ಗ್ರಿಲ್ಡ್ ಫ್ರೂಟ್‌ ಸಲಾಡ್‌

ಸಾಮಗ್ರಿ : ಅನಾನಸ್‌ನ 2-3 ಬಿಲ್ಲೆಗಳು, ಕಲ್ಲಂಗಡಿ ಹಣ್ಣಿನ 2-3 ಬಿಲ್ಲೆಗಳು, 1 ಸೇಬು, 1 ಬಾಳೆಹಣ್ಣು, 1 ಊಟಿ ಆ್ಯಪಲ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಜೇನುತುಪ್ಪ, ಚಾಟ್‌ಮಸಾಲ, ನಿಂಬೆರಸ, ಸಕ್ಕರೆ, 2 ಚಮಚ ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಎಣ್ಣೆ, ನಿಂಬೆರಸ, ಉಪ್ಪು, ಮೆಣಸು, ಸಕ್ಕರೆ, ಜೇನುತುಪ್ಪ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದಕ್ಕೆ ಎಲ್ಲಾ ಹಣ್ಣಿನ ಹೋಳುಗಳನ್ನೂ ಸೇರಿಸಿ ಚೆನ್ನಾಗಿ ಮೆತ್ತಿಕೊಳ್ಳುವಂತೆ ಕೆದಕಬೇಕು. ನಂತರ ಗ್ರಿಲ್‌ ಪ್ಲೇಟ್‌ನಲ್ಲಿ ಈ ಹಣ್ಣುಗಳನ್ನು ಹರಡಿ, ಎರಡೂ ಬದಿಯಿಂದ ತಿರುವಿ ಹಾಕುತ್ತಾ ಹೊಂಬಣ್ಣ ಬರುವಂತೆ ಗ್ರಿಲ್ ಮಾಡಿ. ಇದನ್ನು ಸರ್ವಿಂಗ್‌ ಪ್ಲೇಟ್‌ಗೆ ಹಾಕಿಟ್ಟು, ಮೇಲೆ ಚಾಟ್‌ ಮಸಾಲ ಉದುರಿಸಿ ಬಿಸಿಬಿಸಿಯಾಗಿ ಸವಿಯಲು ಕೊಡಿ.

ಸ್ವೀಟ್‌ ಸಾರ್‌ ಫ್ರೂಟ್ಸ್

ಮೂಲಸಾಮಗ್ರಿ : 300 ಗ್ರಾಂ ಮಿಶ್ರ ಹಣ್ಣಿನ ಹೋಳು (ಅನಾನಸ್‌, ಚೆರ್ರಿ, ಸೇಬು, ಕಾಬೂಲ್‌ ದ್ರಾಕ್ಷಿ, ಪರಂಗಿ, ದಾಳಿಂಬೆ, ಕಪ್ಪು ದ್ರಾಕ್ಷಿ),  1 ಕ್ಯಾಪ್ಸಿಕಂ, 1 ಸಣ್ಣ ಸೌತೇಕಾಯಿ, 1 ಈರುಳ್ಳಿ, 2 ಟೊಮೇಟೊ, 1 ತುಂಡು ಹಸಿ ಶುಂಠಿ, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ. 1 ದೊಡ್ಡ ಚಮಚ ರೀಫೈಂಡ್‌ ಎಣ್ಣೆ.

ಸಾಸ್ಸಾಮಗ್ರಿ : 50 ಗ್ರಾಂ ಟೊಮೇಟೊ ಪ್ಯೂರಿ, 25 ಗ್ರಾಂ ಕಾರ್ನ್‌ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಬ್ರೌನ್‌ಶುಗರ್‌, ಸೋಯಾಸಾಸ್‌, ವಿನಿಗರ್‌.

ವಿಧಾನ : ಒಂದು ಪ್ಯಾನಿಗೆ ಎಲ್ಲಾ ಸಾಸ್‌ ಸಾಮಗ್ರಿ ಸೇರಿಸಿ, ಜೊತೆಗೆ ಅರ್ಧ ಕಪ್‌ ನೀರು ಬೆರೆಸಿ ಕುದಿಸಬೇಕು. ಇದು ತುಸು ಗಟ್ಟಿಯಾದಾಗ ಕೆಳಗಿಳಿಸಿ. ಮತ್ತೊಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಈರುಳ್ಳಿ ಹಾಕಿ ಬಾಡಿಸಬೇಕು. ಆಮೇಲೆ ಎಲ್ಲಾ ಹಣ್ಣಿನ ಹೋಳುಗಳನ್ನೂ ಸೇರಿಸಿ ಬಾಡಿಸಬೇಕು. ನಂತರ ರೆಡ್‌ ಸಾಸ್‌ನ್ನು ಇದಕ್ಕೆ ಬೆರೆಸಿ, ಮತ್ತೆ 2 ನಿಮಿಷ ಕುದಿಸಿ, ಕೆಳಗಿಳಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಆರೆಂಜ್‌ ವೀಟ್‌ ಮಫಿನ್ಸ್

ಸಾಮಗ್ರಿ : 150 ಗ್ರಾಂ ಗೋಧಿಹಿಟ್ಟು, 50 ಗ್ರಾಂ ಮೈದಾ, ಅರ್ಧ ಟಿನ್‌ ಮಿಲ್ಕ್ ಮೇಡ್‌, 50 ಗ್ರಾಂ ಬೆಣ್ಣೆ, 1 ಕಪ್‌ ಕಿತ್ತಳೆ ರಸ, 1 ಚಮಚ ಬೂರಾ ಸಕ್ಕರೆ, 1 ಚಮಚ ಬೇಕಿಂಗ್‌ ಪೌಡರ್‌, 1-2 ಚಿಟಕಿ ಬೇಕಿಂಗ್‌ ಸೋಡ, 1 ಸಣ್ಣ ಚಮಚ ಆರೆಂಜ್‌ ಎಸೆನ್ಸ್, 1-2 ಹನಿ ಆರೆಂಜ್‌ ಕಲರ್‌, ಅರ್ಧ ಸಣ್ಣ ಚಮಚ ವಿನಿಗರ್‌.

ವಿಧಾನ : ಮೊದಲೇ ಓವನ್‌ನ್ನು 180 ಡಿಗ್ರಿ ಶಾಖದಲ್ಲಿ ಬಿಸಿ ಮಾಡಿ. ಒಂದು ಬೇಸನ್ನಿಗೆ ಗೋಧಿಹಿಟ್ಟು, ಮೈದಾ, ಬೇಕಿಂಗ್‌ ಪೌಡರ್, ಸೋಡ ಬೆರೆಸಿಕೊಳ್ಳಿ. ಇನ್ನೊಂದು ಬಟ್ಟಲಲ್ಲಿ ಬೆಣ್ಣೆ, ಮಿಲ್ಕ್ ಮೇಡ್‌, ಬೂರಾ ಸಕ್ಕರೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಇದಕ್ಕೆ ಹಿಟ್ಟಿನ ಮಿಶ್ರಣ, ಎಸೆನ್ಸ್, ಕಲರ್‌, ವಿನಿಗರ್‌, ಕಿತ್ತಳೆ ರಸ ಬೆರೆಸಿ, ಕೊನೆಯಲ್ಲಿ ಎಣ್ಣೆ ಬೆರೆಸಿ ನಾದಿಕೊಂಡು, ಜಿಡ್ಡು ಸರಿದ ಮಫಿನ್ಸ್ ಅಚ್ಚುಗಳಿಗೆ ಇವನ್ನು ತುಂಬಿಸಿ, ಹದನಾಗಿ ಬೇಕ್‌ ಮಾಡಿ.

ಅನಾನಸ್‌ ಬರ್ಫಿ

ಸಾಮಗ್ರಿ : 1 ಕಪ್‌ ಅನಾನಸ್‌ ಜೂಸ್‌, ಅರ್ಧರ್ಧ ಕಪ್‌ ಮಿಲ್ಕ್ ಪೌಡರ್‌, ಪುಡಿ ಸಕ್ಕರೆ, ಅರ್ಧ ಕಪ್‌ ಕ್ರೀಂ, 2 ಚಮಚ ಹೆಚ್ಚಿದ ಬಾದಾಮಿ, 1 ಚಮಚ ತುಪ್ಪ, ತುಸು ಏಲಕ್ಕಿ ಪುಡಿ, ಕೇದಗೆ ಎಸೆನ್ಸ್.

ವಿಧಾನ : ಒಂದು ಬಟ್ಟಲಿಗೆ ಅನಾನಸ್‌ ಜೂಸ್‌, ಮಿಲ್ಕ್ ಪೌಡರ್‌, ಸಕ್ಕರೆ, ಕ್ರೀಂ ಹಾಕಿ ಚೆನ್ನಾಗಿ ಗೊಟಾಯಿಸಿ. ಒಂದು ಪ್ಯಾನ್‌ ಬಿಸಿ ಮಾಡಿಕೊಂಡು, ಅದಕ್ಕೆ ಅನಾನಸ್‌ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಇದಕ್ಕೆ ತುಪ್ಪ, ಏಲಕ್ಕಿಪುಡಿ, ಎಸೆನ್ಸ್, ಬಾದಾಮಿ ಚೂರು ಬೆರೆಸಿ ಗಾಢಗೊಳ್ಳುವಂತೆ ನಿಧಾನವಾಗಿ ಕೆದಕುತ್ತಿರಿ. ಇದು ಮೈಸೂರ್‌ಪಾಕ್‌ ಹದಕ್ಕೆ ಬರಬೇಕು. ಒಂದು ಅಗಲ ಟ್ರೇಗೆ ಜಿಡ್ಡು ಸವರಿ ಅದರಲ್ಲಿ ಈ ಮಿಶ್ರಣ ಹರಡಿ, ಚೆನ್ನಾಗಿ ಆರಲು ಬಿಡಿ. ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ.

ದಾಳಿಂಬೆ ಚಟ್ನಿ

ಸಾಮಗ್ರಿ : 500 ಗ್ರಾಂ ಸೀಡ್ಲೆಸ್‌ ದಾಳಿಂಬೆ ಹರಳು, 100 ಗ್ರಾಂ ಸಕ್ಕರೆ, 1 ಸಣ್ಣ ಚಮಚ ಗರಂಮಸಾಲ, ಅರ್ಧ ಸಣ್ಣ ಚಮಚ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಖಾರ.

ವಿಧಾನ : ದಾಳಿಂಬೆ ಹರಳನ್ನು  ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ತಿರುವಿದ ಮಿಶ್ರಣ, ಸಕ್ಕರೆ ಹಾಕಿ ಕೆದಕಬೇಕು. 5 ನಿಮಿಷ ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಕೆಳಗಿಳಿಸಿ ಆರಿದ ಮೇಲೆ, ಇದನ್ನು ಗಾಜಿನ ಭರಣಿಗೆ ತುಂಬಿಸಿ ಫ್ರಿಜ್‌ನಲ್ಲಿರಿಸಿ ಬೇಕಾದಾಗ ಸವಿಯಬಹುದು.

 

ಫ್ರೂಟ್‌ ಗ್ರೆನೋಲಾ ಬಾರ್‌

ಸಾಮಗ್ರಿ : 1 ಕಪ್‌ ಓಟ್ಸ್, 150 ಗ್ರಾಂ ಮಿಶ್ರ ಹಣ್ಣಿನ ಹೋಳು, ರುಚಿಗೆ ತಕ್ಕಷ್ಟು ಜೇನುತುಪ್ಪ, ಸಕ್ಕರೆ, 2-3 ಚಿಟಕಿ ದಾಲ್ಚಿನ್ನಿ ಪುಡಿ, 4 ಚಮಚ ಕರಗಿದ ಚಾಕಲೇಟ್‌.

ವಿಧಾನ : ಒಂದು ಬಟ್ಟಲಿಗೆ ಓಟ್ಸ್, ಜೇನು, ಸಕ್ಕರೆ, ಮಿಶ್ರ ಹಣ್ಣು, ದಾಲ್ಚಿನ್ನಿ ಪುಡಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಇದಕ್ಕೆ ಕರಗಿದ ಚಾಕಲೇಟ್‌ ಬೆರೆಸಿ, ಗೊಟಾಯಿಸಿ 1 ತಾಸು ಹಾಗೇ ಬಿಡಿ. ನಂತರ ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ, ಫ್ರಿಜ್‌ನಲ್ಲಿ ತಣ್ಣಗಾಗಲು ಬಿಡಿ. ನಂತರ ಉದ್ದುದ್ದಕ್ಕೆ ಕತ್ತರಿಸಿ ಸವಿಯಲು ಕೊಡಿ.

ಫ್ರೂಟ್‌ ಪಿಜ್ಜಾ

ಸಾಮಗ್ರಿ :  ಒಂದಿಷ್ಟು ಮಾರಿ ಬಿಸ್ಕತ್ತು, ಚೀಸ್‌, ಕ್ರೀಂ, ಐಸಿಂಗ್‌ ಶುಗರ್‌ (ತಲಾ 50 ಗ್ರಾಂ), 1 ಸಣ್ಣ ಚಮಚ ವೆನಿಲಾ ಎಸೆನ್ಸ್, 1 ಮಾಗಿದ ಬಾಳೆ ಹಣ್ಣು,  ಹೆಚ್ಚಿದ ದ್ರಾಕ್ಷಿ, ಕಿವೀ ಫ್ರೂಟ್‌, ಅನಾನಸ್‌, ಚೆರ್ರಿ, ಮಾವು (ತಲಾ 25 ಗ್ರಾಂ).

ವಿಧಾನ : ಒಂದು ಬಟ್ಟಲಿಗೆ ಚೀಸ್‌, ಕ್ರೀಂ, ಐಸಿಂಗ್‌ ಶುಗರ್‌ ಸೇರಿಸಿ ಬೆರೆಸಿಕೊಳ್ಳಿ. ನಂತರ ವೆನಿಲಾ ಎಸೆನ್ಸ್ ಹಾಕಿ ಗೊಟಾಯಿಸಿ ಐಸಿಂಗ್‌ ಕೋನ್‌ಗೆ ತುಂಬಿಸಿ. 1-2 ತಾಸು ಫ್ರಿಜ್‌ನಲ್ಲಿರಿಸಿ. ನಂತರ ಚಿತ್ರದಲ್ಲಿರುವಂತೆ ಒಂದು ಪದರ ಬಿಸ್ಕತ್ತು ಜೋಡಿಸಿಕೊಂಡು, ಅದರ ಮೇಲೆ ಒಂದು ಪದರ ಐಸಿಂಗ್‌ ಲೇಯರ್‌ ಬರಿಸಿ. ಇದರ ಮೇಲೆ ಹಣ್ಣಿನ ಹೋಳು ಜೋಡಿಸಿ, ತಕ್ಷಣ ಸವಿಯಲು ಕೊಡಿ.

ಫ್ರೂಟ್‌ ಲಾಲಿಪಾಪ್ಸ್

ಸಾಮಗ್ರಿ : 200 ಗ್ರಾಂ ಮಿಶ್ರ ಹಣ್ಣಿನ ಹೋಳು (ಅನಾನಸ್‌, ಮಾವು, ಚೆರ್ರಿ, ದ್ರಾಕ್ಷಿ, ದಾಳಿಂಬೆ, ಕಿವೀ), 2 ನಿಂಬೆಹಣ್ಣಿನ ರಸ, 400 ಮಿ.ಲೀ. ಸ್ಪ್ರೈಟ್‌, 2 ಚಮಚ ಸಕ್ಕರೆ.

ವಿಧಾನ : ನಿಂಬೆರಸಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದನ್ನು ಸ್ಪ್ರೈಟ್‌ಗೆ ಬೆರೆಸಿಕೊಳ್ಳಿ. ಮೊದಲು ಎಲ್ಲಾ ಹಣ್ಣಿನ ಹೋಳುಗಳನ್ನೂ ಲಾಲಿಪಾಪ್‌ ಅಚ್ಚಿಗೆ ಸಮಾನವಾಗಿ ತುಂಬಿಸಿ. ಇದರ ಮೇಲೆ ಸ್ಪ್ರೈಟ್‌ ಸುರಿದು, ಸೆಟ್‌ ಆಗಲು ಫ್ರೀಝರ್‌ನಲ್ಲಿರಿಸಿ. ಚೆನ್ನಾಗಿ ಸೆಟ್‌ ಆದ ನಂತರ ಹೊರತೆಗೆದು, ಚಿತ್ರದಲ್ಲಿರುವಂತೆ ಅಲಂಕರಿಸಿ ನಂತರ ಸವಿಯಲು ಕೊಡಿ.

ಸ್ಟರ್‌ ಫ್ರೈಡ್‌ ಮ್ಯಾಂಗೋ ವಿತ್‌ ವೆಜೀಸ್‌

ಸಾಮಗ್ರಿ : 1 ದೊಡ್ಡ ಮಾಗಿದ ಮಾವು, 100 ಗ್ರಾಂ ಕ್ಯಾರೆಟ್‌, 1 ಕ್ಯಾಪ್ಸಿಕಂ, 100 ಗ್ರಾಂ ಚಪ್ಪರದ ಅವರೆ, 1-2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ವಿನಿಗರ್‌, ಮೆಣಸು, ಸೋಯಾಸಾಸ್‌, ಹಸಿಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, 4 ಚಮಚ ರೀಫೈಂಡ್‌ ಎಣ್ಣೆ.

ವಿಧಾನ : ಎಲ್ಲಾ ತರಕಾರಿ, ಹಣ್ಣು ಶುಚಿಗೊಳಿಸಿ ಉದ್ದಕ್ಕೆ ಹೆಚ್ಚಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಬೇಕು. ನಂತರ ಒಂದೊಂದಾಗಿ ಉಳಿದ ತರಕಾರಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಸಕ್ಕರೆ, ಸೋಯಾಸಾಸ್‌ ಸಹ ಬೆರೆಸಿಕೊಳ್ಳಿ. ಕೊನೆಯಲ್ಲಿ ಮಾವಿನ ಹೋಳು ಹಾಕಿ ಕೆದಕಿ, ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ