ಕನ್ನಡದವರಾಗಿದ್ದಾರೆ. ಕನ್ನಡ ಹಾಗೂ ಇಲ್ಲಿನ ಸಂಸ್ಕೃತಿ, ಭಾವನೆಗಳನ್ನು ತಿಳಿದುಕೊಂಡು ಮಾತನಾಡಬೇಕಿತ್ತು” ಎಂದು ವಾದ ಮಂಡಿಸಿದರು.

ಎರಡೂ ಪಾರ್ಟಿಗಳ ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ, ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಸೂಚಿಸಿ, ಅರ್ಜಿಯ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿತು.

ಪೀಠದ ತೀವ್ರ ಅಭಿಪ್ರಾಯ

ನ್ಯಾಯಾಲಯ ತನ್ನ ಅಭಿಪ್ರಾಯದಲ್ಲಿ, “ಸೂಪರ್ ಸ್ಟಾರ್ ಆದರೂ ಕಾನೂನಿಗಿಂತ ಮೇಲಲ್ಲ. ಇಲ್ಲಿ ದೇವತೆಯ ಪಾತ್ರವನ್ನು ರಿಷಬ್ ಶೆಟ್ಟಿ ನಿಭಾಯಿಸಿದ್ದಾರೆ. ದೈವವನ್ನು ದೆವ್ವ ಎಂದು ಕರೆಯುವುದು ಜನರ ಧಾರ್ಮಿಕ ಭಾವನೆಗಳಿಗೆ ಗಂಭೀರವಾಗಿ ಘಾಸಿ ಮಾಡುತ್ತದೆ. ಜನರ ಮೇಲೆ ಪ್ರಭಾವ ಬೀರುವ ಕಲಾವಿದನಾಗಿ ರಣವೀರ್ ಸಿಂಗ್ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ಕ್ಷಮೆ ಕೇಳಿದರೆ ಹೇಳಿದ ಮಾತುಗಳು ಅಳಿದುಹೋಗುವುದಿಲ್ಲ. ಜನ ಮರೆತರೂ ಇಂಟರ್‌ನೆಟ್ ಮರೆಯುವುದಿಲ್ಲ. ವೇದಿಕೆಯಲ್ಲಿ ಮಾತನಾಡುವಾಗ ಕಲಾವಿದರು ಎಚ್ಚರಿಕೆಯಿಂದಿರಬೇಕು. ಈ ವಿಚಾರವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಕಠಿಣ ಸೂಚನೆ ನೀಡಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ