ಕಥೆ - ಸ್ನೇಹಾ ಆನಂದ್
ತಾಯಿ ತಂದೆಯರ ಒಬ್ಬಳೇ ಮುದ್ದಿನ ಮಗಳಾಗಿದ್ದ ಶ್ರಾವಣಿಗೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಕ್ಕಿಬಿಟ್ಟಿತ್ತು. ಯೌವನದ ಹುಚ್ಚು ಹೊಳೆಯಲ್ಲಿ ಸಿಲುಕಿದ ಅವಳಿಗೆ ಮುಂದೆ ತಾನೇನು ಮಾಡುತ್ತಿದ್ದೇನೆ ಎಂದು ತಿಳಿಯದೆ ಎಡಹುದರಲ್ಲಿದ್ದಳು. ಮುಂದೆ.....?
ಮಾಣಿಕ್ಯ ರಾಯರು ಮತ್ತು ಯಮುನಾರಿಗೆ ಒಬ್ಬಳೇ ಮಗಳು ಶ್ರಾವಣಿ. ಮುದ್ದು ಮಗಳನ್ನು ಅತಿ ಮುದ್ದು ಮಾಡಿ ಬೆಳೆಸಿದ್ದರು.
ಈ ದಂಪತಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗದ ಕಾರಣ ಆತಂಕಕ್ಕೆ ಒಳಗಾದರು. ದಂಪತಿ ವೈದ್ಯರ ಬಳಿಗೆ ಹೋದರು. `ನಿಮ್ಮ ಗರ್ಭಕೋಶದಲ್ಲಿ ತೊಂದರೆ ಇದೆ. ಮಕ್ಕಳಾಗುವ ಸಾಧ್ಯತೆಯೇ ಇಲ್ಲ,' ಎಂದು ವೈದ್ಯರು ಪರೀಕ್ಷಿಸಿ ಹೇಳಿದರು.
ಯಮುನಾ ಧರೆಗಿಳಿದು ಹೋದಳು. ಅದೇ ಕೊರಗಿನಲ್ಲಿ ಊಟ ನಿದ್ದೆ ಬಿಟ್ಟು ನಿಶ್ಶಕ್ತಿಗೆ ಒಳಗಾದಳು. ಆ ಸಮಯದಲ್ಲಿ ದೇವರಂತೆ ಬಂದಿದ್ದು ಮಾಣಿಕ್ಯ ರಾಯರ ಗೆಳೆಯ ತಾರಾನಾಥರು. ಅವರು ಒಂದು ಅನಾಥ ಮಗುವನ್ನು ತಂದು ಮಾಣಿಕ್ಯ ರಾಯರ ಕೈಯಲ್ಲಿಟ್ಟರು. ಜೊತೆಗೆ ಅವರನ್ನು ತಮ್ಮೊಂದಿಗೆ ಶಿವಮೊಗ್ಗಕ್ಕೆ ಬರುವಂತೆ ಒತ್ತಾಯ ಮಾಡಿ, ಮೈಸೂರಿನಿಂದ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ದರು. ಹೀಗಾಗಿ ಯಾರಿಗೂ ಶ್ರಾವಣಿ ದತ್ತು ಮಗಳೆಂದು ಗೊತ್ತಾಗಲಿಲ್ಲ. ತಮಗೆ ಸಿಕ್ಕಿದ ಪುಟ್ಟ ಹಸು ಕಂದನನ್ನು ಸ್ವಂತ ಮಗಳಂತೆಯೇ ಅತಿ ಪ್ರೀತಿಯಿಂದ ಬೆಳೆಸಿದರು. ತುಂಬಾ ಮೃದು ಸ್ವಭಾದ ಶ್ರಾವಣಿ ತಾಯಿ ತಂದೆಯರ ಕಣ್ಮಣಿಯಾಗಿ ಬೆಳೆದಳು. ಮಾಣಿಕ್ಯ ರಾಯರಿಗೆ ತಮ್ಮ ಮುದ್ದಿನ ಮಗಳ ಬಗ್ಗೆ ತುಂಬಾ ಅಭಿಮಾನ. ಶಾಲೆಯ ಬಸ್ಸು ಬರುತ್ತಿದ್ದರೂ ಕೂಡ ಮಗಳನ್ನು ಶಾಲೆಗೆ ಕಳುಹಿಸಲು ತಾವೇ ಹೋಗುತ್ತಿದ್ದರು.
ಆಟಕ್ಕೆ ಹೋದ ಶ್ರಾವಣಿ ಮನೆಗೆ ಬರಲು ಸ್ವಲ್ಪ ತಡವಾದರೂ, ಯಮುನಾ ಬಾಗಿಲ ಬಳಿ ಕಾಯುತ್ತಾ ನಿಲ್ಲುತ್ತಿದ್ದರು. ಅವಳಿಗೆ ಆಟ ಆಡುವಾಗ ಸ್ವಲ್ಪ ಪೆಟ್ಟಾದರೂ ಅದರ ನೋವನ್ನು ಮಾಣಿಕ್ಯ ರಾಯರು ಅನುಭವಿಸುತ್ತಿದ್ದರು. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದ್ದ ಪುಟ್ಟ ಮಗಳು ಕಾಲೇಜಿಗೆ ಹೋಗಲು ಶುರು ಮಾಡಿ ಕೊನೆಯ ವರ್ಷದಲ್ಲಿರುವುದು ಆಶ್ಚರ್ಯ ತಂದಿತ್ತು ಮಾಣಿಕ್ಯ ರಾಯರು ಮತ್ತು ಯಮುನಾ ದಂಪತಿಗೆ.
ಯಾರಾದರೂ ಮಗಳ ಜಾತಕವನ್ನು ಕೇಳಿ ಮದುವೆ ಮಾಡ್ತೀರಾ ಮಗಳಿಗೆ ಎಂದು ಕೇಳಿದಾಗ, ತಮಗೆ ಮಕ್ಕಳಾಗದ ಸಮಯದಲ್ಲಿ ಅನುಭವಿಸಿದ ನೋವು ಮರಳಿ ಬಂದಂತೆ ಭಾಸವಾಗತೊಡಗಿತು.
ದಿನಗಳು ಹೇಗೆ ಓಡಿದ. ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಗಳು ಇಷ್ಟು ಬೇಗ ದೊಡ್ಡವಳಾಗಿಬಿಟ್ಟಳು. ಸರಿಯಾದ ಸಮಯಕ್ಕೆ ಮಗಳಿಗೆ ಮದುವೆ ಮಾಡಲೇ ಬೇಕಾದುದು ಅನಿವಾರ್ಯವಾಗಿದ್ದರಿಂದ ಪ್ರೀತಿಯ ಮಗಳಿಗಾಗಿ ಒಳ್ಳೆಯ ವರನನ್ನು ನೋಡತೊಡಗಿದರು. ಶ್ರಾವಣಿ ವಯಸ್ಸಿಗೆ ತಕ್ಕಂತೆ ಸುಂದರವಾಗಿ ಹೂವಿನಂತೆ ಅರಳಿದಳು. ತಾಯಿ ತಂದೆಯರ ಮಾತಿನಂತೆ ನಡೆಯುತ್ತಿದ್ದ ಶ್ರಾವಣಿ ಯಾವತ್ತೂ ಅವರ ಮಾತಿಗೆ ಎದುರಾಡುತ್ತಿರಲಿಲ್ಲ.
ಆದರೆ ವಯಸ್ಸಿಗೆ ತಕ್ಕಂತೆ ಕನಸುಗಳು ಅವಳನ್ನು ಸುತ್ತಿದ. ತನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ಮಹೇಂದ್ರನ ಕಡೆಗೆ ಆಕರ್ಷಣೆಗೆ ಒಳಗಾದಳು. ಮಹೇಂದ್ರನೂ ಇವಳನ್ನು ಪ್ರೀತಿಸತೊಡಗಿದ. ಇಬ್ಬರ ಕಣ್ಣುಗಳು ಒಂದಾದಾಗ ಶ್ರಾವಣಿಯ ಮನಸ್ಸು ಆಕಾಶಕ್ಕೆ ಹಾರಿತು. ಮನೆಯಲ್ಲಿ ಈ ವಿಷಯ ತಿಳಿಸುವ ಬಗ್ಗೆ ಧೈರ್ಯವಿಲ್ಲದೆ ಚಡಪಡಿಸಿದಳು ಶ್ರಾವಣಿ.





