ಬಾದಾಮಿ ಕಟ್‌ಲೆಟ್
ಸಾಮಗ್ರಿ : 2 ಕಪ್ ಬೇಯಿಸಿ ಮಸೆದ ಆಲೂ, 1 ದೊಡ್ಡ ಕಪ್ ಬಾದಾಮಿ ಚೂರು, ತುಸು ಹೆಚ್ಚಿದ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, 1-1 ಕಪ್ ರವೆ ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಕರಿಯಲು ಎಣ್ಣೆ.
ವಿಧಾನ : ಬಾದಾಮಿ, ಎಣ್ಣೆ ಹೊರತುಪಡಿಸಿ ಹೆಚ್ಚಿದ ಎಲ್ಲಾ ಸಾಮಗ್ರಿ ಸೇರಿಸಿ ಪಕೋಡಾ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ. ಅದನ್ನು ಚಿತ್ರದಲ್ಲಿರುವಂತೆ ತಟ್ಟಿಕೊಂಡು, ಬಾದಾಮಿ ಪುಡಿಯಲ್ಲಿ ಹೊರಳಿಸಿ. ಹೀಗೆ ಎಲ್ಲಾ ಸಿದ್ಧಪಡಿಸಿದ ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಡ್ರೈಫ್ರೂಟ್ಸ್ ಲಡ್ಡು
ಸಾಮಗ್ರಿ : 500 ಗ್ರಾಂ ಬೆಲ್ಲದ ಪುಡಿ, ಗೋಡಂಬಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಖರ್ಜೂರ, ಅಖರೋಟ್ ಚೂರು (ಅರ್ಧರ್ಧ ಕಪ್), 1 ದೊಡ್ಡ ಗಿಟುಕು ಕೊಬ್ಬರಿ ತುರಿ, ಅರ್ಧರ್ಧ ಕಪ್ ಖೋವಾ, ತುಪ್ಪ, ತುಸು ಏಲಕ್ಕಿ ಪುಡಿ, ಪಚ್ಚ ಕರ್ಪೂರ.
ವಿಧಾನ : ಮೊದಲು ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನು ಹುರಿದು ಬೇರೆಯಾಗಿಡಿ. ನಂತರ ಇದಕ್ಕೆ ಮಸೆದ ಖೋವಾ ಹಾಕಿ ಕೆಳಗಿಳಿಸಿ. ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ ಬೆಲ್ಲ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದು ಪೂರ್ತಿ ಕರಗಿ ಪಾಕದ ಹಾಗೆ ಆದಾಗ ಕೆಳಗಿಳಿಸಿ ತುಸು ಆರಲು ಬಿಡಿ. ನಂತರ ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ಕೆದಕುತ್ತಾ ಜಿಡ್ಡು ಸವರಿದ ಕೈಯಿಂದ ಸ್ವಲ್ಪವೇ ಮಿಶ್ರಣ ತೆಗೆದುಕೊಂಡು ಉಂಡೆ ಕಟ್ಟಿ. ಟೇಸ್ಟಿ ಲಡ್ಡು ರೆಡಿ!
ಬಾದಾಮಿ ಕುಕೀಸ್
ಸಾಮಗ್ರಿ : 250 ಗ್ರಾಂ ಮೈದಾ, 2 ಸಣ್ಣ ಚಮಚ ಬೇಕಿಂಗ್ ಪೌಡರ್, ಒಂದಿಷ್ಟು ಬಾದಾಮಿ, ಗೋಡಂಬಿ, ಪಿಸ್ತಾ ಚೂರು, ಬೆಣ್ಣೆ ಪುಡಿಸಕ್ಕರೆ (ತಲಾ 200 ಗ್ರಾಂ), ಅರ್ಧ ಕಪ್ ಹಾಲು, ಚಿಟಕಿ ಉಪ್ಪು.
ವಿಧಾನ : ಮೈದಾಗೆ ಬೇಕಿಂಗ್ ಪೌಡರ್ ಬೆರೆಸಿ ಜರಡಿಯಾಡಿ. ಬೆಣ್ಣೆ ತುಸು ಬಿಸಿ ಮಾಡಿ ಕರಗಿಸಿಕೊಂಡು ಇದಕ್ಕೆ ಹಾಲು, ಪುಡಿಸಕ್ಕರೆ ಜೊತೆ ಸೇರಿಸಿ ಮೃದುವಾದ ಮಿಶ್ರಣ ಕಲಸಿ ನಂತರ ಇನ್ನಷ್ಟು ಬೆಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಈ ಮಿಶ್ರಣ ಅರ್ಧ ಗಂಟೆ ನೆನೆಯಲು ಬಿಟ್ಟು, ನಂತರ ಸಣ್ಣ ಉಂಡೆಗಳಾಗಿಸಿ, ಅಂಗೈ ಮೇಲೆ ತಟ್ಟಿಕೊಳ್ಳಿ. ಇದಕ್ಕೆ ಕಟರ್‌ನಿಂದ ಸೂಕ್ತ ಆಕಾರ ನೀಡಿ. ಇದರ ಮೇಲೆ ಗೋಡಂಬಿ, ಪಿಸ್ತಾ ಚೂರು ಉದುರಿಸಿ ತುಸು ಅದುಮಿರಿ. ಒಂದು ಬೇಕಿಂಗ್ ಟ್ರೇಗೆ ಬೆಣ್ಣೆ ಸವರಿಡಿ. ಇದರ ಮೇಲೆ ಈ ಕುಕೀಸ್ ಜೋಡಿಸಿಕೊಂಡು ಮೊದಲೇ ಪ್ರೀಹೀಟ್ ಮಾಡಿದ ಓವನ್‌ನಲ್ಲಿ 180 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್ ಮಾಡಿ, ಆಫ್ ಮಾಡಿ. 10 ನಿಮಿಷ ಬಿಟ್ಟು ಹೊರತೆಗೆದು ಆರಲು ಬಿಡಿ. ಏರ್ ಟೈಟ್ ಕಂಟೇನರ್‌ನಲ್ಲಿ ತುಂಬಿರಿಸಿ ಬೇಕಾದಾಗ ಸವಿಯಿರಿ.