ಫಿಟ್‌ನೆಸ್‌ನ್ನು ಸದಾಕಾಲ ಕಾಯ್ದುಕೊಳ್ಳುವುದು ಬಲು ಮುಖ್ಯ. ಮಾನ್‌ಸೂನ್‌ ಕಾಲದಲ್ಲಿ ಹೆಚ್ಚಿನ ಮಹಿಳೆಯರು ಆಲಸಿಗಳಾಗಿರುತ್ತಾರೆ. ಮನೆಯಿಂದ ಹೊರಗೆ ಹೋಗಿ ವರ್ಕ್‌ಔಟ್‌ ಮಾಡಲು ಬೇಸರಿಸುತ್ತಾರೆ. ಈ ಕಾಲದಲ್ಲಿ ಜೀರ್ಣಶಕ್ತಿ ಕುಂದುತ್ತದೆ. ಜೊತೆಗೆ ಕೆಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಒಳ್ಳೆಯ ಫಿಟ್‌ನೆಸ್‌ ಟಿಪ್ಸ್ ದೊರಕಿದರೆ ಮನೆಯಲ್ಲಿಯೇ ವರ್ಕ್‌ಔಟ್‌ ಮಾಡುವುದು ಸುಲಭವಾಗುತ್ತದೆ.

ಮುಂಬೈನ ಫಿಟ್‌ನೆಸ್‌ ಎರ್ಕ್ಸ್ ಪರ್ಟ್‌ ಮನೀಷಾ ಕಪೂರ್‌ಕಳೆದ ಅನೇಕ ವರ್ಷಗಳಿಂದ ಮಹಿಳೆಯರಿಗೆ ಟ್ರೇನಿಂಗ್‌ ಕೊಡುತ್ತಿದ್ದಾರೆ. ಅವರು ನೀಡಿರುವ ಫಿಟ್‌ನೆಸ್‌ ಟಿಪ್ಸ್ ಹೀಗಿವೆ :

ಸೆಕೆ ಇರುವಾಗ ಹೆಚ್ಚು ಬೆವರುತ್ತದೆ. ಆದ್ದರಿಂದ ನೀರನ್ನು ಕುಡಿಯುತ್ತಿರಬೇಕು. ದಿನಕ್ಕೆ 10-12 ಲೋಟ ನೀರು ಕುಡಿಯುವುದು ಅವಶ್ಯಕ.

ಈ ಕಾಲದಲ್ಲಿ ದೊರೆಯುವ ಸೌತೆಕಾಯಿ, ಕಲ್ಲಂಗಡಿ, ಕರ್ಬೂಜ ಮೊದಲಾದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ.

ವರ್ಕ್‌ಔಟ್‌ನ್ನು ವ್ಯಾಯಾಮದ ಭಾವನೆಯಿಂದ ಮಾಡಬೇಡಿ. ಇದನ್ನು ಅನುಭವಿಸುತ್ತಾ ಎಂಜಾಯ್‌ ಮಾಡಿ. ನಿಮಗೆ ಡ್ಯಾನ್ಸ್ ಇಷ್ಟವಿದ್ದರೆ ಅದನ್ನೂ ಸಹ ಮಾಡಬಹುದು. ಕನಿಷ್ಠ 15-20 ನಿಮಿಷಗಳ ಕಾಲ ವರ್ಕ್‌ಔಟ್‌ ಮಾಡಿ.

ಬೇಸಿಗೆ ಮತ್ತು ಮಳೆಗಾಲದಲ್ಲಿ ಹೊರಗೆ ಹೋಗುವುದು ಕಷ್ಟ. ಆದ್ದರಿಂದ ಮನೆಯಲ್ಲಿಯೇ ಬಾಡಿ ವೇಟ್‌ ಎಕ್ಸರ್‌ಸೈಜ್‌, ಸ್ಟ್ರೆಚಸ್‌ಮುಂತಾದವನ್ನು ಮಾಡಬಹುದು.

ವರ್ಕ್‌ಔಟ್‌ಗೆ ಮೊದಲು ವಾರ್ಮ್ ಅಪ್‌ ಆಗುವುದನ್ನು ಮರೆಯಬೇಡಿ. ಇಲ್ಲವಾದರೆ ಮಾಂಸಖಂಡಗಳಿಗೆ ಇನ್‌ಜ್ಯುರಿ ಆಗುವ ಸಂಭವವಿರುತ್ತದೆ.

ವರ್ಕ್‌ಔಟ್‌ನ ನಂತರ ಕೂಲ್ ಡೌನ್‌ ಪೊಸಿಶನ್‌ನಲ್ಲಿರುವುದು ಅವಶ್ಯಕ.

ಬೆಳಗ್ಗೆ ಅಥವಾ ಸಾಯಂಕಾಲ ವರ್ಕ್‌ಔಟ್‌ ಮಾಡುವುದು ಒಳ್ಳೆಯದು. ಈ ಸಮಯದಲ್ಲಿ ಹವಾಮಾನ ತಂಪಾಗಿರುತ್ತದೆ.

ವರ್ಕ್‌ಔಟ್‌ ಮಾಡುವಾಗ ಮೂಗಿನಿಂದಲೇ ಉಸಿರಾಡಿ. ಇದರಿಂದ ನಿಮಗೆ ಕೊಂಚ ಆಯಾಸವಾಗಬಹುದು. ಆದರೆ ನಿಮ್ಮ  ಕ್ಯಾಲರಿಗಳು ಬೇಗನೆ ಬರ್ನ್‌ ಆಗುತ್ತವೆ.

ವರ್ಕ್‌ಔಟ್‌ ಮಾಡುವ ಸಮಯದಲ್ಲಿ ಹಗುರ ಮತ್ತು ಆರಾಮದಾಯಕವಾದ ಬಟ್ಟೆ ಧರಿಸಿರಿ.

ವರ್ಕ್‌ಔಟ್‌ ಮಾಡುವಾಗ ಆಯಾಸವೆನಿಸಿದರೆ ತಕ್ಷಣ ನಿಲ್ಲಿಸಿ, ಫ್ಯಾನ್‌ ಕೆಳಗೆ ಕುಳಿತು ವಿಶ್ರಾಂತಿ ಪಡೆಯಿರಿ.

ವ್ಯಾಯಾಮದ ಸಮಯದಲ್ಲಿ ಮನಸ್ಸನ್ನು ಶಾಂತವಾಗಿರಿಸಲು ನಿಮ್ಮ ಮೆಚ್ಚಿನ ಹಾಡನ್ನು ಕೇಳಬಹುದು. ಇದರಿಂದ ಮನಸ್ಸಿನ ಇತರೆ ವಿಚಾರಗಳಿಂದ ಮುಕ್ತಿ ದೊರೆಯುತ್ತದೆ.

ವ್ಯಾಯಾಮವನ್ನು ಮನೆಯವರ ಅಥವಾ ಸ್ನೇಹಿತರ ಜೊತೆ ಸೇರಿಯೂ ಮಾಡಬಹುದು. ಇದರಿಂದ ಆಲಸ್ಯ ಉಂಟಾಗುವುದು ತಪ್ಪುತ್ತದೆ ಮತ್ತು ಫಿಟ್‌ನೆಸ್‌ ಒಂದು ರೊಟೀನ್‌ನಂತೆ ಆಗುವುದು.

ಈ ಕಾಲದಲ್ಲಿ ಸೂಕ್ತ ಡಯೆಟ್‌ ಅತಿ ಮುಖ್ಯ. ಸಿಹಿ ತಿನಿಸು ಮತ್ತು ಕರಿದ ಪದಾರ್ಥಗಳನ್ನು ದೂರವಿಡಿ. ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಹೊರಗೆ ಹೋಗುವುದಿದ್ದರೆ ಬಾಳೆ, ಸೇಬು, ಕರ್ಬೂಜ ಹಣ್ಣುಗಳನ್ನು ತುಂಡರಿಸಿಕೊಂಡು ಹೋಗಿ. ಇದಲ್ಲದೆ ಮಜ್ಜಿಗೆ, ನಿಂಬೆ, ಮಾವು ಹಾಗೂ ಕೋಕಮ್ ಶರಬತ್ತುಗಳನ್ನು ಜೊತೆಗಿರಿಸಿಕೊಳ್ಳಬಹುದು.

ಹೊರಗೆ ಹೊರಡುವಾಗ ನೀರಿನ ಬಾಟಲ್‌ನ್ನು ಮರೆಯದೆ ತೆಗೆದುಕೊಳ್ಳಿ. ನೀರಿಗೆ ಪುದೀನಾ ಎಲೆ, ಸೌತೆಕಾಯಿ, ನಿಂಬೆಹಣ್ಣಿನ ಚಿಕ್ಕ ಚೂರುಗಳನ್ನು ಸೇರಿಸಿ. ಇವುಗಳ ರುಚಿ ಮತ್ತು ತಂಪು ನಿಮಗೆ ಫ್ರೆಶ್‌ನೆಸ್‌ನ ಅನುಭವ ನೀಡುತ್ತದೆ.

ಉಪ್ಪಿನ ಅಂಶ ಹೆಚ್ಚಾಗಿರುವ ಉಪ್ಪಿನಕಾಯಿ, ಚಿಪ್ಸ್ ಮತ್ತು ಇತರೆ ಜಂಕ್‌ಫುಡ್ಸ್ ಸೇವನೆ ಕಡಿಮೆ ಮಾಡಿ.

ಅಡುಗೆ ಮಾಡುವಾಗ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಹೆಚ್ಚಾಗಿ ಬಳಸಿ. ಇದರಿಂದ ಶರೀರ ತಂಪಾಗಿರುತ್ತದೆ. ಗರಂ ಮಸಾಲೆಯ ಬಳಕೆ ಕಡಿಮೆ ಮಾಡಿ.

ಬೇಸಿಗೆ ಮತ್ತು ಮಾನ್‌ಸೂನ್‌ ಕಾಲದಲ್ಲಿ ತುಂಡರಿಸಿ ತೆರೆದಂತೆ ಇಟ್ಟಿರುವ ಹಣ್ಣುಗಳನ್ನು ಬಹಳ ಹೊತ್ತಿನ ನಂತರ ತಿನ್ನಬೇಡಿ. ಏಕೆಂದರೆ ಈ ಕಾಲದಲ್ಲಿ ಬ್ಯಾಕ್ಟೀರಿಯಾ ಬೇಗನೆ ವೃದ್ಧಿಸುತ್ತದೆ.

ತರಕಾರಿಗಳನ್ನು ಬೇಯಿಸುವ ಮೊದಲು ಉಪ್ಪು ಸೇರಿಸಿದ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.

7-8 ಗಂಟೆಗಳ ಕಾಲ ನಿದ್ರೆ ಮಾಡಿ.

ಯಾವುದಾದರೂ ಹೊಸ ಹಾಬಿಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ.

ಹೊರಗಿನಿಂದ ಮನೆಗೆ ಬಂದಾಗ ಮೆಡಿಕೇಟೆಡ್‌ ಸೋಪ್‌ನಿಂದ ಕೈಕಾಲು ತೊಳೆಯಿರಿ. ಪರ್ಸನಲ್ ಹೈಜೀನ್‌ಗೆ ಇದು ಅವಶ್ಯಕ.

ಈ ಕಾಲದಲ್ಲಿ ಕಾಲುಗಳ ಕಡೆಗೆ ವಿಶೇಷ ಗಮನ ನೀಡಿ. ಮಳೆಯಲ್ಲಿ ಹೊರಗಿನ ಕೊಳೆ ನೀರಿನಿಂದ ಕಾಲ್ಬೆರಳುಗಳಿಗೆ ಇನ್ಛೆಕ್ಷನ್ ಆಗುವ ಸಂಭವಿರುತ್ತದೆ. ಕಾಲು ಒಣಗಿರುವಂತೆ ನೋಡಿಕೊಳ್ಳಿ. ಬೇಕಾದರೆ ಬೋರಿಕ್‌ ಪೌಡರ್‌ನ್ನು ಪಾದಗಳ ಮೇಲೆ ಸಿಂಪಡಿಸಿ.

ಮಳೆ ನೀರಿನಲ್ಲಿ ನೆನೆಯುವುದು ಕಾಯಿಲೆಗೆ ಕಾರಣವಾಗುತ್ತದೆ. ಅನಾವಶ್ಯಕವಾಗಿ ನೆನೆಯುವುದನ್ನು  ತಪ್ಪಿಸಿ.

ಹವಾಮಾನ ಚೆನ್ನಾಗಿಲ್ಲದಿರುವಾಗ ಮಾನಸಿಕವಾಗಿ ಸಂತೋಷವಾಗಿರಲು ಮತ್ತು ಆರೋಗ್ಯಂತರಾಗಿರಲು ನಿಮಗಿಷ್ಟವಾದ ಪುಸ್ತಕ ಓದಿ ಮತ್ತು ಸಂಗೀತ ಕೇಳಿ.

ಇಂದಿನಿಂದಲೇ ಈ ವಿಷಯಗಳನ್ನು ಕಾರ್ಯರೂಪಗೊಳಿಸಿ ಮತ್ತು ಮಳೆಗಾಲದಲ್ಲಿ ಚಟುವಟಿಕೆಯಿಂದ ಕೂಡಿರಿ.

– ಜಿ. ಸುಮನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ