ಹಬ್ಬಗಳ ಸೀಸನ್‌ನಲ್ಲಿ ಒಂದೆಡೆ ಉತ್ಸಾಹ ಮೇರೆ ಮೀರಿರುತ್ತದೆ, ಇನ್ನೊಂದೆಡೆ ಸಿದ್ಧತೆಗಳು ಜೋರು ಜೋರಾಗಿ ನಡೆಯುತ್ತಿರುತ್ತವೆ. ಒಂದೆಡೆ ಸ್ವಚ್ಛತೆ, ಇನ್ನೊಂದೆಡೆ ಗೋಡೆಗಳ ಬಣ್ಣದ ಕೆಲಸ, ಮನೆಯಲ್ಲಿ ಹಲವು ಬಗೆಯ ತಿಂಡಿಗಳ ತಯಾರಿ ಕೆಲಸ ಕೂಡ ಶುರುವಾಗಿರುತ್ತದೆ. ಹಬ್ಬಗಳಿಗೆ ಸಿದ್ಧತೆ ಏನು, ಹೇಗೆ, ಯಾವಾಗ ಮಾಡಬೇಕೆಂದು ಮೊದಲೇ ನಿರ್ಧಾರಿತವಾಗಿರುತ್ತದೆ. ಆದರೆ ಆ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಮಾಡಿಬಿಡುತ್ತೇವೆ. ಅದು ನಮ್ಮ ಎನರ್ಜಿ ಲೆವೆಲ್‌ನ್ನು ಕಡಿಮೆಗೊಳಿಸುವ ಕೆಲಸ ಮಾಡುತ್ತದೆ. ಇಂತಹದರಲ್ಲಿ ನೀವು ಹಬ್ಬದ ಆನಂದವನ್ನು ಪಡೆಯಬೇಕು ಹಾಗೂ ಆಂತರಿಕವಾಗಿಯೂ ಫಿಟ್‌ ಆಗಿರಬೇಕು. ಈ ಕುರಿತಂತೆ ವೈದ್ಯರ ಸಲಹೆ ತಿಳಿಯೋಣ :

ಹೈಡ್ರೇಟ್‌ ಆಗಿರುವುದು ಅವಶ್ಯ

ನೀರು ದೇಹದ ತಾಪಮಾನ ಕಾಯ್ದುಕೊಳ್ಳುವ ಕೆಲಸ ಮಾಡುವುದರ ಜೊತೆಗೆ, ದೇಹದ ಚಯಾಪಚಯ ಕ್ರಿಯೆಯನ್ನೂ ಸಮರ್ಪಕವಾಗಿಡಲು ನೆರವಾಗುತ್ತದೆ. ನಾವು ಯಾವುದೇ ಕೆಲಸ ಮಾಡಿದಾಗ ದೇಹದಿಂದ ಬೆವರು ಹೊರ ಬರುತ್ತದೆ. ಅದರಿಂದ ದೇಹದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ.

ಜೊತೆಗೆ ನೀರು ದೇಹದ ವಿಷಕಾರಕ ಘಟಕಗಳನ್ನು ಹೊರಹಾಕುವ ಕೆಲಸ ಕೂಡ ಮಾಡುತ್ತದೆ. ಹೀಗಾಗಿ ನಿಮ್ಮದು ಎಷ್ಟೇ ವ್ಯಸ್ತ ಜೀವನಶೈಲಿಯಾಗಿದ್ದರೂ ಆಗಾಗ ನಡುನಡುವೆ ಸಾಕಷ್ಟು ನೀರು ಕುಡಿಯಿರಿ. ಮಜ್ಜಿಗೆ, ಎಳನೀರು, ಜೂಸ್‌ ಕೂಡ ಕುಡಿಯಬಹುದು.

ಆಗಾಗ ಒಂದಿಷ್ಟು ಆಹಾರ ಸೇವನೆ

ನೀವು ಇಡೀ ದಿನ ಕೆಲಸ ಮಾಡುತ್ತಿದ್ದರೆ, ಎನರ್ಜಿ ಲೆವೆಲ್‌ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ಆಗಾಗ ಒಂದಿಷ್ಟು ಏನನ್ನಾದರೂ ತಿನ್ನುತ್ತಾ ಇರಿ. ನೀವು ಮನೆಯಲ್ಲಿಯೇ ಇದ್ದರೆ ಫ್ರೂಟ್‌ ಚಾಟ್‌ ಮಾಡಿಕೊಂಡು ತಿನ್ನಿ. ಜೂಸ್‌ ಸೇವಿಸಿ ಇಲ್ಲವೇ  ಮೊಳಕೆಕಾಳು, ಹುರಿದ ಕಡಲೆ ತಿನ್ನಿ. ಅದರಿಂದ ನಿಮ್ಮ ಎನರ್ಜಿ ಹಾಗೆಯೇ ಇರುತ್ತದೆ.

ಗೋ ಟು ಗ್ರೀನ್‌ ಡಯೆಟ್‌

ಬೇಗ ತಿನ್ನಬೇಕೆಂಬ ಆತುರದಲ್ಲಿ ಹೊರಗಿನ ಆಹಾರ ಅಥವಾ ಫಾಸ್ಟ್ ಫುಡ್‌ ಮೇಲೆ ಅವಲಂಬಿತರಾಗಿದ್ದರೆ, ನಿಮ್ಮ ಹೊಟ್ಟೆಯೇನೊ ತುಂಬುತ್ತದೆ. ಆದರೆ ಪೋಷಕಾಂಶಗಳ ಕೊರತೆಯಾಗುತ್ತದೆ. ಹೀಗಾಗಿ ಹಸಿರು ತರಕಾರಿಗಳಾದ ಪಾಲಕ್‌ ಸೂಪ್‌, ವೆಜಿಟೆಬಲ್ ಸೂಪ್‌, ಅನ್ನ, ಚಪಾತಿಯ ಜೊತೆಗೆ ಹಸಿರು ತರಕಾರಿಗಳ ಪಲ್ಯ ಮುಂತಾದವನ್ನು ತಿನ್ನಿ. ಅವು ದೇಹದಲ್ಲಿ ಸ್ಛೂರ್ತಿ ತರುವುದರ ಜೊತೆಗೆ ಹಬ್ಬಕ್ಕಾಗಿ ಹೊಸ ಶಕ್ತಿ ನೀಡುವ ಕೆಲಸ ಮಾಡುತ್ತದೆ.

ಫಿಟ್‌ ಆಗಿರಲು ಹೆಲ್ದಿ ರೆಸಿಪಿ

ಹಬ್ಬಕ್ಕಾಗಿ ಎಲ್ಲರೂ ಹೊಸದನ್ನು ಪ್ರಯತ್ನಿಸುವ ಮೂಡ್‌ನಲ್ಲಿರುತ್ತಾರೆ. ಇಂತಹದರಲ್ಲಿ ನೀವು ಕೂಡ ಹೆಲ್ಡಿ ರೆಸಿಪಿಗಳನ್ನು ಮಾಡಲು ಏಕೆ ಪ್ರಯತ್ನಿಸಬಾರದು? ವೆಜಿಟೆಬಲ್ ಸ್ಯಾಂಡ್‌ವಿಚ್‌, ರವೆ ಇಡ್ಲಿ ಮಾಡಿಕೊಂಡು ತಿನ್ನಬಹುದು. ಪನೀರ್‌, ಮೊಟ್ಟೆ ಪರೋಟಾ ಕೂಡ ಆರೋಗ್ಯಕ್ಕೆ ಹಿತಕರ.

ವ್ಯಾಯಾಮದಿಂದ ಫಿಟ್‌ ಆಗಿರಿ

ನಾವು ಆಂತರಿಕವಾಗಿ ಫಿಟ್‌ ಆಗಿದ್ದಾಗ ಮಾತ್ರ ಹಬ್ಬದ ಮಜವನ್ನು ಪಡೆಯಬಹುದು. ಅದಕ್ಕಾಗಿ ದಿನ ವ್ಯಾಯಾಮ ಮಾಡುವುದು ಅತ್ಯವಶ್ಯಕ. ಮುಂಜಾನೆಯ ತಾಜಾ ವಾತಾವರಣದಲ್ಲಿ ಉಸಿರಾಟ ನಡೆಸುವುದು ನಿಮ್ಮನ್ನು ಆಂತರಿಕವಾಗಿ ಆರೋಗ್ಯದಿಂದ ಇಡುವುದರ ಜೊತೆ ಜೊತೆಗೆ ನಿಮ್ಮನ್ನು ಫಿಟ್‌ ಆಗಿಡುವ ಕೆಲಸ ಮಾಡುತ್ತದೆ. ನೀವು 15 ನಿಮಿಷಗಳ ಕಾಲ ರನ್ನಿಂಗ್‌, ಜಾಗಿಂಗ್‌ ಅಥವಾ ಹಾಸಿಗೆಯಲ್ಲಿ ಮಲಗಿಕೊಂಡೇ ಸೈಕ್ಲಿಂಗ್‌ ಮಾಡಿದರೆ ಇದರಿಂದ ನಿಮ್ಮ ಆಂತರಿಕ ದಣಿವು ನಿವಾರಣೆ ಆಗುವುದರ ಜೊತೆ ಜೊತೆಗೆ ನಿಮ್ಮ ಎನರ್ಜಿ ಲೆವೆಲ್‌ ಕೂಡ ಬೂಸ್ಟ್ ಆಗುತ್ತದೆ.

ಕ್ಯಾಲೋರಿ ಮಿತಿ ಮೀರದಿರಲಿ

ಹಬ್ಬದ ದಿನಗಳಲ್ಲಿ ನಾವು ಎಷ್ಟೇ ಪ್ರಯತ್ನಪಟ್ಟರೂ ಸಿಹಿ ಹಾಗೂ ಕರಿದ ಪದಾರ್ಥಗಳನ್ನು ತಿನ್ನದೇ ಇರುವುದನ್ನು ತಡೆಯಲು ಆಗುವುದಿಲ್ಲ. ಅದರಿಂದಾಗಿ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕ್ಯಾಲೋರಿ ಸೇರಿಕೊಳ್ಳುತ್ತದೆ. ಅದು ತೂಕ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ ಹಬ್ಬಗಳಿಗೂ ಮುಂಚೆಯೇ  ಕ್ಯಾಲೋರಿ ಸೇವನೆ ಕುರಿತಾದ ಒಂದು ಚಾರ್ಟ್‌ ತಯಾರಿಸಿಕೊಳ್ಳಿ. ಅದರಿಂದ ಯಾವ ಆಹಾರದಿಂದ ಎಷ್ಟು ಪ್ರಮಾಣದಲ್ಲಿ ಕ್ಯಾಲೋರಿ ದೇಹ ಪ್ರವೇಶಿಸುತ್ತದೆ ಎಂಬುದು ಗೊತ್ತಾಗುತ್ತದೆ. ಒಂದು ದಿನದಲ್ಲಿ ನೀವು ಎಷ್ಟು ಕ್ಯಾಲೋರಿ ಸೇವನೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು. ಹಾಗೆ ಮಾಡಿದರೆ ದೇಹಕ್ಕೆ ಅಗತ್ಯಕ್ಕನುಗುಣವಾಗಿಯೇ ಕ್ಯಾಲೋರಿ ಪ್ರವೇಶಿಸುತ್ತದೆ. ಅದರಿಂದ ಎನರ್ಜಿ ಕೂಡ ಹೆಚ್ಚುತ್ತದೆ.

ಮುಖಕಾಂತಿಗೆ ಹೆಲ್ದಿ ಡಯೆಟ್

ತ್ವಚೆಯ ಸೌಂದರ್ಯದ ರಹಸ್ಯ ನಮ್ಮ ಒಳ್ಳೆಯ ಹಾಗೂ ಆರೋಗ್ಯಕರ ಆಹಾರವನ್ನು ಅಲಂಬಿಸಿರುತ್ತದೆ. ಹಬ್ಬದ ಸಂದರ್ಭದಲ್ಲಂತೂ ಪ್ರತಿಯೊಬ್ಬರೂ ಅಂದವಾಗಿ ಕಾಣಲು ಬಯಸುತ್ತಾರೆ. ಏಕೆಂದರೆ ಕುಟುಂಬದವರು, ಸ್ನೇಹಿತರೊಂದಿಗೆ ಬೆರೆಯಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಆರೋಗ್ಯಕರ ಆಹಾರ ಸೇವಿಸಿದರೆ ಮಾತ್ರ ಆಂತರಿಕವಾಗಿ ಸೌಂದರ್ಯ ಕಂಗೊಳಿಸುವಂತೆ ಮಾಡಬಹುದು. ಇಲ್ಲದಿದ್ದರೆ ಮುಖದ ಸಪ್ಪೆ ಕಳೆ ಹಬ್ಬದ ಅದ್ಧೂರಿತನವನ್ನು ಕಡಿಮೆ ಮಾಡಿಬಿಡುತ್ತದೆ.

– ಕೆ. ಅರ್ಚನಾ 

Tags:
COMMENT