ಪಿಸಿಓಎಸ್‌ ಅಂದರೆ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಹಾರ್ಮೋನಿನ ಏರುಪೇರಿನಿಂದ ಉಂಟಾಗುವ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ ಅವರ ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದು ದೇಶದ ಶೇ.10ರಷ್ಟು ಮಹಿಳೆಯರ ಮೇಲೆ ಪ್ರಭಾವ ಬೀರುತ್ತದೆ. ಪಿಸಿಓಎಸ್‌ ರೋಗದಿಂದಾಗಿ ಮಹಿಳೆಯರಲ್ಲಿ ಅನೇಕ ಬಗೆಯ ಸಿಸ್ಟ್ ಹಾಗೂ ಚೀಲದಂತಹ ಕೋಶಗಳು ನಿರ್ಮಾಣಗೊಳ್ಳುತ್ತವೆ. ಅವುಗಳಲ್ಲಿ ದ್ರವ ಪದಾರ್ಥ ಭರ್ತಿಯಾಗಿರುತ್ತದೆ. ಇವು ದೇಹದ ಹಾರ್ಮೋನುಗಳ ಮಾರ್ಗವನ್ನು ಬಾಧೆಗೀಡು ಮಾಡುತ್ತವೆ. ಅಂಡಾಣು ಸಾಗುವ ಮಾರ್ಗಕ್ಕೆ ಇದರಿಂದ ತೊಂದರೆಯಾಗುತ್ತದೆ.

ಪಿಸಿಓಎಸ್‌ ತೊಂದರೆಗೆ ಸಿಲುಕಿದ ಮಹಿಳೆಯರಲ್ಲಿ ಇನ್ಸುಲಿನ್‌ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಈ ಕಾರಣದಿಂದ ಪುರುಷ ಹಾರ್ಮೋನು ಹಾಗೂ ಆ್ಯಂಡ್ರೋಜನ್‌ ಉತ್ಪಾದನೆಯಲ್ಲೂ ಹೆಚ್ಚಳವಾಗುತ್ತದೆ. ಅಧಿಕ ಪ್ರಮಾಣದಲ್ಲಿ ಪುರುಷ ಹಾರ್ಮೋನಿನ ಉತ್ಪಾದನೆಯಿಂದ ಮಹಿಳೆಯರಲ್ಲಿ ಅಂಡಾಣು ಉತ್ಪನ್ನವಾಗುವ ಪ್ರಕ್ರಿಯೆ ಶಿಥಿಲಗೊಳ್ಳುತ್ತದೆ. ಇದರ ಪರಿಣಾಮ ಏನಾಗುತ್ತದೆ ಎಂದರೆ, ಯಾವ ಮಹಿಳೆಯರ ಅಂಡಾಶಯದಲ್ಲಿ ಪಾಲಿಸಿಸ್ಟಿಕ್‌ ಸಿಂಡ್ರೋಮ್ ಇರುತ್ತದೋ, ಅವರ ದೇಹದಲ್ಲಿ ಅಂಡಾಣು ಉತ್ಪಾದನೆ ಪ್ರಕ್ರಿಯೆ ಕಡಿಮೆಯಾಗುತ್ತದೆ ಹಾಗೂ ಅವರು ಗರ್ಭ ಧರಿಸುವುದಿಲ್ಲ.

ಬಂಜೆತನಕ್ಕೆ ಈ ಆ್ಯನೊವೆಟರಿಯೇ ಎಲ್ಲಕ್ಕೂ ಮುಖ್ಯ ಕಾರಣ. ಆರಂಭದಲ್ಲಿಯೇ ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ, ಮಹಿಳೆಯರ ದೇಹ ರಚನೆಯಲ್ಲಿ ಅಪಾಯಕಾರಿ ಬದಲಾವಣೆ ಕಂಡುಬರಬಹುದು. ಇದೇ ಮುಂದೆ ಒಂದು ಗಂಭೀರ ರೋಗದ ಸ್ವರೂಪ ಪಡೆದುಕೊಳ್ಳಬಹುದು. ಮಧುಮೇಹ ಮತ್ತು ಹೃದ್ರೋಗ ಇದರಲ್ಲಿ ಪ್ರಮುಖವಾಗಿವೆ.

ಮುಖ್ಯ ಲಕ್ಷಣಗಳು

ಋತುಚಕ್ರಕ್ಕೆ ಸಂಬಂಧಪಟ್ಟಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಪಿಸಿಓಎಸ್‌ ಸಾಮಾನ್ಯವಾಗಿ ಋತುಚಕ್ರವನ್ನು ಏರುಪೇರು ಮಾಡುತ್ತದೆ. ಆದರೆ ಋತುಚಕ್ರಕ್ಕೆ ಸಂಬಂಧಪಟ್ಟ ತೊಂದರೆಗಳು ಹಲವು ಪ್ರಕಾರದ್ದಾಗಿರಬಹುದು. ಎಲ್ಲಕ್ಕೂ ಮುಖ್ಯ ಲಕ್ಷಣವೆಂದರೆ, ಮೊಡವೆಗಳು ಹಾಗೂ ಪುರುಷರಂತೆ ಗಡ್ಡ ಬೆಳೆಯುವುದು. ತೂಕ ಹೆಚ್ಚುವುದು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಐವಿಎಂ ಚಿಕಿತ್ಸೆ

ಇಂತಹ ಸ್ಥಿತಿಯಲ್ಲಿ ಐವಿಎಂ ಅಂದರೆ ಇನ್‌ವಿಟ್ರೊ ಮೆಚ್ಯುರೇಶನ್‌ ಪ್ರಕ್ರಿಯೆ, ಪಿಸಿಓಎಸ್‌ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ತಾಯಿಯಾಗಲು ಬಲು ಉಪಯುಕ್ತ ಚಿಕಿತ್ಸಾ ಪದ್ಧತಿಯಾಗಿದೆ.

ಐವಿಎಂ ಪ್ರಕ್ರಿಯೆಯಲ್ಲಿ ಯಾವುದೇ ಬಗೆಯ ಹಾರ್ಮೋನು ಚುಚ್ಚುಮದ್ದಿನ ಅವಶ್ಯಕತೆ ಉಂಟಾಗುವುದಿಲ್ಲ. ಬಂಜೆತನದ ಪಾರಂಪರಿಕ ಚಿಕಿತ್ಸೆಯಲ್ಲಿ ಹಾರ್ಮೋನು ಚುಚ್ಚುಮದ್ದು ಕೊಡಲಾಗುತ್ತದೆ. ಐವಿಎಂ ಪ್ರಕ್ರಿಯೆಯಲ್ಲಿ ಹಲವು ಬಗೆಯ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಬಹುದಾಗಿದೆ. ಇದರ ಪರಿಣಾಮವೆಂಬಂತೆ ಗರ್ಭಧಾರಣೆಯ ಸಾಧ್ಯತೆಯೂ ಹೆಚ್ಚುತ್ತದೆ.

ಈ ಕ್ರಾಂತಿಕಾರಿ ಬಂಜೆತನ ಚಿಕಿತ್ಸಾ ಪದ್ಧತಿ ಪರಂಪರಾಗತ ಐವಿಎಫ್‌ ತಂತ್ರಜ್ಞಾನದ ಅಗ್ಗದ ಮತ್ತು ಸುರಕ್ಷಿತ ಪರ್ಯಾಯದ ರೂಪದಲ್ಲಿ ವಿಕಸಿತಗೊಳಿಸಲಾಗಿದೆ.

ಒಂದು ಸಾಮಾನ್ಯ ಐವಿಎಫ್‌ನಲ್ಲಿ ಮಹಿಳೆಯ ಅಂಡಾಣುವನ್ನು ಹಾರ್ಮೋನು ಔಷಧಿಗಳ ಮುಖಾಂತರ ಪರಿಪಕ್ವಗೊಳಿಸಲಾಗುತ್ತದೆ. ಆ ಬಳಿಕ ಅದರಲ್ಲಿ ವೀರ್ಯಾಣು ಮಿಲನಗೊಳಿಸಿ ಟ್ರಾನ್ಸ್ ವೆಜಿನ್‌ ಸೂಜಿಯ ಮುಖಾಂತರ ಗರ್ಭಾಶಯದಲ್ಲಿ ಸ್ಥಾಪಿಸಲಾಗುತ್ತದೆ. ಅಲ್ಲಿ ಭ್ರೂಣದ ಬೆಳವಣಿಗೆ ಪ್ರಕ್ರಿಯೆ ಆರಂಭವಾಗುತ್ತದೆ.

ಇನ್‌ವಿಟ್ರೊ ಮೆಚ್ಯುರೇಶನ್‌ ಪದ್ಧತಿಯಲ್ಲಿ ಒಂದು ಕನಿಷ್ಠ ಹಾರ್ಮೋನ್‌ ಸ್ಟಿಮ್ಯೂಲೇಶನ್‌ ಬಳಿಕ ಅಂಡಾಣುವನ್ನು ನೇರವಾಗಿ ಅಂಡಾಶಯದಿಂದಲೇ ಪಡೆಯಲಾಗುತ್ತದೆ. ಪ್ರಯೋಗ ಶಾಲೆಯಲ್ಲಿ 24 ರಿಂದ 48 ಗಂಟೆಗಳ ಕಾಲ ಪರಿಪಕ್ವಗೊಳಿಸಲಾಗುತ್ತದೆ. ಇದನ್ನು ಮಹಿಳೆಯ ದೇಹದಲ್ಲಿಯೇ ಪರಿಪಕ್ವಗೊಳಿಸಲಾಗುವುದಿಲ್ಲ. ಒಂದು ಸಲ ಪರಿಪಕ್ವಗೊಳಿಸಿದ ನಂತರ ಇದರಲ್ಲಿ ವೀರ್ಯಾಣುವನ್ನು ಇಂಜೆಕ್ಟ್ ಮಾಡಲಾಗುತ್ತದೆ.

ಅತ್ಯಂತ ಆಧುನಿಕ ಐಸಿಎಸ್‌ಐ ತಂತ್ರಜ್ಞಾನವನ್ನು ಬಳಸಿ ಈ ಅಂಡಾಣುವನ್ನು ಪರಿಪಕ್ವಗೊಳಿಸಲಾಗುತ್ತದೆ. ಆ ಬಳಿಕ ಭ್ರೂಣವನ್ನು ಗರ್ಭದಲ್ಲಿ ಸೇರಿಸಲಾಗುತ್ತದೆ.

ಸ್ಟಿಮ್ಯುಲೇಟೆಡ್‌ ಐವಿಎಂ ಇದ್ದಾಗ ಓವೇರಿಯನ್‌ ಹೈಪರ್‌ ಸ್ಟಿಮ್ಯುಲೇಶನ್‌ ಸಿಂಡ್ರೋಮ್ ನ ಅಪಾಯ ಹೆಚ್ಚುತ್ತದೆ. ಅದರಿಂದ ಹಲವು ದುಷ್ಪರಿಣಾಮಗಳು ಉಂಟಾಗುತ್ತವೆ. ಐವಿಎಂನಿಂದ ಈ ಅಪಾಯ ಪರಿಪೂರ್ಣವಾಗಿ ಕಡಿಮೆಯಾಗುತ್ತದೆ. ಏಕೆಂದರೆ ಇದರಲ್ಲಿ ಅಂಡಕೋಶದ ಸ್ಟಿಮ್ಯುಲೇಶನ್‌ ಪ್ರಕ್ರಿಯೆ ಸಾಕಷ್ಟು ಕಡಿಮೆಯಾಗುತ್ತದೆ. ಜೊತೆಗೆ ಐವಿಎಫ್‌ಗೆ ಹೋಲಿಸಿದಲ್ಲಿ ಐವಿಎಂ ಕಡಿಮೆ ದುಬಾರಿ ಪ್ರಕ್ರಿಯೆಯಾಗಿದೆ.

ಒಂದು ಅಂದಾಜಿನ ಪ್ರಕಾರ, ಮಗುವಿಗೆ ಜನ್ಮ ನೀಡುವ ವಯಸ್ಸಿನ ಶೇ.5 ರಿಂದ 10 ರಷ್ಟು ಮಹಿಳೆಯರು ಪಿಸಿಓಎಸ್‌ನಿಂದ ತೊಂದರೆಗೊಳಗಾಗಿರುತ್ತಾರೆ. ಹೆಚ್ಚಿನ ಮಹಿಳೆಯರಿಗೆ ತಾವು ಆ ರೋಗದಿಂದ ತೊಂದರೆಗೊಳಗಾಗಿದ್ದೇವೆ ಎನ್ನುವುದು ಗೊತ್ತೇ ಇರುವುದಿಲ್ಲ. ಈ ಸಂಗತಿ ಖಾತ್ರಿಯಾಗುವತನಕ ಗರ್ಭಧಾರಣೆ ಆಗುವುದನ್ನು ತಡೆಯಬೇಕು.

ಐವಿಎಂ ಪಕ್ರಿಯೆ ನಿಶ್ಚಿತವಾಗಿಯೂ ಪಿಸಿಓಎಸ್‌ನಿಂದ ತೊಂದರೆಗೊಳಗಾದ ಮಹಿಳೆಯರಿಗೆ ಸೂಕ್ತ ಪರಿಹಾರವಾಗಿದೆ.

ಡಾ. ಅರ್ಚನಾ 

Tags:
COMMENT