ಟೇಸ್ಟಿ ಟೇಸ್ಟಿ ಪಾವ್ ಭಾಜಿ
ಸಾಮಗ್ರಿ : 250 ಗ್ರಾಂ ಸಿಪ್ಪೆ ಹೆರೆದ ನೀಟಾಗಿ ತುರಿದ ಸೋರೆಕಾಯಿ, 2 ಕ್ಯಾರೆಟ್ ತುರಿ, 1 ಸಣ್ಣ ಹೂಕೋಸು, 8-10 ಬೀನ್ಸ್, ಅರ್ಧ ಕಪ್ ಹಸಿ ಬಟಾಣಿ ಕಾಳು, 250 ಗ್ರಾಂ ಹುಳಿ ಟೊಮೇಟೊ ಪೇಸ್ಟ್, 4-5 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪಾವ್ ಭಾಜಿ ಮಸಾಲ, ಟೊಮೇಟೊ ಕೆಚಪ್, ಪನೀರ್ ಕ್ಯೂಬ್ಸ್, ಒಂದಿಷ್ಟು ಹೆಚ್ಚಿದ ಕೂ.ಸೊಪ್ಪು, ಪುದೀನಾ, ಕರಿಬೇವು, 6 ಪಾವ್ ಬನ್, ಅರ್ಧ ಸೌಟು ಬೆಣ್ಣೆ.
ವಿಧಾನ : ಎಲ್ಲಾ ತರಕಾರಿ ಹೆಚ್ಚಿ, ಬೇಕಾದ್ದು ತುರಿದಿಡಿ. ಈಗ ಕುಕ್ಕರಿಗೆ ಅರ್ಧ ಕಪ್ ನೀರು ಬೆರೆಸಿ ತರಕಾರಿ ಬೇಯಿಸಿ. ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಈರುಳ್ಳಿ, ಹೂಕೋಸು, ಸೋರೆ, ಕ್ಯಾರೆಟ್ ತುರಿ ಹಾಕಿ ಬಾಡಿಸಿ. ನಂತರ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಮಸಾಲೆ ಸೇರಿಸಿ ಕೆದಕಬೇಕು. ಜೊತೆಗೆ ಬೇರೆ ಬೇಯಿಸಿಕೊಂಡ ಬೀನ್ಸ್, ಬಟಾಣಿ, ಪನೀರ್ ಸಹ ಸೇರಿಸಿ ಕೈಯಾಡಿಸಿ. ಹೀಗೆ ಎಲ್ಲ ಸಿದ್ಧಗೊಂಡಾಗ ಸ್ಟೀಲ್ ಮ್ಯಾಶರ್ ಬಳಸಿ ಮ್ಯಾಶ್ ಮಾಡಿ. ಮತ್ತೆ ಕೆದಕುತ್ತಾ ಟೊಮೇಟೊ ಕೆಚಪ್, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು ಸೇರಿಸಿ. ನಂತರ ತವಾ ಬಿಸಿ ಮಾಡಿ, ಬೆಣ್ಣೆ ಸವರಬೇಕು. ಇದರ ಮೇಲೆ ಪಾವ್ ಭಾಜಿ ಮಸಾಲೆ ಉದುರಿಸಿ, ಗುಂಡಗೆ ಕತ್ತರಿಸಿದ ಪಾವ್ ಬನ್ ಇರಿಸಿ, ಬಿಸಿ ಮಾಡಿ. ಇವನ್ನು ಕೆಳಗಿಳಿಸಿ, ಮ್ಯಾಶ್ ಮಾಡಿದ ಮಸಾಲೆ ತುಂಬಿಸಿ, ಸವಿಯಿರಿ.
ಕಾರ್ನ್ ಕೋನ್
ಕೋನ್ ಸಾಮಗ್ರಿ : ಅರ್ಧ ಕಪ್ ಮೈದಾ, ತುಸು ತುಪ್ಪ, ಓಮ, ಉಪ್ಪು, ಕರಿಯಲು ಎಣ್ಣೆ, ಕೋನ್ ಅಚ್ಚು.
ಕಾರ್ನ್ ಮಿಶ್ರಣದ ಸಾಮಗ್ರಿ : ಅರ್ಧ ಕಪ್ ಬೆಂದ ಸಿಹಿ ಕಾರ್ನ್, ಅರ್ಧ ಕಪ್ ಬೆಂದ ಹಸಿರು ಬಟಾಣಿ, ಹೆಚ್ಚಿದ ಟೊಮೇಟೊ, ಈರುಳ್ಳಿ, ತುಸು ಬೆಣ್ಣೆ, ಹೆಚ್ಚಿದ ಕೊ.ಸೊಪ್ಪು, ಸಲಾಡ್ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ನಿಂಬೆರಸ.
ವಿಧಾನ : ಮೈದಾಗೆ ಓಮ, ಉಪ್ಪು, ತುಸು ನೀರು ಬೆರೆಸಿ ಮೃದು ಪೂರಿ ಹಿಟ್ಟಿನಂತೆ ಕಲಸಿಡಿ. ಇದಕ್ಕೆ ತುಪ್ಪ ಸವರಿ ಚೆನ್ನಾಗಿ ನಾದಿಕೊಳ್ಳಿ ನೆನೆಯಲು ಬಿಡಿ. ನಂತರ ಇದರಿಂದ 2 ಭಾಗ ಮಾಡಿ, ಉದ್ದಕ್ಕೆ ಬರುವಂತೆ ತುಸು ಲಟ್ಟಿಸಿ. ಇದರ ಮಧ್ಯೆ ಮಧ್ಯೆ ಪೋರ್ಕ್ ನಿಂದ ಚುಚ್ಚಿ ರಂಧ್ರ ಮಾಡಿ, 4 ಭಾಗ ಮಾಡಿ. ಪ್ರತಿ ಭಾಗವನ್ನೂ ಅಚ್ಚಿಗೆ ಹಾಕಿ, ಅಂಚು ಬಿಡದಂತೆ, ಒದ್ದೆ ಕೈಯಿಂದ ಅಂಟಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಅಚ್ಚು ಅದಕ್ಕೆ ಹಾಕಿ ಮಂದ ಉರಿಯಲ್ಲಿ ಕರಿಯಿರಿ. ಒಂದು ಬಟ್ಟಲಿಗೆ ಸಿಹಿ ಕಾರ್ನ್ ಜೊತೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು, ನಿಂಬೆ ರಸ ಹಿಂಡಿಕೊಳ್ಳಿ. ಪ್ರತಿ ಕೋನಿಗೂ ತುಸು ಸಲಾಡ್ ಎಲೆ ಹಾಕಿ, ಅದರ ಮೇಲೆ ಚಿತ್ರದಲ್ಲಿರುವಂತೆ ಮಿಶ್ರಣ ತುಂಬಿಸಿ. ಸ್ಪೈಸಿ ಕಾರ್ನ್ ವಿತ್ ಕೋನ್ ರೆಡಿ! ತಕ್ಷಣ ಸವಿಯಲು ಕೊಡಿ.