ತಾಯಿ ತನ್ನ ಮಗುವಿಗೆ ಲಾಲನೆ ಪಾಲನೆ ಮಾಡುವುದು ಬಹುಮುಖ್ಯ ಕರ್ತವ್ಯಗಳಲ್ಲೊಂದು. ದಿನಪೂರ್ತಿ ತನ್ನ ಆರೋಗ್ಯ ನೋಡಿಕೊಳ್ಳುವುದರ ಜೊತೆಗೆ ಮಗುವಿನ ಆರೈಕೆ ಮಾಡುವುದು ಒಂದು ದೊಡ್ಡ ಜವಾಬ್ದಾರಿ ಕೂಡ.
ಮಗು ಹಾಸಿಗೆಯಲ್ಲಿ ಗಲೀಜು ಮಲ ಮೂತ್ರ ವಿಸರ್ಜನೆ ಮಾಡಬಾರದು ಎಂಬ ಕಾರಣಕ್ಕೆ ಡೈಪರ್ ತೊಡಿಸುವುದು ಸರ್ವೇಸಾಮಾನ್ಯ. ಡೈಪರ್ ತೊಡಿಸುವುದರಿಂದ ತಾಯಿ ಮಗು ಇಬ್ಬರ ದಿನಚರಿ ಸುಗಮವಾಗಿ ಇರಬಹುದು. ಆದರೆ ಡೈಪರ್ ಆಗಾಗ್ಗೆ ಬದಲಿಸದೆ, ಸೂಕ್ತ ಕಾಳಜಿ ವಹಿಸದಿದ್ದರೆ ಅದೇ ಒಂದು ದೊಡ್ಡ ಸಮಸ್ಯೆಯಾಗುತ್ತದೆ.
ಮಗುವಿಗೆ ತೊಡಿಸುವ ಡೈಪರ್‌ನಿಂದ ಗುಳ್ಳೆ ಅಥವಾ ರಾಶೆಸ್ ಉಂಟಾಗುವುದು, ಆ ಭಾಗವೆಲ್ಲ ಕೆಂಪಗಾಗಿ, ಉರಿ, ನೋವು ಉಂಟಾಗುವುದು ಎಲ್ಲಾ ಕಾಲಗಳಲ್ಲಿ ಸಾಮಾನ್ಯವಾದರೂ, ಬೇಸಿಗೆಯಲ್ಲಿ ಇದರ ಬಾಧೆ ಹೆಚ್ಚು.
ರಾಶೆಸ್ ಉಂಟಾಗಲು ಕಾರಣಗಳು
ಮೊದಲನೆಯದಾಗಿ ದೀರ್ಘಕಾಲ ಡೈಪರ್ ಹಾಕುವುದರಿಂದ ಮಕ್ಕಳ ಮೃದು ತ್ವಚೆಯಲ್ಲಿ ಘರ್ಷಣೆಯಿಂದ ಉರಿಯೂತ ಉಂಟಾಗಿ ಗುಳ್ಳೆ, ಕೆಂಪಡರುವುದು, ತುರಿಕೆ ಉಂಟಾಗುವುದು ಇತ್ಯಾದಿ ಕಂಡುಬರುತ್ತದೆ.
ಪುಟ್ಟ ಮಕ್ಕಳಿಗೆ ಡೈಪರ್ ಹಾಕಿದಾಗ ಅದರ ಸುತ್ತಲಿನ ಜಾಗದಲ್ಲಿ ಬೆವರು, ಸ್ರಾವ ಇತ್ಯಾದಿಗಳಿಂದ ಒದ್ದೆಯಾದಾಗ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರದ ಸೋಂಕು ಉಂಟಾಗುತ್ತದೆ. ಅಲ್ಲದೆ ಉರಿಯೂತದಿಂದ ಚರ್ಮ ಕೆಂಪಾಗುವುದು, ಉರಿ, ಗುಳ್ಳೆ, ನೋವು ಕಾಣಿಸಿಕೊಳ್ಳುತ್ತದೆ.
ಮಗುವಿಗೆ ಬಳಸು ಸೋಪು, ಪೌಡರ್, ಲೋಶನ್ ಹಾಗೂ ಬಟ್ಟೆಗೆ ಬಳಸುವ ಡಿಟರ್ಜೆಂಟ್ ಇತ್ಯಾದಿಗಳಲ್ಲಿರುವ ರಾಸಾಯನಿಕ ದ್ರವ್ಯಗಳ ಪರಿಣಾಮವಾಗಿ ಶಿಶುಗಳ ಕೋಮಲವಾದ ತ್ವಚೆಗೆ ಘಾಸಿಯಾಗುತ್ತದೆ. ಇದರಿಂದಾಗಿ ಡೈಪರ್ ಧರಿಸಿದಾಗ ಗುಳ್ಳೆ, ಉರಿಯೂತ, ಸ್ರಾವ ಇತ್ಯಾದಿ ಕಂಡುಬರುತ್ತದೆ. ಇಂಥ ವಸ್ತುಗಳ ಧಾರಣೆ ಅಥವಾ ಬಳಕೆಯಿಂದ ಅಲರ್ಜಿ ಉಂಟಾಗಿ ತಕ್ಷಣವೇ ಗುಳ್ಳೆ ಉಂಟಾಗುತ್ತದೆ.
ಮಕ್ಕಳಲ್ಲಿ ಶೀತ, ಕೆಮ್ಮು, ಭೇದಿ, ವಾಂತಿ ಅಥವಾ ಇನ್ಯಾವುದಾದರೂ ರೋಗ ಉಂಟಾದಾಗ ನೀಡುವು ಆ್ಯಂಟಿಬಯಾಟಿಕ್ ಅಥವಾ ಜೀವಾಣು ನಿರೋಧಕ ಔಷಧಿ ಸೇವನೆಯಿಂದ ಸೋಂಕನ್ನು ಉಂಟು ಮಾಡುತ್ತದೆ. ಇದರಿಂದ ಸಹ ಡೈಪರ್ ರಾಶೆಸ್ ಕಂಡುಬರುತ್ತದೆ.
ಅಲ್ಲದೆ, ಹಾಲೂಡಿಸವ ತಾಯಂದಿರು ದೀರ್ಘಕಾಲೀನ ಅಥವಾ ತೀಕ್ಷ್ಣ ಜೀವಾಣು ನಿರೋಧಕಗಳನ್ನು ಬಳಸಿದಾಗಲೂ ಸಹ ಮಗುವಿನ ಮೇಲೆ ಪರಿಣಾಮವಾಗಿ ಇದೂ ಡೈಪರ್ ರಾಶೆಸ್‌ಗೆ ಪರೋಕ್ಷ ಕಾರಣವಾಗಿ ಪರಿಣಮಿಸುತ್ತದೆ.
ದೀರ್ಘಕಾಲ ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ಕಾಲ ಡೈಪರ್ ಹಾಕಿದರೆ ವಿಸರ್ಜನೆಯಾದ ಮಲಮೂತ್ರ, ಬೆವರು ಇತ್ಯಾದಿಗಳೊಂದಿಗೆ ಬೆರೆತು, ಅಶುಚಿತ್ವ ಹಾಗೂ ಒದ್ದೆ ಬಟ್ಟೆಯ ಸಂಪರ್ಕದಿಂದ ಡೈಪರ್ ರಾಶೆಸ್ ಶೀಘ್ರ ಉಂಟಾಗುತ್ತದೆ. ಅಲ್ಲದೆ ಮಕ್ಕಳ ಮೂತ್ರದಲ್ಲಿ ಆಮ್ಲೀಯತೆ ಹೆಚ್ಚಿದ್ದರೆ ಅದರಿಂದಲೂ ಡೈಪರ್ ರಾಶೆಸ್ ಬೇಗನೆ ಉಂಟಾಗುತ್ತದೆ.
ಡೈಪರ್ ಗಳಲ್ಲಿ ಬಳಸುವ ಎಲಾಸ್ಟಿಕ್ ನಿಂದ ಸಹ ಅಲರ್ಜಿಯಾಗಿ ಅದರಿಂದಲೂ ಡೈಪರ್ ರಾಶೆಸ್ ಉಂಟಾಗುತ್ತದೆ. ಇನ್ನು ಕೆಲವು ಮಕ್ಕಳಿಗೆ ಕೆಲವು ಬ್ರಾಂಡ್‌ನ ಡೈಪರ್ ಧರಿಸಿದಾಗ ಮಾತ್ರ ಗುಳ್ಳೆಗಳು ಉಂಟಾಗುವುದು ಕಂಡುಬರುತ್ತದೆ. ಇನ್ನು ಕೆಲವು ಮಕ್ಕಳು ಚರ್ಮದ ರೋಗಗಳಾದ `ಎಗ್ಸಿಮಾ' ಅಥವಾ `ಆಟೋಪಿಕ್ ಡರ್ಮಟೈಟಿಸ್' ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅಂಥ ಮಕ್ಕಳಿಗೆ ಡೈಪರ್ ಹಾಕಿದಾಗ ಬೇಗ ಬೇಗನೇ ಗುಳ್ಳೆ, ಸ್ರಾವ, ಉರಿ ಉಂಟಾಗುತ್ತದೆ.