ನಾವು ನಮ್ಮ ಕೆಲಸದಲ್ಲಿ ನಮ್ಮನ್ನು ಎಷ್ಟೊಂದು ಬಿಝಿಯಾಗಿ ಇಟ್ಟುಕೊಳ್ಳುತ್ತೇವೆ ಎಂದರೆ, ನಮ್ಮ ಆರೋಗ್ಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಡುತ್ತೇವೆ. ಆರೋಗ್ಯದಿಂದಿರಲು ಜಿಮ್ ಗೆ ಹೋಗಿ ಬೆವರು ಸುರಿಸುತ್ತೇವೆ, ಡಯೆಟಿಂಗ್‌ಮಾಡುತ್ತೇವೆ ಮತ್ತು ಇದೆಲ್ಲದರಿಂದ ನಾವು ಆರೋಗ್ಯದಿಂದ ಇರಬಹುದು, ರೋಗಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಯೋಚಿಸುತ್ತೇವೆ. ಆದರೆ ಅದು ಹಾಗಲ್ಲ.
ನೀವು ಎಷ್ಟೇ ಚುರುಕಿನಿಂದ ಇರಬಹುದು, ಆರೋಗ್ಯಪ್ರಜ್ಞೆ ಹೊಂದಿದವರಾಗಿ ಇರಬಹುದು. ಆದಾಗ್ಯೂ ಜಗತ್ತಿನ ಬೇರೆ ಬೇರೆ ರೋಗಗಳು ನಿಮ್ಮ ಮೇಲೆ ದಾಳಿ ಇಡಬಹುದು. ಹೀಗಾಗಿ ಕೇವಲ ಆರೋಗ್ಯಕರ ಆಹಾರ ಅಥವಾ ವ್ಯಾಯಾಮವೊಂದೇ ಸಾಲದು. ಇದರ ಜೊತೆಗೆ ಆರೋಗ್ಯಕರ ಆಹಾರದ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕರ ಜೀವನ ಜೀವಿಸಲು ಅತ್ಯವಶ್ಯ. ಆದಾಗ್ಯೂ ಬಹಳಷ್ಟು ಜನರಿಗೆ ಇದರ ಮಹತ್ವ ಏನು ಎಂಬುದು ಗೊತ್ತಿಲ್ಲ. ಜೊತೆಗೆ ಆ ಅಭ್ಯಾಸಗಳು ಯಾವುದು ಎಂಬುದು ತಿಳಿದಿಲ್ಲ. ಅಂತಹ ಅಭ್ಯಾಸಗಳನ್ನು ಅನುಸರಿಸುವುದರ ಮೂಲಕ ನಿಮ್ಮನ್ನು ನೀವು ಆರೋಗ್ಯದಿಂದ ಇಟ್ಟುಕೊಳ್ಳಬಹುದು ಮತ್ತು ಅಪರಿಚಿತ ರೋಗಗಳಿಂದ ದೂರ ಇರಬಹುದು.
ಆಹಾರದ ಬಗ್ಗೆ ಗಮನಕೊಡಿ
ನೀವು ಆಹಾರ ಸೇವನೆ ಮಾಡಲು ಕುಳಿತರೆ, ಏನನ್ನು ಸೇವಿಸುತ್ತಿರುವಿರಿ ಹಾಗೂ ಯಾವ ಪದಾರ್ಥವನ್ನು ಹೆಚ್ಚು ಸೇವಿಸುತ್ತಿರುವಿರಿ ಎಂಬುದರ ಬಗ್ಗೆ ಗಮನಕೊಡಬೇಕು. ನೀವು ಕ್ಯಾಲೋರಿಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದೀರಾ ಹಾಗೂ ಅದನ್ನು ಬರ್ನ್ ಮಾಡಲು ಸಾಧ್ಯವಾಗುವುದಿಲ್ಲ ಅಲ್ಲವೇ? ಆಗ ನೀವು ಎಂತಹ ಕೆಲವು ಆಹಾರ ಸೇವಿಸಬೇಕೆಂದರೆ, ಅದರಲ್ಲಿ ಕೊಬ್ಬಿನಂಶದ ಪ್ರಮಾಣ ಕಡಿಮೆಯಿರಬೇಕು ಹಾಗೂ ಅದನ್ನು ನಿಮ್ಮ ದೇಹ ಸುಲಭವಾಗಿ ಪಚನ ಮಾಡಿಕೊಳ್ಳುವಂತೆ ಇರಬೇಕು. ಇದರ ಜೊತೆಗೆ ಹಗುರ ಆಹಾರಗಳನ್ನು ಸೇವಿಸಿ. ಹುರಿದ, ಕರಿದ ಆಹಾರಗಳಿಂದ ದೂರವಿರಿ. ಸಲಾಡ್ ಸೇವನೆಯ ಬಗೆಗೆ ಹೆಚ್ಚು ಒತ್ತು ಕೊಡಿ, ಮೊಳಕೆ ಕಾಳುಗಳನ್ನು ಸೇವಿಸಿ.
ಸಾಕಷ್ಟು ಪ್ರೋಟೀನ್ ಇರಲಿ
ಪ್ರೋಟೀನ್ ದೇಹಕ್ಕೆ ಅತ್ಯವಶ್ಯ. ನಾವು ಇದನ್ನು ನಮ್ಮ ಆಹಾರದಲ್ಲಿ ಅತ್ಯವಶ್ಯವಾಗಿ ಸೇರ್ಪಡೆ ಮಾಡಿಕೊಳ್ಳಬೇಕು. ಬ್ರೋಕ್ಲಿ, ಸೋಯಾಬೀನ್, ಬೇಳೆಗಳು, ಪಾಲಕ್ ಇ ಪ್ರೋಟೀನ್‌ಯುಕ್ತ ಆಹಾರಗಳಾಗಿವೆ. ಕಡಿಮೆ ಕೊಬ್ಬುಯುಕ್ತ ಹಾಲು ಉತ್ಪನ್ನಗಳು ಕೂಡ ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಅಂದಹಾಗೆ ನಮ್ಮ ಆಹಾರದಲ್ಲಿ ಶೇ.25ರಷ್ಟು ಪ್ರೋಟೀನ್ ಇರಬೇಕು. ನೀವು ದಿನ ವ್ಯಾಯಾಮ ಮಾಡುವವರಾಗಿದ್ದರೆ, ಇನ್ನೂ ಶೇ.5ರಷ್ಟು ಪ್ರೋಟೀನ್ ಹೆಚ್ಚಿಸಿಕೊಳ್ಳಿ.
ಆಹಾರ ಅಗಿದು ತಿನ್ನಿ
ಆಹಾರ ಸುಲಭವಾಗಿ ಪಚನವಾಗುವ ಏಕೈಕ ವಿಧಾನವೆಂದರೆ, ನಾವು ಆಹಾರವನ್ನು ಚೆನ್ನಾಗಿ ಅಗಿದು ತಿನ್ನಬೇಕು. ನಮ್ಮಲ್ಲಿ ಬಹಳಷ್ಟು ಜನರು ಆಹಾರವನ್ನು ಬೇಗ ಬೇಗ ತಿನ್ನಬೇಕೆಂಬ ಆತುರದಲ್ಲಿ ಚೆನ್ನಾಗಿ ಅಗಿದು ತಿನ್ನುವುದಿಲ್ಲ. ಆ ಕಾರಣದಿಂದ ನಿಮ್ಮ ಪಚನಾಂಗ ಬಹಳ ಬೇಗ ಸುಸ್ತಾಗಿ ಬಿಡುತ್ತದೆ. ಹಾಗಾಗಿ ಆಹಾರವನ್ನು 30-35 ಸಲ ಆಗಿದು ತಿನ್ನಬೇಕು. ಈ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಹಸಿರು ಸೊಪ್ಪುಗಳನ್ನು ಸೇವಿಸಿ
ನಿಮ್ಮ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸಿಕೊಳ್ಳಿ. ಏಕೆಂದರೆ ಅವು ಪ್ರೋಟೀನ್, ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ನಾರಿನಂಶದ ಉತ್ತಮ ಮೂಲಗಳಾಗಿವೆ. ಹಸಿರು ಸೊಪ್ಪುಗಳ ಪಲ್ಯ ತಯಾರಿಸುವುದು ಅತ್ಯಂತ ಸುಲಭ. ಇವು ಆಹಾರಕ್ಕೆ ಹೆಚ್ಚಿನ ರುಚಿ ಕೊಡುತ್ತವೆ. ನಿಮ್ಮ ಆಹಾರದಲ್ಲಿ ಪ್ರತಿಯೊಂದು ವರ್ಣದ ತರಕಾರಿಗಳನ್ನು ಸೇರಿಸಿಕೊಳ್ಳಿ. ದಿನಕ್ಕೆ ಒಂದೇ ಸಲ ಎಲ್ಲ ಪ್ರಕಾರದ ರುಚಿಯ ಅಂದರೆ ಸಿಹಿ, ಖಾರ, ಹುಳಿ ಮತ್ತು ಒಗರು ಮುಂತಾದವು ನಿಮ್ಮ ಆಹಾರದಲ್ಲಿ ಇದ್ದರೆ ಸೂಕ್ತ.