ನಮ್ಮ ದೇಶದಲ್ಲಿ ಯಾವುದೇ ಜೋಡಿಗೆ ಮಗು ಆಗದೇ ಇದ್ದರೆ, ಅದರ ದೋಷವನ್ನು ಸಾಮಾನ್ಯವಾಗಿ ಹೆಂಡತಿಯ ಮೇಲೆಯೇ ಹೊರಿಸಲಾಗುತ್ತದೆ. ಸಮಗ್ರ ಪರೀಕ್ಷೆಗಳು ನಡೆದಾಗ ಗಂಡನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೀರ್ಯಾಣುಗಳಿಲ್ಲ (ಸ್ಪರ್ಮ್ ಕೌಂಟ್‌) ಎನ್ನುವುದು ಖಚಿತವಾಗುತ್ತದೆ. ಅದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಜ್ಯೋತಿಷಿಗಳು, ಪೂಜಾರಿ ಪುರೋಹಿತರು, ಮುಲ್ಲಾಗಳು ಅದು ದೇವರ ಇಚ್ಛೆ ಎನ್ನುತ್ತಾರೆ. ಆದರೆ ಇದು ನಾವು ಸೇವಿಸುವ ಆಹಾರದ ಜೊತೆಗೆ ನೇರ ಸಂಬಂಧ ಹೊಂದಿದೆ ಎನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ. ನಾವು ಸೇವಿಸುವ ಆಹಾರದಲ್ಲಿ ಅತಿಯಾದ ಪ್ರಮಾಣದಲ್ಲಿ ಮಾಂಸಾಹಾರಿ ಪದಾರ್ಥಗಳು ಮತ್ತು ಹಾಲಿನ ಉತ್ಪನ್ನ ಇದ್ದರೆ, ಅದು ಕೇವಲ ಒಬ್ಬ ವ್ಯಕ್ತಿಯ ಸೊಂಟದ ಗಾತ್ರವನ್ನಷ್ಟೇ ಹೆಚ್ಚಿಸುವುದಿಲ್ಲ. ಅದು ಇನ್ನೂ ಕೆಳಭಾಗಕ್ಕೂ ಬಹಳ ಹಾನಿಯನ್ನುಂಟು ಮಾಡುತ್ತದೆ. ಸ್ಪರ್ಮ್ ಕೌಂಟ್‌, ಸೈಜ್‌ ಹಾಗೂ ಘನತ್ವದಲ್ಲೂ ಪರಿವರ್ತನೆಯಾಗುತ್ತದೆ, ಅದೂ ನೆಗೆಟಿವ್‌ ಆಗಿ.

ವೀರ್ಯಾಣು ಸಂಖ್ಯೆ ಕಡಿಮೆ

ವೈದ್ಯರು ಸಾಮಾನ್ಯವಾಗಿ ಧೂಮಪಾನ ನಿಲ್ಲಿಸಲು, ವೃಷಣ ಒತ್ತುವಂಥ ಬಿಗಿ ಒಳ ಉಡುಪು ಧರಿಸದಿರಲು, ಲ್ಯಾಪ್‌ಟಾಪ್‌ನ್ನು ತೊಡೆಯ ಮೇಲಲ್ಲ, ಟೇಬಲ್ ಮೇಲೆ ಇಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಅದೇ ರೀತಿ ಕಡಿಮೆ ಸಲ ಸಮಾಗಮಕ್ಕೆ ಸಲಹೆ ನೀಡುತ್ತಾರೆ. ಆದರೆ ಇದಿಷ್ಟೇ ಸಾಲುವುದಿಲ್ಲ.  ಗೀಗೊ ಸಿದ್ಧಾಂತ ಹೇಳುವುದೇನೆಂದರೆ ಗಾರ್ಬೇಜ್‌ ಇನ್‌, ಗಾರ್ಬೇಜ್‌ ಔಟ್‌! ಗಾರ್ಬೇಜ್‌ ಅಂದರೆ ವ್ಯರ್ಥವಾಗಿ ತಿಂದದ್ದು. ಮೆನ್ಸ್ ಹೆಲ್ತ್ ಕ್ಲಿನಿಕ್‌ ಲೇಕ್‌ ಫಾರೆಸ್ಟ್ ಯೂನಿರ್ಸಿಟಿಯ ಡಾ. ರಯಾನ್‌ ಟೆರ್ಸ್ಕಿ ಹೇಳುವುದೇನೆಂದರೆ, ಕಳೆದ ಅನೇಕ ವರ್ಷಗಳ ಸಂಶೋಧನೆಗಳಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಗೊತ್ತಾಗಿದೆ. ಆದರೆ ವೀರ್ಯಾಣು ಸಂಖ್ಯೆ ಕೊರತೆಗೂ ಹಾಗೂ ಆಹಾರ ಸೇವನೆಗೂ ಸಂಬಂಧ ಇದೆ ಎಂದು ಮಾತ್ರ ಯಾರೂ ಹೇಳುತ್ತಿಲ್ಲ.

ಆಹಾರದಲ್ಲಿ ಅಡಗಿದೆ ರಹಸ್ಯ

2006ರಲ್ಲಿ ಯೂನಿವರ್ಸಿಟಿ ಆಫ್‌ ರೊಟೆಸ್ಟರ್‌ನಲ್ಲಿ ಪ್ರಸ್ತುತಪಡಿಸಿದ ಒಂದು ಸಂಶೋಧನಾ ಪ್ರಬಂಧದಿಂದ ಸ್ಪಷ್ಟವಾಗುವುದೇನೆಂದರೆ, ಸಂತಾನಹೀನ ಸಮಸ್ಯೆ ಹೊಂದಿರುವ ಪುರುಷನ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳ ಪ್ರಮಾಣ ಸಾಕಷ್ಟು ಕಡಿಮೆಯಿರುತ್ತದೆ. 2011ರ ಬ್ರೆಜಿಲ್‌ನ ಒಂದು ಸಂಶೋಧನೆಯಿಂದ ತಿಳಿದು ಬಂದ ಸಂಗತಿಯೆಂದರೆ ಯಾರು ಗೋಧಿ, ಸಜ್ಜೆ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದರೋ ಅವರಲ್ಲಿ ಸ್ಪರ್ಮ್ ಕೌಂಟ್‌ ಜಾಸ್ತಿ ಇರುತ್ತದೆ.

ಮತ್ತೊಂದು ಸಂಶೋಧನೆಯಿಂದ ತಿಳಿದು ಬಂದ ಸಂಗತಿಯೆಂದರೆ ಪನೀರ್‌, ಚೀಸ್‌ ಹಾಗೂ ಇತರೆ ಕೆಲವು ಡೇರಿ ಉತ್ಪನ್ನಗಳ ಸೇವನೆಯಿಂದ ಸ್ಪರ್ಮ್ ಕೌಂಟ್‌ ಕುಗ್ಗುತ್ತದೆ. ಸ್ಪರ್ಮ್ ಡೋನರ್ಸ್‌ಗಳಿಂದ ಸ್ಪರ್ಮ್ ಸಂಗ್ರಹಿಸುವ ಸಂಸ್ಥೆಗಳು ಕಂಡುಕೊಂಡ ಪ್ರಕಾರ ಯಾರು ಡೇರಿ ಪ್ರಾಡಕ್ಟ್ ಗಳನ್ನು ಹೆಚ್ಚಿಗೆ ಸೇವಿಸುತ್ತಾರೊ, ಅವರ ಸ್ಪರ್ಮ್ ಕೌಂಟ್‌ ಶೇ.46ರಷ್ಟು ಕಡಿಮೆ ಇರುವುದು ತಿಳಿದುಬಂತು.

ಡೇರಿ ಪ್ರಾಡಕ್ಟ್ಸ್ : ಯಾರಿಗೆ ಲಾಭ?

ಡೆನ್ಮಾರ್ಕ್‌ನ ಜನನ ಪ್ರಮಾಣ 221 ದೇಶಗಳಲ್ಲಿ 185ನೇ ಸ್ಥಾನದಲ್ಲಿದೆ. ಅದು ಅಲ್ಲಿನ ಜನರ ಜನಸಂಖ್ಯಾ ನಿಯಂತ್ರಣಾ ಕ್ರಮಗಳಿಂದಲ್ಲ, ಅಲ್ಲಿನ ಜನರ ಆಹಾರದಲ್ಲಿ ಡೇರಿ ಉತ್ಪನ್ನಗಳ ಪ್ರಮಾಣ ಹೇರಳವಾಗಿರುವುದರಿಂದ ಅದು ಸಾಧ್ಯವಾಗಿದೆ. ಅಮೆರಿಕನ್‌ ಜರ್ನಲ್ ಆಫ್‌ ಕ್ಲಿನಿಕ್‌ ಮೆಡಿಸಿನ್‌ ಕೂಡ ಇದನ್ನು ಪುಷ್ಟೀಕರಿಸಿದೆ. ಮೀಟ್‌ ಹಾಗೂ ಚೀಸ್ ಸೇವಿಸುವವರ ಸ್ಪರ್ಮ್ ಕೌಂಟ್‌ ಸಾಮಾನ್ಯಕ್ಕಿಂತ ಶೇ.41ರಷ್ಟು ಕಡಿಮೆ ಇರುವುದು ಕಂಡುಬಂತು.

ಮಹಿಳೆಯರಲ್ಲೂ ಆಹಾರದಲ್ಲಿ ಸಸ್ಯಾಹಾರದ ಪ್ರಮಾಣ ಹೆಚ್ಚಿಸುವುದರಿಂದ ಹಾಗೂ ಸ್ಯಾಚುರೇಟೆಡ್‌ ಫ್ಯಾಟ್‌ (ಅದು ಹಾಲು ಹಾಗೂ  ಮಾಂಸಾಹಾರದಲ್ಲಿ ಧಾರಾಳವಾಗಿರುತ್ತದೆ) ಕಡಿಮೆಗೊಳಿಸುವುದರಿಂದ ಸಂತಾನೋತ್ಪತ್ತಿಯ ಸಾಧ್ಯತೆಗಳು ಹೆಚ್ಚುತ್ತವೆ. ಅತಿಯಾದ ಮಾಂಸಾಹಾರ ಸೇವನೆಯಿಂದ ಗರ್ಭಧಾರಣೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಸ್ಪರ್ಮ್ ಕೌಂಟ್‌ ಹೆಚ್ಚಿಸುವುದು ಹೇಗೆ?

ಮದ್ಯ ಸೇವನೆಯಿಂದಲೂ ಸಹ ಸ್ಪರ್ಮ್ ಕೌಂಟ್‌ ಕಡಿಮೆಯಾಗುತ್ತದೆ. ಯಾವ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ನ ಪ್ರಮಾಣ ಅಧಿಕವಾಗಿರುತ್ತದೋ, ಅವುಗಳ ಜ್ಯೂಸ್‌, ಸ್ಪರ್ಮ್ ಕೌಂಟ್‌ ಹೆಚ್ಚಿಸಲು ನೆರವಾಗುತ್ತದೆ. ಡೆನ್ಮಾರ್ಕ್‌ನ ಸಂಶೋಧನಾ ಸಂಸ್ಥೆಯೊಂದು ಕಂಡುಕೊಂಡ ಪ್ರಕಾರ, ಅತ್ಯಲ್ಪ ಪ್ರಮಾಣದ ಮದ್ಯ ಸೇವನೆಯಿಂದಲೂ ಸ್ಪರ್ಮ್ ಕೌಂಟ್‌ ಕಡಿಮೆಯಾಗುತ್ತದೆ. ಇದರಿಂದ ಸ್ಪಷ್ಟವಾಗುವ ಒಂದು ಸಂಗತಿಯೆಂದರೆ, ಸ್ಪರ್ಮ್ ಕೌಂಟ್‌ ಹೆಚ್ಚಿಸಲು ಹಣ್ಣು ತರಕಾರಿಗಳು, ಬೇಳೆಗಳು, ಸಲಾಡ್‌ ಸೇವಿಸಿ. ಮೀಟ್‌ ಮತ್ತು ಡೇರಿ ಪ್ರಾಡಕ್ಟ್ಸ್ ಕಡಿಮೆ ಮಾಡಿ.

– ಮೇನಕಾ ಗಾಂಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ