ಪುದೀನಾ ಪನೀರ್

ಸಾಮಗ್ರಿ : ಅರ್ಧ ಕಂತೆ ಪುದೀನಾ, 250 ಗ್ರಾಂ ಪನೀರ್‌, 3-4 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಚಾಟ್ ಮಸಾಲ, 2 ಚಿಟಕಿ ಅರಿಶಿನ, 3-4 ಟೊಮೇಟೊ, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 1-1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್.

ವಿಧಾನ : ಪನೀರ್‌ನ್ನು ಸಣ್ಣ ಚೌಕಗಳಾಗಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅದೇ ಎಣ್ಣೆಗೆ ಒಗ್ಗರಣೆ ಕೊಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಆಮೇಲೆ ಹೆಚ್ಚಿದ ಈರುಳ್ಳಿ, ನಂತರ ಟೊಮೇಟೊ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಅರಿಶಿನ, ಉಳಿದ ಮಸಾಲೆ ಹಾಕಿ ಕೆದಕಬೇಕು. ಕೊನೆಯಲ್ಲಿ ಪನೀರ್‌ ಸೇರಿಸಿ. ಆಮೇಲೆ ಪುದೀನಾ, ಕೊ.ಸೊಪ್ಪು ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ ಕೆಳಗಿಳಿಸಿ. ಇದು ರೊಟ್ಟಿ, ಚಪಾತಿಗಳಿಗೆ  ಚೆನ್ನಾಗಿ ಹೊಂದುತ್ತದೆ.

ವಾಟರ್‌ ಮೆಲನ್‌ ರಾಯ್ತಾ

zDSC-9289

ಸಾಮಗ್ರಿ : ಅರ್ಧ ಲೀ. ಕೆನೆಮೊಸರು, 200 ಗ್ರಾಂ ಫ್ರೆಶ್‌ ಕ್ರೀಂ, 12-15 ಲೀಚಿ ಹಣ್ಣು, 1 ಸಣ್ಣ ಮಾಗಿದ ಕಲ್ಲಂಗಡಿ ಹಣ್ಣು, ರುಚಿಗೆ ತಕ್ಕಷ್ಟು ಉಪ್ಪ, ಪುಡಿಮೆಣಸು, ಗರಂಮಸಾಲ, ಚಾಟ್‌ ಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಸೀಡ್‌ ಲೆಸ್‌ ದಾಳಿಂಬೆ ಹರಳು.

ವಿಧಾನ : ಮಿಕ್ಸಿಗೆ ಮೊಸರು, ಫ್ರೆಶ್‌ ಕ್ರೀಂ, ಸಕ್ಕರೆ ಬೆರೆಸಿ ಬ್ಲೆಂಡ್‌ ಮಾಡಿಡಿ. ಕಲ್ಲಂಗಡಿ ಹಣ್ಣನ್ನು ಸಣ್ಣ ಹೋಳುಗಳಾಗಿಸಿ. ಇದೇ ತರಹ ಲೀಚಿ ಹಣ್ಣಿಗೂ ಮಾಡಿ. ಒಂದು ಬಟ್ಟಲಿಗೆ ಮೊಸರಿನ ಮಿಶ್ರಣ ಬಗ್ಗಿಸಿಕೊಂಡು ಅದಕ್ಕೆ ಲೀಚಿ, ವಾಟರ್‌ ಮೆಲನ್‌ ಸೇರಿಸಿ, ಉಪ್ಪು, ಖಾರ ಮಸಾಲೆ ಸೇರಿಸಿ. ಕೊನೆಯಲ್ಲಿ ಜೀರಿಗೆ, ದಾಳಿಂಬೆ ಹರಳು ಸೇರಿಸಿ, ಚಿತ್ರದಲ್ಲಿರುವಂತೆ ದೊಡ್ಡ ಕಲ್ಲಂಗಡಿ ಹಣ್ಣನ್ನು ಡಿಸೈನ್‌ಗೊಳಿಸಿ ಪಾರ್ಟಿಯಲ್ಲಿ ಪ್ರಸ್ತುತಪಡಿಸಿ.

ಸೋರೆಕಾಯಿ ಸ್ಪೆಷಲ್ ಮಸಾಲ

zDSC-9223

ಮೂಲ ಸಾಮಗ್ರಿ : 1 ಮಧ್ಯಮ ಗಾತ್ರದ ಸೋರೆಕಾಯಿ, 3-4 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಟೊಮೇಟೊ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌ ಹಾಲಲ್ಲಿ ನೆನೆಹಾಕಿಡಿ), ಚಕ್ಕೆ, ಲವಂಗ ಮೊಗ್ಗು (1 ದೊಡ್ಡ ಚಮಚ), 2-2 ಚಮಚ ಹುರಿಗಡಲೆ, ಗಸಗಸೆ, 2 ಚಿಟಕಿ ಅರಿಶಿನ, ಅರ್ಧ ಗಿಟುಕು ತೆಂಗಿನ ತುರಿ, 5-6 ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು.

ಹೂರಣದ ಸಾಮಗ್ರಿ : 4-5 ಬೆಂದ ಆಲೂಗಡ್ಡೆ, 200 ಗ್ರಾಂ ಪನೀರ್‌, 1 ಈರುಳ್ಳಿ, 1-1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅರ್ಧ ಸೌಟು ಎಣ್ಣೆ.

ವಿಧಾನ : ತೆಳ್ಳಗಿರುವ ಸೋರೆಕಾಯಿ ಆರಿಸಿಕೊಂಡು ಅದರ ಸಿಪ್ಪೆ ಹೆರೆದು, ಪುಟ್ಟ ಪುಟ್ಟ ಬಟ್ಟಲುಗಳಾಗಿ ಬರುವಂತೆ ಕತ್ತರಿಸಿ, ಒಳಭಾಗವನ್ನು ಹೆರೆದು ಟೊಳ್ಳಾಗಿಸಿ. ಚಿಟಕಿ ಉಪ್ಪು ಹಾಕಿ ಈ ಸೋರೆ ಬಟ್ಟಲುಗಳನ್ನು ಬೇಯಿಸಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಸಣ್ಣಗೆ ಹೆಚ್ಚಿಕೊಂಡ ಪನೀರ್‌ ಹಾಕಿ ಬಾಡಿಸಬೇಕು. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಉಪ್ಪು, ಖಾರ, ಮಸಾಲೆ ಹಾಕಿ ಕೆದಕಬೇಕು. ಆಮೇಲೆ ಬೇಯಿಸಿ ಮಸೆದ ಆಲೂ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ತುಸು ಆರಿದ ನಂತರ ಈ ಮಿಶ್ರಣವನ್ನು ಸೋರೆ ಬಟ್ಟಲುಗಳಿಗೆ ತುಂಬಿಸಿ, ಅದನ್ನು 5-6 ನಿಮಿಷ ಮೈಕ್ರೋವೇವ್‌ನಲ್ಲಿ ಗ್ರಿಲ್ ‌ಮಾಡಿ.

ಮೊದಲು ಮಿಕ್ಸಿಗೆ ತೆಂಗಿನ ತುರಿ, ಹುರಿಗಡಲೆ, ಗಸಗಸೆ, 2 ಟೊಮೇಟೊ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಚಕ್ಕೆ, ಲವಂಗ, ಮೊಗ್ಗು, ಅರಿಶಿನ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಹಾಗೆಯೇ ಹಾಲಲ್ಲಿ ನೆನೆಹಾಕಿದ ಗೋಡಂಬಿ, ಪಿಸ್ತಾಗಳನ್ನೂ ಬೇರೆಯಾಗಿ ತಿರುವಿಡಿ. ಆಲೂ ಮಿಶ್ರಣ ಕೆದಕಿದ ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ಇದಕ್ಕೆ ಮೊದಲು ಹೆಚ್ಚಿದ 3 ಈರುಳ್ಳಿ, ನಂತರ ಟೊಮೇಟೊ ಹಾಕಿ ಬಾಡಿಸಬೇಕು. ಅದಕ್ಕೆ ರುಬ್ಬಿದ ಮಸಾಲೆ, ಉಪ್ಪು, ಖಾರ, ಗರಂಮಸಾಲ ಇತ್ಯಾದಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಈ ಗ್ರೇವಿ ಸಾಕಷ್ಟು ಕುದ್ದು ಗಟ್ಟಿಯಾದಾಗ, ಇದನ್ನು ಕೆಳಗಿಳಿಸಿ. ಒಂದು ಸರ್ವಿಂಗ್‌ ಡಿಶ್‌ನಲ್ಲಿ ಗ್ರಿಲ್ ‌ಮಾಡಿದ ಸೋರೆ ಬಟ್ಟಲುಗಳನ್ನು ನೀಟಾಗಿ ಜೋಡಿಸಿಕೊಂಡು, ಅದರ ಮೇಲೆ ಈ ಗ್ರೇವಿ ಹರಡಿ. ತುಪ್ಪದಲ್ಲಿ ಹುರಿದ ಗೋಡಂಬಿ, ಹೆಚ್ಚಿದ ಕೊ.ಸೊಪ್ಪು, ಟೊಮೇಟೊಗಳಿಂದ ಅಲಂಕರಿಸಿ, ಬಿಸಿ ಬಿಸಿ ಚಪಾತಿ ಪೂರಿಗಳೊಂದಿಗೆ ಸವಿಯಲು ಕೊಡಿ.

ಕಾರ್ನ್‌ ಗಾರ್ಲಿಕ್‌ ಸ್ಪ್ರಿಂಗ್‌ ರೋಲ್ಸ್

Corn-Spring-roll (1)

ಸಾಮಗ್ರಿ : 250 ಗ್ರಾಂ ಸ್ವೀಟ್‌ ಕಾರ್ನ್‌, 3-4 ಈರುಳ್ಳಿ, 15-20 ಎಸಳು ಬೆಳ್ಳುಳ್ಳಿ, 150 ಗ್ರಾಂ ಮೈದಾ, 150 ಗ್ರಾಂ ಕಾರ್ನ್‌ಫ್ಲೋರ್‌, 2 ಮೊಟ್ಟೆ, ಅರ್ಧ ಕಪ್‌ ಬೆಣ್ಣೆ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಿಲೀ ಗಾರ್ಲಿಕ್‌ ಸಾಸ್‌, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಸ್ವೀಟ್‌ ಕಾರ್ನ್‌ ಕಾಳುಗಳನ್ನು ಲಘುವಾಗಿ ಬೇಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಬೆಂದ ಕಾಳು ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ ಆರಲು ಬಿಡಿ. ಮೈದಾಗೆ ಕಾರ್ನ್‌ಫ್ಲೋರ್‌, ತುಸು ಉಪ್ಪು ಸೇರಿಸಿ. ಇದಕ್ಕೆ ಒಡೆದು ಬೀಟ್‌ ಮಾಡಿಕೊಂಡ ಮೊಟ್ಟೆ, ತುಸು ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದಕ್ಕೆ ಬೆಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು 2 ತಾಸು ನೆನೆಯಲು ಬಿಡಿ. ನಂತರ ಮತ್ತೆ ಬೆಣ್ಣೆ ಬೆರೆಸಿ ನಾದಿಕೊಂಡು, ಸಣ್ಣ ಉಂಡೆಗಳಾಗಿಸಿ, ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದರ ಮಧ್ಯೆ 2-3 ಚಮಚ ಕಾರ್ನ್‌ ಕಾಳಿನ ಮಿಶ್ರಣ ತುಂಬಿಸಿ, ಎಲ್ಲಾ ಕಡೆಯಿಂದ ಕವರ್‌ ಮಾಡಿ, ಬಿಟ್ಟುಕೊಳ್ಳದಂತೆ ಮೈದಾ ಪೇಸ್ಟ್ ನಿಂದ ಅಂಟಿಸಿಬಿಡಿ. ಹೀಗೆ ಎಲ್ಲಾ ಉಂಡೆಗಳನ್ನೂ ಸಿದ್ಧಪಡಿಸಿಕೊಂಡು, ಉದ್ದನೆಯ ರೋಲ್ಸ್ ಆಗಿ ಬರುವಂತೆ ಮಾಡಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಈ ರೋಲ್ಸ್ ನ್ನು ಹೊರತೆಗೆದು, ಹೆಚ್ಚುವರಿ ಎಣ್ಣೆ ಹೋಗಲಾಡಿಸಲು ಟಿಷ್ಯು ಪೇಪರ್‌ ಮೇಲೆ ಹರಡಿರಿ. ನಂತರ 2 ಭಾಗವಾಗಿಸಿ, ಅವುಗಳ ಮೇಲೆ ಚಿಲೀ ಗಾರ್ಲಿಕ್‌ ಸಾಸ್‌ ಸಿಂಪಡಿಸಿ, ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ