ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದು, ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆ ಜುಲೈ 5 ರಂದು ವಿವಾಹವಾಗಲಿದ್ದಾರೆ.
ತಮ್ಮ ಹತ್ತಿರದ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸುವ ಖಾಸಗಿ ಸಮಾರಂಭದಲ್ಲಿ ಆಮೀರ್ ಹಾಗೂ ಗೌರಿ ಸರಳವಾಗಿ ವಿವಾಹವಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ವಿವಾಹ ಮುಂಬೈನ ಬಾಂದ್ರಾದ ಆಮೀರ್ ಅವರ ನಿವಾಸದಲ್ಲೇ ನಡೆಯಲಿದೆ. ಬೆಳಗ್ಗೆ ಇವರಿಬ್ಬರ ಮದುವೆ ನೋಂದಣಿ ಪ್ರಕ್ರಿಯೆ ಮನೆಯಲ್ಲೇ ಜರುಗಲಿದೆ. ವಿಶೇಷ ವಿವಾಹ ಕಾಯ್ದೆಯಡಿ ಇಬ್ಬರೂ ಕಾನೂನುಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದಾದ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ ಎನ್ನಲಾಗಿದೆ.
ಮದುವೆಯ ಅತಿಥಿಗಳ ಪಟ್ಟಿಯನ್ನು ಸೀಮಿತಗೊಳಿಸಲಾಗಿದ್ದು, 150 ಜನರು ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಆಮೀರ್ ಮತ್ತು ಗೌರಿ ಇಬ್ಬರ ಕುಟುಂಬದ ಅತ್ಯಂತ ಹತ್ತಿರದ ಸದಸ್ಯರು ಮತ್ತು ಆಯ್ದ ಕೆಲವೇ ಕೆಲವು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ವಿಶೇಷ ದಿನದ ಸಂಭ್ರಮದಲ್ಲಿ ಭಾಗಿಯಾಗಲು ಕೆಲವು ಸಂಬಂಧಿಕರು ವಿದೇಶಗಳಿಂದಲೂ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಆಮೀರ್ ಅವರ ನಾಲ್ಕು ಮಕ್ಕಳು ಕೂಡ ಆಚರಣೆಯಲ್ಲಿ ಭಾಗವಹಿಸಲಿದ್ದು, ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೌರಿ ಸ್ಪ್ರಾಟ್ ಅವರು ಮೂಲತಃ ಬೆಂಗಳೂರಿನವರು. ಅವರ ಜೀವನದ ಬಹುಪಾಲು ಸಮಯವನ್ನು ಅವರು ಬೆಂಗಳೂರಿನಲ್ಲಿಯೇ ಕಳೆದಿದ್ದಾರೆ. ಬೆಂಗಳೂರಿನಲ್ಲಿ ಪ್ರಸಿದ್ಧ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಮಗಳು ಗೌರಿ.
ಗೌರಿ ತಮ್ಮ ಶಾಲಾ ಶಿಕ್ಷಣವನ್ನು ಬ್ಲೂ ಮೌಂಟೇನ್ ಶಾಲೆಯಲ್ಲಿ ಮುಗಿಸಿದರು. ಆನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ ಅವರು, 2004 ರಲ್ಲಿ ಲಂಡನ್‌ನ ಆರ್ಟ್ಸ್ ವಿಶ್ವವಿದ್ಯಾಲಯದಲ್ಲಿ 'FDA ಸ್ಟೈಲಿಂಗ್ ಮತ್ತು ಫೋಟೋಗ್ರಫಿ' ಎಂಬ ಫ್ಯಾಷನ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಪ್ರಸ್ತುತ ಅವರು ಮುಂಬೈನಲ್ಲಿ ಪ್ರಸಿದ್ಧ 'BBlunt' ಸಲೂನ್ ನಡೆಸುತ್ತಿದ್ದಾರೆ. ಫ್ಯಾಷನ್, ಸ್ಟೈಲಿಂಗ್ ಮತ್ತು ಬ್ಯೂಟಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.





