ಇಂದಿನ ಗಡಿಬಿಡಿಯ ಜೀವನದ ಕೆಲಸ ಕಾರ್ಯಗಳಲ್ಲಿ ಮಹಿಳೆಯರು ಅದೆಷ್ಟು ತೊಡಗಿಸಿಕೊಂಡಿರುತ್ತಾರೆ ಎಂದರೆ ಅವರಿಗೆ ತಮಗಾಗಿ ಕೊಂಚ ಸಮಯವನ್ನು ಮೀಸಲಿಡಲು ಆಗುತ್ತಿಲ್ಲ. ಇದರಿಂದ ಅವರ ಫಿಟ್‌ನೆಸ್‌ ಪ್ರಭಾವಕ್ಕೊಳಗಾಗುತ್ತಿದೆ. ಜೀವನದಲ್ಲಿ ದೇಹಾರೋಗ್ಯಕ್ಕಿಂತ ಮುಖ್ಯವಾದುದು ಬೇರೊಂದಿಲ್ಲ ಎಂಬುದನ್ನು ನೆನಪಿಡಬೇಕು.

ಹೊಸ ಜೀವನಶೈಲಿಯಲ್ಲಿ ಫಿಟ್‌ನೆಸ್‌

ಇಂದಿನ ದಿನಗಳಲ್ಲಿ ಹೆಚ್ಚಿನ ಕೆಲಸಗಳು ಮೆಶೀನ್‌ಗಳಿಂದಲೇ ನಡೆಯುತ್ತದೆ. ಹೀಗಾಗಿ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗಿವೆ. ವಿಶೇಷವಾಗಿ ದಿನವೆಲ್ಲ ಟೇಬಲ್ ವರ್ಕ್‌ ಮಾಡುತ್ತಾ ಕುಳಿತಂತೇ ಇರುವವರಿಗೆ ಆರೋಗ್ಯದ ತೊಂದರೆ ಎದುರಾಗುತ್ತದೆ. ಸ್ಥೂಲತೆ, ಬ್ಲಡ್‌ ಪ್ರೆಶರ್‌, ಡಯಾಬಿಟೀಸ್‌, ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿಬಿಟ್ಟಿವೆ. ಆದರೆ ನಿಯಮಿತ ವ್ಯಾಯಾಮ, ಉತ್ತಮ ಆಹಾರ ಪದ್ಧತಿ ಮತ್ತು ಒತ್ತಡರಹಿತ ಜೀವನ ಕ್ರಮವನ್ನು ಅನುಸರಿಸುವವರು ದೀರ್ಘಕಾಲ ಆರೋಗ್ಯವಂತರಾಗಿ ಚಟುವಟಿಕೆಯಿಂದ ಇರಬಲ್ಲರು.

ಆಹಾರ ಕ್ರಮದಲ್ಲಿ ಬದಲಾವಣೆ

ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯೊಂದರ ಡಯೆಟಿಶೀಯನ್‌ ಹೀಗೆ ಹೇಳುತ್ತಾರೆ. ಇಂದಿನ ಗಡಿಬಿಡಿಯ ಜೀವನದಲ್ಲಿ  ಹೊಟ್ಟೆ ತುಂಬಿಸಿಕೊಳ್ಳುವ ಆಹಾರ ಪದಾರ್ಥಗಳೇ (ಫಾಸ್ಟ್ ಫುಡ್‌ ಮತ್ತು ಕೋಲ್ಡ್ ಡ್ರಿಂಕ್ಸ್) ಎಲ್ಲಕ್ಕಿಂತ ಹೆಚ್ಚು ಪ್ರಚಲಿತ ಉಪಾಯವಾಗಿವೆ. ಇವುಗಳಲ್ಲಿ ಕ್ಯಾಲೋರಿಯ ಪ್ರಮಾಣ ಬಹಳ ಹೆಚ್ಚಾಗಿದ್ದು, ಸ್ಥೂಲತೆಗೆ ಪ್ರಮುಖ ಕಾರಣವಾಗಿವೆ. ಸಮಯದ ಅಭಾವದಿಂದಾಗಿ ಊಟ ಮಾಡಿಲ್ಲದಿದ್ದರೆ ರಾತ್ರಿ ಹೆಚ್ಚು ಆಹಾರ ಸೇವಿಸುವಿರಿ. ಇದರಿಂದ ಮೆಟಬಾಲಿಸಮ್ ನಲ್ಲಿ ವ್ಯತ್ಯಾಸವಾಗುತ್ತದೆ. 3-4 ಘಂಟೆಗಳಿಗೊಮ್ಮೆ ಏನಾದರೂ ತಿನ್ನುತ್ತಿರಿ. ಇಲ್ಲವಾದರೆ ನಿಮ್ಮ ಬ್ಲಡ್‌ ಶುಗರ್‌ ಲೆವೆಲ್‌ ಏರುಪೇರಾಗಿ ಮೆದುಳಿನ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ಹೊರಗಿನ ಆಹಾರದಲ್ಲಿ ಸೋಡಿಯಮ್ ಶುಗರ್‌ ಮತ್ತು ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವಾಗಲೂ ಮನೆಯ ಊಟಕ್ಕೇ ಆದ್ಯತೆ ನೀಡಿ.

ನಿಮ್ಮ ಡಯೆಟ್‌ನಲ್ಲಿ ಮೊಳಕೆ ಕಾಳು, ಬೇಳೆ, ತರಕಾರಿ, ಹಣ್ಣು, ಹಾಲು ಮತ್ತು ಹಾಲಿನಿಂದ ತಯಾರಿಸಿದ ಪದಾರ್ಥಗಳು, ಒಣಹಣ್ಣುಗಳು ಮುಂತಾದವನ್ನು ಸೇರಿಸಿ.

ದಿನನಿತ್ಯದ ಆಹಾರವನ್ನು ಪೌಷ್ಟಿಕಗೊಳಿಸಿ ಸೇವಿಸಬಹುದು. ಉದಾಹರಣೆಗೆ ದೋಸೆ, ರೊಟ್ಟಿ ಮಾಡುವಾಗ ಅವುಗಳಿಗೆ ತರಕಾರಿಯನ್ನು ಸೇರಿಸಿ. ಬೀನ್ಸ್, ಕ್ಯಾರೆಟ್‌, ಕೋಸು ಮೊದಲಾದ ತರಕಾರಿಗಳನ್ನು ಬೇಯಿಸಿ ತೆಗೆದ ಸೂಪ್‌ ಬಹಳ ಪುಷ್ಟಿಕರ. ಮೊಳಕೆಕಾಳುಗಳಿಗೆ ಸೌತೆಕಾಯಿ, ಕ್ಯಾರೆಟ್‌, ಟೊಮೇಟೊ ಸೇರಿಸಿ ತಿನ್ನಬಹುದು.

ಚಪಾತಿ, ಪರೋಟ ಮಾಡುವಾಗ ತರಕಾರಿ, ಬೇಳೆ, ಸೊಪ್ಪು ಅಥವಾ ಪನೀರ್‌ನ್ನು ಸ್ಟಫಿಂಗ್‌ ಮಾಡಿ.

ಅಡುಗೆಗೆ ಸಾಧ್ಯವಾದಷ್ಟು ಮೈಕ್ರೋವೇವ್‌  ಓವನ್‌ ಬಳಸಿ. ಇದರಲ್ಲಿ ಎಣ್ಣೆಯ ಪ್ರಮಾಣ ಕಡಿಮೆ ಬೇಕಾಗುತ್ತದೆ ಮತ್ತು ನ್ಯೂಟ್ರಿಯಂಟ್ಸ್  ಕೂಡ ನಷ್ಟವಾಗುವುದಿಲ್ಲ.

ಆಹಾರವನ್ನು ಡೀಪ್‌ ಫ್ರೈ ಮಾಡಬೇಡಿ. ನಾನ್‌ಸ್ಟಿಕ್‌ ಪಾತ್ರೆ ಅಥವಾ ಫ್ರೈಪ್ಯಾನ್‌ ಬಳಸಿ ಇದರಲ್ಲಿ ಎಣ್ಣೆಯ ಅಗತ್ಯ ಹೆಚ್ಚಿರುವುದಿಲ್ಲ.

ತರಕಾರಿಗಳನ್ನು ಮೊದಲು ನೀರಿನಿಂದ ತೊಳೆದು ನಂತರ ದೊಡ್ಡ ದೊಡ್ಡ ಚೂರುಗಳಾಗಿ ಹೆಚ್ಚಿರಿ.

ಸೌತೆಕಾಯಿ, ಟೊಮೇಟೊ ಮೊದಲಾದ ಸಲಾಡ್‌ಗಳನ್ನು ಊಟಕ್ಕೆ ಮೊದಲು ತಿನ್ನಿ. ಇವು ಹಸಿವನ್ನು ನಿಯಂತ್ರಣಗೊಳಿಸುತ್ತವೆ ಮತ್ತು ನಿಮ್ಮ ಶರೀರವನ್ನು ದೃಢವಾಗಿಸುತ್ತವೆ.

ಅನ್ನ ಮಾಡುವಾಗ ಗಂಜಿಯನ್ನು ತೆಗೆಯಬೇಡಿ.

ಆಗಾಗ ನೆಲ್ಲಿಕಾಯಿ, ಖರ್ಜೂರ, ಬೆಲ್ಲವನ್ನು ತಿನ್ನುತ್ತಿರಿ. ಇವುಗಳಲ್ಲಿ ಐರನ್‌ ಮತ್ತು ಇತರೆ ನ್ಯೂಟ್ರಿಯೆಂಟ್ಸ್ ಅಧಿಕ ಪ್ರಮಾಣದಲ್ಲಿರುತ್ತವೆ.

ಚಿಪ್ಸ್, ಬಿಸ್ಕತ್ತುಗಳನ್ನು ತಿನ್ನುವ ಬದಲು ಕಡಲೆಕಾಯಿ, ಹುರಿದ ಬಟಾಣಿಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.

ಸುಸ್ಥಿತಿಯಲ್ಲಿರಿಸಿಕೊಳ್ಳುವ ಬಗೆ

ಸಮತೋಲನ ಆಹಾರ ಸೇವಿಸಿ. ಪ್ರೋಟೀನ್‌ ಮತ್ತು ಕಾರ್ಬೊಹೈಡ್ರೇಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ. ಕೊಬ್ಬಿನಂಶ ಕಡಿಮೆ ಇರಲಿ.  ಎಲ್ಲ ಬಗೆಯ ಹಣ್ಣು ಮತ್ತು ಸಲಾಡ್‌ಗಳನ್ನು ತಿನ್ನಿ.

ಮಲಬದ್ಧತೆಯಾಗದಂತೆ ನೋಡಿಕೊಳ್ಳಿ. ಅದಕ್ಕಾಗಿ ಗೋಧಿ, ಜೋಳ ಮತ್ತು ಸೋಯಾಬೀನ್‌ ಮಿಶ್ರಣದ ಹಿಟ್ಟಿನಿಂದ ಮಾಡಿದ ರೊಟ್ಟಿ ತಿನ್ನಿರಿ.

ಬೆಳಗ್ಗೆ ಮೊದಲು 1 ಲೋಟ ಬೆಚ್ಚನೆಯ ನೀರು ಕುಡಿಯಿರಿ.

ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ.

ಮನೆ ಅಥವಾ ಆಫೀಸ್‌ನಲ್ಲಿ ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತಿರಬೇಡಿ. ಮಧ್ಯೆ ಮಧ್ಯೆ ಸ್ವಲ್ಪ ಹೊತ್ತು ನಡೆದಾಡಿ.

ವಿಡಿಯೋ ಗೇಮ್ ಆಡುವ, ಟಿವಿ ನೋಡುವ ಬದಲು ಔಟ್‌ಡೋರ್‌ ಗೇಮ್ ಆಡಿರಿ.

ದಿನಕ್ಕೆ ಅರ್ಧ ಗಂಟೆ ವಾಕಿಂಗ್‌ ಮಾಡಿ ಅಥವಾ ವ್ಯಾಯಾಮ ಮಾಡಿ.

ಬೆಳಗ್ಗೆ ಎದ್ದ ನಂತರ ಹೆಚ್ಚು ಕಾಲ ಹಸಿದಿರಬೇಡಿ. ರಾತ್ರಿ ಮಲಗುವ 2 ಗಂಟೆ ಮೊದಲು ಊಟ ಮಾಡಬೇಡಿ.

ಎಂದೂ ಡಯೆಟಿಂಗ್‌ ಮಾಡಬೇಡಿ. ಇದರಿಂದ ನಿಮ್ಮ ಎನರ್ಜಿ ನಷ್ಟವಾಗುತ್ತದೆ. ಶಕ್ತಿ ಪಡೆದುಕೊಳ್ಳಲು ನೀವು ಹೆಚ್ಚು ಕ್ಯಾಲೋರಿಯ ಪದಾರ್ಥಗಳನ್ನು ತಿನ್ನತೊಡಗುವಿರಿ.  

–  ಜಿ. ಶೈಲಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ