ಸಾಮಾನ್ಯವಾಗಿ ಶಿಶುಗಳ ಆರೋಗ್ಯ ರಕ್ಷಣೆ ಬಲು ಕಷ್ಟದ ವಿಷಯ ಅದರಲ್ಲೂ ಮಳೆಗಾಲದಲ್ಲಿ ಶಿಶುಗಳ ಆರೈಕೆ ಖಂಡಿತಾ ಸುಲಭವಲ್ಲ. ಇದರ ಬಗ್ಗೆ ವಿವರ ತಿಳಿಯೋಣವೇ?

ಬೇಸಿಗೆ ನಂತರ ಮಳೆಗಾಲ ಬಂದಾಗ ತನುಮನ ಪ್ರಫುಲ್ಲಿತಗೊಳ್ಳುತ್ತದೆ, ಬೇಸಿಗೆಯ ಕಾಟ ಕಳೆದಿರುತ್ತದೆ. ಆದರೆ ಮಾನ್‌ಸೂನ್‌ನ ಈ ಸೀಸನ್‌ ತನ್ನೊಂದಿಗೆ ಬಹಳಷ್ಟು ಆರೋಗ್ಯದ ಸಮಸ್ಯೆಗಳನ್ನೂ ಕರೆತರುತ್ತದೆ, ಅದರಲ್ಲೂ ಮುಖ್ಯವಾಗಿ ಹಾಲುಗಲ್ಲದ ಹಸುಳೆಗಳಿಗೆ. ಸಣ್ಣ ಶಿಶುಗಳಿಗೆ ತಮಗೇನು ಕಷ್ಟ ಎಂದು ಹೇಳಿಕೊಳ್ಳಲಾಗದೆ ಎಲ್ಲದಕ್ಕೂ ಜೋರಾಗಿ ಅತ್ತುಬಿಡುತ್ತವೆ. ಹೀಗಾಗಿ ತಾಯಿಯಾದವಳೇ ಮಗುವಿನ ನೋವು ಗುರುತಿಸಿ ಅದನ್ನು ಸರಿಪಡಿಸಬೇಕು. ಹೀಗಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೂತನ ತಾಯಿತಂದೆಯರು ತಮ್ಮ ಶಿಶುವಿನ ಆರೈಕೆಯಲ್ಲಿ ಎಳ್ಳಷ್ಟೂ ನಿರ್ಲಕ್ಷ್ಯ ತೋರದೆ ಕೆಳಗಿನ ಸಲಹೆಗಳನ್ನು ಅನುಸರಿಸಬೇಕು.

ಸ್ವಚ್ಛತೆ : ಮಳೆಗಾಲ ಶುರುವಾದಂತೆ ಮನೆಯ ಸುತ್ತಮುತ್ತ ಹಾಗೂ ಮನೆಯ ಒಳಗೂ ಸಹ ಸ್ವಚ್ಛತೆ ಶುಭ್ರತೆಯ ಪರಿಪೂರ್ಣ ಎಚ್ಚರಿಕೆ ವಹಿಸಬೇಕು. ಎಲ್ಲೂ ನೀರು ನಿಲ್ಲದಂತೆ ಎಚ್ಚರವಹಿಸಿ, ಏಕೆಂದರೆ ನಿಂತ ನೀರು ಹಲವು ರೋಗಗಳ ತವರು. ಸೊಳ್ಳೆ, ನೊಣ, ಕ್ರಿಮಿಕೀಟಗಳಿಗೆ ವಾಸಸ್ಥಾನವಾಗಿ ಇದು ಇನ್ನಿಲ್ಲದ ತೊಂದರೆಗಳನ್ನು ಆಹ್ವಾನಿಸುತ್ತದೆ. ಇದರಿಂದ ವಾಂತಿಭೇದಿ (ಡಯೇರಿಯಾ) ಮಲೇರಿಯಾ, ಕಾಲರಾ, ಡೆಂಗೂ, ಚಿಕನ್‌ಗುನ್ಯಾದಂಥ ಮಹಾಮಾರಿಗಳು ವಕ್ರಿಸುತ್ತವೆ. ಈ ರೋಗಗಳು ಪ್ರಾಣಘಾತಕವಾಗಲು ಯಾವ ವಯಸ್ಸಿನವರಾದರೂ ಆಗಬಹುದು, ಅದರಲ್ಲೂ ಸಹಜ ನಿರೋಧಕತೆ (ರೆಸಿಸ್ಟೆನ್ಸ್) ಹೆಚ್ಚಿರದ ಎಳೆ ಕಂದಮ್ಮಗಳು ಇವುಗಳಿಗೆ ಬೇಗ ಬಲಿಯಾಗುತ್ತವೆ.

ಆಹಾರದ ಕಡೆ ಗಮನ

ಮಳೆಗಾಲದಲ್ಲಂತೂ ಶಿಶುಗಳ ಆಹಾರದ ಕುರಿತು ವಿಶೇಷ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಅವಕ್ಕೆ ಭಾರಿ ಅಲ್ಲದ, ಹಗುರವಾದ, ತೆಳುವಾಗಿರುವ, ತಾಜಾ, ತುಸು ಬೆಚ್ಚಗಿನ, ಸುಲಭ ಜೀರ್ಣವಾಗುವಂಥ ಆಹಾರವನ್ನೇ ಕೊಡಬೇಕು. ಆಯಾ ಸೀಸನ್‌ನಲ್ಲಿ ಸಿಗುವ ಹಣ್ಣುಹಂಪಲನ್ನು ಸೇವಿಸುವಂತೆ ಅಭ್ಯಾಸ ಮಾಡಿಸಿ. ತಾಜಾ ಹಣ್ಣು, ತರಕಾರಿಗಳನ್ನು ಸದಾ ಮೊದಲು ಹರಿವ ನಲ್ಲಿ ನೀರಿನಡಿ ತೊಳೆಯಬೇಕು. ನಂತರ ತುಸು ಪೊಟ್ಯಾಶಿಯಂ ಪರ್ಮಾಂಗನೇಟ್‌ ಬೆರೆಸಿದ ನೀರಿನಲ್ಲೂ ತೊಳೆದು, ಒರೆಸಿ ನಂತರ ಬಳಸಬೇಕು. ರಸ್ತೆ ಬದಿ ಅಗ್ಗವಾಗಿ ಸಿಗುವ ಯಾವುದೇ ಆಹಾರ ಪದಾರ್ಥವನ್ನೂ ಮಕ್ಕಳಿಗೆ ಕೊಡಬೇಡಿ.

ಸ್ವಚ್ಛ ನೀರು : ಕಲುಷಿತ ನೀರು ಮಳೆಗಾಲದಲ್ಲಿ ರೋಗಗಳಿಗೆ ಮೂಲವಾಗಿದೆ. ಆದ್ದರಿಂದ ಅಪ್ಪಟ ಶುದ್ಧ ನೀರನ್ನು ಮಾತ್ರ ಕುಡಿಯಲು ಕೊಡಬೇಕು. ಕುಡಿಯುವ ನೀರನ್ನು ಚೆನ್ನಾಗಿ  ಕುದಿಸಿ, ಕೆಳಗಿಳಿಸಿ ಆರಿಸಿದ ಮೇಲೆ ಅದನ್ನು ಮಕ್ಕಳಿಗೆ ಕುಡಿಸಬೇಕು. ಹೀಗೆ ಬೆಳಗ್ಗೆಯೇ ಸಿದ್ಧಪಡಿಸಿಟ್ಟುಕೊಂಡರೆ ದಿನವಿಡೀ ಬೇಕಾದಾಗ ಕೊಡಬಹುದು. ಮನೆಯಿಂದ ಹೊರಗೆ ಹೊರಟಾಗಲೆಲ್ಲ ಮಗುವಿಗಾಗಿ ಈ ಶುದ್ಧ ನೀರನ್ನು ಬಾಟಲಿಗೆ ತುಂಬಿಸಿಕೊಳ್ಳಲು ಮರೆಯದಿರಿ. ಒಂದು ಪಕ್ಷ ಮಿನರಲ್ ವಾಟರ್‌ ಖರೀದಿಸಬೇಕಾದ ಸಂದರ್ಭ ಬಂದರೆ, ಉತ್ತಮ ಗುಣಮಟ್ಟದ ಕಂಪನಿಯದ್ದನ್ನೇ ಆರಿಸಿ.

ವಿಶೇಷ ಆರೈಕೆ : ಮಗುವಿಗೆ ಸ್ನಾನ ಮಾಡಿಸುವಾಗಲೂ ಅದು ಶುದ್ಧ ನೀರು ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ನೀರು ತುಸು ಹಾಗೇ ಹೀಗಿದ್ದರೆ, ಮಗುವಿಗೆ ಆ ನೀರಿನಿಂದಲೇ ಸೋಂಕು ಆಗಬಹುದಾದ ಸಂಭವ ಇದ್ದೇ ಇದೆ. ಮಗು ಸ್ನಾನದ ಮಧ್ಯೆ ಅದನ್ನು ಕುಡಿದುಬಿಡುವ ಸಾಧ್ಯತೆ ಇರುವುದರಿಂದ ಡಬ್ಬಲ್ ಕೇರ್‌ಫುಲ್ ಆಗಿರಿ. ಸ್ನಾನದ ನಂತರ ಬೆಚ್ಚನೆಯ ಟವೆಲ್‌ನಿಂದ ಒರೆಸಿ, ಒಂದಿಷ್ಟು ಸಾಂಬ್ರಾಣಿ ಹೊಗೆ ಆಡಿಸಿ, ಪೌಡರ್‌ ಸಿಂಪಡಿಸಿ, ಬೆಚ್ಚಗಿನ ಬಟ್ಟೆಗಳನ್ನು ಹಾಕಿರಿ. ಎಂದೂ ಒದ್ದೆ ಬಟ್ಟೆ ತೊಡಿಸಲೇಬಾರದು. ತಲೆಗೂದಲು ಅಷ್ಟೇ, ಹಸಿ ಆಗಿರಲು ಬಿಡದೆ, ಉತ್ತಮ ಕಾಟನ್‌ ಟವೆಲ್‌, ಪಂಚೆಗಳಿಂದ ಮೃದುವಾಗಿ ಒರೆಸಬೇಕು. ಅಕಸ್ಮಾತ್‌ ಮಳೆಯಲ್ಲಿ ನೆನೆಯಬೇಕಾದ ಸಂದರ್ಭದಲ್ಲಿ, ಮನೆಗೆ ಬಂದ ತಕ್ಷಣ, ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿ, ಸ್ವಚ್ಛ ಶುಭ್ರ ಬಟ್ಟೆ ತೊಡಿಸಿರಿ.

ಮಳೆಗಾಲದ ದಿನಗಳಲ್ಲಿ ಹೆಚ್ಚಿನ ಸಮಸ್ಯೆಗಳು ಕಾಡದಿರಲು ಈ ಕಿವಿಮಾತುಗಳನ್ನು ಅನುಸರಿಸಿ :

– ಮಗುವಿಗೆ ವಿಟಮಿನ್‌, ಕ್ಯಾಲ್ಶಿಯಂ, ಕಬ್ಬಿಣಾಂಶದ ಆಹಾರ ಪದಾರ್ಥಗಳನ್ನು ಸಮಾನ ರೂಪದಲ್ಲಿ ಕೊಡುತ್ತಿರಬೇಕು. ಈ ಮೂರೂ ವಸ್ತುಗಳ ಸೇವನೆಯಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಸಹಜವಾಗಿ ಹೆಚ್ಚುತ್ತದೆ. ಇದರಿಂದ ಡಯೇರಿಯಾ, ವೈರಲ್, ಐ ಫ್ಲೂ ಸಹಜವಾಗಿ ದೂರಾಗುತ್ತವೆ.

– ಸಣ್ಣ ಮಕ್ಕಳು ಹೊರಗೆ ಆಟ ಮುಗಿಸಿ ಬಂದ ತಕ್ಷಣ, ಅವರ ಮುಖವನ್ನು ನೀರಲ್ಲಿ ತೊಳೆದು ಒರೆಸಿಕೊಳ್ಳುವ ಅಭ್ಯಾಸ ರೂಢಿಸಿ. ಏಕೆಂದರೆ ವಿಷಾಣುಗಳು ಯಾವಾಗಲೂ ಕಂಗಳು, ಮೂಗು, ಬಾಯಿ ಮೂಲಕ ದೇಹ ಪ್ರವೇಶಿಸುತ್ತವೆ. ಅವರು ಸದಾ ತಮ್ಮ ಕೈಕಾಲನ್ನು ಶುಚಿಯಾಗಿಟ್ಟುಕೊಳ್ಳಲು ಸೂಚಿಸಿ. ತುಂಬಾ ಚಿಕ್ಕವರಾಗಿದ್ದರೆ, ಖುದ್ದಾಗಿ ನೀವೇ ಮುಂದೆ ನಿಂತು ಇವನ್ನೆಲ್ಲ ಮಾಡಿಸಬೇಕು.

– ರಾತ್ರಿ ಮಗುವನ್ನು ಮಲಗಿಸಿದ ಮೇಲೆ ಅಗತ್ಯ ಸೊಳ್ಳೆಪರದೆ ಇಳಿಬಿಡಿ. ಮಕ್ಕಳು ಸಂಜೆ ಹೊತ್ತು ಹೊರಗೆ ಆಡಲು ಹೋಗುವಾಗ, ಅವರಿಗೆ ಅಗತ್ಯವಾಗಿ ಓಡೋಮಾಸ್‌ ಕ್ರೀಂ ಅಥವಾ ಮಸ್ಕಿಟೋ ಸ್ಟ್ರಿಪ್ಸ್ ಹಾಕಿ ಕಳಿಸಿರಿ.

– ಈ ಸೀಸನ್‌ನಲ್ಲಿ ಮಕ್ಕಳಿಗೆ ಸೂಪ್‌, ಜೂಸ್‌, ಕಾಫಿ, ಟೀ, ಅರಿಶಿನ (ಆ್ಯಂಟಿಸೆಪ್ಟಿಕ್‌) ಬೆರೆಸಿದ ಬಿಸಿ ಹಾಲು ಇತ್ಯಾದಿ ಸೇವಿಸಲು ಕೊಡಿ. ಮಕ್ಕಳು ಹೊರಗೆ ಸ್ನ್ಯಾಕ್ಸ್ ಸೇವಿಸುವ ಬದಲು ಮನೆಯಲ್ಲೇ ತಯಾರಿಸಿದ ಕುರುಕಲು, ಹಪ್ಪಳ, ಸಂಡಿಗೆ ಇತ್ಯಾದಿ ಕೊಡಿ. ಇದರಿಂದ ಮಕ್ಕಳ ಅಭಿರುಚಿ ಬದಲಾಗುವುದು ಮಾತ್ರವಲ್ಲದೆ, ಶುಚಿರುಚಿಯಾದ ಆರೋಗ್ಯಕರ ಮನೆ ತಿಂಡಿಗಳು ಸಿಗುತ್ತವೆ.

– ಸಣ್ಣ ಮಕ್ಕಳು ಮಳೆಯಲ್ಲಿ ನೆನೆದು ಬಂದಾಗ, ಚೆನ್ನಾಗಿ ಒರೆಸಿದ ನಂತರ, ತುಸು ನೀಲಗಿರಿ ತೈಲವನ್ನು ಎದೆ, ಬೆನ್ನಿನ ಭಾಗಕ್ಕೆ ಸವರಿ ಮೃದುವಾಗಿ ಮಸಾಜ್‌ ಮಾಡಿ. ಇದರಿಂದ ಮಕ್ಕಳಿಗೆ ಸೋಂಕು ತಗುಲದಂತೆ ಬೇಲಿ ಹಾಕಿದಂತೆ, ಜೊತೆಗೆ ಸುಲಭದ ಉಸಿರಾಟಕ್ಕೂ ನೆರವಾಗುತ್ತದೆ.

– ಪಿ. ಮಹೇಶ್ವರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ