ಮಳೆಗಾಲದಲ್ಲಿ ಅಷ್ಟಿಷ್ಟು ನಿರ್ಲಕ್ಷ್ಯ ತೋರುವುದರಿಂದ ಅಲರ್ಜಿ ಹಾಗೂ ಇನ್‌ಫೆಕ್ಷನ್‌ಗೆ ನಮ್ಮನ್ನು ಗುರಿ ಮಾಡಬಹುದು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ರೋಗಗಳ ಉಪಟಳ ಶುರುವಾಗುತ್ತದೆ. ಇದರ ಜೊತೆ ಜೊತೆಗೆ ಚರ್ಮ ಹಾಗೂ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ತೊಂದರೆ ಕೊಡಲಾರಂಭಿಸುತ್ತವೆ.
ತ್ವಚೆಯ ಸೋಂಕು
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಚರ್ಮದ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚುತ್ತವೆ. ಏಕೆಂದರೆ ಈ ಅವಧಿಯಲ್ಲಿ ತೇವಾಂಶ ಹೆಚ್ಚಿಗೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಮುಂತಾದವು ಬಹುಬೇಗ ಪಸರಿಸುತ್ತವೆ. ಅವು ಹೆಚ್ಚು ತೊಂದರೆ ಕೊಡುವುದು ಚರ್ಮಕ್ಕೆ. ಚರ್ಮವನ್ನು ತಕ್ಷಣ ಸೋಂಕಿಗೀಡು ಮಾಡುತ್ತವೆ.
ಅಂದಹಾಗೆ ಇತ್ತೀಚಿನ ವರ್ಷಗಳಲ್ಲಿ ಚರ್ಮ ಯಾವುದಾದರೂ ಮೈಕ್ರೋಬ್ಸ್ ನಿಂದ ಸೋಂಕಿಗೀಡಾಗುತ್ತದೆ ಎಂದರೆ, ಅದು ಫಂಗಸ್‌ನಿಂದ ಹೆಚ್ಚು ಆಗುತ್ತದೆ. ಈ ಕಾರಣದಿಂದ ಹಲವು ಬಗೆಯ ತ್ವಚೆಯ ರೋಗಗಳು ಕಾಣಿಸಿಕೊಳ್ಳುತ್ತವೆ.
ರೆಡ್ ಪ್ಯಾಚಸ್ ಫಂಗಲ್ ಇನ್‌ಫೆಕ್ಷನ್ ಕಾರಣದಿಂದ ಚರ್ಮದ ಮೇಲೆ ಅದರಲ್ಲೂ ವಿಶೇಷವಾಗಿ ಕಂಕುಳು, ಹೊಟ್ಟೆ, ತೊಡೆಯ ಸಂದುಗಳ ನಡುವೆ, ಸ್ತನಗಳ ಮೇಲೆ ದುಂಡನೆಯ ಗುರುತುಗಳು ಗೋಚರಿಸುತ್ತವೆ. ಅದರಿಂದಾಗಿ ಸಾಕಷ್ಟು ತುರಿಕೆ ಉಂಟಾಗುತ್ತದೆ. ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಕಂಕುಳು ಹಾಗೂ ಎಲ್ಲೆಲ್ಲಿ ಸಂದುಗಳಿರುತ್ತವೆಯೋ ಅಲ್ಲಿ ಆ್ಯಂಟಿಫಂಗಲ್ ಪೌಡರ್ ಸಿಂಪಡಿಸಿ. ಬೆವರು ಹಾಗೂ ತೇವಾಂಶ ಒಂದೇ ಕಡೆ ಸೇರದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಮೇಲಿಂದ ಮೇಲೆ ಫಂಗಲ್ ಇನ್‌ಫೆಕ್ಷನ್ ಉಂಟಾಗುತ್ತಿದ್ದರೆ ಮೆಡಿಕೇಟೆಡ್ ಪೌಡರ್ ಬಳಸಿ.
ಹೀಟ್ ರಾಷೆಸ್
ಈ ವಾತಾವರಣದಲ್ಲಿ ಬೆವರು ಅತಿಯಾಗಿ ಬರುತ್ತದೆ. ಆ ಕಾರಣದಿಂದಾಗಿ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಚರ್ಮದ ಮೇಲೆ ಕೆಂಪು ಗುಳ್ಳೆಗಳು ಅಂದರೆ ಬೆವರು ಗುಳ್ಳೆಗಳು ಏಳುತ್ತವೆ. ಅವುಗಳಿಂದಾಗಿ ಸಾಕಷ್ಟು ತುರಿಕೆ ಹಾಗೂ ಉರಿತ ಉಂಟಾಗುತ್ತದೆ.
ಪ್ರಿಕ್ಲಿ ಹೀಟ್ ಪೌಡರ್ ಬಳಸಿ. ಹತ್ತಿಯ ಸಡಿಲ ಬಟ್ಟೆಗಳನ್ನೇ ಧರಿಸಿ. ಚರ್ಮದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಕೊಡಿ. ಬೆವರುಗುಳ್ಳೆಗಳು ಎದ್ದಾಗ ಕ್ಯಾಲಮೈನ್ ಲೋಶನ್ ಲೇಪಿಸಿ. ಇದು ತುರಿಕೆಯಿಂದ ಮುಕ್ತಿ ದೊರಕಿಸಿಕೊಡುತ್ತದೆ.
ಕಾಲುಗಳಲ್ಲಿ ಸೋಂಕು
ಫಂಗಲ್ ಇನ್‌ಫೆಕ್ಷನ್‌ನಿಂದಾಗಿ ಕಾಲು ಬೆರಳುಗಳು ಸೋಂಕಿಗೀಡಾಗುತ್ತವೆ. ವಾಸ್ತವದಲ್ಲಿ ಈ ವಾತಾವರಣದಲ್ಲಿ ಬರಿಗಾಲಲ್ಲಿ ನಡೆದಾಡುವುದರಿಂದ ಅಥವಾ ಕಾಲುಗಳು ಹೆಚ್ಚು ಹೊತ್ತು ನೀರಲ್ಲಿಯೇ ಇರುವುದರಿಂದ ಅಲ್ಲಿ ಸೋಂಕು ಉಂಟಾಗುತ್ತದೆ. ಅದರಿಂದ ಬೆರಳುಗಳು ಊದಿಕೊಳ್ಳುತ್ತವೆ. ಬಳಿಕ ತುರಿಕೆಯುಂಟಾಗುತ್ತದೆ. ಈ ರೀತಿಯ ಸೋಂಕು ತಗುಲಿದ ವ್ಯಕ್ತಿಗೆ ನಡೆದಾಡಲು ಸಮಸ್ಯೆ ಉಂಟಾಗುತ್ತದೆ. ಈ ಸೋಂಕಿನ ಕಾರಣದಿಂದ ಹೆಬ್ಬೆರಳು ಹಾಗೂ ಇತರೆ ಬೆರಳುಗಳ ಉಗುರುಗಳು ಕೂಡ ಸೋಂಕಿಗೀಡಾಗುತ್ತವೆ. ಅಷ್ಟೇ ಅಲ್ಲ, ಉಗುರುಗಳು ಅತ್ಯಂತ ಕೆಟ್ಟದಾಗಿ ಕಾಣುತ್ತವೆ, ದುರ್ಬಲಗೊಳ್ಳುತ್ತವೆ.
ಕಾಲುಗಳು ಹಾಗೂ ಉಗುರುಗಳ ಸೋಂಕಿನಿಂದ ರಕ್ಷಿಸಿಕೊಳ್ಳಲು ಬರಿಗಾಲಲ್ಲಿ ನಡೆದಾಡಬೇಡಿ. ಅಷ್ಟೇ ಅಲ್ಲ, ಕಾಲುಗಳು ಒದ್ದೆಯಾಗಿರಲು ಬಿಡಬೇಡಿ. ಒದ್ದೆ ಚಪ್ಪಲಿ ಅಥವಾ ಶೂ ಧರಿಸಬೇಡಿ. ಏಕೆಂದರೆ ಅವುಗಳಿಂದ ಬೆವರು ಹೊರಹೊಮ್ಮುತ್ತದೆ ಹಾಗೂ ಬೇಗ ಆರುವುದಿಲ್ಲ. ಇದರಿಂದ ಫಂಗಲ್ ಇನ್‌ಫೆಕ್ಷನ್ ಉಂಟಾಗುತ್ತದೆ. ಈ ಹವಾಮಾನದಲ್ಲಿ ಸ್ಯಾಂಡಲ್ಸ್ ಹಾಗೂ ಪ್ಲೇಟರ್ಸ್‌ನ್ನೇ ಧರಿಸಿ. ಉಗುರುಗಳನ್ನು ಮೇಲಿಂದ ಮೇಲೆ ಕತ್ತರಿಸಿ ಹಾಗೂ ಅವುಗಳ ಸ್ವಚ್ಛತೆಯ ಬಗ್ಗೆ ವಿಶೇಷ ಗಮನಕೊಡಿ. ಸದಾ ಕಾಟನ್ ಸಾಕ್ಸ್ ಧರಿಸಿ.