ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಹಾರ್ಮೋನ್‌ ಪರಿವರ್ತನೆಗಳು ಆಗುತ್ತಿರುತ್ತವೆ. ಇದರಿಂದ ಕೆಲವು ಮಹಿಳೆಯರ ಮುಖದಲ್ಲಿ ಕಾಂತಿ ಬರುತ್ತದೆ. ಆದರೆ ಹೆಚ್ಚಿನ ಮಹಿಳೆಯರ ಚರ್ಮ ಈ ಹಂತದಲ್ಲಿ ಅತ್ಯಂತ ಸಂವೇದನಾಶೀಲವಾಗುತ್ತದೆ. ಈ ಕಾರಣದಿಂದ ಅವರಿಗೆ ತ್ವಚೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸ್ಟ್ರೆಚ್ ಮಾರ್ಕ್ಸ್, ತುರಿಕೆ, ಮೊಡವೆ, ಪಿಗ್ಮೆಂಟೇಶನ್‌ ಮತ್ತು ಹೆರಿಗೆಯ ಬಳಿಕ ಚರ್ಮ ಜೋತುಬೀಳುವುದು ಇವೇ ಮುಂತಾದ ಸಮಸ್ಯೆಗಳನ್ನು ಅವರು ಎದುರಿಸಬೇಕಾಗಿ ಬರುತ್ತದೆ.

ಸ್ಟ್ರೆಟ್ ಮಾರ್ಕ್ಸ್ ಮಗುವಿನ ಬೆಳವಣಿಗೆಯ ಜೊತೆಜೊತೆಗೆ ಹೊಟ್ಟೆಯ ತ್ವಚೆಯಲ್ಲಿ ಎಳೆತವುಂಟಾಗುತ್ತದೆ. ಈ ಕಾರಣದಿಂದ ತ್ವಚೆಯ ಕೆಳಭಾಗದಲ್ಲಿರುವ ಎಲಾಸ್ಟಿಕ್‌ ಫೈಬರ್‌ ತುಂಡರಿಸುತ್ತದೆ. ಈ ಕಾರಣದಿಂದಾಗಿ ಸ್ಟ್ರೆಚ್‌ ಮಾರ್ಕ್ಸ್ ಉಂಟಾಗುತ್ತವೆ. ಗರ್ಭಾವಸ್ಥೆಯಲ್ಲಿ ಯಾವ ಮಹಿಳೆಯರ ಭಾರ ಅತಿಯಾಗಿ ಹೆಚ್ಚುತ್ತದೋ ಅವರಿಗೆ ಈ ಸಮಸ್ಯೆ ಅಧಿಕವಾಗಿರುತ್ತದೆ. ಈ ಅವಧಿಯಲ್ಲಿ ದೇಹ ತೂಕ 11-12 ಕಿಲೋ ಹೆಚ್ಚುವುದು ಸಾಮಾನ್ಯ. ಆದರೆ ಕೆಲವು ಮಹಿಳೆಯರ ತೂಕ 20 ಕಿಲೋದಷ್ಟು ಹೆಚ್ಚುತ್ತದೆ. ಇದರಿಂದ ಚರ್ಮದಲ್ಲಿ ಎಳೆತ ಉಂಟಾಗುತ್ತದೆ. ಸ್ಟ್ರೆಚ್‌ ಮಾರ್ಕ್ಸ್ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಇದಕ್ಕೆ ಕಾರಣ ಆನುವಂಶಿಕ ಆಗಿರಬಹುದು.

10ರಲ್ಲಿ 8 ಮಹಿಳೆಯರು ಈ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ. ನಿಮ್ಮ ತ್ವಚೆ ಹೇಗಿದೆ? ಎಷ್ಟು ಮೃದುವಾಗಿದೆ ಎಂಬುದನ್ನು ಇದು ಅವಲಂಬಿಸಿದೆ. ಒಂದುವೇಳೆ ಕಡಿಮೆ ಅವಧಿಯಲ್ಲಿ ತೂಕ ಹೆಚ್ಚಾದವರಿಗೆ ಸ್ಟ್ರೆಚ್‌ ಮಾರ್ಕ್ಸ್ ಹೆಚ್ಚಾಗಿರುತ್ತವೆ. ಕೆಲವು ಮಹಿಳೆಯರಿಗೆ ಎದೆಭಾಗದಲ್ಲಿ ಮತ್ತು ತೊಡೆಯ ಭಾಗದಲ್ಲಿ ಸ್ಟ್ರೆಚ್‌ ಮಾರ್ಕ್ಸ್ ಗಳು ಕಂಡುಬರುತ್ತವೆ. ಅವು 6ನೇ ಹಾಗೂ 7ನೇ ತಿಂಗಳಲ್ಲಿ ಹೆಚ್ಚು ಕಂಡುಬರುತ್ತವೆ. ಹೆರಿಗೆಯ ಬಳಿಕ ಕ್ರಮೇಣ ಅವು ಸಡಿಲವಾಗುತ್ತಾ ಹೋಗುತ್ತವೆ. ಆದರೆ ಪರಿಪೂರ್ಣವಾಗಿ ಅಳಿಸಿಹೋಗುವುದಿಲ್ಲ.

ಹೇಗೆ ತಡೆಯುವುದು?

ಮಾಯಿಶ್ಚರೈಸರ್‌ ಅಥವಾ ವಿಟಮಿನ್‌ `ಇ’ ಯುಕ್ತ ಕ್ರೀಮ್ ಲೇಪಿಸಿ ಆ ಗುರುತುಗಳನ್ನು ಕಡಿಮೆಗೊಳಿಸಬಹುದು. ಏಕೆಂದರೆ ಇದು ತ್ವಚೆಯಲ್ಲಿ ತೈಲಾಂಶ ಕಾಯ್ದುಕೊಂಡು ಹೋಗುತ್ತದೆ.

ತ್ವಚೆಯ ಇತರೆ ಸಮಸ್ಯೆಗಳು

ಮೊಡವೆಗಳು : ಗರ್ಭಿಣಿಯರಲ್ಲಿ ಮೊಡವೆಗಳ ಸಮಸ್ಯೆ ಎಲ್ಲಕ್ಕೂ ಹೆಚ್ಚು ಕಾಡುತ್ತದೆ. ಕೆಲವು ಮಹಿಳೆಯರಿಗೆ ರಾಶೆಸ್‌ ಕೂಡ ಉಂಟಾಗುತ್ತವೆ. ಪ್ರೊಜೆಸ್ಟೆರಾನ್‌ ಮತ್ತು ಈಸ್ಟ್ರೋಜೆನ್‌ ಹಾರ್ಮೋನುಗಳ ಅತಿಯಾದ ಸ್ರಾವದಿಂದ ಸೀಬಂನ ಉತ್ಪಾದನೆ ಜಾಸ್ತಿಯಾಗುತ್ತದೆ. ಆ ಕಾರಣದಿಂದ ತ್ವಚೆಯ ರೋಮಛಿದ್ರಗಳು ಮುಚ್ಚಿರುತ್ತವೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಮುಖದ ಆಸುಪಾಸು ಹಾಗೂ ಗದ್ದದ ಮೇಲೆ ಮೊಡವೆಗಳು ಏಳುತ್ತವೆ. ಕೆಲವು ಮಹಿಳೆಯರ ಇಡೀ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹಾಗೊಮ್ಮೆ ಇವುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮಾಡದಿದ್ದರೆ ಹೆರಿಗೆಯ ಬಳಿಕ ಹಾಗೆಯೇ ಉಳಿದಿರುತ್ತವೆ. ಕೆಲವೊಮ್ಮೆ ಅವು ಕಲೆಗಳನ್ನು ಉಳಿಸುತ್ತವೆ. ಹೀಗಾಗಿ ವೈದ್ಯರ ಸಲಹೆಯಿಲ್ಲದೆ ಮನೆಯಲ್ಲಿಯೇ ಯಾವಯಾವುದೋ ಉಪಾಯ ಮಾಡಲು ಹೋಗಬೇಡಿ. ಇವುಗಳ ಚಿಕಿತ್ಸೆಗಾಗಿ ಆ್ಯಂಟಿಬಯಾಟಿಕ್‌ಗಳನ್ನು ಕೂಡ ಸೇವಿಸಬಾರದು.

ತುರಿಕೆ : ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಗಾತ್ರ ಹೆಚ್ಚುತ್ತ ಹೋದಂತೆ ಮಾಂಸಖಂಡಗಳಲ್ಲಿ ಎಳೆತ ಉಂಟಾಗುತ್ತದೆ. ಇದರಿಂದ ಎಷ್ಟೋ ಮಹಿಳೆಯರಿಗೆ ತುರಿಕೆಯ ಸಮಸ್ಯೆ ಉಂಟಾಗುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಕೆಲವು ಮಹಿಳೆಯರಿಗೆ ಇಡೀ ದೇಹದಲ್ಲಿ ತುರಿಕೆಯ ಸಮಸ್ಯೆ ಇರುತ್ತದೆ. ಈ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಕ್ಯಾಲಮೈನ್‌ ಲೋಶನ್‌ ಅಥವಾ ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್‌ ಲೇಪಿಸಿ. ಒಂದುವೇಳೆ ತುರಿಕೆ ವಿಪರೀತವಾದರೆ ವೈದ್ಯರ ಸಲಹೆ ಪಡೆಯಿರಿ. ಗರ್ಭಾವಸ್ಥೆಯ ಸಂದರ್ಭದಲ್ಲಿ ಲಿವರ್‌ನ ಯಾವುದಾದರೂ ಸಮಸ್ಯೆಯಿಂದಲೂ ಹೀಗಾಗಬಹುದು.

ಮೆಲಾಸ್ಮ : ಗರ್ಭಾವಸ್ಥೆಯ ಸಂದರ್ಭದಲ್ಲಿ ತ್ವಚೆಗೆ ಸಂಬಂಧಪಟ್ಟ ಅತ್ಯಂತ ಗಂಭೀರ ಸಮಸ್ಯೆ ಇದು. ಇದನ್ನು `ಪ್ರೆಗ್ನೆನ್ಸಿ ಮಾಸ್ಕ್’ ಎಂದು ಹೇಳಲಾಗುತ್ತದೆ. ಇದರಿಂದ ಮುಖದಲ್ಲಿ ಅಲ್ಲಲ್ಲಿ ಪಿಗ್ಮೆಂಟೇಶನ್‌ ಉಂಟಾಗುತ್ತವೆ ಹಾಗೂ ಅವು ದುಂಡನೆಯ ಗಾತ್ರ ಪಡೆದುಕೊಳ್ಳುತ್ತವೆ. ಅಲ್ಟ್ರಾವೈಲೆಟ್‌ ಕಿರಣಗಳ ಸಂಪರ್ಕ, ಆನುವಂಶಿಕತೆ ಹಾಗೂ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನುಗಳ ಹೆಚ್ಚಿದ ಮಟ್ಟ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕೆಲವು ಮಹಿಳೆಯರಿಗೆ ಎದೆಭಾಗದಲ್ಲಿ ಮತ್ತು ತೊಡೆಯ ಮೇಲೂ ಪಿಗ್ಮೆಂಟೇಶನ್‌ ಉಂಟಾಗುತ್ತವೆ. ಹೆರಿಗೆಯ ಬಳಿಕ ಪಿಗ್ಮೆಂಟೇಶನ್‌ ಕಡಿಮೆಯಾಗುತ್ತವೆ. ಆದರೆ ಪರಿಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ತೀವ್ರ ಬಿಸಿಲಿನ ಸಂಪರ್ಕದಿಂದ ದೂರ ಇರಿ. ನೀವು ಮನೆಯಿಂದ ಹೊರಡುವ ಸಮಯದಲ್ಲಿ ಎಸ್‌ಪಿಎಫ್‌ಸನ್‌ಸ್ಕ್ರೀನ್‌ ಅವಶ್ಯವಾಗಿ ಲೇಪಿಸಿಕೊಳ್ಳಿ.

ಡಾ. ಮೇಘಾ  

Tags:
COMMENT