ಸುಚಿತ್ರಾ ಅತ್ಯಂತ ಉತ್ಸಾಹದಿಂದ ಆಫ್ ಶೋಲ್ಡರ್ ಟಾಪ್ ಮತ್ತು ಬ್ಲ್ಯಾಕ್ ಕ್ಯಾಫ್ರಿ ಧರಿಸಿ ಕೂದಲಿಗೆ ಜೆಲ್ ಲೇಪಿಸಿಕೊಂಡಳು. ಬಳಿಕ ಮ್ಯಾಚಿಂಗ್ ಜ್ಯೂವೆಲರಿ ಧರಿಸಲೆಂದು ಜ್ಯೂವೆಲರಿ ಬಾಕ್ಸ್ ತೆರೆದಾಗ ಒಮ್ಮೆಲೆ ಗಾಬರಿಗೊಂಡಳು.
ಆಕೆ ಗಾಬರಿಯಾಗಲು ಒಂದು ಮುಖ್ಯ ಕಾರಣ, ಎರಡು ಸಲವಷ್ಟೇ ಆಕೆ ಆ ಮ್ಯಾಚಿಂಗ್ ಜ್ಯೂವೆಲರಿ ಧರಿಸಿದ್ದಳು. ಆ ಆಭರಣದ ಹೊಳಪು ಹೊರಟುಹೋಗಿತ್ತು. ಆಕೆ ಅದಕ್ಕಾಗಿ ಖರ್ಚು ಮಾಡಿದ್ದ ಹಣವೆಲ್ಲ ವ್ಯರ್ಥವಾಗಿ ಹೋಗಿತ್ತು. ಅವಳ ಮೂಡ್ ಕೆಟ್ಟುಹೋಯಿತು. ಆಕೆ ಹೋಗಬೇಕೆಂದುಕೊಂಡಿದ್ದ ಪಾರ್ಟಿಗೂ ಹೋಗಲು ಆಗಲಿಲ್ಲ.
ನಿಮ್ಮ ಬಾಬತ್ತಿನಲ್ಲೂ ಹೀಗಾಗಬಾರದೆಂದರೆ, ಇಲ್ಲಿ ಕೊಟ್ಟ ಸಂಗತಿಗಳನ್ನು ಓದಿ.
ನೀವು ಜ್ಯೂವೆಲರಿ ಧರಿಸಿದ ಬಳಿಕ ಅದನ್ನು ಜ್ಯೂವೆಲರಿ ಬಾಕ್ಸ್ ನಲ್ಲಿ ಇಡುವ ಮೊದಲು ಅದಕ್ಕೆ ಸ್ವಲ್ಪ ಗಾಳಿ ತಗಲಲು ಬಿಡಿ. ಏಕೆಂದರೆ ಬೆವರಿನಿಂದ ಅದರ ಮೇಲೆ ಕಲೆಗಳು ಬೀಳಬಹುದು. ನಿಮ್ಮ ಆಭರಣ ಬೆಳ್ಳಿಯದ್ದು ಅಥವಾ ಪ್ಲಾಸ್ಟಿಕ್‌ನದ್ದು ಇರಬಹುದು.
ಕಾಸ್ಟ್ಯೂಮ್ ಜ್ಯೂವೆಲರಿ ವಿಭಿನ್ನ ಧಾತುಗಳಲ್ಲಿ ಅಂದರೆ ಮೆಟಲ್ ಪ್ಲೇಟೆಡ್ ಬ್ರ್ಯಾಸ್, ಬೆಳ್ಳಿ, ಸ್ಟೀಲ್, ಕ್ರಿಸ್ಟಲ್ ಮುಂತಾದವುಗಳಲ್ಲಿ ತಯಾರಾಗುತ್ತದೆ. ಒಂದು ವೇಳೆ ನಿಮ್ಮ ಝುಮುಕಿಗಳು, ಕಿವಿಯೋಲೆಗಳು ಹಿತ್ತಾಳೆ, ತಾಮ್ರ, ಕಂಚು, ಬೆಳ್ಳಿ ಅಥವಾ ಸ್ಟರ್ಲಿಂಗ್ ಸಿಲ್ವರ್‌ನಲ್ಲಿ ತಯಾರಿಸಲಾಗಿದ್ದರೆ ಪಾಲಿಶಿಂಗ್ ಪ್ಯಾಡ್‌ಗಳನ್ನು ಖರೀದಿಸಿ ಜ್ಯೂವೆಲರಿಯ ಮೇಲೆ ಉಜ್ಜಿ. ಜ್ಯೂವೆಲರಿ ಪುನಃ ಹೊಳಪು ಪಡೆದುಕೊಳ್ಳುತ್ತದೆ.
ಜ್ಯೂವೆಲರಿ ಕ್ಲೀನರ್‌ನ್ನು ನಿಮಗೆ ಖರೀದಿಸಲು ಆಗದಿದ್ದಲ್ಲಿ, ಮನೆಯಲ್ಲಿಯೇ ಹಳೆಯ ಕಂಬಳಿಯ ಮೇಲೆ ಹಿತ್ತಾಳೆ ಅಥವಾ ಬೆಳ್ಳಿಯ ಆಭರಣಗಳನ್ನು ಉಜ್ಜಿ. ಆ ಆಭರಣಗಳು ಪುನಃ ಕಾಂತಿ ಪಡೆಯುತ್ತವೆ. ಒಂದು ವೇಳೆ ನಿಮ್ಮ ಆಭರಣ ತುಂಬಾ ಹಳೆಯದಾಗಿದ್ದರೆ, ಅವನ್ನು ಚಿನಿವಾರರ ಬಳಿ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ.
ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾರ್ನಿಶ್ ರಿಮೂವರ್‌ನ್ನು ಕೂಡ ನೀವು ಉಪಯೋಗಿಸಬಹುದು. ಅದನ್ನು ಹತ್ತಿಯ ತುಂಡಿನ ಮೇಲೆ ಲೇಪಿಸಿ ನಿಧಾನವಾಗಿ ಉಜ್ಜಿ. ಅವು ಮೊದಲಿನಂತೆ ಹೊಳೆಯುತ್ತವೆ.
ನಿಮ್ಮ ಬಳಿ ಕ್ರಿಸ್ಟಲ್ ಆಭರಣವಿದ್ದರೆ, ಪಾತ್ರೆ ತೊಳೆಯುವ ಸೋಪನ್ನು ನೀರಲ್ಲಿ ಅದ್ದಿ ಅದರ ಮೇಲೆ ಹಳೆಯ ಟೂಥ್ ಬ್ರಶ್‌ನಿಂದ ಉಜ್ಜಿಕೊಂಡು ಆಭರಣವನ್ನು ಸ್ವಚ್ಛಗೊಳಿಸಬಹುದು.
ಆಭರಣಗಳನ್ನು ಸ್ವಚ್ಛಗೊಳಿಸಿದ ಬಳಿಕ ಪೇಪರ್ ಟವೆಲ್‌ನಲ್ಲಿ ಇಟ್ಟು ಜಿಪ್ ಲಾಕ್ ಬ್ಯಾಗಿನಲ್ಲಿಡಿ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ಬೇರೆ ಬೇರೆ ಆಭರಣಗಳನ್ನು ಪ್ರತ್ಯೇಕವಾಗಿಡಿ, ಏಕೆಂದರೆ ಒಂದಕ್ಕೊಂದು ಘರ್ಷಣೆಯಾಗದಿರಲಿ. ಜಿಪ್ ಲಾಕ್ ಬ್ಯಾಗ್‌ನ್ನು ಭದ್ರವಾಗಿಡಿ. ಏಕೆಂದರೆ ಗಾಳಿಯಿಂದಲೂ ಆಭರಣಗಳು ಹೊಳಪು ಕಳೆದುಕೊಳ್ಳುತ್ತವೆ.
ಮಾರುಕಟ್ಟೆಯಲ್ಲಿ ಹಲವು ಬಗೆಯ ಆಭರಣ ಕ್ಲೀನರ್‌ಗಳು ಮಾರಾಟವಾಗುತ್ತವೆ. ಮೊದಲು ಅವುಗಳ ಮೇಲಿನ ನಿರ್ದೇಶನಗಳನ್ನು ಓದಿ, ಇಲ್ಲದಿದ್ದರೆ ಆಮೇಲೆ ಪಶ್ಚಾತ್ತಾಪಪಡುವಂತಹ ಸ್ಥಿತಿ ಉಂಟಾಗಬಾರದು. ಏಕೆಂದರೆ ಕೆಲವು ಫ್ಯಾಷನ್ ಜ್ಯೂವೆಲರಿಗಳು ಕೆಲವು ಬಗೆಯ ರಾಸಾಯನಿಕಗಳನ್ನು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಕಾರ್ಯ ಪ್ರವೃತ್ತರಾಗಿ.
ಫ್ಯಾಷನ್ ಜ್ಯೂವೆಲರಿಗಳು ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಅವನ್ನು ಸ್ನಾನ ಮಾಡುವಾಗ ಮತ್ತು ಈಜುವಾಗ ಧರಿಸಲೇಬೇಡಿ. ನೀವು ಕಾಸ್ಟ್ಯೂಮ್ ಉಂಗುರ ಧರಿಸಿದ್ದರೆ, ಸೋಪ್‌ನಿಂದ ಕೈ ತೊಳೆದುಕೊಳ್ಳುವಾಗ ಆಭರಣದ ಸುರಕ್ಷತೆಯ ದೃಷ್ಟಿಯಿಂದ ಅದನ್ನು ನೀರಿನಿಂದ ಆದಷ್ಟು ದೂರವಿಡಿ.