ಮೈಮನಸ್ಸನ್ನು ದಹಿಸುವ ಬಿಸಿಲಿನಿಂದ ಮಳೆ ನಮಗೆ ನಿರಾಳತೆ ಒದಗಿಸುತ್ತದೆ. ಆದರೆ ಮಳೆಯಾಗುತ್ತಿದ್ದರೂ ಕೆಲವೊಂದು ವಿಭಾಗದಲ್ಲಿ ವಾತಾವರಣದಲ್ಲಿನ ಉಷ್ಣತೆ ಮಾತ್ರ ಕಡಿಮೆಯಾಗಿರುವುದಿಲ್ಲ. ಈ ಕಾರಣದಿಂದ ಬ್ಯಾಕ್ಟೀರಿಯಾ ಹಾಗೂ ಫಂಗಲ್ ಸೋಂಕು ಸಕ್ರಿಯವಾಗಿರುತ್ತವೆ. ಈ ಕಾಲದಲ್ಲಿ ಡೆಂಗ್ಯೂ, ಮಲೇರಿಯಾಗಳ ಪ್ರಮಾಣ ಹೆಚ್ಚಾಗಿರುತ್ತದೆ. ತೀವ್ರ ಉಷ್ಣತೆಯಿಂದಾಗಿ ದೇಹದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ.

ಹಾಗಾದರೆ ಮಳೆಗಾಲದ ಮಜ ಪಡೆಯಲೇಬಾರದಾ? ಮಳೆಗಾಲದ ಮಜವನ್ನು ಯಥೇಚ್ಛವಾಗಿ ಪಡೆದುಕೊಳ್ಳಲು ಆರೋಗ್ಯಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಪಾಲಿಸಿ.

ಸೊಳ್ಳೆಗಳಿಂದ ರಕ್ಷಣೆ

ಅಂದಹಾಗೆ ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳು ಬೇಸಿಗೆಯಲ್ಲೇ ಕಾಣಿಸಿಕೊಂಡು ಇರುತ್ತವೆ. ಮಳೆಗಾಲ ಶುರುವಾಗುತ್ತಿದ್ದಂತೆಯೇ ಅವುಗಳ ಉಪಟಳ ಮೇರೆ ಮೀರುತ್ತದೆ. ಉಷ್ಣತೆಯ ವಾತಾವರಣ ಏರುತ್ತಿದ್ದಂತೆ ಕ್ರಿಮಿಕೀಟಗಳು ಉದ್ಭವಿಸಲು ಅವಕಾಶ ದೊರಕುತ್ತದೆ. ಎಲ್ಲೆಲ್ಲಿ ನೀರು ನಿಂತಿರುತ್ತೊ, ಅಲ್ಲಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲಾರಂಭಿಸುತ್ತವೆ. ಹೀಗಾಗಿ ಸೊಳ್ಳೆಗಳು ಕೂತಿರುವ ಕಡೆ ಕ್ರಿಮಿನಾಶಕ ಔಷಧಿಗಳನ್ನು ಸಿಂಪರಣೆ ಮಾಡಿ.ಹೆಚ್ಚು ನೀರು ಸೇವಿಸಿ. ಅತಿ ಹೆಚ್ಚು ಉಷ್ಣತೆಯಲ್ಲಿ, ಹೆಚ್ಚು ಬೆವರು ಹೊರಹೊಮ್ಮುವುದು. ಈ ಕಾರಣದಿಂದ ಡೀಹೈಡ್ರೇಶನ್‌ ಉಂಟಾಗುವುದು ಸಹಜ. ವರ್ಷದ ಬೇರೆ ತಿಂಗಳಲ್ಲಿ ಇರುವಂತೆ ನಿಮ್ಮನ್ನು ನೀವು ಹೈಡ್ರೇಟ್‌ ಆಗಿಟ್ಟುಕೊಳ್ಳುವುದು ಅತ್ಯವಶ್ಯ. ಶುದ್ಧ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ. ಏಕೆಂದರೆ ನಿಮ್ಮ ದೇಹ ಹೈಡ್ರೇಟ್‌ ಆಗಿರಬೇಕು. ಇದರಿಂದ ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ದೊರಕುತ್ತದೆ. ಇದರ ಹೊರತಾಗಿ ದೇಹದಿಂದ ವಿಷಕಾರಕ ಘಟಕಗಳು ಹೊರಹೋಗುತ್ತವೆ.

7-upaye-barsaat-2

ಬ್ಯಾಕ್ಟೀರಿಯಲ್ ಮತ್ತು ಫಂಗಲ್ ಸೋಂಕಿನಿಂದ ರಕ್ಷಣೆ

ಮಾನ್ಸೂನ್‌ ತಿಂಗಳುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕು ಬಹುಬೇಗ ಹರಡುತ್ತದೆ. ಏಕೆಂದರೆ ಈ ಹವಾಮಾನದಲ್ಲಿನ ತೇವಾಂಶ ಅವುಗಳ ವೃದ್ಧಿಗೆ ಸಹಕಾರಿಯಾಗಿದೆ. ತ್ವಚೆಯ ಸೋಂಕಿನಿಂದ ಪಾರಾಗಲು  ನಿಮ್ಮ ತ್ವಚೆಯನ್ನು ಹೆಚ್ಚು ಹೊತ್ತು ನೆನೆಯಲು ಬಿಡಬೇಡಿ.  ಮನೆಯಲ್ಲಿನ ಅತಿಯಾದ ತೇವದ ವಾತಾವರಣದಿಂದ ಫಂಗಲ್ ಸೋಂಕು ಹೆಚ್ಚುತ್ತದೆ. ಬ್ಯಾಕ್ಟೀರಿಯಲ್ ಹಾಗೂ ಫಂಗಲ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್‌ ಕ್ರೀಮ್ ಹಾಗೂ ಪೌಡರ್‌ನ್ನು ಬಳಸಿ. ನಿಮ್ಮ ತ್ವಚೆ ಹೆಚ್ಚು ಸಂವೇದನಾಶೀಲವಾಗಿದ್ದರೆ, ಇದು ಇನ್ನೂ ಅವಶ್ಯಕವಾಗುತ್ತದೆ.

ತೇವಾಂಶವಿರುವ ವಾತಾವರಣದಲ್ಲಿ ಫಂಗಲ್ ಬಹುಬೇಗ ಪಸರಿಸುತ್ತದೆ. ದೇಹದ ಆಯಕಟ್ಟಿನ ಜಾಗದಲ್ಲಿ ಕೆಂಪು ಗುರುತುಗಳು ಕಂಡುಬರುತ್ತವೆ. ಇದರ ಹೊರತಾಗಿ ತೈಲ ತ್ವಚೆ ಇರುವವರಿಗೆ ದೇಹದ ಮೇಲೆ ಕಾಳಿನಂತಹ ಗುರುತುಗಳು ಕಂಡುಬರುತ್ತವೆ. ಅವುಗಳಲ್ಲಿ ತುರಿಕೆ ಕೂಡ ಉಂಟಾಗುತ್ತದೆ. ಬಹಳಷ್ಟು ಬೆವರು ಬರುವಂತಹ ಸ್ಥಿತಿಯಲ್ಲಿ ನೀವು ತ್ವಚೆಯನ್ನು ಶುಷ್ಕವಾಗಿಟ್ಟುಕೊಳ್ಳದೇ ಇದ್ದಲ್ಲಿ, ಬಟ್ಟೆಯನ್ನು ಬದಲಿಸದೇ ಇದ್ದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಹೆಚ್ಚು ಹೊತ್ತಿನ ತನಕ ಬೆವರಿನಿಂದ ಕೂಡಿದ ಸಾಕ್ಸ್ ಧರಿಸುವುದರಿಂದಲೂ ಈ ಸಮಸ್ಯೆ ಮತ್ತಷ್ಟು ಉಗ್ರರೂಪ ತಾಳಬಹುದು. ಹೀಗಾಗಿ ನಿಮ್ಮ ಕಾಲುಗಳನ್ನು ಶುಷ್ಕದಿಂದಿರುವಂತೆ ಹಾಗೂ ಸೋಂಕು ಮುಕ್ತವಾಗಿರುವಂತೆ ನೋಡಿಕೊಳ್ಳಿ.

ಸ್ನಾನ ಮಾಡಿದ ಬಳಿಕ ತಲೆ ಹಾಗೂ ದೇಹದ ಇತರ ಭಾಗವನ್ನು ಚೆನ್ನಾಗಿ ಒರೆಸಿಕೊಳ್ಳಿ. ಬೆರಳುಗಳ ಮಧ್ಯದ  ಜಾಗವನ್ನು ಕೂಡ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ನೀವು ಸೋಂಕು ರಹಿತವಾಗಿ ಇರಬಹುದು.

ಮನೆಯಲ್ಲಿ ಪ್ರವೇಶಿಸುತ್ತಿದ್ದಂತೆಯೇ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಸಾಧ್ಯವಾದರೆ, ನೀವು ಕಾಲು ತೊಳೆದುಕೊಳ್ಳುವ ನೀರಿನಲ್ಲಿ `ಬೆಟಾಡಿನ್‌’ ಹನಿಗಳನ್ನು ಬೆರೆಸಿ. ಬಳಿಕ ಅದರಲ್ಲಿ ಸ್ವಲ್ಪ ಹೊತ್ತು ಕಾಲು ಇಳಿಬಿಟ್ಟುಕೊಂಡು ಕುಳಿತುಕೊಳ್ಳಿ. ಅಗತ್ಯಬಿದ್ದರೆ ಆ್ಯಂಟಿಫಂಗಲ್ ಪೌಡರ್‌ನ್ನು ಉಪಯೋಗಿಸಿ. ಕಾಲುಗಳಿಗೆ ಗಾಳಿ ತಗಲುವಂತೆ ಓಪನ್‌ ಶೂ ಅಥವಾ ಚಪ್ಪಲಿ ಧರಿಸಿ.

ಕರಿದ ಪದಾರ್ಥಗಳು, ಹೊರಗಿನ ಪದಾರ್ಥಗಳನ್ನು ವರ್ಜ್ಯ ಮಾಡಿ ಮಳೆಗಾಲದಲ್ಲಿ ಅಪಚನ ಕೂಡ ಒಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಉಷ್ಣತೆ ಅಧಿಕವಾಗಿದ್ದಾಗ ದೇಹದಲ್ಲಿ ಪಚನ ಕ್ರಿಯೆ ಮಂದಗೊಳ್ಳುತ್ತದೆ. ನಿಮ್ಮ ಪಚನ ವ್ಯವಸ್ಥೆ ಅಸ್ತವ್ಯಸ್ತಗೊಂಡಾಗ ಅತಿಯಾದ ಆಹಾರ ನಿಮ್ಮ ಹೊಟ್ಟೆಯನ್ನು ಬಿಗಡಾಯಿಸುತ್ತದೆ. ಹೀಗಾಗಿ ಅಂತಹ ಸ್ಥಿತಿ ತಂದುಕೊಳ್ಳಬೇಡಿ. ಕರಿದ ಪದಾರ್ಥಗಳು ತ್ವಚೆಯಲ್ಲಿ ಸೋಂಕು ಮತ್ತು ಇತರೆ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಈ ಕಾಲದಲ್ಲಿ ಸುಲಭವಾಗಿ ಪಚನವಾಗುವಂತಹ ಆಹಾರಗಳನ್ನೇ ಸೇವಿಸಿ.

ಸೋಂಕು ತಗಲುವ ಭಯ ಇರುವುದರಿಂದ ಹೊರಗಿನ ತಿಂಡಿಗಳನ್ನು ಆದಷ್ಟು ವರ್ಜ್ಯ ಮಾಡಿ. ಮನೆಯಲ್ಲಿ ತಯಾರಿಸಿದ ಆಹಾರಗಳೇ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಕಣ್ಣುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಈ ಹವಾಮಾನದಲ್ಲಿ ಕಣ್ಣುಗಳ ವೈರಲ್ ಸೋಂಕು ಕೂಡ ಚಿಂತೆಗೆ ಕಾರಣವಾಗುತ್ತದೆ. ಅಂದಹಾಗೆ ಈ ಹವಾಮಾನದಲ್ಲಿ ಅಂತಹ ಸೋಂಕುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಕಷ್ಟದ ವಿಷಯವೇ ಸರಿ. ಆದರೆ ಕಣ್ಣುಗಳ ಸ್ವಚ್ಛತೆಗೆ ಆದ್ಯತೆ ಕೊಡುವುದರ ಮೂಲಕ ನೀವು ಸೋಂಕಿನ ಅಪಾಯವನ್ನು ಕಡಿಮೆಗೊಳಿಸಿಕೊಳ್ಳಬಹುದಾಗಿದೆ. ಮನೆಯಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ಸೋಪ್‌ ನಿಂದ ಕೈ ತೊಳೆದುಕೊಂಡು ಕಣ್ಣುಗಳನ್ನು ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಕಣ್ಣುಗಳಲ್ಲಿ ರೋಸ್‌ ವಾಟರ್‌ನ ಒಂದೆರಡು ಹನಿ ಹಾಕಿಕೊಳ್ಳಬಹುದು. ನೀರಿನಲ್ಲಿ ಸಲ್ಛರ್‌ನ ತುಂಡು ಹಾಕಿಡಬಹುದು. ಬಳಿಕ ಆ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿಕೊಳ್ಳಬಹುದು.

ರೋಗನಿರೋಧಕ ಶಕ್ತಿ ವರ್ಧಿಸಲು ಸೋಂಕಿನಿಂದ ಪಾರಾಗುವ ಎಲ್ಲಕ್ಕೂ ಪ್ರಮುಖ ಉಪಾಯವೆಂದರೆ ನಮ್ಮ ದೇಹವನ್ನು ಆಂತರಿಕವಾಗಿ ಸದೃಢಗೊಳಿಸುವುದು. ಈ ಸದೃಢತನ ನಮ್ಮಲ್ಲಿ ಬರುವುದು ಆಹಾರದಿಂದ ಮಾತ್ರ ಸಾಧ್ಯ. ದೇಹವನ್ನು ಹೊಳಪುಳ್ಳದಾಗಿ ಹಾಗೂ ಆಂತರಿಕವಾಗಿ ಬಲಿಷ್ಠಗೊಳಿಸಲು ನಿಯಮಿತವಾಗಿ ರಸಭರಿತ ಹಣ್ಣುಗಳನ್ನು ಹಾಗೂ ಹಸಿರು ತರಕಾರಿಗಳನ್ನು ಸೇವಿಸಿ. ಸೇಬು, ದಾಳಿಂಬೆ, ಬಾಳೆಹಣ್ಣು, ಬೆಳ್ಳುಳ್ಳಿ ಮುಂತಾದವನ್ನು ಉಪಯೋಗಿಸಿ. ನಿಯಮಿತವಾಗಿ ಮೊಸರು ಸೇವಿಸಿ.

ಸ್ವಚ್ಛತೆಗಾಗಿ ನಿಯಮಗಳ ಪಾಲನೆ

ಮಳೆಗಾಲದಲ್ಲಿ ಸೋಂಕು ಬಹುಬೇಗ ಪಸರಿಸುತ್ತದೆ. ಹೀಗಾಗಿ ನಿಮ್ಮನ್ನು ನೀವು ಎಷ್ಟು ಸ್ವಚ್ಛ ಇಟ್ಟುಕೊಳ್ಳುತ್ತೀರೊ ನೀವು ಸೋಂಕಿಗೆ ತುತ್ತಾಗುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ. ನಾವು ಹಲವು ಸಲ ಸಾರಿಗೆ ವಾಹನಗಳಲ್ಲಿ ಸಂಚರಿಸುತ್ತಿರುತ್ತೇವೆ.  ಅಲ್ಲಿ ಹತ್ತು ಹಲವು ಜನ ಬೇರೆ ಬೇರೆ ಸೋಂಕಿಗೆ ತುತ್ತಾಗದವರಿರುತ್ತಾರೆ. ಹೀಗಾಗಿ ಮನೆಗೆ ಬರುತ್ತಲೇ ಕೈಕಾಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಸಾಧ್ಯವಿದ್ದರೆ ಸ್ನಾನ ಮಾಡಿಬಿಟ್ಟರೆ ಮತ್ತಷ್ಟೂ ಒಳ್ಳೆಯದು. ಬಳಿಕ ದೇಹವನ್ನು ಚೆನ್ನಾಗಿ ಒರೆಸಿಕೊಂಡು ಒಣಗಿಸಿಕೊಳ್ಳಿ.

ಡಾ. ರಶ್ಮಿ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ