ಸಾಮಗ್ರಿ : 3-4 ರಸಭರಿತ ಹೇರಳೆಕಾಯಿ, ರುಚಿಗೆ ತಕ್ಕಷ್ಟು ಕಲ್ಲುಪ್ಪು, ಖಾರ, ಉದ್ದಕ್ಕೆ ಸೀಳಿದ ಹಸಿ ಮೆಣಸು, ಒಗ್ಗರಣೆಗೆ ಬೇಕಾದಂತೆ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ಅರಿಶಿನ, ಅರ್ಧ ಸೌಟು ಎಳ್ಳೆಣ್ಣೆ.
ವಿಧಾನ : ಹೇರಳೆಕಾಯಿ ಒರೆಸಿಕೊಂಡು, ಕೈಗೆ ತುಸು ಎಣ್ಣೆ ಸವರಿಕೊಂಡು (ಲೇಶ ಮಾತ್ರ ಎಲ್ಲೂ ನೀರು ತಗುಲಬಾರದು) ಇದನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ. ನೀಟಾಗಿ ಒರೆಸಿ, ಬಿಸಿಲಲ್ಲಿ ಕಾಯಿಸಿದ ಬಾಟಲಿಗೆ ಇದನ್ನು ತುಂಬಿಸಿ, ಮೇಲೆ ಅರ್ಧ ಹಿಡಿ ಉಪ್ಪು, ಹಸಿ ಮೆಣಸು ಹಾಕಿ 1 ವಾರ ಬಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಉಳಿದೆಲ್ಲ ಮಸಾಲೆ ಸೇರಿಸಿ, ಕೆದಕಿ ಕೆಳಗಿಳಿಸಿ ಆರಿಸಿ. ನಂತರ ಬಾಟಲಿಯ ಕಾಯಿಯನ್ನು ಇದಕ್ಕೆ ಬೆರೆಸಿ ಕಲಸಿಕೊಳ್ಳಿ. ಮತ್ತೆ ಬಾಟಲಿಗೆ ತುಂಬಿಸಿ, 1 ವಾರ ಬಿಟ್ಟು ನಂತರ ಬಳಸಲು ಆರಂಭಿಸಿ. ಇದು 1 ವರ್ಷವಾದರೂ ಕೆಡುವುದಿಲ್ಲ. ಪ್ರತಿ ಸಲ ತೆಗೆಯುವಾಗಲೂ, ತೇವಾಂಶ ಇಲ್ಲದ ಮರದ ಸೌಟಿನಿಂದ ಹೋಳನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಳಸಿಕೊಳ್ಳಿ.

ಪಾಲಕ್ ಪಕೋಡ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ 1 ಕಂತೆ ಪಾಲಕ್ ಸೊಪ್ಪು, 2 ಈರುಳ್ಳಿ, ಜಜ್ಜಿದ 8-10 ಎಸಳು ಬೆಳ್ಳುಳ್ಳಿ, 4-5 ಹಸಿ ಮೆಣಸು, 1 ತುಂಡು ಹಸಿಶುಂಠಿ, ಕರಿಬೇವು, ಪುದೀನಾ, ಕೊ.ಸೊಪ್ಪು, ಉಪ್ಪು, ಖಾರ, ಓಮ, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ, ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದನ್ನು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಹಾಕುತ್ತಾ, ಹೊಂಬಣ್ಣ ಬರುವಂತೆ ಗರಿಗರಿಯಾಗಿ ಪಕೋಡ ಕರಿದು, ಟೊಮೇಟೊ ಸಾಸ್, ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಿರಿ.

ಟೇಸ್ಟಿ ಭುರ್ಜಿ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 2 ಹುಳಿ ಟೊಮೇಟೊ, ತಲಾ 2-2 ಚಮಚ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್ ಹಸಿ ಬಟಾಣಿ, 1 ತುಂಡು ಶುಂಠಿ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಛೋಲೆ ಮಸಾಲೆ, ಗರಂಮಸಾಲೆ, ಧನಿಯಾಪುಡಿ, ಒಂದಿಷ್ಟು ಕೊ.ಸೊಪ್ಪು.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ 3 ಬಗೆಯ ಕ್ಯಾಪ್ಸಿಕಂ, ಬಟಾಣಿ, ಟೊಮೇಟೋ ಹಾಕಿ ಬಾಡಿಸಬೇಕು. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಕಡಲೆಹಿಟ್ಟಿಗೆ ತುಸು ನೀರು ಬೆರೆಸಿ, ಬೋಂಡ ಮಿಶ್ರಣದಂತೆ ಗಟ್ಟಿ ಕಲಸಿಕೊಳ್ಳಿ. ಇದನ್ನು ನೇರವಾಗಿ ಬಾಣಲೆಗೆ ಹಾಕಿ, ಮಂದ ಉರಿಯಲ್ಲಿ ಬೇಗ ಬೇಗ ಕೈಯಾಡಿಸಿ. 3-4 ನಿಮಿಷ ಬಿಟ್ಟು ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ, ನಿಂಬೆ ಹಣ್ಣು ಹಿಂಡಿಕೊಂಡು ಸವಿಯಲು ಕೊಡಿ. ಇದನ್ನು ಸ್ಟಾರ್ಟರ್ ಆಗಿಯೂ ಬಳಸಿಕೊಳ್ಳಬಹುದು.





