ಮಳೆಗಾಲವೆಂದರೇನೇ ಎಲ್ಲರಿಗೂ ರೋಮಾಂಚನ ಉಂಟಾಗುತ್ತದೆ. ಜೊತೆಜೊತೆಗೆ ಈ ಹವಾಮಾನದಲ್ಲಿ ಉಂಟಾಗುವ ಸಮಸ್ಯೆಗಳು ವಿಶೇಷವಾಗಿ ಕಾಲುಗಳನ್ನು ಸತಾಯಿಸುತ್ತವೆ. ತಲೆಯಿಂದ ಹಿಡಿದು ಮಂಡಿಯವರೆಗೆ ಮಳೆಯ ನೀರಿನಿಂದ ರಕ್ಷಿಸಿಕೊಳ್ಳುವ ಉಪಾಯ ಸಫಲವಾಗುತ್ತದೆ. ಆದರೆ ಅವುಗಳ ಕೆಳಗೆ ರಕ್ಷಿಸಿಕೊಳ್ಳುವ ಎಲ್ಲ ಉಪಾಯಗಳೂ ಅಸಫಲಲಾಗುತ್ತವೆ.

ಮಳೆಯಲ್ಲಿ ಮಲಿನ ನೀರಿನ ಸಂಪರ್ಕಕ್ಕೆ ಬರುವುದರಿಂದ ಕಾಲುಗಳಿಗೆ ಸೋಂಕು ಆಗುವ ಅಪಾಯ ಹೆಚ್ಚಾಗುತ್ತದೆ. ಕಾಲುಗಳಲ್ಲಿ ಊತ ಇತ್ಯಾದಿ ಸಮಸ್ಯೆಗಳು ಹೆಚ್ಚಾಗುತ್ತವೆ. ಗಾಬರಿಯಾಗದಿರಿ, ಕೆಲವು ಎಚ್ಚರಿಕೆಗಳನ್ನು ವಹಿಸಿದರೆ ಈ ಸಮಸ್ಯೆಗಳಿಂದ ನೀವು ಪಾರಾಗಬಹುದು.

ಮಳೆಗಾಲದಲ್ಲಿ ಬಹಳ ಹೊತ್ತು ಶೂಸ್‌ ಧರಿಸಬೇಡಿ. ಒದ್ದೆ ಶೂಗಳನ್ನೂ ಧರಿಸಬೇಡಿ.

ಹೊರಗಿನಿಂದ ಮನೆಗೆ ಬಂದ ಮೇಲೆ ಕಾಲುಗಳನ್ನು ಆ್ಯಂಟಿಸೆಪ್ಟಿಕ್‌ ಸೋಪ್‌ನಿಂದ ಸ್ವಚ್ಛಗೊಳಿಸಿ. ಬೆರಳುಗಳ ಮಧ್ಯೆ ತೇವ ಇರದಂತೆ ಎಚ್ಚರ ವಹಿಸಿ.

ಕಾಲುಗಳನ್ನು ತೊಳೆದು ಒಣಗಿಸಿದ ನಂತರ ಕಾಲುಗಳು ಹಾಗೂ ಬೆರಳುಗಳ ಮಧ್ಯೆ ಮಾಯಿಶ್ಚರೈಸರ್‌ ಹಚ್ಚಲು ಮರೆಯದಿರಿ.

ಕಾಲಕಾಲಕ್ಕೆ ಉಗುರುಗಳನ್ನು ಸ್ವಚ್ಛಗೊಳಿಸುತ್ತಿರಿ. ಇಲ್ಲದಿದ್ದರೆ ಅವು ಸೋಂಕಿಗೊಳಗಾಗುವ  ಅಪಾಯ ಹೆಚ್ಚುತ್ತದೆ.

ಮಳೆಗಾಲದಲ್ಲಿ ಸರಿಯಾದ ಚಪ್ಪಲಿಗಳು ಹಾಗೂ ಶೂಗಳನ್ನು ಆಯ್ಕೆ ಮಾಡಿ. ಫ್ಯಾಷನೆಬಲ್ ಶೂಸ್‌, ಕ್ಯಾನ್ವಾಸ್‌ ಶೂಸ್‌ ಅಥವಾ ಚರ್ಮದ ಚಪ್ಪಲಿ ಹಾಗೂ ಶೂಸ್‌ ಉಪಯೋಗಿಸಬೇಡಿ.

ಮಳೆಗಾಲದಲ್ಲಿ ಕ್ಯಾನ್ವಾಸ್‌ ಅಥವಾ ಚರ್ಮದ ಶೂಸ್‌ ಒದ್ದೆಯಾದ ನಂತರ ಬೇಗನೆ ಒಣಗುವುದಿಲ್ಲ. ಚರ್ಮದ ಚಪ್ಪಲಿ ಅಥವಾ ಶೂಸ್‌ ಮಳೆಯ ನೀರಿನಲ್ಲಿ ಹಾಳಾಗುತ್ತವೆ.

ಫ್ಯಾಷನೆಬಲ್ ಚಪ್ಪಲಿ ಅಥವಾ ಶೂಸ್‌ ಧರಿಸಬೇಕೆಂದಿದ್ದರೆ ಪ್ಲಾಸ್ಟಿಕ್‌ನದ್ದನ್ನು ಧರಿಸಿ.

ಒದ್ದೆ ರಸ್ತೆಯಲ್ಲಿ ಚಲಿಸುವಾಗ ಕೊಚ್ಚೆ ನೀರು ಹಾಳು ಮಾಡದಂತಹ ಚಪ್ಪಲಿ ಶೂ ಧರಿಸಿ.

ಪ್ಲಾಸ್ಟಿಕ್‌ ಅಥವಾ ರಬ್ಬರ್‌ ಚಪ್ಪಲಿಗಳು ಮತ್ತು ಶೂಗಳು ಸಂಪೂರ್ಣವಾಗಿ ಮುಚ್ಚಿರದೆ ಕೊಂಚ ತೆರೆದಿದ್ದರೂ ಪಾದಗಳು ಒದ್ದೆಯಾದರೆ ಬೇಗ ಒಣಗುತ್ತದೆ.

ಮಳೆಗಾಲದಲ್ಲಿ ಹೈಹೀಲ್ಡ್ ಚಪ್ಪಲಿ ಅಥವಾ ಶೂಸ್‌ ಧರಿಸಬೇಡಿ.

ಚಪ್ಪಲಿ ಅಥವಾ ಶೂಸ್‌ ಧರಿಸುವ ಮೊದಲು ಅವು ಸಂಪೂರ್ಣ ಒಣಗಿದೆಯೇ ಗಮನಿಸಿ.

ಮಳೆಗಾಲದಲ್ಲಿ ಕನಿಷ್ಠ 2 ಜೊತೆ ಚಪ್ಪಲಿ ಇಟ್ಟುಕೊಳ್ಳಿ. ಒಂದು ಜೊತೆ ಒದ್ದೆಯಾದರೆ, ಇನ್ನೊಂದು ಜೊತೆಯನ್ನು ಧರಿಸಬಹುದು.

ಕಾಲಕಾಲಕ್ಕೆ ಉಗುರುಗಳನ್ನು ಅಗತ್ಯವಾಗಿ ಕತ್ತರಿಸಿ. ಆಗ ಅದರಲ್ಲಿ ಕೊಳೆ ಕೂರುವುದಿಲ್ಲ. ಈ ಹವಾಮಾನದಲ್ಲಿ ಕೃತಕ ಉಗುರುಗಳನ್ನು ಮರೆತೂ ಅಳವಡಿಸಿಕೊಳ್ಳಬೇಡಿ.

ವಾರಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿನಲ್ಲಿ ಕೆಲವು ಹನಿ ಎಣ್ಣೆ ಹಾಕಿ ಅದರಲ್ಲಿ ಕಾಲುಗಳನ್ನು ಮುಳುಗಿಸಿ ಇಡಿ. ಅದರಿಂದ ಕಾಲುಗಳಿಗೆ ಆರಾಮವಾಗುತ್ತದೆ, ದುರ್ವಾಸನೆ ದೂರಾಗುತ್ತದೆ. ಕಾಲುಗಳು ಮೃದುವಾಗುತ್ತವೆ.

ಆಗಾಗ್ಗೆ ಕಾಲುಗಳಿಗೆ ಮಾಯಿಶ್ಚರೈಸರ್‌ ಹಚ್ಚಿ.

ಕಾಲುಗಳ ದುರ್ವಾಸನೆಯಿಂದ ಮುಕ್ತಿ ಪಡೆಯಲು ಆ್ಯಂಟಿಸೆಪ್ಟಿಕ್‌ ಸ್ಪ್ರೇ ಅಥವ ಸುವಾಸನೆಭರಿತ ಸ್ಪ್ರೇ ಮಾಡಿ.

ಮಳೆಗಾಲದಲ್ಲಿ ಬರಿಗಾಲಿನಲ್ಲಿ ನಡೆಯಬೇಡಿ. ಗುಡಿಗಳಲ್ಲಿ ಪಾವಿತ್ರ್ಯತೆಯ ಹೆಸರಿನಲ್ಲಿ ಬರಿಗಾಲಿನಲ್ಲಿ ನಡೆಯುವ ಪದ್ಧತಿ ಇದೆ. ಅದು ತಪ್ಪು. ಏಕೆಂದರೆ ನೆಲದಲ್ಲಿರುವ ಕೀಟಾಣುಗಳು ಪಾದಗಳಿಂದ ಶರೀರದೊಳಗೆ ನುಸುಳುತ್ತವೆ. ಗುಡಿಗಳಲ್ಲಿ ಪ್ರಸಾದವನ್ನು ನೆಲದ ಮೇಲೆ ಬಡಿಸುತ್ತಾರೆ. ಅದರಲ್ಲೂ ಕೀಟಾಣುಗಳು ಹುಟ್ಟುತ್ತವೆ.

ವಾರಕ್ಕೊಮ್ಮೆ ಕಾಲುಗಳಿಗೆ ಸ್ಕ್ರಬಿಂಗ್‌ ಮಾಡಿಸಿ. ಅದರಿಂದ ಕಾಲುಗಳ ಡೆಡ್‌ಸ್ಕಿನ್‌ ದೂರಾಗುತ್ತದೆ,  ಹೊಳಪು ಬರುತ್ತದೆ.

ಕಾಲುಗಳಿಗೆ ಪೆಟ್ಟಾಗಿದ್ದರೆ ಮಳೆಗಾಲದಲ್ಲಿ ಹೊರಗೆ ಹೋಗಬೇಡಿ. ಮಳೆ ನೀರು ಮತ್ತು ಇನ್ನಿತರ ನೀರಿನಿಂದಾಗಿ ಗಾಯ ಇನ್ನೂ ಹೆಚ್ಚಾಗುತ್ತದೆ. ಹೊರಗೆ ಹೋಗಲೇಬೇಕಾದಲ್ಲಿ ಎಚ್ಚರವಿರಲಿ.

ದಿನ ರಾತ್ರಿ ಮಲಗುವಾಗ ಕಾಲುಗಳಿಗೆ ಎಣ್ಣೆ ಅಥವಾ ಆ್ಯಂಟಿಸೆಪ್ಟಿಕ್‌ ಜೆಲ್ ‌ಹಚ್ಚಿ.

ಮಳೆಗಾಲದಲ್ಲಿ ಮೀನೆಣ್ಣೆಯಿಂದ ಸ್ಪಾ ಮಾಡಿಸಿಕೊಂಡರೆ ಕಾಲುಗಳಲ್ಲಿನ ಮೃತ ತ್ವಚೆ ದೂರಾಗುತ್ತವೆ ಮತ್ತು ಕಾಲುಗಳು ಹೊಳೆಯುತ್ತಿರುತ್ತವೆ.

ಪಿ ಮುಕ್ತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ