ಬೊಜ್ಜು ಆಧುನಿಕ ನಾಗರಿಕತೆಯ ಕೊಡುಗೆಯಾಗಿದೆ. ಕೆಲವು ದಶಕಗಳ ಹಿಂದಿನ ತನಕ ಭಾರತೀಯರು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾತ್ರ ಬೊಜ್ಜು ಪ್ರತ್ಯಕ್ಷವಾಗುತ್ತಿತ್ತು. ಆದರೆ ಈಗ ಭಾರತರಲ್ಲಿ ಅಪೌಷ್ಟಿಕತೆ ಹಾಗೂ ಬೊಜ್ಜು ಎರಡೂ ಇವೆ. 2014ರ ಮೆಡಿಕಲ್ ಜನರಲ್ ಪ್ರಕಾರ, 1979ರಲ್ಲಿ ಜಾಗತಿಕ ಬೊಜ್ಜಿನ ಸೂಚ್ಯಂಕದಲ್ಲಿ 19ನೇ ಸ್ಥಾನದಲ್ಲಿತ್ತು. ಅದೇ 2014ರಲ್ಲಿ ಮಹಿಳಾ ವಿಭಾಗದಲ್ಲಿ ಭಾರತ 3ನೇ ಕ್ರಮಾಂಕ ಹಾಗೂ ಪುರುಷರ ವಿಭಾಗದಲ್ಲಿ 5ನೇ ಸ್ಥಾನದಲ್ಲಿತ್ತು.

ಭೌತಿಕ ಸುಖ ಸೌಲಭ್ಯಗಳ ಅತಿಯಾದ ಬಳಕೆ ಹಾಗೂ ಊಟತಿಂಡಿಗಳಲ್ಲಿ ಯಾವುದೇ ನಿಯಂತ್ರಣ ಇಲ್ಲದೆ ಇರುವುದು ಹಾಗೂ ತಪ್ಪು ಜೀವನ ಶೈಲಿಯಿಂದಾಗಿ ಅನೇಕ ಬಗೆಯ ರೋಗಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಅತಿ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕೀಲುನೋಗಳ ಸಮಸ್ಯೆ ಕಾಲುಗಳಲ್ಲಿ ನೋವು, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ ಹಾಗೂ ಬಂಜೆತನದ ಸಮಸ್ಯೆಗಳು ಬೊಜ್ಜಿನಿಂದಾಗಿ ಕಾಣಿಸಿಕೊಳ್ಳುತ್ತಿವೆ.

ನ್ಯೂಜಿಲ್ಯಾಂಡ್‌ನ ಆಕ್ಲಂಡ್‌ ತಾಂತ್ರಿಕ ವಿ.ವಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ಜಗತ್ತಿನ ಸುಮಾರು ಶೇ.75ರಷ್ಟು ಜನಸಂಖ್ಯೆ ಬೊಜ್ಜಿಗೆ ತುತ್ತಾಗಿದೆ. ಶೇ.14 ರಷ್ಟು ಜನರ ತೂಕ ಮಾತ್ರ ಸಾಮಾನ್ಯವಾಗಿದೆ.

ಬೊಜ್ಜನ್ನು ಯಾರು ತಾನೇ ಕಡಿಮೆಗೊಳಿಸಲು ಇಚ್ಛಿಸುವುದಿಲ್ಲ? ಎಷ್ಟೋ ಸಲ ಜನರು ತಪ್ಪು ಉಪಾಯಗಳನ್ನು ಅನುಸರಿಸಿ ಹಣ ಕಳೆದುಕೊಳ್ಳುತ್ತಾರೆ, ಅಷ್ಟೇ ಅಲ್ಲ, ಅಪಾಯವನ್ನೂ ತಂದುಕೊಳ್ಳುತ್ತಾರೆ. ಬಸ್‌ಗಳು, ಆಟೋಗಳಲ್ಲಿ, ರಸ್ತೆ ಬದಿಯ ಸಾರ್ವಜನಿಕ ಗೋಡೆಗಳ ಮೇಲೆ ಅಂತಹ ಜಾಹೀರಾತುಗಳನ್ನು ಅಂಟಿಸಲಾಗಿರುತ್ತದೆ. ಸ್ಲಿಮ್ ಆಗಬೇಕಿದ್ದರ ಈ ಕ್ರಮಸಂಖ್ಯೆಗೆ ಡಯೆಲ್‌ ಮಾಡಿ ಎಂದು ಅದರಲ್ಲಿ ಸೂಚಿಸಲಾಗಿರುತ್ತದೆ. ಇವು ಜನರಿಗೆ ಭ್ರಮನಿರಸನ ಮಾಡುತ್ತವೆ. ಶಸ್ತ್ರಚಿಕಿತ್ಸೆಯ ನಂತರ ಬೊಜ್ಜು ಬರುವುದಿಲ್ಲ ಎಂದೇನೂ ಅಲ್ಲ. ಒಂದು ವೇಳೆ ನಿಮ್ಮ ಆಹಾರ, ಜೀವನಶೈಲಿ ಬದಲಿಸಿಕೊಳ್ಳದಿದ್ದರೆ ನೀವು ದಪ್ಪಗಿರುವವರ ಸಾಲಿನಲ್ಲಿ ಸೇರಿಕೊಳ್ಳುವುದಂತೂ ಗ್ಯಾರಂಟಿ. ಆದರೆ ನೀವು ಗಾಬರಿಯಾಗುವ ಅಗತ್ಯವಿಲ್ಲ ಬೊಜ್ಜು ಕಡಿಮೆ ಮಾಡುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಬೊಜ್ಜು ಕಡಿಮೆಗೊಳಿಸಲು ನುರಿತ ವೈದ್ಯರು ಈ ಕೆಳಕಂಡ ಉಪಾಯಗಳನ್ನು ಸೂಚಿಸಿದ್ದಾರೆ.

ಸಾಕಷ್ಟು ನೀರು ಕುಡಿಯಿರಿ : ಒಂದು ವೆಬ್‌ಸೈಟ್‌ನ ಪ್ರಕಾರ, ಯಾರು ಹೆಚ್ಚು ನೀರು ಕುಡಿಯುತ್ತಿರುತ್ತಾರೊ, ಅವರು ಬೇರೆಯವರಿಗೆ ಹೋಲಿಸಿದಲ್ಲಿ ಬಹುಬೇಗ ತೂಕ ಕಡಿಮೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ನೀರಿನಿಂದ ಹೊಟ್ಟೆ ತುಂಬುತ್ತದೆ ಹಾಗೂ ಹಸಿವು ಕಡಿಮೆ ಆಗುತ್ತದೆ. ನಾವು ಕಡಿಮೆ ಆಹಾರ ಸೇವಿಸುತ್ತೇವೆ.

ಊಟತಿಂಡಿ ಸೇವನೆ ಅಂತರ ಕಡಿಮೆ ಮಾಡಿ : ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವನೆ ಮಾಡುವ ಬದಲಿಗೆ ಆಗಾಗ ಒಂದಿಷ್ಟು ಆಹಾರ ಸೇವನೆ ಮಾಡುತ್ತ ಇರಿ. ಹೀಗೆ ಮಾಡುವುದರಿಂದ ದಿನವಿಡೀ ಶಕ್ತಿ ಕಾಯ್ದುಕೊಂಡು ಹೋಗುತ್ತದೆ. ನೇರವಾಗಿ ಹೇಳಬೇಕೆಂದರೆ, ಹಸಿವು ಇದ್ದರೆ ಮಾತ್ರ ತಿನ್ನಿ. ಹೊಟ್ಟೆ ತುಂಬಿದ ಬಳಿಕ ನಿಲ್ಲಿಸಿ ಬಿಡಿ.

ನಿಮ್ಮ ದೇಹದ ಮಾತನ್ನು ಕೇಳಿ :  ನಮ್ಮಲ್ಲಿ ಬಹಳಷ್ಟು ಜನ ಬಾಹ್ಯ ಸಂಕೇತಗಳನುಸಾರ ಆಹಾರ ಸೇವನೆ ಶುರು ಮಾಡುತ್ತಾರೆ ಇಲ್ಲವೇ ತರಾತುರಿಯಲ್ಲಿ ತಿಂದು ಮುಗಿಸುತ್ತಾರೆ. ಬೇರೆಯವರು ಊಟ ಮಾಡಿ ಮುಗಿಸಿದರೆಂದು ನಾವು ಮಾಡಿ ಮುಗಿಸುವುದು, ಅದರ ಬದಲು ನಾವು ನಮ್ಮ ಆಂತರಿಕ ಸಂಕೇತಗಳ ಬಗ್ಗೆ ಗಮನ ಕೊಡಬೇಕು. ನಿಮಗೆ ಹಸಿವಾಗಿದೆಯೋ ಇಲ್ಲವೋ ಎನ್ನುವುದನ್ನು ಕಂಡುಕೊಳ್ಳಬೇಕು. ಆಹಾರ ಬಹಳ ರುಚಿಯಾಗಿದೆ ಎಂದು ಅತಿಯಾಗಿ ಸೇವಿಸಲು ಹೋಗಬೇಡಿ.

ಭಾವುಕ ಸ್ಥಿತಿಯಲ್ಲಿ ಹೆಚ್ಚು ಸೇವಿಸಬೇಡಿ : ನಾವು ಹೆಚ್ಚು ಭಾವುಕರಾದಾಗ ಅಂದರೆ ಖುಷಿಗೊಂಡಾಗ ದುಃಖಿತರಾದಾಗ ಹೆಚ್ಚು ಆಹಾರ ಸೇವಿಸುತ್ತೇವೆ. ನಮ್ಮ ಮನಸ್ಸು ತನ್ನ ಸ್ಥಿತಿಯನ್ನು ಮರೆಮಾಚಲು ಮಾಡುವ ಮನೋವೈಜ್ಞಾನಿಕ ವಿಧಾನವಿದು ಎಂದು ಮನೋತಜ್ಞರು ಹೇಳುತ್ತಾರೆ. ಆಫೀಸ್‌ನಲ್ಲಿ ಕೆಲಸದ ಡೆಡ್‌ಲೈನ್‌ ಸಮೀಪಿಸಿದರೆ ಅಥವಾ ಮನೆಯಲ್ಲಿ ಮಕ್ಕಳ ಶಿಸ್ತಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಉದ್ಭವಿಸಿದಾಗ ಅದಕ್ಕೆ ನಾವು ಪರಿಹಾರವನ್ನು ಆಹಾರ ಸೇವನೆಯ ಮುಖಾಂತರ ಹುಡುಕುತ್ತೇವೆ. ಹಸಿವು ಇರಲಿ, ಇಲ್ಲದಿರಲಿ ಆಗ ಏನನ್ನಾದರೂ ತಿನ್ನಲೇಬೇಕೆಂದು ಮನಸ್ಸು ಹಂಬಲಿಸುತ್ತದೆ. ಇಂತಹ ಸ್ಥಿತಿಯಿಂದ ದೂರ ಇರಿ. ಏಕೆಂದರೆ ಟೆನ್ಶನ್‌ ಮಾಡಿಕೊಂಡು ಆಹಾರ ಸೇವನೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವ ಬದಲಿಗೆ ಮತ್ತಷ್ಟು ಹೆಚ್ಚುತ್ತದೆ.

ಉತ್ತೇಜಕ ಆಹಾರ ಸೇವನೆಗೆ `ನೋ’ ಹೇಳಿ : ಕೆಲವು ಆಹಾರ ಪದಾರ್ಥಗಳು ಹೇಗಿರುತ್ತವೆಂದರೆ, ಅವನ್ನು ತಿನ್ನಲು ಶುರು ಮಾಡಿದ ಬಳಿಕ ನಮ್ಮ ಕೈಗಳು ನಿಲ್ಲುವುದೇ ಇಲ್ಲ. ಚಿಪ್ಸ್ ಪ್ಯಾಕೆಟ್‌ ತೆರೆದರೆ ಅದು ಮುಗಿಯುವ ತನಕ ನಮ್ಮ ಕೈ ಹಿಂದೆ ಸರಿಯುವುದಿಲ್ಲ. ಪೇಸ್ಟ್ರಿ, ಪಾಸ್ತಾ, ಡೋನಟ್‌, ಚಾಕ್ಲೆಟ್‌ ಮುಂತಾದವು ನಮ್ಮ ಆಹಾರ ಸೇವನೆ ಸಂದರ್ಭದಲ್ಲಿ ಹಾಜರಿರುತ್ತವೆ. ಇಂತಹ ಆಹಾರಗಳಲ್ಲಿ ರಿಫೈಂಡ್‌ ಎಣ್ಣೆ, ಉಪ್ಪು ಹಾಗೂ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನಮ್ಮ ದೇಹದಲ್ಲಿ ಬ್ಲಡ್‌ ಶುಗರ್‌ನ ಪ್ರಮಾಣ ಏರುಪೇರಾಗುತ್ತದೆ. ಇಂತಹ ಪದಾರ್ಥಗಳನ್ನು ನಿಮ್ಮ ಆಹಾರದ ಪಟ್ಟಿಯಿಂದ ಎಷ್ಟು ಬೇಗ ಹೊರಹಾಕುತ್ತೀರೋ ಅಷ್ಟು ಒಳ್ಳೆಯದು.

ಎಲ್ಲವನ್ನೂ ತಿನ್ನಿ ಆದರೆ ಮಿತವಾಗಿ ತಿನ್ನಿ : ಸೆಲೆಬ್ರಿಟಿ ಡಯೆಟಿಶಿಯನ್‌ ರುಜುತಾ ದಿವೇಕರ್‌ ಮಾರ್ಗದರ್ಶನದಲ್ಲಿ ತೂಕ ಕಡಿಮೆ ಮಾಡಿಕೊಳ್ಳುತ್ತಿರುವ ಕರೀನಾ ಕಪೂರ್‌ ಹೀಗೆ ಹೇಳುತ್ತಾರೆ, “ನೀವು ಎಲ್ಲವನ್ನು ತಿನ್ನಿ. ಆದರೆ ಸರಿಯಾಗಿ.” ವೈದ್ಯರ ಪ್ರಕಾರ, ನೀವು ಅತ್ಯಂತ ಸಿಹಿಯಾದ ಸಪೋಟಾ ಹಣ್ಣನ್ನು ಸೇವಿಸಿ. ಆದರೆ ನಿಮ್ಮ ಆಹಾರದ ಪ್ರಮಾಣವನ್ನು ಮಿತವಾಗಿ ಇಟ್ಟುಕೊಳ್ಳಿ. ಆಹಾರ ರುಚಿಯಾಗಿದೆ ಎಂದು ಅಧಿಕ ಸೇವನೆ ಮಾಡದಿರಿ.

ಬಿಳಿ ಆಹಾರಗಳಿಂದ ದೂರವಿರಿ : ಬಿಳಿ ಅಕ್ಕಿಯ ಬದಲು ಕಂದು ಬಣ್ಣದ ಅಕ್ಕಿಯ ಬಳಕೆ ಹೆಚ್ಚು ಸೂಕ್ತ. ಬಿಳಿ ಬ್ರೆಡ್‌ ಪಾಸ್ತಾ, ನೂಡಲ್ಸ್, ಮೈದಾದಿಂದ ತಯಾರಿಸಿದ ಆಹಾರ ಪದಾರ್ಥಗಳು ಹಾಗೂ ಸಕ್ಕರೆ ಇವು ನಮ್ಮ ಆರೋಗ್ಯ ಏರುಪೇರು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಏಕೆಂದರೆ ಇವನ್ನು ಪ್ರೊಸೆಸ್‌ ಮಾಡುವಾಗ ಬಹಳಷ್ಟು ಪೋಷಕಾಂಶಗಳು ಹಾನಿಗೀಡಾಗುತ್ತವೆ. ಅದರಲ್ಲಿ ಉಳಿಯುವುದು ಕ್ಯಾಲೋರಿ ಮಾತ್ರ. ಅವುಗಳ ಬದಲು ಕಾಳುಗಳು, ಬೇಳೆಗಳು, ನುಚ್ಚುಗಳು, ಒಣ ಹಣ್ಣುಗಳು, ಬ್ರೌನ್‌ ಬ್ರೆಡ್‌, ಬ್ರೌನ್‌ ರೈಸ್‌ ಮುಂತಾದವು.

ಎಣ್ಣೆ ಪದಾರ್ಥಗಳಿಗೆ ಗುಡ್‌ಬೈ ಹೇಳಿ : ಫಾಸ್ಟ್ ಫುಡ್‌, ಫ್ರೈಡ್‌ ಐಟಂ, ಡೋನಟ್‌, ಚಿಪ್ಸ್, ಆಲೂಚಿಪ್ಸ್ ಮುಂತಾದವುಗಳನ್ನು ನಿಮ್ಮ ಆಹಾರದ ಪಟ್ಟಿಯಿಂದ ದೂರ ಇಡಿ. 1 ದೊಡ್ಡ ಚಮಚ ಎಣ್ಣೆಯಲ್ಲಿ 120 ಕ್ಯಾಲೋರಿ ಇರುತ್ತದೆ. ಹೆಚ್ಚು ಎಣ್ಣೆ ಪದಾರ್ಥ ಸೇವಿಸುವುದರಿಂದ ದೇಹದಲ್ಲಿ ಆಲಸ್ಯ ಭರ್ತಿಯಾಗುತ್ತದೆ. ಅದರ ಬದಲಿಗೆ ಹುರಿದ, ಬೇಯಿಸಿದ, ಹಬೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಿ.

– ಪ್ರಮೀಳಾ 

ಕಡಿಮೆ ತಿನ್ನಿ

ಬ್ರೆಡ್‌, ಮೊಟ್ಟೆ, ಮೀನು, ಚಿಕನ್‌,  ಬೇಳೆ, ಹಾಲು, ಖೋವಾ ಹಾಲಿನ ಪದಾರ್ಥಗಳು.

ಸಾಕಷ್ಟು ಸೇವಿಸಿ 

ಹಸಿರು ಸೊಪ್ಪುಗಳು, ಹಣ್ಣುಗಳು, ಇತರೆ ತರಕಾರಿಗಳು, ಸಲಾಡ್‌, ನೀರು.

ಎಂದಾದರೊಮ್ಮೆ ತಿನ್ನಿ 

ಸಿಹಿ ಪದಾರ್ಥಗಳು, ಅತಿ ಸಿಹಿಯಾದ ಬಾಳೆಹಣ್ಣು, ಮಾವು, ಸಪೋಟಾ, ಚೀಸ್‌, ಕೇಕ್‌,  ಚಾಕ್ಲೆಟ್‌, ಐಸ್‌ಕ್ರೀಮ್, ಬಿಸ್ಕತ್ತು, ಫಾಸ್ಟ್ ಫುಡ್‌, ಸಾಫ್ಟ್ ಡ್ರಿಂಕ್ಸ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ