ಸಾಮಗ್ರಿ : 1 ಕಪ್ ಸಣ್ಣ ರವೆ, 3 ಕಪ್ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ತುಪ್ಪ, ಅನಾನಸ್ ತುರಿ, ಡ್ರೈ ಫ್ರೂಟ್ಸ್, ಏಲಕ್ಕಿಪುಡಿ, ಪೈನಾಪಲ್ ಎಸೆನ್ಸ್, ಅಲಂಕರಿಸಲು ಗುಲಾಬಿ ದಳ, ಗೋಡಂಬಿ, ಬಾದಾಮಿ ಚೂರು.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರುಗಳನ್ನು ಹುರಿದು ಪಕ್ಕಕ್ಕಿಡಿ. ಇದರಲ್ಲಿ ರವೆ ಹಾಕಿ ಹುರಿದು ಬೇರೆಯಾಗಿಡಿ. ನಂತರ ಅದೇ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅನಾನಸ್ ತುರಿ ಹಾಕಿ ಬಾಡಿಸಿ. ಇದಕ್ಕೆ ಕಾದಾರಿದ ಹಾಲು ಬೆರೆಸಿ, ಚೆನ್ನಾಗಿ ಕುದಿಸುತ್ತಾ ಅನಾನಸ್ ಬೇಯಿಸಿ. ಇದಕ್ಕೆ ಏಲಕ್ಕಿ ಪುಡಿ, ಎಸೆನ್ಸ್, ಡ್ರೈ ಫ್ರೂಟ್ಸ್, ಸಕ್ಕರೆ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ನಂತರ ಮಂದ ಉರಿ ಮಾಡಿಕೊಂಡು, ಎಡಗೈಯಿಂದ ರವೆ ಸೇರಿಸುತ್ತಾ, ಬಲಗೈಯಿಂದ ಬೇಗ ಬೇಗ ಮಿಕ್ಸ್ ಮಾಡಿ. ನಡುನಡುವೆ ತುಪ್ಪ ಬೆರೆಸುತ್ತಾ, ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿ. ಇದನ್ನು ಕೆಳಗಿಳಿಸಿ, ಚಿತ್ರದಲ್ಲಿರುವಂತೆ ಮತ್ತಷ್ಟು ಗೋಡಂಬಿ, ಪಿಸ್ತಾ ಚೂರು, ಗುಲಾಬಿ ದಳಗಳಿಂದ ಅಲಂಕರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಸ್ವಾದಿಷ್ಟ ಮೋದಕ
ಹೂರಣದ ಸಾಮಗ್ರಿ : 1 ಕಪ್ ಬೆಲ್ಲದ ಪುಡಿ, 1 ದೊಡ್ಡ ಗಿಟುಕು ತೆಂಗಿನ ತುರಿ, ತುಸು ಏಲಕ್ಕಿ ಪುಡಿ, ತುಪ್ಪ, ಡ್ರೈ ಫ್ರೂಟ್ಸ್ ಚೂರು.
ಕಣಕದ ಸಾಮಗ್ರಿ : 1 ಕಪ್ ಅಕ್ಕಿ ಹಿಟ್ಟು ಅಗತ್ಯವಿದ್ದಷ್ಟು ತುಪ್ಪ, ನೀರು, ಉಪ್ಪು.
ವಿಧಾನ : ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಮಂದ ಉರಿ ಮಾಡಿಕೊಂಡು, ಇದಕ್ಕೆ ಬೆಲ್ಲದ ಪುಡಿ ಹಾಕಿ ಕೆದಕಬೇಕು. ನಂತರ ತುಸು ನೀರು ಬೆರೆಸಿ ಸಣ್ಣಗೆ ಕುದಿಸಿರಿ. ಕೆಳಗಿಳಿಸಿ ಆರಿಸಿ, ಇದರಿಂದ ಕಲ್ಮಶ ಬೇರ್ಪಡಿಸಿ. ಮತ್ತೆ ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ, ಈ ಪಾಕ ಹಾಕಿ ಕುದಿಸಬೇಕು. ನಂತರ ತೆಂಗಿನ ತುರಿ ಹಾಕಿ ಗಟ್ಟಿ ಆಗುವವರೆಗೂ ಕೆದಕಬೇಕು. ಆಮೇಲೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್, ಹಾಕಿ (ನಡುನಡುವೆ ತುಪ್ಪ ಬೆರೆಸುತ್ತಾ) ಎಲ್ಲವೂ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ, ಆರಲು ಬಿಡಿ. ಈಗ ಕಣಕ ತಯಾರಿಸಲು, ಒಂದು ಸ್ಟೀಲ್ ಪಾತ್ರೆಯಲ್ಲಿ 1 ಕಪ್ ನೀರು ಬಿಸಿ ಮಾಡಿ. ಅದು ಕುದಿ ಬಂದಂತೆ, ಉಪ್ಪು, ತುಪ್ಪ ಸೇರಿಸಿ ನಂತರ ಅಕ್ಕಿ ಹಿಟ್ಚನ್ನು ಎಡಗೈಯಿಂದ ನಿಧಾನವಾಗಿ ಬೆರೆಸುತ್ತಾ, ಬಲಗೈಯಿಂದ ಬೇಗ ಬೇಗ ಕೆದಕಬೇಕು. ಗಂಟಾಗದಂತೆ ನಡುನಡುವೆ ತುಪ್ಪ ಬೆರೆಸುತ್ತಾ ಇರಿ. ಮುಚ್ಚಳ ಮುಚ್ಚಿರಿಸಿ 1-2 ನಿಮಿಷ ಹದನಾಗಿ ಬೇಯಿಸಿ. ಕೊನೆಯಲ್ಲಿ ತುಪ್ಪ ಬೆರೆಸಿ ಕೆದಕಿ ಕೆಳಗಿಳಿಸಿ. ಇದು ಸುಮಾರಾಗಿ ಆರಿದಾಗ, ಕೈಗೆ ಜಿಡ್ಡು ಸವರಿಕೊಂಡು, ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಅದನ್ನು ಮೈದಾಹಿಟ್ಟಿನ ನೆರವಿನಿಂದ ಲಟ್ಟಿಸಿ. ನಂತರ ಅದರಲ್ಲಿ 2-3 ಚಮಚ ಬೆಲ್ಲದ ಹೂರಣ ತುಂಬಿಸಿ. ಚಿತ್ರದಲ್ಲಿರುವಂತೆ ನೀಟಾಗಿ ಇದಕ್ಕೆ ಮೋದಕದ ಆಕಾರ ಕೊಡಿ. ನಂತರ ಇಡ್ಲಿ ತಟ್ಟೆಗಳಿಗೆ ಜಿಡ್ಡು ಸವರಿ, ಅದರಲ್ಲಿ ಇವನ್ನು ಜೋಡಿಸಿಕೊಂಡು, 10-15 ನಿಮಿಷ ಆವಿಯಲ್ಲಿ ಬೇಯಿಸಿ. ಬಿಸಿ ಇರುವಾಗಲೇ ಇದನ್ನು ತಟ್ಟೆಗೆ ಹಾಕಿಕೊಟ್ಟು, ಮೇಲೆ ಇನ್ನಷ್ಟು ತುಪ್ಪ ಸೇರಿಸಿ.