ಮಳೆಗಾಲದಲ್ಲಿ ಅಷ್ಟಿಷ್ಟು ನಿರ್ಲಕ್ಷ್ಯ ತೋರುವುದರಿಂದ ಅಲರ್ಜಿ ಹಾಗೂ ಇನ್‌ಫೆಕ್ಷನ್‌ಗೆ ನಮ್ಮನ್ನು ಗುರಿ ಮಾಡಬಹುದು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ರೋಗಗಳ ಉಪಟಳ ಶುರುವಾಗುತ್ತದೆ. ಇದರ ಜೊತೆ ಜೊತೆಗೆ ಚರ್ಮ ಹಾಗೂ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ತೊಂದರೆ ಕೊಡಲಾರಂಭಿಸುತ್ತವೆ.

ತ್ವಚೆಯ ಸೋಂಕು

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಚರ್ಮದ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚುತ್ತವೆ. ಏಕೆಂದರೆ ಈ ಅವಧಿಯಲ್ಲಿ ತೇವಾಂಶ ಹೆಚ್ಚಿಗೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಬ್ಯಾಕ್ಟೀರಿಯಾ, ವೈರಸ್‌, ಫಂಗಸ್‌ ಮುಂತಾದವು ಬಹುಬೇಗ ಪಸರಿಸುತ್ತವೆ. ಅವು ಹೆಚ್ಚು ತೊಂದರೆ ಕೊಡುವುದು ಚರ್ಮಕ್ಕೆ. ಚರ್ಮವನ್ನು ತಕ್ಷಣ ಸೋಂಕಿಗೀಡು ಮಾಡುತ್ತವೆ.

ಅಂದಹಾಗೆ ಇತ್ತೀಚಿನ ವರ್ಷಗಳಲ್ಲಿ ಚರ್ಮ ಯಾವುದಾದರೂ ಮೈಕ್ರೋಬ್ಸ್ ನಿಂದ ಸೋಂಕಿಗೀಡಾಗುತ್ತದೆ ಎಂದರೆ, ಅದು ಫಂಗಸ್‌ನಿಂದ ಹೆಚ್ಚು ಆಗುತ್ತದೆ. ಈ ಕಾರಣದಿಂದ ಹಲವು ಬಗೆಯ ತ್ವಚೆಯ ರೋಗಗಳು ಕಾಣಿಸಿಕೊಳ್ಳುತ್ತವೆ.

ರೆಡ್‌ ಪ್ಯಾಚಸ್‌ ಫಂಗಲ್ ಇನ್‌ಫೆಕ್ಷನ್‌ ಕಾರಣದಿಂದ ಚರ್ಮದ ಮೇಲೆ ಅದರಲ್ಲೂ ವಿಶೇಷವಾಗಿ ಕಂಕುಳು, ಹೊಟ್ಟೆ, ತೊಡೆಯ ಸಂದುಗಳ ನಡುವೆ, ಸ್ತನಗಳ ಮೇಲೆ ದುಂಡನೆಯ ಗುರುತುಗಳು ಗೋಚರಿಸುತ್ತವೆ. ಅದರಿಂದಾಗಿ ಸಾಕಷ್ಟು ತುರಿಕೆ ಉಂಟಾಗುತ್ತದೆ. ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಕಂಕುಳು ಹಾಗೂ ಎಲ್ಲೆಲ್ಲಿ ಸಂದುಗಳಿರುತ್ತವೋ ಅಲ್ಲಿ ಆ್ಯಂಟಿ ಫಂಗಲ್ ಪೌಡರ್‌ ಸಿಂಪಡಿಸಿ. ಬೆವರು ಹಾಗೂ ತೇವಾಂಶ ಒಂದೇ ಕಡೆ ಸೇರದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಮೇಲಿಂದ ಮೇಲೆ ಫಂಗಲ್ ಇನ್‌ಫೆಕ್ಷನ್‌ ಉಂಟಾಗುತ್ತಿದ್ದರೆ ಮೆಡಿಕೇಟೆಡ್‌ ಪೌಡರ್‌ ಬಳಸಿ.

ಹೀಟ್‌ ರಾಷೆಸ್‌

ಈ ವಾತಾವರಣದಲ್ಲಿ ಬೆವರು ಅತಿಯಾಗಿ ಬರುತ್ತದೆ. ಆ ಕಾರಣದಿಂದಾಗಿ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಚರ್ಮದ ಮೇಲೆ ಕೆಂಪು ಗುಳ್ಳೆಗಳು ಅಂದರೆ ಬೆವರು ಗುಳ್ಳೆಗಳು ಏಳುತ್ತವೆ. ಅವುಗಳಿಂದಾಗಿ ಸಾಕಷ್ಟು ತುರಿಕೆ ಹಾಗೂ ಉರಿತ ಉಂಟಾಗುತ್ತದೆ.

ಪ್ರಿಕ್ಲಿ ಹೀಟ್‌ ಪೌಡರ್‌ ಬಳಸಿ. ಹತ್ತಿಯ ಸಡಿಲ ಬಟ್ಟೆಗಳನ್ನೇ ಧರಿಸಿ. ಚರ್ಮದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಕೊಡಿ. ಬೆವರುಗುಳ್ಳೆಗಳು ಎದ್ದಾಗ ಕ್ಯಾಲಮೈನ್‌ ಲೋಶನ್‌ ಲೇಪಿಸಿ. ಇದು ತುರಿಕೆಯಿಂದ ಮುಕ್ತಿ ದೊರಕಿಸಿಕೊಡುತ್ತದೆ.

ಕಾಲುಗಳಲ್ಲಿ ಸೋಂಕು

ಫಂಗಲ್ ಇನ್‌ಫೆಕ್ಷನ್‌ನಿಂದಾಗಿ ಕಾಲು ಬೆರಳುಗಳು ಸೋಂಕಿಗೀಡಾಗುತ್ತವೆ. ವಾಸ್ತವದಲ್ಲಿ ಈ ವಾತಾವರಣದಲ್ಲಿ ಬರಿಗಾಲಲ್ಲಿ ನಡೆದಾಡುವುದರಿಂದ ಅಥವಾ ಕಾಲುಗಳು ಹೆಚ್ಚು ಹೊತ್ತು ನೀರಲ್ಲಿಯೇ ಇರುವುದರಿಂದ ಅಲ್ಲಿ ಸೋಂಕು ಉಂಟಾಗುತ್ತದೆ. ಅದರಿಂದ ಬೆರಳುಗಳು ಊದಿಕೊಳ್ಳುತ್ತವೆ. ಬಳಿಕ ತುರಿಕೆಯುಂಟಾಗುತ್ತದೆ. ಈ ರೀತಿಯ ಸೋಂಕು ತಗುಲಿದ ವ್ಯಕ್ತಿಗೆ ನಡೆದಾಡಲು ಸಮಸ್ಯೆ ಉಂಟಾಗುತ್ತದೆ. ಈ ಸೋಂಕಿನ ಕಾರಣದಿಂದ ಹೆಬ್ಬೆರಳು ಹಾಗೂ ಇತರೆ ಬೆರಳುಗಳ ಉಗುರುಗಳು ಕೂಡ ಸೋಂಕಿಗೀಡಾಗುತ್ತವೆ. ಅಷ್ಟೇ ಅಲ್ಲ, ಉಗುರುಗಳು ಅತ್ಯಂತ ಕೆಟ್ಟದಾಗಿ ಕಾಣುತ್ತವೆ, ದುರ್ಬಲಗೊಳ್ಳುತ್ತವೆ.

ಕಾಲುಗಳು ಹಾಗೂ ಉಗುರುಗಳ ಸೋಂಕಿನಿಂದ ರಕ್ಷಿಸಿಕೊಳ್ಳಲು ಬರಿಗಾಲಲ್ಲಿ ನಡೆದಾಡಬೇಡಿ. ಅಷ್ಟೇ ಅಲ್ಲ, ಕಾಲುಗಳು ಒದ್ದೆಯಾಗಿರಲು ಬಿಡಬೇಡಿ. ಒದ್ದೆ ಚಪ್ಪಲಿ ಅಥವಾ ಶೂ ಧರಿಸಬೇಡಿ. ಏಕೆಂದರೆ ಅವುಗಳಿಂದ ಬೆವರು ಹೊರಹೊಮ್ಮುತ್ತದೆ ಹಾಗೂ ಬೇಗ ಆರುವುದಿಲ್ಲ. ಇದರಿಂದ ಫಂಗಲ್ ಇನ್‌ಫೆಕ್ಷನ್‌ ಉಂಟಾಗುತ್ತದೆ. ಈ ಹವಾಮಾನದಲ್ಲಿ ಸ್ಯಾಂಡಲ್ಸ್ ಹಾಗೂ ಪ್ಲೋಟರ್ಸ್‌ನ್ನೇ ಧರಿಸಿ. ಉಗುರುಗಳನ್ನು ಮೇಲಿಂದ ಮೇವೆ ಕತ್ತರಿಸಿ ಹಾಗೂ ಅವುಗಳ ಸ್ವಚ್ಛತೆಯ ಬಗ್ಗೆ ವಿಶೇಷ ಗಮನಕೊಡಿ. ಸದಾ ಕಾಟನ್‌ಸಾಕ್ಸ್ ಧರಿಸಿ.

ದೃಷ್ಟಿ ಸೋಂಕು

ಮಳೆಗಾಲದಲ್ಲಿ ಕಣ್ಣುಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೀಡಾಗುತ್ತವೆ. ಈ ಸೋಂಕಿನ ಪರಿಣಾಮವೆಂದರೆ, ಕಣ್ಣು ರೆಪ್ಪೆಯ ಮೇಲೆ ಲಂಪ್‌ ಬಂದರೆ ಒಂದು ಬಗೆಯ ಗಂಟು ಕಾಣಿಸಿಕೊಳ್ಳುತ್ತದೆ. ಅದರಿಂದಾಗಿ ಕಣ್ಣುಗಳಲ್ಲಿ ಸಾಕಷ್ಟು ನೋವು ಉಂಟಾಗುತ್ತದೆ. ಹೀಗಾಗಲು ಮುಖ್ಯ ಕಾರಣ ಕಣ್ಣುಗಳ ಮೇಲೆ ಒಂದು ಬಗೆಯ ಬ್ಯಾಕ್ಟೀರಿಯಾ ದಾಳಿ ಮಾಡುತ್ತದೆ. ಬಿಸಿ ನೀರಿನಲ್ಲಿ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಕಣ್ಣುಗಳ ಮೇಲೆ ಇಟ್ಟುಕೊಳ್ಳಬೇಕು ಹಾಗೂ 2-3 ಗಂಟೆಗಳಿಗೊಮ್ಮೆ ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳಿ.

ಇದರ ಹೊರತಾಗಿ ಈ ಹವಾಮಾನದಲ್ಲಿ ಕಣ್ಣುಗಳು ಕೆಂಪಗಾಗಿ ತುರಿಕೆ ಉಂಟಾಗುವುದು ಹಾಗೂ ಉರಿಯುವುದು ಸಾಮಾನ್ಯ ಸಂಗತಿ.

ಅಥ್ಲೀಟ್‌ ಫುಟ್‌

ಹೆಚ್ಚು ಹೊತ್ತು ನೀರಿನಲ್ಲಿರುವವರಿಗೆ ಈ ರೋಗದ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೊಳಕು ನೀರಿನಲ್ಲಿ ಕೆಲಸ ಮಾಡುವವರಿಗೆ ಈ ತೊಂದರೆ ಹೆಚ್ಚು. ಈ ಸೋಂಕು ಹೆಬ್ಬೆರಳಿನಿಂದ ಶುರುವಾಗುತ್ತದೆ. ಅಲ್ಲಿನ ತ್ವಚೆ ಬಿಳಿ ಅಥವಾ ಹಸಿರು ಬಣ್ಣದ್ದಾಗಬಹುದು. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತುರಿಕೆ ಆಗತೊಡಗುತ್ತದೆ. ಎಷ್ಟೋ ಸಲ ಅಲ್ಲಿಂದ ದುರ್ಗಂಧ ಅಥವಾ ಕೀವು ಕೂಡ ಬರಬಹುದು.

ಈ ಸೋಂಕಿನಿಂದ ದೂರವಿರಲು ನೀರಿನಿಂದ ಹೊರಬಂದ ಬಳಿಕ ಕಾಲುಗಳನ್ನು ಬಿಸಿ ನೀರು ಹಾಗೂ ಸೋಪ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ. ಆ ಬಳಿಕ ಚೆನ್ನಾಗಿ ಒಣಗಿಸಿಕೊಳ್ಳಿ. ಶೂಗಳನ್ನು ಧರಿಸುವುದರಿಂದ ದೂರವಿರಿ.

ಕಣ್ಣಿಗೆ ಸೋಂಕು

ಇತ್ತೀಚಿನ ವರ್ಷಗಳಲ್ಲಿ ಗಾಳಿಯಲ್ಲಿರುವ ಪರಾಗಗಳು, ಧೂಳಿನ ಕಣಗಳು ಕಣ್ಣಿನ ಸೋಂಕಿಗೆ ಕಾರಣವಾಗುತ್ತವೆ. ಕಣ್ಣಿನ ಈ ತೊಂದರೆಯನ್ನು `ಅಲರ್ಜಿಕ್‌ ಕಂಜೆಕ್ಟಿವೈಟಿಸ್‌’ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಕಣ್ಣುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಈ ತೊಂದರೆಯಿಂದ ಪಾರಾಗಲು ಅಲರ್ಜಿಕಾರಕ ವಸ್ತುಗಳಿಂದ ದೂರ ಇರಿ ಹಾಗೂ ಆಗಾಗ ಕಣ್ಣುಗಳಿಗೆ ಐ ಡ್ರಾಪ್ಸ್ ಹಾಕಿಕೊಳ್ಳಿ.

ಆಸ್ತಮಾ

ಮಳೆಗಾಲದ ವಾತಾವರಣದಲ್ಲಿ ಪರಾಗ ಕಣ ಹಾಗೂ ಫಂಗಸ್‌ನಂತಹ ಅಲರ್ಜಿಕಾರಗಳ ಉಪಸ್ಥಿತಿಯಿಂದಾಗಿ ಆಸ್ತಮಾದ ಸಮಸ್ಯೆ ಹೆಚ್ಚುತ್ತದೆ. ಮಳೆಗಾಲದಲ್ಲಿ ಆಸ್ತಮಾದ ತೊಂದರೆ ಹೆಚ್ಚಲು ಪ್ರಮುಖ ಕಾರಣಗಳೆಂದರೆ…..

ಗುಡುಗು ಸಹಿತ ಮಳೆ ಬರುವುದರಿಂದ ಆಸ್ತಮಾ ರೋಗಿಗಳಿಗೆ ಆಸ್ತಮಾದ ಅಟ್ಯಾಕ್‌ ಬರತೊಡಗುತ್ತದೆ. ಮಳೆಗಾಲದಲ್ಲಿ ಗಾಳಿಯ ಆರ್ಭಟ ಜೋರಾಗುವುದರಿಂದ ಹೂವಿನ ಪರಾಗ ಕಣಗಳು ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಅವು ಉಸಿರಾಟದ ಮುಖಾಂತರ ಆಸ್ತಮಾ ರೋಗಿಯ ದೇಹದಲ್ಲಿ ಪ್ರವೇಶಿಸುತ್ತವೆ. ಈ ಕಾರಣದಿಂದಾಗಿ ಅವರಿಗೆ ಉಬ್ಬಸದ ಸಮಸ್ಯೆ ಹೆಚ್ಚುತ್ತದೆ.

ಮಳೆಗಾಲದ ವಾತಾವರಣದಲ್ಲಿ ತೇವಾಂಶ ಹೆಚ್ಚಿಗೆ ಇರುವುದರಿಂದ ಫಂಗಲ್ ಸ್ಟ್ರೋಕ್ಸ್ ಬಹಳ ಪಸರಿಸಿರುತ್ತವೆ. ಈ ಫಂಗಸ್‌ ಆಸ್ತಮಾ ರೋಗಿಗಳಿಗೆ ಅಲರ್ಜಿಕಾರಕಾಗಿರುತ್ತವೆ. ಅವು ಆಸ್ತಮಾದ ತೊಂದರೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಆ ಕಾರಣದಿಂದಲೇ ಈ ಹವಾಮಾನದಲ್ಲಿ ಆಸ್ತಮಾ ರೋಗಿಗಳಿಗೆ ಅಟ್ಯಾಕ್‌ ಹೆಚ್ಚಾಗುತ್ತದೆ.

ಮಳೆಗಾಲದ ಕಾರಣದಿಂದ ವಾತಾವರಣದಲ್ಲಿ ಸಲ್ಛರ್‌ ಡೈ ಆಕ್ಸೈಡ್‌ ಹಾಗೂ ನೈಟ್ರೋಜನ್‌ ಆಕ್ಸೈಡ್‌ನ ಪ್ರಮಾಣ ಹೆಚ್ಚುತ್ತದೆ. ಅದರ ಪರಿಣಾಮ ಎಂಬಂತೆ ವಾಯುಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ ಉಂಟಾಗುತ್ತದೆ.

ಈ ಸಲ್ಛರ್‌ ಡೈ ಆಕ್ಸೈಡ್‌ ಮತ್ತು ನೈಟ್ರೋಜನ್‌ ಆಕ್ಸೈಡ್‌ಗಳು ಆಸ್ತಮಾ ರೋಗಿಗಳಿಗೆ ನೇರ ಪ್ರಭಾವ ಬೀರುತ್ತವೆ. ಹಾಗಾಗಿ ಅವರ ಸಮಸ್ಯೆ ಹೆಚ್ಚುತ್ತದೆ.

ಮಳೆಗಾಲದಲ್ಲಿ ವಾಹನ ಹೊರ ಹೊಮ್ಮಿಸುವ ಹೊಗೆ ಕೂಡ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದಲೂ ಆಸ್ತಮಾ ರೋಗಿಗಳ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

ಮಳೆಗಾಲದಲ್ಲಿ ನಾಯಿ, ಬೆಕ್ಕುಗಳು ಸಾಮಾನ್ಯವಾಗಿ ಮನೆಯ ಒಳಗಡೆಯೇ ಇರುತ್ತವೆ. ಈ ಕಾರಣದಿಂದ ಅವುಗಳ ಕೂದಲಿನಲ್ಲಿ ಶುಷ್ಕತೆ ಹೆಚ್ಚುತ್ತದೆ. ಈ ಶುಷ್ಕತೆ ಆಸ್ತಮಾ ರೋಗಿಗಳ ತೊಂದರೆಗೆ ಕಾರಣವಾಗುತ್ತದೆ.

ಮಳೆಗಾಲದ ಅವಧಿಯಲ್ಲಿ ವೈರಲ್ ಇನ್‌ಫೆಕ್ಷನ್‌ನಲ್ಲಿ ಹೆಚ್ಚಳವಾಗುತ್ತದೆ. ಈ ಕಾರಣದಿಂದಲೂ ರೋಗಿಗಳಲ್ಲಿ ಆಸ್ತಮಾದ ಲಕ್ಷಣಗಳು ಹೆಚ್ಚುತ್ತವೆ.

ಆಸ್ತಮಾದಿಂದ ಮುಕ್ತಿ

ಮಳೆಗಾಲದಲ್ಲಿ ಆಸ್ತಮಾ ರೋಗಿಗಳು ನಿಯಮಿತವಾಗಿ ಔಷಧಿ ಸೇವನೆ ಮಾಡಬೇಕು. ಆಸ್ತಮಾ ರೋಗದಿಂದ ತೀವ್ರವಾಗಿ ಬಳಲುತ್ತಿರುವವರು ಇನ್‌ಹೇಲರ್‌ಮುಖಾಂತರ ಔಷಧಿ ಸೇವಿಸುತ್ತಾ ಇರಬೇಕು. ಏಕೆಂದರೆ ಶ್ವಾಸಕೋಶದಲ್ಲಿ ಯಾವುದೇ ಊತ ಉಂಟಾಗಬಾರದು.

ಆರ್ದ್ರತೆ ಅಂದರೆ ಹ್ಯುಮಿಡಿಟಿ ಮತ್ತು ತೇವಾಂಶದ ಜಾಗಗಳಿಂದ ಅಲ್ಲಿನ ವಾಯುವನ್ನು ಖಾಲಿ ಮಾಡುತ್ತಿರಿ.

ಡೀಹ್ಯುಮಿಡ್ ಫೈರ್‌ ಮುಖಾಂತರ ಇಂತಹ ಸ್ಥಳಗಳ ಆರ್ದ್ರತೆಯನ್ನು ಶೇ.25-50ರತನಕ ಕಡಿಮೆಗೊಳಿಸಬಹುದು.

ಅಗತ್ಯವಿದ್ದರೆ ಮಾತ್ರ ಏರ್‌ಕಂಡೀಶನರ್‌ ಉಪಯೋಗಿಸಿ.

ಬಾಥ್‌ರೂಮನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಫಂಗಸ್‌ನಿವಾರಣೆ ಮಾಡುವಂತಹ ಉತ್ಪನ್ನಗಳನ್ನು ಬಳಸಿ.ಹಬೆಯನ್ನು ಹೊರಹಾಕಲು ಎಗ್ಸಾಸ್ಟ್ ಫ್ಯಾನ್‌ ಉಪಯೋಗಿಸಿ.

ಮಳೆಗಾಲದಲ್ಲಿ ಬೆಡ್‌ರೂಮಿನಿಂದ ಇನ್‌ಡೋರ್‌ ಪ್ಲ್ಯಾಂಟ್ಸ್  ಹೊರಗೆ ಇಡಿ.

ಒದ್ದೆಯಾದ ಎಲೆಗಳು, ತೋಟದ ಹುಲ್ಲು, ಕಸ ಮುಂತಾದವುಗಳಿಂದ ದೂರವಿರಿ. ಏಕೆಂದರೆ ಅಲ್ಲಿ ಫಂಗಸ್‌ ಉತ್ಪಾದನೆಯಾಗುವ ಸಾಧ್ಯತೆ ಇರುತ್ತದೆ. ಸಣ್ಣ ಬಿಳಿ ಹೂ ಬಿಡುವ ಕಾಂಗ್ರೆಸ್‌ಗಿಡ ಅತಿ ಅಪಾಯಕಾರಿ!

ಫಂಗಸ್‌ ನಿವಾರಣೆಗೆ ಬ್ಲೀಚ್‌ಹಾಗೂ ಡಿಟರ್ಜೆಂಟ್‌ ಇರುವ ಕ್ಲೀನಿಂಗ್‌ ಸಲ್ಯೂಷನ್‌ ಬಳಸಿ.

ಯಾವ ಸಮಯದಲ್ಲಿ ಪರಾಗ ಕಣಗಳು ಗಾಳಿಯಲ್ಲಿ ತೇಲುತ್ತಿರುತ್ತವೋ ಆಗ ಹೊರಗೆ ಸುತ್ತಾಡಲು ಹೋಗಬೇಡಿ.

ಪರಾಗ ಕಣಗಳು ಗಾಳಿಯಲ್ಲಿ ತೇಲುತ್ತಿರುವ ಸಮಯದಲ್ಲಿ ಕಿಟಕಿಯ ಬಾಗಿಲುಗಳನ್ನು ತೆರೆಯಬೇಡಿ.

ಹೆಚ್ಚುವರಿ ಎಳೆಯಿರುವ ದಿಂಬು, ಹಾಸಿಗೆಗಳನ್ನು ಬಳಸಲೇಬೇಡಿ.

ತಲೆದಿಂಬಿನ ಕವರ್‌, ಹೂದಿಕೆಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ.

ಮನೆ ಕಿಟಕಿ ಮತ್ತು ಬಾಗಿಲುಗಳ ಎಲ್ಲ ಪರದೆಗಳನ್ನು 15 ದಿನಕ್ಕೊಮ್ಮೆ ಸ್ವಚ್ಛಗೊಳಿಸಿ.

ಮಳೆಗಾಲದಲ್ಲಿ ಕಾರ್ಪೆಟ್‌ ಹಾಸಬೇಡಿ. ಒಂದು ವೇಳೆ ಕಾರ್ಪೆಟ್‌ ಹಾಸಿದ್ದರೆ, ಅದನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಉಪಯೋಗಿಸಿ.

ಮನೆಯಲ್ಲಿ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ. ಲ್ಯಾಂಪ್‌ ಶೇಡ್‌, ಕಿಟಕಿಯ ಗಾಜುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿ.

– ಡಾ. ಪಿ.ಕೆ. ಮೃದುಲಾ

ಈ ಸಂಗತಿ ಗಮನಿಸಿ

ಕೊಳಕು ಕೈಗಳಿಂದ ಕಣ್ಣುಗಳನ್ನು ಮುಟ್ಟಬೇಡಿ.

ನಿಮಗೆ ಅಲರ್ಜಿಕ್‌ ಕಂಜೆಕ್ಟಿವೈಟಿಸ್‌ ಆಗಿದ್ದರೆ, ತಕ್ಷಣವೇ ಸ್ವಚ್ಛ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಒದ್ದೆ ಬಟ್ಟೆಯ ಪಟ್ಟಿಯನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದಲೂ ಸಾಕಷ್ಟು ಹಿತ ಎನಿಸುತ್ತದೆ.

ಮನೆಯಲ್ಲಿ ಯಾರಿಗಾದರೂ ಕಂಜೆಕ್ಟಿವೈಟಿಸ್‌ ಆಗಿದ್ದರೆ, ಡ್ರಾಪ್ಸ್ ಹಾಕಿದ ಬಳಿಕ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ.

ಮಳೆಗಾಲದಲ್ಲಿ ನಿಮ್ಮ ಟವೆಲ್‌, ಸೋಪ್‌, ತಲೆದಿಂಬು ಹಾಗೂ ಬೇರೆ ವೈಯಕ್ತಿಕ ವಸ್ತುಗಳನ್ನು ಇತರರ ಜೊತೆ ಶೇರ್‌ಮಾಡಿಕೊಳ್ಳಬೇಡಿ. ಏಕೆಂದರೆ ಇನ್‌ಫೆಕ್ಷನ್‌ ಬಟ್ಟೆ, ಸೋಪು ಮುಂತಾದವುಗಳಿಂದಲೂ ಹರಡಬಹುದು.

ಮಳೆಗಾಲದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಡಿ.

ಹೊರಗೆ ಸುತ್ತಾಡುವಾಗ ಬಿಸಿಲಿನಿಂದ ರಕ್ಷಣೆ ಕೊಡುವ ಕನ್ನಡಕ ಧರಿಸಿ.

ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳನ್ನು ತಿನ್ನಬೇಡಿ.

ಹೊರಗಿನಿಂದ ಬಂದ ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

ಕಣ್ಣುಗಳನ್ನು ಒರೆಸಿಕೊಳ್ಳಲು ಮೃದುವಾದ ಕೈವಸ್ತ್ರ ಇಲ್ಲವೇ ಡಿಸ್ಪೋಸೆಬಲ್ ಟಿಶ್ಯೂ ಪೇಪರ್‌ ಬಳಸಿ.

ಕೈಗಳನ್ನು ಆಗಾಗ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

ಮಳೆಗಾಲದಲ್ಲಿ ಕಾಸ್ಮೆಟಿಕ್ಸ್ ಬಳಸಬೇಡಿ.

ಕಣ್ಣುಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಕೊಡಿ. ಅವನ್ನು ಯಾವಾಗಲೂ ಸ್ವಚ್ಛ ತಣ್ಣೀರಿನಿಂದ ತೊಳೆಯಿರಿ.

ಕಣ್ಣುಗಳನ್ನು ನಿಯಮಿತವಾಗಿ ದಿನಕ್ಕೆ 3-4 ಸಲವಾದರೂ ತೊಳೆದುಕೊಳ್ಳಿ.

ಉಗುರುಗಳನ್ನು ಕೂಡ ಆಗಾಗ ಕತ್ತರಿಸಿಕೊಳ್ಳಿ.

ಒಂದು ವೇಳೆ ನಿಮ್ಮ ಕಣ್ಣುಗಳಿಗೆ ಚುಚ್ಚಿದಂತಹ ಅನುಭವವಾಗುತ್ತಿದ್ದರೆ ಕೈಯಿಂದ ಉಜ್ಜಿಕೊಳ್ಳಬೇಡಿ. ಇಲ್ಲದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ.

ಏನಾದರೂ ತೊಂದರೆ ಅನಿಸಿದರೆ ವೈದ್ಯರನ್ನು ಸಂಪರ್ಕಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ